ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್ಓ ಕೆಲಸದಿಂದ ಮುಕ್ತ ಮಾಡಿ…
ಅಂಗನವಾಡಿ ಸಿಬ್ಬಂದಿಗಳಿಂದ ಜಿಲ್ಲಾಧಿಕಾರಿಗಳಿಗೆ ಮನವಿ..
ಬೆಳಗಾವಿ : ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಎದುರಿಗೆ ನೂರಾರು ಸಂಖ್ಯೆಯಲ್ಲಿ ಜಮೆಯಾದ ಅಂಗನವಾಡಿ ಕಾರ್ಯಕರ್ತೆಯರು, ತಮ್ಮ ಜಿಲ್ಲಾ ಸಂಘಟಕರ ಮುಖಾಂತರ ತಮ್ಮ ಸಮಸ್ಯೆಗಳ ಹಾಗೂ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು..
ಮನವಿ ಸಲ್ಲಿಸಿ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾ ಉಪಾಧ್ಯಕ್ಷೆಯಾದ ವಾಯ್, ಬಿ, ಶೀಗಿಹಳ್ಳಿ ಅವರು, ಅಂಗನವಾಡಿಯ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಈಗಾಗಲೇ ಇಲಾಖೆ ನಿರ್ಧಿಷ್ಟ ಪಡಿಸಿದಂತೆ ನಿರ್ದಿಷ್ಟವಾದ ಕೆಲಸಗಳ ಹೊಣೆಗಾರಿಕೆಯನ್ನು ಮಾಡುತ್ತಾ ಬಂದಿರುತ್ತಾರೆ, ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ಅಂಗನವಾಡಿ ಕೇಂದ್ರಗಳಲ್ಲಿ 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ಮತ್ತು ಬೆಳವಣಿಗೆಗೆ ಸಹಾಯಕವಾಗುವ ಚಟುವಟಿಕೆ ಮಾಡಿಸುತ್ತಾ ಜವಾಬ್ದಾರಿಯಿಂದ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ.

ಆದರೆ ಸರ್ಕಾರ ನಿರಂತರವಾಗಿ ಬೇರೆ ಬೇರೆ ಇಲಾಖೆಗಳ ಕೆಲಸ ಕಾರ್ಯಗಳನ್ನು ಪದೇ ಪದೇ ಅಂಗನವಾಡಿ ಸಿಬ್ಬಂದಿಗಳಿಂದ ಮಾಡಿಸಿಕೊಳ್ಳುವ ಕಾರ್ಯದಿಂದ ಅಂಗನವಾಡಿ ಕೆಲಸಗಳಿಗೆ ಧಕ್ಕೆಯಾಗುತ್ತಿದೆ, ಇದರಿಂದ ಉದ್ದೇಶಿತ ಶಿಶು ಅಭಿವೃದ್ಧಿ ಯೋಜನೆಯ ಕೆಲಸಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂಬ ತಮ್ಮ ಸಮಸ್ಯ ಹೇಳಿಕೊಂಡರು.
ಇದೀಗ ಮತ್ತೆ ಚುನಾವಣಾ ಆಯೋಗದ ಆದೇಶದ ಪ್ರಕಾರ ಮತ್ತೆ ನಾವು ಬಿಎಲ್ಓ ಕಾರ್ಯ ಮಾಡಬೇಕು ಎಂಬ ಮಾಹಿತಿ ಇದ್ದು, ಇದಕ್ಕೆ ನಾವು ಖಂಡಿತಾ ಒಪ್ಪುವುದಿಲ್ಲ, ರಾಜೀನಾಮೆ ಕೊಡುತ್ತೇವೆ ವಿನಃ ಇಂತಾ ಸಮಸ್ಯೆಗಳನ್ನು ಎದುರಿಸುವದಿಲ್ಲಾ, ಎರಡೂ ಕೆಲಸಗಳನ್ನು ಒಟ್ಟೊಟ್ಟಿಗೆ ಮಾಡಲು ಕಷ್ಟ ಸಾಧ್ಯ,
ಆದ್ದರಿಂದ ಈ ಚುನಾವಣೆಯ ಬಿಎಲ್ಓ ಕೆಲಸದಿಂದ ನಮಗೆ ವಿನಾಯತಿ ನೀಡಬೇಕು, 18 ತಿಂಗಳಿನಿಂದ ಬಾರದ ಅಂಗನವಾಡಿ ಬಾಡಿಗೆ ಹಣ ತಕ್ಷಣ ಬಿಡುಗಡೆ ಆಗಬೇಕು,
ಒಂದು ವರ್ಷದಿಂದ ಆಗದ ಗ್ಯಾಸ್ ಬಿಲ್ ಕೂಡಾ ಪಾವತಿಯಾಗಬೇಕು, ಜೊತೆಗೆ ಆರೋಗ್ಯ ಸಮೀಕ್ಷೆಯ ಸಲುವಾಗಿ ನೀಡಿದ ಕಳಪೆ ಗುಣಮಟ್ಟದ ಮೊಬೈಲ್ ಬದಲಾಗಿ ಉತ್ತಮ ಗುಣಮಟ್ಟದ ಮೊಬೈಲ್ ನೀಡಬೇಕು ಎಂಬ ತಮ್ಮ ಹಲವು ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು..
ವರದಿ ಪ್ರಕಾಶ ಕುರಗುಂದ..