ಅಂಕಲಗಿ- ಅಕ್ಕತಂಗಿರಹಾಳ ಪಟ್ಟಣ ಪಂಚಾಯಿತಿ ವತಿಯಿಂದ ವಿಶೇಷ ಜನಾಂದೋಲನ..
ಸ್ವಚ್ಚತೆಗೆ ಎಲ್ಲರೂ ಕೈ ಜೋಡಿಸಿ: ಶ್ರೀ ಅಮರೇಶ್ವರ ಸ್ವಾಮೀಜಿ..
ಬೆಳಗಾವಿ : ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ, ಪಟ್ಟಣ ಪಂಚಾಯಿತಿಗಳಲ್ಲಿ ‘ಸ್ವಚ್ಛತಾ ಹಿ ಸೇವಾ’ ಎಂಬ ವಿಶೇಷ ಜನಾಂದೋಲನವನ್ನು ಅಕ್ಟೋಬರ್ 1 ರಂದು ಆಚರಿಸಲಾಗುತ್ತಿದ್ದು, ಅಂಕಲಗಿ-ಅಕ್ಕತಂಗಿರಹಾಳ ಪಟ್ಟಣ ಪಂಚಾಯತಿ ವ್ಯಾಪ್ತಿಯ ರಸ್ತೆ, ಬಸ್ ನಿಲ್ದಾಣ, ಸ್ವಚ್ಚಗೊಳಿಸುವುದರ ಮೂಲಕ ವಿಶೇಷ ಜನಾಂದೋಲನವನ್ನು ಹಮ್ಮಿಕೊಳ್ಳಲಾಯಿತು.

ಅದೇ ರೀತಿಯಲ್ಲಿ ಅಂಕಲಗಿ ಶ್ರೀ ಅಡವಿಸಿದ್ದೇಶ್ವರ ಮಠದ ಶ್ರೀಗಳಾದ ಅಮರೇಶ್ವರ ಸ್ವಾಮೀಜಿಯವರಿಂದ ಮಠದ ಆವರಣ, ರಸ್ತೆ, ಶಾಲಾ ಕಾಲೇಜು ಮೈದಾನಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
‘ಮಹಾತ್ಮ ಗಾಂಧಿ ಜನ್ಮದಿನವನ್ನು ಸ್ವಚ್ಛ ಭಾರತ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರ ಧ್ಯೇಯವಾಕ್ಯವಾದ ‘ಸ್ವಚ್ಛತೆಯೇ ದೈವತ್ವ’ ಎಂಬ ಕನಸನ್ನು ನನಸಾಗಿಸಲು ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಇದರಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಸ್ವಚ್ಛತಾ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಅಂಕಲಗಿ ಶ್ರೀ ಅಡವಿಸಿದ್ದೇಶ್ವರ ಮಠದ ಶ್ರೀಗಳಾದ ಅಮರೇಶ್ವರ ಸ್ವಾಮೀಜಿ ಅವರು ಹೇಳಿದರು.

ಈ ವೇಳೆ ಮಾತನಾಡಿದ ಅಂಕಲಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಸವರಾಜ ಮನಗೂಳಿ ಅವರು
‘ಕಸ ಮುಕ್ತ, ತ್ಯಾಜ್ಯ ಮುಕ್ತ ಭಾರತ’ ಎಂಬುದು ಘೋಷವಾಕ್ಯವಾಗಿದ್ದು, ಎಲ್ಲೆಡೆ ಸದೃಶ್ಯ ಸ್ವಚ್ಛತೆ ಸಾಧಿಸಿ, ಸ್ವಚ್ಛ ಸುಂದರ, ಸದೃಢ ಗ್ರಾಮಗಳನ್ನು ರೂಪಿಸುವ ಗುರಿ ಹೊಂದಲಾಗಿದೆ’ ಎಂದು ಹೇಳಿದರು.
ಸಾರ್ವಜನಿಕರು ಸ್ವಚ್ಛತೆಗೆ ಸ್ವಯಂ ಪ್ರೇರಿತರಾಗಿ ಶ್ರಮದಾನ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಬಸ್ ನಿಲ್ದಾಣ, ರೈಲು ನಿಲ್ದಾಣ, ಸಮುದಾಯ ಭವನ, ಚರಂಡಿಗಳು, ಸರ್ಕಾರಿ ಶಾಲೆ, ಅಂಗನವಾಡಿ ಮೊದಲಾದ ಸ್ಥಳಗಳಲ್ಲಿ ಸ್ವಚ್ಛತೆಯ ಕುರಿತು ಶ್ರಮದಾನ ಮಾಡಬೇಕು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು’ ಎಂದು ಮುಖ್ಯಾಧಿಕಾರಿ ಬಸವರಾಜ ಮನಗೂಳಿ ಹೇಳಿದರು.

ಅಂಕಲಗಿ- ಅಕ್ಕತಂಗಿರಹಾಳ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು, ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ವರದಿ ಪ್ರಕಾಶ ಕುರಗುಂದ..