ಅಭಿವೃದ್ಧಿ ಕೊಡುಗೆ ನೀಡಲು ದೇಶ ಭಕ್ತಿ ಪ್ರೇರಣೆಯಾಗಲಿ
ನಿವೃತ್ತ ಯೋಧ ಪರ್ವೇಜ್ ಹವಾಲ್ದಾರ್ ಅಭಿಮತ
ಅಮೃತ ಸರೋವರ ದಡದಲ್ಲಿ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ
ಚನ್ನಮ್ಮ ಕಿತ್ತೂರು :
ಇಂದಿನ ಯುವ ಪೀಳಿಗೆಯು ಸ್ವಾತಂತ್ರ್ಯೋತ್ಸವವನ್ನು ಒಂದೇ ದಿನಕ್ಕೆ ಸೀಮಿತಗೊಳಿಸದೇ ನಿತ್ಯವೂ ಹೋರಾಟಗಾರಲ್ಲಿನ ದೇಶ ಭಕ್ತಿ ಹಾಗೂ ಆದರ್ಶಗಳನ್ನು ಪ್ರೇರಣೆಯಾಗಿಸಿಕೊಳ್ಳಬೇಕು, ದೇಶದ ಅಖಂಡತೆ ಕಾಪಾಡುವುದುರ ಜತೆಗೆ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿ ಸಂಭ್ರಮಿಸಬೇಕು ಎಂದು ನಿವೃತ್ತ ಯೋಧ ಪರ್ವೇಜ್ ಹವಾಲ್ದಾರ ಹೇಳಿದರು.
ಕಿತ್ತೂರು ತಾಲೂಕಿನ ಉಗರಖೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಮೃತ ಸರೋವರದ ದಡದಲ್ಲಿ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಾವಿರಾರು ಹೋರಾಟಗಾರರ ತ್ಯಾಗ ಬಲಿದಾನದ ಫಲವಾಗಿ ನಾವೆಲ್ಲ ಇಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ.
ಇದು ಸ್ವೇಚ್ಛೆಯಾಗಿಸಿಕೊಳ್ಳದೇ ನಾವೆಲ್ಲರೂ ಸಮಾನರು ಎಂಬ ಮನೋಭಾವದಿಂದ ಪ್ರತಿಯೊಬ್ಬರು ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ವೀರರ ಹೆಸರಿನಲ್ಲಿ ನಿರ್ಮಿಸಲಾದ ಶಿಲಾಫಲಕವನ್ನು ಲೋಕಾರ್ಪಣೆಗೊಳಿಸಿ, ಸ್ಥಳೀಯ ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು, ಅಲ್ಲದೇ, ಆಜಾದಿಕಾ ಅಮೃತ ಮಹೋತ್ಸವ ಅಂಗವಾಗಿ ‘ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮದ ಕುರಿತು ಶಾಲಾ ವಿದ್ಯಾರ್ಥಿಗಳಿಂದ ಗ್ರಾಮದ ಬೀದಿಗಳಲ್ಲಿ ಜಾಥಾ ನಡೆಸಲಾಯಿತು.
ಸಹಾಯಕ ನಿರ್ದೇಶಕರಾದ ಲಿಂಗರಾಜ ಹಲಕರ್ಣಿಮಠ ಪಂಚ ಪ್ರಾಣ ಪ್ರತಿಜ್ಞಾ ವಿಧಿ ಬೋಧಿದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಇಸಾಕ್ ಹವಾಲ್ದಾರ್, ಅಕ್ಬರ್ ಮೊಖಾಶಿ, ಗ್ರಾಪಂ ಅಧ್ಯಕ್ಷ ಶಫೀಕ ಹವಾಲ್ದಾರ, ಉಪಾಧ್ಯಕ್ಷೆ ಶಿಲ್ಪಾ ನಾಡಗೌಡರ, ತಾಪಂ ಸಹಾಯಕ ನಿರ್ದೇಶಕ ಲಿಂಗರಾಜ ಹಲಕರ್ಣಿಮಠ, ಐಇಸಿ ಸಂಯೋಜಕಿ ಎಸ್.ಬಿ.ಜವಳಿ, ತಾಂತ್ರಿಕ ಸಹಾಯಕಿ ಮಲ್ಲಮ್ಮ ರಗಟಿ, ಪಿಡಿಓ ಶಿವಲಿಂಗಯ್ಯ ಗುರುವೈನವರ ಸೇರಿದಂತೆ ಗ್ರಾಪಂ ಸರ್ವ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ ಪ್ರಕಾಶ ಕುರಗುಂದ..