ಅನುಮೋದನೆಯಾದರೂ ವಾಟರ್ ಮೆನ್ ಗೆ ಕನಿಷ್ಠ ವೇತನ ನೀಡದ ಕಿನಯೇ ಪಿಡಿಓ..
ಕಿರಿಕಿರಿಗೆ ಬೇಸತ್ತು ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ದೂರು.
ಬಡ, ಅನಕ್ಷರಸ್ಥ ಡಿ ದರ್ಜೆಯ ನೌಕರನ ಮೇಲೆ ಪಿಡಿಓಗಿರುವ ಅಸಹನೆ ನಿಜವಾ??
ಬೆಳಗಾವಿ : ತಾಲೂಕಿನ ಕಿಣಯೇ ಗ್ರಾಮ ಪಂಚಾಯತಿಯಲ್ಲಿ (ವಾಟರ್ ಮೆನ್) ನಿರುಗಂಟಿ ಎಂದು ಸುಮಾರು 18 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಜಯವಂತ ಲಕ್ಷ್ಮಣ ಪಾಟೀಲ್ ಎಂಬ ಬಡ ಅನಕ್ಷರಸ್ಥ ನೌಕರನ ಮೇಲೆ, ಅಲ್ಲಿನ ಪಂಚಾಯತ ಅಭಿವೃದ್ಧಿ ಅಧಿಕಾರಿ ಅಸಹನೆ ತೋರುತ್ತಿದ್ದು, ಅದಕ್ಕೆ ಕಾರಣ ಏನಿರಬಹುದು ಎಂಬುದು ಎಲ್ಲರನ್ನೂ ಕಾಡುವ ಯಕ್ಷ ಪ್ರಶ್ನೆಯಾಗಿದೆ..
ಸುಮಾರು 2006 ರಿಂದ ಇಲ್ಲಿಯವರೆಗೆ ಜಯವಂತ ಲಕ್ಷ್ಮಣ ಪಾಟೀಲ್ ಎಂಬಾತ ನಾನು, ಕಿನಯೆ ಗ್ರಾಮ ಪಂಚಾಯತಿಯಲ್ಲಿ ನೀರುಗಂಟಿ ಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ವರ್ಷ ಹಾಗೂ ಇದಕ್ಕೂ ಮೊದಲು ಅನೇಕ ವರ್ಷ ಇದೇ ಪಂಚಾಯತಿಯಲ್ಲಿ ಪಿಡಿಓ ಆಗಿ ಕಾರ್ಯಗೈದ ಪ್ರಕಾಶ್ ಕುಡಚಿ ಎಂಬಾತ ಸುಖಾಸುಮ್ಮನೆ ನನಗೆ ಕಿರಿಕಿರಿ ನೀಡುತ್ತಿದ್ದು, ನನಗೆ ನೆಮ್ಮದಿಯಿಂದ ಕೆಲಸ ಮಾಡುವುದಕ್ಕಾಗಿ ಪಿಡಿಓ ಅವರ ಕಿರಿಕಿರಿ ತಪ್ಪಿಸಬೇಕು ಎಂದು ಬೆಳಗಾವಿ ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ಮನವಿ ನೀಡಿದ್ದಾರೆ.
ನಿನಗೆ ಕೆಲಸ ಬರುವದಿಲ್ಲ, ನೀನು ಸಹಿ ಮಾಡಬೇಡ, ಊರಲ್ಲಿರುವ ಎಲ್ಲಾ ಟ್ಯಾಂಕ್ ಸ್ವಚ್ಛ ಮಾಡಬೇಕು, ಹೊಲದಲ್ಲಿಯ ಪೈಪುಗಳು ಸಮಸ್ಯೆಯಾದರೆ ಹೋಗಿ ಸರಿಪಡಿಸು, ಎಂದು ಪದೇ ಪದೇ ನಿರ್ಲಕ್ಷ್ಯದಿಂದ ಮಾತನಾಡುತ್ತಾರೆ. ಕಳೆದ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ದಿನದಂದು ಪಂಚಾಯತಿಯ ಎಲ್ಲಾ ಸಿಬ್ಬಂದಿಗಳಿಗೆ ವಿಶೇಷ ಸಮವಸ್ತ್ರದ ವ್ಯವಸ್ಥೆ ಮಾಡಿ, ನನಗೆ ಯಾವುದೇ ಮಾಹಿತಿ ನೀಡದೇ, ಸಮವಸ್ತ್ರವನ್ನು ನೀಡದೇ ದೂರ ಇಡುವ ಕಾರ್ಯ ಮಾಡಿದ್ದರು.

2006 ರಿಂದ ಇಲ್ಲಿಯವರೆಗೆ ರುಪಾಯಿ 500ರ ವೇತನದಿಂದ ಹಂತಹಂತವಾಗಿ 5500ರ ವೇತನದವರೆಗೆ ಸಂಬಳ ಪಡೆದು ನಾನು ಈ ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡುತ್ತಿರುವೆ, ಇದೇ ವರ್ಷ, ಕಳೆದ ಜೂನ್ ತಿಂಗಳು, 4ರಂದು ನನ್ನ ಹುದ್ದೆಯು ಕೂಡಾ ಅನುಮೋದನೆ ಆಗಿದ್ದು, ಬೆಳಗಾವಿ ಜಿಲ್ಲಾ ಪಂಚಾಯತಿಯ ಸಭಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಸಮ್ಮುಖದಲ್ಲಿ ದೊಡ್ಡ ಕಾರ್ಯಕ್ರಮ ಮಾಡಿ, ಕೆಲ ಅನಕ್ಷರಸ್ಥ “ಡಿ ದರ್ಜೆಯ” ಪಂಚಾಯತಿ ನೌಕರರನ್ನು ಅನುಮೋದನೆ ಮಾಡಲಾಯಿತು.
ಅನುಮೋದನೆ ಆದ ನಂತರವಾದರೂ ನನಗೆ ಇಲಾಖೆಯ ನಿಯಮಾವಳಿ ಪ್ರಕಾರ ಕನಿಷ್ಠ ವೇತನವಾದರೂ ನೀಡಬೇಕಿತ್ತು, ಆದರೆ ಅದಕ್ಕೂ ಅಡ್ಡಿ ಪಡಿಸಿದ ಇವರು ಆಗಸ್ಟ್ ತಿಂಗಳಿನಲ್ಲಿ ಎರಡು ತಿಂಗಳ ವೇತನ ಎಂದು 11500 ರೂಪಾಯಿ ಹಾಕಿದ್ದು, ಮೊದಲಿನಂತೆ ಕಡಿಮೆ ವೇತನ ಹಾಕಿದ್ದಾರೆ, ಕನಿಷ್ಠ ವೇತನ ಕೇಳಿದರೆ ನೀನು ಸರಿಯಾಗಿ ಕೆಲಸ ಮಾಡುವದಿಲ್ಲ ಎಂದು ದೂರುವರು, ಅಂದರೆ ಇಲಾಖೆ, ಉಸ್ತುವಾರಿ ಸಚಿವರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಆದೇಶಕ್ಕೆ ಇವರು ಬೆಲೆಯೇ ನೀಡದೇ ಸರ್ವಾಧಿಕಾರ ಧೋರಣೆ ತೋರುತ್ತಿರುವರೆ? ಎಂಬ ಅನುಮಾನ ಮೂಡುತ್ತಿದೆ ಎಂದಿದ್ದಾರೆ.
ಪಿಡಿಓ ಅವರು ಮಾಡುವ ವರ್ತನೆ ನೋಡಿದರೆ ನನ್ನನ್ನು ಈ ಕೆಲಸದಿಂದ ತೆಗೆದುಹಾಕಿ ಬೇರೆಯವರನ್ನು ಇಲ್ಲಿ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಇದ್ದಾರೇನೋ ಎಂಬ ಅನುಮಾನ ನನ್ನಲ್ಲಿ ಮೂಡುತ್ತಿದ್ದು, ಬಡ ಅನಕ್ಷರಸ್ಥನಾದ ನಾನು ಹಾಗೂ ನನ್ನ ಕುಟುಂಬ ಕಳೆದ ಸುಮಾರು 18 ವರ್ಷಗಳಿಂದ ಇದೇ ವೃತ್ತಿಯನ್ನು ನಂಬಿಕೊಂಡು ಬಂದಿದ್ದು, ನನ್ನ ಕೆಲಸಕ್ಕೆ ಮುಂದೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ ಅದೇರೀತಿ ನಾನು ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ನಿರ್ಮಿಸಿ ಎಂದು ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ತಮ್ಮ ಮನವಿಯಲ್ಲಿ ತಿಳಿಸಿದ್ದೇವೆ ಎಂದಿದ್ದಾರೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ..