ಕಂದಾಯ ನಿರೀಕ್ಷಕರಿಂದಲೇ ಪಾಲಿಕೆಯ ಬೊಕ್ಕಸಕ್ಕೆ ನಷ್ಟವೇ??
ಪಾಲಿಕೆಯ ವಾರ್ಡ ಸಂಖ್ಯೆ 2ರಲ್ಲಿ ಕಂದಾಯ ನಿರೀಕ್ಷಕ, ಮಾಲೀಕರೊಂದಿಗೆ ಕೈಜೋಡಿಸಿದರೆ?
ಪಾಲಿಕೆಗೆ ಸುಮಾರು 70ಲಕ್ಷ ತೆರಿಗೆ ನಷ್ಟ ಮಾಡಿದ ಆರೋಪದಲ್ಲಿ ದಕ್ಷಿಣ ವಿಭಾಗದ ಕಂದಾಯ ನಿರೀಕ್ಷಕ..
ತೆರಿಗೆ ಸಂಗ್ರಹ ಸಿಬ್ಬಂದಿಗಳೇ ಹೀಗೆ ಮಾಡಿದರೆ ಆರ್ಥಿಕ ದಿವಾಳಿಯಾಗದೇ ಮತ್ತೇನು?
ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹೇಳುವವರು ಕೇಳುವವರು ಇಲ್ಲದೇ ತಮ್ಮಿಷ್ಟದಂತೆ ಕಾರ್ಯ ನಿರ್ವಹಿಸುವ ವಾತಾವರಣ ನಿರ್ಮಾಣವಾಗಿದೆಯೇ ಎಂಬ ಸಂಶಯ ಕಾಡುತ್ತಿದ್ದು, ಇದರಿಂದಲೇ ಪಾಲಿಕೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಉಂಟಾಗಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಾವಾಗ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡುತ್ತಾರೋ? ಎಂಬುದು ದೊಡ್ಡ ಪ್ರಶ್ನೆಯಾಗಿದೆ..
ಪಾಲಿಕೆಯ ದಕ್ಷಿಣ ವಲಯದ ವಾರ್ಡ ಸಂಖ್ಯೆ 2ರ ಕರವಸೂಲಿಗಾರ ಹಾಗೂ ಕಂದಾಯ ನಿರೀಕ್ಷಕರಾದ ಮಲ್ಲಿಕಜಾನ್ ಗುಂಡಪ್ಪನವರ ಎಂಬುವವರು ತಮ್ಮ ವಾರ್ಡಿನಲ್ಲಿ ಪಾಲಿಕೆಗೆ ಬರಬೇಕಾದ ದೊಡ್ಡ ಮೊತ್ತದ ತೆರಿಗೆಯನ್ನು ವಸೂಲಿ ಮಾಡದೇ ಪಾಲಿಕೆಯ ಆದಾಯಕ್ಕೆ ನಷ್ಟ ಮಾಡಿದ್ದರೆಂಬ ಆರೋಪ ಎದುರಿಸುತ್ತಿದ್ದಾರೆ..
ಈ ಸಿಬ್ಬಂದಿ ತಮ್ಮ ವ್ಯಾಪ್ತಿಗೆ ಒಳಪಡುವ ಉದ್ಯಮಭಾಗ ಪ್ರದೇಶದ ಒಂದು ವಾಣಿಜ್ಯ ಉದ್ಯಮದ ಕಟ್ಟಡದ ಮರು ಅಳತೆ ತಗೆದುಕೊಂಡು, ತೆರಿಗೆ ನಿರ್ಧರಣೆ ಮಾಡಿದ್ದು ಸ್ವಾಗತಾರ್ಹ, ಆದರೆ ತೆರಿಗೆಯ ವ್ಯತ್ಯಾಸದ ಮೊತ್ತವನ್ನು ಹಾಗೂ ಅದರ ದಂಡವನ್ನು ಮಾಲೀಕರಿಂದ ಪಡೆದು ಪಾಲಿಕೆಗೆ ಸಲ್ಲಿಸಬೇಕಿತ್ತು, ಆದರೆ ತೆರಿಗೆ ಸಂಗ್ರಹದಲ್ಲಿ ಪಾರದರ್ಶಕ ನಿಲುವು ತಾಳದೆ, ಮಾಲೀಕರೊಂದಿಗೆ ಸಹಕರಿಸಿ, ಪಾಲಿಕೆಗೆ ದೊಡ್ಡ ನಷ್ಟ ತಂದಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ..
ಸುಮಾರು 2015 ರಿಂದ 2024ರ ವರೆಗಿನ, ಮರುಅಳತೆಯ ಪ್ರಕಾರದ ತೆರಿಗೆ, ವ್ಯತ್ಯಾಸದ ಮೊತ್ತ, ಹಾಗೂ ದಂಡದ ಮೊತ್ತ ಇವುಗಳ ಸಂಗ್ರಹದಲ್ಲಿ ದೊಡ್ಡ ಪ್ರಮಾಣದ ವ್ಯತ್ಯಾಸಗಳಾಗಿದ್ದು ಇದರಿಂದ ಪಾಲಿಕೆಗೆ ಸುಮಾರು 70ಲಕ್ಷದಷ್ಟು ನಷ್ಟವಾಗಿರಬಹುದೆಂಬ ಅನುಮಾನವಿದೆ, ಪಾಲಿಕೆಗೆ ಬರದೆ ಉಳಿದಿರುವ ಇಷ್ಟೊಂದು ದೊಡ್ಡ ಮಟ್ಟದ ಹಣ ಯಾರ ಪಾಲಾಗಿದೆ ಎಂಬುದು ನಗರವಾಸಿಗಳನ್ನು ಕಾಡುವ ಪ್ರಶ್ನೆಯಾಗಿದೆ..
ವಾಣಿಜ್ಯ ಉದ್ದಿಮೆಗಳ ಎರಡು ಬ್ರಹತ್ ಕಟ್ಟಡಗಳಲ್ಲಿ ಈ ರೀತಿಯ ತೆರಿಗೆ ವಂಚನೆ ನಡೆದಿದ್ದು, ಈ ಕಟ್ಟಡಗಳಲ್ಲಿ ಅನುಮತಿ ಪಡೆಯದೇ ಇರುವ ಮೆಲಂತಸ್ಥಿನ ಕೆಲ ಮಹಡಿಗಳಿಗೂ ತೆರಿಗೆ ಸಂಗ್ರಹ ಆಗಿಲ್ಲವೆಂಬ ಮಾಹಿತಿಯಿದೆ..
ಪಾಲಿಕೆಗೆ ಇಷ್ಟೊಂದು ನಷ್ಟ ತರುತ್ತಿರುವ ಕಂದಾಯ ಸಿಬ್ಬಂದಿಗಳ ಮೇಲೆ, ಕಂದಾಯ ಆಯುಕ್ತರು, ಆಡಳಿತ ಆಯುಕ್ತರು, ಪಾಲಿಕೆಯ ಆಯುಕ್ತರು ಏಕೆ ಕ್ರಮ ತೆಗೆದುಕೊಂಡಿಲ್ಲ? ಎಂಬುದೇ ತಿಳಿಯುತ್ತಿಲ್ಲ, ಇನ್ನಾದರೂ ಅಧಿಕಾರಿಗಳು ಕಣ್ತೆರೆದು ನೋಡಿ, ಇಂತಹ ಸಿಬ್ಬಂದಿಗಳನ್ನು ವಿಚಾರಣೆ ಮಾಡಿ, ತಪ್ಪು ನಡೆದಿದ್ದರೆ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ, ಮುಂದೆ ಪಾಲಿಕೆ ಮತ್ತಷ್ಟು ಕಷ್ಟಗಳನ್ನು ಎದುರಿಸುವ ಸಂದರ್ಭ ಎದುರಾಗಬಹುದು..
ವರದಿ ಪ್ರಕಾಶ್ ಬಸಪ್ಪ ಕುರಗುಂದ..