ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಸಭೆ..
ಪಾರದರ್ಶಕ, ನ್ಯಾಯಬದ್ಧ, ಸರಳೀಕೃತ ಆಡಳಿತ ಕಲ್ಪಿಸಬೇಕಿದೆ:
ಅಧ್ಯಕ್ಷ ಆರ್.ವಿ.ದೇಶಪಾಂಡೆ
ಬೆಳಗಾವಿ, ಜೂನ್ 28: ನಾಗರಿಕರಿಗೆ ಉತ್ತಮ ಸೌಲಭ್ಯ ಹಾಗೂ ಸರಕಾರಿ ಯೋಜನೆಗಳ ಪ್ರಯೋಜನ ದೊರಕಬೇಕಾದರೆ ಆಡಳಿತದಲ್ಲಿ ಸುಧಾರಣೆ ಅತ್ಯಗತ್ಯವಾಗಿದೆ. ಇತ್ತೀಚೆಗೆ ಆಡಳಿತದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ ಪಾರದರ್ಶಕತೆ ಕೊರತೆ ಎದ್ದು ಕಾಣುತ್ತಿದ್ದು, ಇದನ್ನು ನಿವಾರಿಸಬೇಕಿದೆ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು.
ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ(ಜೂ.28) ನಡೆದ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಗರಿಕರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಡಳಿತ ಸುಧಾರಣೆ ಪ್ರಕ್ರಿಯೆಯು ನಿರಂತರವಾಗಿರಬೇಕು. ತಾಂತ್ರಿಕ ಯುಗದಲ್ಲಿ ಪ್ರತಿಕ್ಷಣವೂ ಅಮೂಲ್ಯವಾಗಿದ್ದು, ಸಾರ್ವಜನಿಕರಿಗೆ ಪಾರದರ್ಶಕ ಹಾಗೂ ನ್ಯಾಯಬದ್ಧವಾದ ಆಡಳಿತ ದೊರಕಬೇಕು.
ಈ ನಿಟ್ಟಿನಲ್ಲಿ ಸರಕಾರ ಹೆಜ್ಜೆ ಹಾಕುತ್ತಿದೆ,
ಸಾರ್ವಜನಿಕರ ಕೆಲಸಗಳನ್ನು ನಿಯಮಾನುಸಾರ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರ ಸಲಹೆಗಳನ್ನು ಆಧರಿಸಿ ಆಡಳಿತದಲ್ಲಿ ಪಾರದರ್ಶಕತೆ, ಸರಳತೆ ತರಲು ಅಗತ್ಯ ಸುಧಾರಣಾ ಕ್ರಮಗಳನ್ನು ತರಲು ಆಯೋಗವು ಕ್ರಮ ಕೈಗೊಳ್ಳಲಿದೆ ಎಂದು ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಸಭೆಯಲ್ಲಿ ತಿಳಿಸಿದರು.
ಗ್ರಾಮಸೌಧಗಳು-ಆಡಳಿತ ಕೇಂದ್ರವಾಗಬೇಕು:
ಕಂದಾಯ ಇಲಾಖೆಯಲ್ಲಿ ಅಗತ್ಯವಿರುವ ಆಡಳಿತ ಸುಧಾರಣೆಗಳ ಕುರಿತು ವಿವರಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಗ್ರಾಮ ಪಂಚಾಯಿತಿ ಕಟ್ಟಡಗಳನ್ನೇ ಗ್ರಾಮಸೌಧ ಎಂದು ಪರಿವರ್ತಿಸಿ ಪಂಚಾಯತಿ ವ್ಯಾಪ್ತಿಯ ಮೂರ್ನಾಲ್ಕು ಗ್ರಾಮಗಳ ಜನರಿಗೆ ಪ್ರತಿಯೊಂದು ಸೇವೆಯು ಗ್ರಾಮಸೌಧದಲ್ಲೇ ದೊರಕುವಂತೆ ಕ್ರಮ ಕೈಗೊಳ್ಳಬೇಕಿದೆ ಎಂದರು.
ಗ್ರಾಮ ಪಂಚಾಯತಿಯ ಪಿಡಿಓ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಕಡ್ಡಾಯವಾಗಿ ಗ್ರಾಮಸೌಧದಲ್ಲೇ ಕುಳಿತು ಸಾರ್ವಜನಿಕರ ಕೆಲಸ ಮಾಡಿಕೊಡಲು ಅನುಕೂಲ ಕಲ್ಪಿಸಬಹುದು ಎಂದು ಸಲಹೆ ನೀಡಿದರು.
ಗ್ರಾಮ ಲೆಕ್ಕಾಧಿಕಾರಿಗಳಿಂದ ಹಿಡಿದು ಜಿಲ್ಲಾಧಿಕಾರಿ ಹಂತದವರೆಗೆ ಸಿಯುಜಿ ಮೊಬೈಲ್ ಸಂಖ್ಯೆ ನೀಡುವುದರಿಂದ ನಾಗರಿಕರಿಗೆ ಅನುಕೂಲವಾಗಲಿದೆ.
ನಾಲ್ಕು ತಾಲ್ಲೂಕುಗಳು ಹೊಸದಾಗಿ ರಚಿಸಲಾಗಿದೆ. ರೆಕಾರ್ಡ್ ರೂಮ್ ಇಲ್ಲದಿರುವುದರಿಂದ ಕಂದಾಯ ಇಲಾಖೆಯ ಪ್ರಮುಖ ದಾಖಲೆಗಳ ಸಂರಕ್ಷಣೆಗೆ ತೊಂದರೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ರಸ್ತೆ ಮತ್ತಿತರ ಅಭಿವೃದ್ಧಿ ಕಾಮಗಾರಿಗಳಿಗೆ ಅರಣ್ಯ ಇಲಾಖೆಯ ವತಿಯಿಂದ ನಿರಾಕ್ಷೇಪಣೆ ಪ್ರಮಾಣಪತ್ರ ಕಾಲಮಿತಿಯಲ್ಲಿ ಒದಗಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅನೇಕ ಕಾಮಗಾರಿಗಳು ಮತ್ತು ಯೋಜನೆಗಳು ನೆನೆಗುದಿಗೆ ಬಿದ್ದಿದ್ದು, ಕೆಲ ಯೋಜನೆಗಳು ರದ್ದಾಗಿರುತ್ತವೆ, ಆದ್ದರಿಂದ ಸಣ್ಣಪುಟ್ಟ ಕಾಮಗಾರಿಗಳಿಗೆ ರಾಜ್ಯಮಟ್ಟದಲ್ಲಿ ತ್ವರಿತ ಅನುಮತಿ ನೀಡಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಲಹೆ ನೀಡಿದರು.

ಇಬ್ಬರು ಅಪರ ಜಿಲ್ಲಾಧಿಕಾರಿ ನೇಮಿಸಲು ಸಲಹೆ:
ಪೊಲೀಸ್ ಇಲಾಖೆಯಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇಮಿಸಲಾಗಿದೆ. ಅದೇ ಮಾದರಿಯಲ್ಲಿ ಬೆಳಗಾವಿಯಂತಹ ದೊಡ್ಡ ಜಿಲ್ಲೆಗಳಿಗೆ ಇಬ್ಬರು ಅಪರ ಜಿಲ್ಲಾಧಿಕಾರಿಗಳನ್ನು ನೇಮಿಸುವುದರಿಂದ ಆಡಳಿತದಲ್ಲಿ ಇನ್ನಷ್ಟು ಸುಧಾರಣೆ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಲಹೆ ನೀಡಿದರು.
ಎಲ್ಲ ಇಲಾಖೆಗಳಲ್ಲಿ ಕ್ಯೂಆರ್ ಕೋಡ್ ಮೂಲಕ ಡಿಜಿಟಲ್ ಪಾವತಿಗೆ ವ್ಯವಸ್ಥೆ ಕಲ್ಪಿಸುವುದರಿಂದ ಸಮಯ ಉಳಿತಾಯವಾಗಲಿದೆ.
ಸಿಂಧುತ್ವ ಅರ್ಜಿ ವಿಲೇವಾರಿಗೆ ಸಂಬಂಧಿಸಿದಂತೆ ಪ್ರತಿಯೊಂದು ಅರ್ಜಿಯು ಜಿಲ್ಲಾಧಿಕಾರಿ ಲಾಗಿನ್ ನಲ್ಲಿ ಪೆಂಡಿಂಗ್ ತೋರಿಸುತ್ತದೆ. ಆದ್ದರಿಂದ ಆಯಾ ಹಂತದ ಅಧಿಕಾರಿಗಳ ಬಳಿ ಪೆಂಡಿಂಗ್ ಇರುವ ಬಗ್ಗೆ ತೋರಿಸುವಂತಾಗಬೇಕು.
ಸಾರ್ವಜನಿಕರು ಪೊಲೀಸ್ ಠಾಣೆಗೆ ಖುದ್ದಾಗಿ ಹೋಗಿ ದೂರು ನೀಡುವ ವ್ಯವಸ್ಥೆಯಿದೆ.ಕೆಲವು ಠಾಣೆಗಳಲ್ಲಿ ದೂರು ಸ್ವೀಕರಿಸಲು ನಿರಾಕರೇ ಅಥವಾ ವಿಳಂಬ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿವೆ. ಆದ್ದರಿಂದ ಆನ್ ಲೈನ್ ಮೂಲಕ ದೂರು ನೀಡುವ ವ್ಯವಸ್ಥೆ ಜಾರಿಗೊಳಿಸುವುದು ಸೂಕ್ತ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಭಿಪ್ರಾಯಪಟ್ಟರು.
ಕಿತ್ತೂರು ಶಾಸಕರಾದ ಬಾಬಾಸಾಹೇಬ್ ಪಾಟೀಲ, ಮೇಯರ್ ಸವಿತಾ ಕಾಂಬಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಕೈಗೊಳ್ಳಬಹುದಾದ ಸುಧಾರಣಾ ಕ್ರಮಗಳ ಕುರಿತು ಸಲಹೆಗಳನ್ನು ನೀಡಿದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..