ಅವ್ಯವಸ್ಥೆ ಆಗರವಾದ ಕುರಿಹಾಳ ಅಂಬೇಡ್ಕರ ಕಾಲೋನಿ..
ಹಂದಿಗನೂರ ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯ..
ಎಸ್ಸಿಪಿ ಅನುದಾನ ಆಟಕುಂಟು ಲೆಕ್ಕಕ್ಕಿಲ್ಲ..
ಬೆಳಗಾವಿ : ಹಂದಿಗನೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕುರಿಹಾಳ ಗ್ರಾಮದ ಅಂಬೇಡ್ಕರ ಕಾಲೋನಿ ವ್ಯವಸ್ತೆಯ ಆಗರವಾಗಿದೆ. ಬೆಳಗಾವಿ ತಾಲೂಕಿನಲ್ಲಿ ಬರುವ ಈ ಗ್ರಾಮವು ಹಂದಿಗನೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿನ ಅಂಬೇಡ್ಕರ ಕಾಲೋನಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.
ಅಂಬೇಡ್ಕರ ಕಾಲೋನಿ ಪಕ್ಕದ ಲಕ್ಷ್ಮೀ ದೇವಸ್ತಾನದ ಹತ್ತಿರ ನೀರಿನ ಟ್ಯಾಂಕ್ ಇದ್ದು ಇಲ್ಲಿ ಸತತವಾಗಿ ನೀರು ಹರಿಯುತ್ತದೆ. ಚರಂಡಿ ಇಲ್ಲದ ಕಾರಣ ಕೊಳಚೆ ನೀರು ರಸ್ತೆ ಮೇಲೆ ಹರಿದು ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ದಲಿತ ಮುಖಂಡರು ಗ್ರಾಮ ಪಂಚಾಯತಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಗ್ರಾಮ ಪಂಚಾಯತಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ..
ಕುರಿಹಾಳ ಗ್ರಾಮದ ಅಂಬೇಡ್ಕರ ಕಾಲೋನಿಯಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮೌಖಿಕವಾಗಿ ಹೇಳಲಾಗಿದೆ. ಕಾಲೋನಿಯಲ್ಲಿ ಚರಂಡಿ ಇಲ್ಲದೇ ಇರುವದರಿಂದ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ರಸ್ತೆ ಕೂಡ ಹಾಳಾಗುತ್ತಿದೆ. ನೀರಿನ ಟ್ಯಾಂಕ್ ಇರುವುದರಿಂದ ಮಹಿಳೆಯರು-ಮಕ್ಕಳು ನೀರು ತರಲು ಹಗಲು ರಾತ್ರಿ ಎನ್ನದೇ ಬರುತ್ತಾರೆ. ನೀರಿನ ಟ್ಯಾಂಕ್ ಸುತ್ತಲೂ ವಿಪರೀತ ಹುಲ್ಲು ಬೆಳೆದಿದೆ. ಅದನ್ನು ಸ್ವಚ್ಛ ಮಾಡಿಸಬೇಕೆಂಬ ಕನಿಷ್ಟ ಜ್ಞಾನವೂ ಪಂಚಾಯತಿ ಅಧಿಕಾರಿಗಳಿಗೆ ಇಲ್ಲ. ಮೊದಲೇ ಮಳೆಗಾಲ ಇರುವುದರಿಂದ ಕ್ರಿಮಿ ಕೀಟಗಳ ಹಾವಳಿ ಹೆಚ್ಚಿದೆ. ಅನಾವುತ ಆಗುವ ಮೊದಲೇ ಪಂಚಾಯತಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಪಂಚಾಯತಿಗೆ ಬರುವ ಲಕ್ಷಾಂತರ ರೂಪಾಯಿ ಎಸ್ಸಿಪಿ ಅನುದಾನ ಎಲ್ಲಿ ಹೋಗುತ್ತಿದೆ ? ಎಂದು ಕಾಲೋನಿ ನಿವಾಸಿಗಳಾದ ರಾಜು ಕಾಂಬಳೆ, ಈಶ್ವರ ಕಾಂಬಳೆ, ಚೂಡಪ್ಪ ಕಾಂಬಳೆ, ವಿಕ್ರಮ ಕಾಂಬಳೆ, ಈರಪ್ಪ ಕಾಂಬಳೆ, ಮೋಹನ ಕಾಂಬಳೆ, ಗಜು ಕಾಂಬಳೆ ಪಂಚಾಯತಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಹಂದಿಗನೂರ ಪಿಡಿಒ ಅವರೊಂದಿಗೆ ಸೇಫ್ ವಾರ್ಡ್ ಸಂಸ್ಥೆ ಅಧ್ಯಕ್ಷ ಸಂತೋಷ ಮೇತ್ರಿ ಮಾತನಾಡಿ ಸಮಸ್ಯೆ ಬಗ್ಗೆ ವಿಚಾರಿಸಿದರು. ಈ ಬಗ್ಗೆ ಮಾತನಾಡಿದ ಪಿಡಿಒ ಹರೀಶ ಬಡಿಗೇರ ಅವರು ಹಂದಿಗನೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ಗ್ರಾಮಗಳಿದ್ದು ಹಂದಿಗನೂರು ಮತ್ತು ಕುರಿಹಾಳದಲ್ಲಿ ಎರಡು ಗ್ರಾಮಗಳಲ್ಲಿ ಎಸ್ಸಿ ಕಾಲೋನಿಗಳು ಬರುತ್ತವೆ. ಇಲ್ಲಿನ ನಿವಾಸಿಗಳು ಸರಿಯಾಗಿ ತೆರಿಗೆ ತುಂಬುತ್ತಿಲ್ಲ. ಅಲ್ಲದೇ ಪಂಚಾಯತಿ ಸದಸ್ಯರು ಎಲ್ಲಿ ಅನುದಾನ ಬೇಕು ಎಂದು ಹೇಳುತ್ತಾರೆ ಅಲ್ಲಿ ನಾವು ಕ್ರಿಯಾ ಯೋಜನೆ ರೂಪಿಸುತ್ತೇವೆ ಎಂದರು. ಪ್ರಸಕ್ತ ಸಾಲಿನಲ್ಲಿ ಎಸ್ಸಿಪಿ ಅನುದಾನ ಎಷ್ಟಿದೆ ಎಂದು ಕೇಳಿದ ಮರು ಪ್ರಶ್ನೆಗೆ ತಾವು ಬೆಂಗಳೂರಿನಲ್ಲಿ ಇರುವುದಾಗಿ ಹೇಳಿ ಜಾರಿಕೊಂಡರು.
ಜನಪ್ರತಿನಿಧಿಗಳು ಏನೇ ಹೇಳಲಿ. ಎಲ್ಲಿ ಸಮಸ್ಯೆ ಇದೆಯೋ ಮೊದಲು ಅಲ್ಲಿ ಗಮನ ಹರಿಸಬೇಕು. ಗ್ರಾಮಸ್ತರ ಬೇಕು ಬೇಡಗಳನ್ನು ಈಡೇರಿಸಬೇಕಾಗಿರುವುದು ಅಧಿಕಾರಿಗಳ ಆದ್ಯ ಕರ್ತವ್ಯ. ಎಸ್ಸಿಪಿ ಅನುದಾನ ದುರ್ಬಳಕೆ ಬಗ್ಗೆ ಸಮಾಜ ಕಲ್ಯಾಣ ಅಧಿಕಾರಿಗಳು ಗಮನ ಹರಿಸಬೇಕು. ಇದೆಲ್ಲವನ್ನು ಹಂದಿಗನೂರ ಪಿಡಿಒ ಹರೀಶ ಬಡಿಗೇರ ಯಾವ ರೀತಿ ಬಗೆಹರಿಸುವರು ಎಂಬುದನ್ನು ಕಾದು ನೋಡಬೇಕು.
ಸಂತೋಷ ಮೇತ್ರಿ..