ಒಳ ಮೀಸಲಾತಿಯ ಗೊಂದಲ ಬಗೆಹರಿಸಲು ಸಚಿವ ಸಂಪುಟದ ಉಪ ಸಮಿತಿ ರಚಿಸಿ..
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ಬೆಳಗಾವಿಯಿಂದ ಮನವಿ..
ಬೆಳಗಾವಿ : ನ್ಯಾಯಮೂರ್ತಿ ನಾಗಮೋಹನ ದಾಸ ಒಳಮೀಸಲಾತಿ ಏಕ ಸದಸ್ಯ ವಿಚಾರಣೆಯ ಆಯೋಗವು ಪರಿಶಿಷ್ಟ ಜಾತಿಗಳ ಸಮೀಕ್ಷೆಯನ್ನು ದಿನಾಂಕ 05/05/2025 ರಿಂದ 06/07/2025 ನಡೆಸಿದ್ದು, ಈ ಸಮೀಕ್ಷೆಯಲ್ಲಿ 27.24ಲಕ್ಷ ಕುಟುಂಬಗಳ 1.07 ಕೋಟಿ ಜನರನ್ನು ಸಮೀಕ್ಷೆ ಮಾಡಿದ್ದು ಅದರಲ್ಲಿ ಕೆಲ ಲೋಪದೋಷಗಳಿವೆ, ಅವುಗಳನ್ನು ಸರಿಪಡಿಸಲು ಸಚಿವ ಸಂಪುಟದ ಉಪಸಮಿತಿಯನ್ನು ರಚನೆ ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಳಗಾವಿ ಘಟಕ, ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಬುಧವಾರ ಚೆನ್ನಮ್ಮ ವೃತ್ತದಿಂದ ಬ್ರಹತ್ ಪ್ರತಿಭಟನೆ ಮೂಲಕ ಸಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂಘಟನೆಯ ಪದಾಧಿಕಾರಿಗಳು, ವರದಿಯಲ್ಲಿನ ಕೆಲ ಲೋಪಗಳ ಬಗ್ಗೆ ಮಾತನಾಡುತ್ತಾ, ನ್ಯಾಯಮೂರ್ತಿ ನಾಗಮೋಹನದಾಸ್ ಅವರ ಅಧ್ಯಕ್ಷತೆಯ ಒಳಮೀಸಲಾತಿ ಏಕ ಸದಸ್ಯ ವಿಚಾರಣೆ ಆಯೋಗವು ಸರ್ಕಾರಕ್ಕೆ ತನ್ನ ವರದಿ ನೀಡಿದ್ದು, ಇದರಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಸೇರಿದ ಪರೈಯ್ ಹಾಗೂ ಪರವನ ಜಾತಿಯನ್ನು ಎಡಗೈ ಪಂಗಡಕ್ಕೆ ಸೇರಿಸಿದ್ದಾರೆ, ಇದೇ ಸಮುದಾಯಕ್ಕೆ ಸೇರಿದ ಇನ್ನು ಹಲವಾರು ಜಾತಿಗಳನ್ನು ಅತೀ ಹಿಂದುಳಿದ ಜಾತಿಗಳ ಗುಂಪಿಗೆ ಸೇರಿಸಿ, ಬಲಗೈ ಸಮುದಾಯದ ಜನಸಂಖ್ಯೆಯನ್ನು ಉದ್ದೇಶ ಪೂರ್ವಕವಾಗಿ ಕಡಿಮೆ ಮಾಡಿರುತ್ತಾರೆ ಎಂಬ ಸಮಸ್ಯೆ ಹೇಳಿಕೊಂಡಿರುತ್ತಾರೆ.
ಇನ್ನು ಜಾತಿಯೇ ಅಲ್ಲದ ಆದಿಕರ್ನಾಟಕ, ಆದಿ ದ್ರಾವಿಡ, ಆದಿಆಂಧ್ರ ಸಮುದಾಯಕ್ಕೆ ಶೇಕಡಾ 1ರಷ್ಟು ಮೀಸಲಾತಿಯನ್ನು ನೀಡಿದ್ದು, ಅದನ್ನು ರದ್ದುಪಡಿಸಬೇಕು, ಜೊತೆಗೆ ಸದರಿ ಮೀಸಲಾತಿಯನ್ನು ಸಂಬಂಧಿಸಿದ ಜಾತಿಗಳಿಗೆ ಹಂಚಿಕೆ ಮಾಡುವುದಕ್ಕಾಗಿ ಸಚಿವ ಸಂಪುಟದ ಉಪ ಸಮಿತಿಯನ್ನು ರಚನೆ ಮಾಡಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಮ್ಮ ಮನವಿಯನ್ನು ನೀಡಿದ್ದಾರೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ..