ಅಭಿವೃದ್ಧಿಪರ ಚರ್ಚೆಗೆ ಸಾಕ್ಷಿಯಾದ ಪಾಲಿಕೆಯ ಲೆಕ್ಕಗಳ ಸ್ಥಾಯಿ ಸಮಿತಿ ಸಭೆ..

ಅಭಿವೃದ್ಧಿಪರ ಚರ್ಚೆಗೆ ಸಾಕ್ಷಿಯಾದ ಪಾಲಿಕೆಯ ಲೆಕ್ಕಗಳ ಸ್ಥಾಯಿ ಸಮಿತಿ ಸಭೆ..

ಪಾಲಿಕೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸದಸ್ಯರ ಸಲಹೆ ಸೂಚನೆ..

ಬೆಳಗಾವಿ : ಶುಕ್ರವಾರ ದಿನಾಂಕ 12/09/2025ರಂದು ಬೆಳಗಾವಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಗೃಹದಲ್ಲಿ ಜರುಗಿದ ಲೆಕ್ಕಗಳ ಸ್ಥಾಯಿ ಸಮಿತಿ ಸಭೆಯಲ್ಲಿ ನಗರದ ಅಭಿವೃದ್ಧಿಪರ ಹಾಗೂ ಪಾಲಿಕೆಯ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿಗಳೊಂದಿಗೆ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಆರೋಗ್ಯಕರವಾದ ಚರ್ಚೆಯನ್ನು ನಡೆಸಿದ್ದಾರೆ.

ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾದ ನಂದಕುಮಾರ ಮಿರಜಕರ ಅವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆ ಇದಾಗಿದ್ದು, ಸಭೆಯ ಅಧ್ಯಕ್ಷತೆ ವಹಿಸಿಕೊಂಡ ಅವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ, ಇನ್ಮುಂದೆ ಲೆಕ್ಕ ಸಮಿತಿಯಿಂದ ಪಾಲಿಕೆಗೆ ಅನುಕೂಲವಾಗುವ ಹಾಗೂ ನಗರದ ಅಭಿವೃದ್ದಿಯ ದೃಷ್ಟಿಯಿಂದ ಉತ್ತಮ ನಿರ್ಣಯಗಳನ್ನು ತೆಗೆದುಕೊಳ್ಳೋಣ ಎಂದು ಸಭೆಯನ್ನು ಪ್ರಾರಂಭಿಸಿದ್ದು, ಮೊದಲಿಗೆ ಸಮಿತಿಯ ಸದಸ್ಯರೊಬ್ಬರಾದ ರವಿ ದೋತ್ರೆ ಅವರು ಮಾತನಾಡುತ್ತಾ ಪಾಲಿಕೆಯ ಕೆಲ ವಿಭಾಗದ ಅಧಿಕಾರಿಗಳು ಸಭೆಗೆ ಹಾಜರಿಲ್ಲ, ಅವರ ಪರವಾಗಿ ಅವರ ಸಿಬ್ಬಂದಿಗಳು ಕೂಡಾ ಬಂದಿಲ್ಲ, ಪಾಲಿಕೆಗೆ ಅವರು ಸಂಬಂಧಪಟ್ಟವರೋ ಅಥವಾ ಇಲ್ಲೋ ಎಂದು ತಮ್ಮ ಅಸಮಾಧಾನ ಹೊರಹಾಕಿದರು.

ಪಾಲಿಕೆಯ ವಿವಿಧ ಶಾಖೆಗಳಲ್ಲಿ ಡಾಟಾ ಅಪರೆಟರಗಳನ್ನು ಯಾವ ಅರ್ಹತೆಯ ಮೇಲೆ ನೇಮಕ ಮಾಡಿಕೊಳ್ಳುವಿರಿ, ಅವರ ವಿದ್ಯಾರ್ಹತೆ, ಟೆಂಡರ ಪ್ರಕ್ರಿಯೆಯ ಬಗ್ಗೆ ಪ್ರಶ್ನೆಮಾಡಿದ ಸಮಿತಿ ಸದಸ್ಯರಿಗೆ ಲೆಕ್ಕ ಶಾಖೆಯ ಮುಖ್ಯಾಧಿಕಾರಿ ಮಂಜುನಾಥ ಬೀಳಗಿಕರ ಅವರು ಸ್ಪಷ್ಟನೆ ನೀಡುತ್ತಾ, ಈಗಾಗಲೇ ಗುತ್ತಿಗೆ ಪಡೆದವರು, ಮುಂದೆ ಗುತ್ತಿಗೆ ಆಗುವ ಪ್ರಕ್ರಿಯೆಯಲ್ಲಿ ಭಾಗಿಯಾದವರ ಹಾಗೂ ಡಾಟಾ ಅಪರೇಟರ್ ಅವರ ಶೈಕ್ಷಣಿಕ ಹಾಗೂ ಕಂಪ್ಯೂಟರ್ ವಿದ್ಯಾರ್ಹತೆಯ ಬಗ್ಗೆ ವಿವರಿಸಿದರು.

ಇನ್ನು “ಇ ಖಾತಾ” ಕೆಲಸಕ್ಕಾಗಿ ಹೆಚ್ಚುವರಿ 30 ಜನ ಡಾಟಾ ಅಪರೆಟರಗಳನ್ನು ತಡ್ಗೆದುಕೊಂಡಿದ್ದು, ಅದು ನಮ್ಮ ಪಾಲಿಕೆಯ ಆಡಳಿತ ಮಂಡಳಿಯ (ಮಹಾಪೌರ ಉಪಮಹಾಪೌರ ಹಾಗೂ ನಗರ ಸೇವಕರ) ಗಮನಕ್ಕೆ ಬಂದಿಲ್ಲ, ಅದಕ್ಕೆ ನಮ್ಮ ಒಪ್ಪಿಗೆಯನ್ನೂ ಕೂಡಾ ಪಡೆದಿಲ್ಲ, ಕಾರಣ ಅವರ ವೇತನದ ಬಗ್ಗೆ ಬರುವ ಸಭೆಯಲ್ಲಿ ಚರ್ಚಿಸೋಣ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ಶವ ವಾಹನದ ನಿರ್ವಹಣೆಯ ಖರ್ಚು ಹಾಗೂ ಅದರಿಂದ ಆಗುವ ಸೇವೆಗಳ ಬಗ್ಗೆ ಚರ್ಚೆ ನಡೆಸಿ, ಬರುವ ದಿನಗಳಲ್ಲಿ ವಾಹನ ಚಾಲಕರ ವೇತನ, ವಾಹನದ ಇಂಧನ, ಮೇಲ್ವಿಚಾರಕರ ವೇತನ, ನಿರ್ವಹಣೆಯ ಹಾಗೂ ಅದಕ್ಕಾಗುವ ಖರ್ಚುಗಳ ಬಗ್ಗೆ ನಿಯಂತ್ರಣ ಮಾಡಿ, ಲೆಕ್ಕಶಾಖೆಯಲ್ಲಿ ಸರಿಯಾದ ಪರಿಶೀಲನೆಯಾಗಬೇಕೆಂಬ ಸೂಚನೆ ನೀಡಲಾಯಿತು.

ನಗರದ ಉದ್ಯಾನವನಗಳ ಕಾವಲುಗಾರರಿಗೆ ಕನಿಷ್ಠ ವೇತನ ಸಿಗುತ್ತಿಲ್ಲ, ಗುತ್ತಿಗೆದಾರ ಹೆಚ್ಚು ಹಣ ಹೊಡೆಯುತ್ತಿದ್ದಾನೆ ಎಂಬ ಆರೋಪ ಇದೆ ಎಂದು ಆಡಳಿತ ಪಕ್ಷದ ನಾಯಕ ಹನುಮಂತ ಕೊoಗಾಲಿ ಅವರು ಕೇಳಿದಾಗ, ಉತ್ತರ ನೀಡಿದ ಪರಿಸರ ಅಭಿಯಂತರು, ವೇತನ ಬಿಡುಗಡೆ ಮಾಡಿದ ಬಗ್ಗೆ ಕೆಲವೇ ದಿನಗಳಲ್ಲಿ ತಮಗೆ ಸರಿಯಾದ ದಾಖಲೆ ನೀಡುತ್ತೇವೆ ಎಂದರು.

ಇನ್ನು ಕಂದಾಯ ವಿಭಾಗದಿಂದ ಪಾಲಿಕೆಗೆ ಬರುವ ಆದಾಯದ ಬಗ್ಗೆ ವಿಚಾರಿಸಿದಾಗ ಮೊದಲಿಗೆ ಭೂಬಾಡಿಗೆಯಿಂದ ಬರುವ ಆದಾಯ, ನಂತರ ಪಾಲಿಕೆ ಆಸ್ತಿಗಳನ್ನು ಲೀಜ ಮೇಲೆ ನೀಡಿದ್ದು, ಲೀಜ್ ಮುಗಿದರೂ ಕೂಡಾ ಅವುಗಳನ್ನು ಏಕೆ ಪಾಲಿಕೆಯ ವಶಕ್ಕೆ ಪಡೆದಿಲ್ಲ, ಅದರಿಂದ ಸಾಕಷ್ಟು ಆದಾಯ ನಷ್ಟ ಆಗುತ್ತದೆ, ಆದಷ್ಟು ಬೇಗ ಲಿಜ ಮುಗಿದ ಆಸ್ತಿಗಳನ್ನು ಹಿಂಪಡೆಯುವ ಕಾರ್ಯ ಆಗಲಿ ಎಂದು ಸರ್ವ ಸದಸ್ಯರು ಸೂಚಿಸಿದರು.

ಇನ್ನು ಪಾಲಿಕೆಯಿಂದ ನಿರಾಶ್ರಿತರ ರಾತ್ರಿ ವಸತಿ ಕೇಂದ್ರ ನಡೆಸುವ ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ನೀಡುವ ವಿಭಾಗದ ಅಧಿಕಾರಿ ನಾವು ನಗರ ಸೇವಕರು ಮಾಹಿತಿ ಕೇಳಿದರೆ ನಿಮಗೆ ಹೇಳಲು ಆಗುವದಿಲ್ಲ ಎನ್ನುತ್ತಾರೆ, ರಜೆ ದಿನಗಳಲ್ಲಿ ತಮ್ಮ ಕಚೇರಿಯಲ್ಲಿ ಕಾರ್ಯ ಮಾಡುವ ಅನಿವಾರ್ಯ ಏನಿದೆ? ಮಹಿಳಾ ಸಂಘಗಳಿಗೆ ಸಾಲ ಸೌಲಭ್ಯ ಪಡೆದವರು ಅಧಿಕಾರಿಯ ಪತ್ನಿಯ ಕಡೆಗೆ ವಿಮಾ ಯೋಜನೆ ಮಾಡಿಸಲೇಬೇಕು ಎಂಬ ಆರೋಪಗಳನ್ನು ಮಹಿಳೆಯರು ಹೇಳಿಕೊಂಡಿದ್ದಾರೆ. ಆ ಅಧಿಕಾರಿಯ ಮೇಲೆ ತನಿಖೆ ಆಗಬೇಕು ಎಂದು ಸದಸ್ಯರಾದ ರವಿ ದೋತ್ರೆ ಅವರು ಅಧ್ಯಕ್ಷರಿಗೆ ಮನವಿ ಮಾಡಿಕೊಂಡರು.

ಒಟ್ಟಾರೆಯಾಗಿ ಪಾಲಿಕೆಯ ಎಲ್ಲಾ ವಿಭಾಗಗಳ ಅಧಿಕಾರಿಗಳು ಈ ಲೆಕ್ಕಗಳ ಸ್ಥಾಯಿ ಸಮಿತಿಯ ಸಭೆಯಲ್ಲಿ ಭಾಗಿಯಾಗಿ ಅಧ್ಯಕ್ಷರು ಹಾಗೂ ಸದಸ್ಯರು ನೀಡಿದ ಸೂಚನೆ ನಮೂದಿಸಿಕೊಂಡಿದ್ದು, ಇನ್ನು ಲೆಕ್ಕ ಶಾಖೆಯ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗಳು ತಮ್ಮ ಜವಾಬ್ದಾರಿಗಳನ್ನು ಮತ್ತಷ್ಟು ಸ್ಪಷ್ಟವಾಗಿ ನಿಭಯಿಸುತ್ತೇವೆ ಎಂಬ ಭರವಸೆಯೊಂದಿಗೆ, ಬರುವ ದಿನಗಳಲ್ಲಿ ಪಾಲಿಕೆಗೆ ಹೆಚ್ಚಿನ ಉಳಿತಾಯ ಆಗುವದರ ಜೊತೆಗೆ ನಗರದ ಅಭಿವೃದ್ಧಿಯೂ ಹೆಚ್ಚಿನ ಪ್ರಮಾಣದಲ್ಲಿ ಆಗುವಂತೆ ಶ್ರಮಿಸೋಣ ಎಂದು ಸಭೆಯಲ್ಲಿ ಒಮ್ಮತದ ತೀರ್ಮಾನದ ಮೂಲಕ ಸಭೆ ಅಂತ್ಯವಾಯಿತು..

ವರದಿ ಪ್ರಕಾಶ್ ಬಸಪ್ಪ ಕುರಗುಂದ.