ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿ ಕೆಲಸ ಮಾಡುವ ಸರ್ಕಾರ..

ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿ ಕೆಲಸ ಮಾಡುವ ಸರ್ಕಾರ..

ಐದು ಗ್ಯಾರೆಂಟಿಗಳು, ಇಂದಿರಾ ಕ್ಯಾಂಟಿನ್ ಇವೆಲ್ಲ ಬಡವರ ಪರವಾಗಿವೆ..

ಬೆಳಗಾವಿ : ಕಾಂಗ್ರೆಸ್ ಮೊದಲಿನಿಂದಲೂ ಬಡವರ ಪರವಾಗಿ ಕೆಲಸ ಮಾಡುವ ಪಕ್ಷವಾಗಿದ್ದು, ನಮ್ಮ ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳು ಹಾಗೂ ಇಂದಿರಾ ಕ್ಯಾಂಟಿನನಂತಹ ಯೋಜನೆಗಳು ಬಡವರ ಪರವಾಗಿದ್ದು ಅವರಿಗೆ ತುಂಬಾ ಸಹಕಾರಿಯಾಗಿವೆ ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಆಸಿಫ್ (ರಾಜು) ಸೇಠ್ ಅವರು ಹೇಳಿದ್ದಾರೆ.

ಶನಿವಾರ ದಿನಾಂಕ 17/05/2025 ರಂದು ನಗರದ ಶ್ರೀನಗರ ಹಾಗೂ ಅಶೋಕ ನಗರದಲ್ಲಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸಲಾದ ಎರಡು ಇಂದಿರಾ ಕ್ಯಾಂಟಿನಗಳನ್ನು ಉದ್ಘಾಟನೆ ಮಾಡಿ ಮಾತನಾಡಿದ ಶಾಸಕರು, ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಯೋಜನೆಗಳು ಬಡವರ ಪರವಾಗಿವೆ ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರದ ಹತ್ತು ಹಲವು ಜನಪರ ಯೋಜನೆಗಳಿಂದ ಇಂದು ರಾಜ್ಯದ ಜನರು ವಿಶೇಷವಾಗಿ ಬಡವರು ಖುಷಿಯಾಗಿದ್ದಾರೆ, ಬಡವರು ಖುಷಿಯಾದರೆ ನಮಗೂ ಖುಷಿ, ನಮ್ಮ ಸರ್ಕಾರಕ್ಕೂ ಖುಷಿ ಎಂದ ಅವರು, 5 ರೂಪಾಯಿಗೆ ಉಪಹಾರ, 10 ರೂಪಾಯಿಗೆ ಊಟ ಸಿಗುವದು ಕಠಿಣ, ಇದರಿಂದ ತುಂಬಾ ಜನರಿಗೆ ಅನುಕೂಲ ಆಗುತ್ತದೆ, ಇನ್ನು ನಮ್ಮ ಸಿಎಂ ಅವರು ಮೆನುವಿನಲ್ಲಿ ಬದಲಾವಣೆ ಮಾಡಿ, ಆಯಾ ಪ್ರದೇಶಗಳ ಸಾಂಪ್ರದಾಯಿಕ ಆಹಾರ ನೀಡುವ ಪದ್ಧತಿಯನ್ನು ಜಾರಿಗೆ ತಂದಿದ್ದಾರೆ.

ಇದೇ ವೇಳೆ ಕೇಂದ್ರ ಬಸ್ ನಿಲ್ದಾಣದಲ್ಲಿ ಒಂದು ಇಂದಿರಾ ಕ್ಯಾಂಟಿನ್ ಮಾಡಬೇಕು ಆಗ ನಮ್ಮ ಸಹೋದರಿಯರಿಗೆ ಬಸ್ಸು ಫ್ರೀ ಊಟಾನೂ ಫ್ರೀ ಆಗುತ್ತೆ ಎಂದು ನಗುತ್ತಲೇ ಆಯುಕ್ತರಿಗೆ ಸಲಹೆ ನೀಡಿದ ಶಾಸಕರು, ಅವಶ್ಯಕತೆ ಇದ್ದು ಕಡೆಗೆ ಮುಂದೆ ಮತ್ತೆ ಇಂದಿರಾ ಕ್ಯಾಂಟಿನ್ ಪ್ರಾರಂಭ ಮಾಡುತ್ತೇವೆ, ಆಹಾರದ ಗುಣಮಟ್ಟದಲ್ಲಿ ಕೊರತೆ ಕಂಡುಬಂದಲ್ಲಿ ಸಾರ್ವಜನಿಕರು ಪಾಲಿಕೆಯ ಆಯುಕ್ತರಿಗೆ ದೂರು ಸಲ್ಲಿಸಬಹುದು ಎಂದಿದ್ದಾರೆ.

ಈ ವೇಳೆ ಪಾಲಿಕೆಯ ವಿರೋಧ ಪಕ್ಷದ ನಾಯಕರು, ನಗರ ಸೇವಕರು, ನಾಮನಿರ್ದೇಶಿತ ನಗರ ಸೇವಕರು, ಪಾಲಿಕೆಯ ಆಯುಕ್ತರು, ಉಪ ಆಯುಕ್ತರು ಆಡಳಿತ, ಉಪ ಆಯುಕ್ತರು ಅಭಿವೃದ್ಧಿ, ಉಪ ಆಯುಕ್ತರು ಕಂದಾಯ, ಪರಿಸರ ಅಭಿಯಂತರರು, ಆರೋಗ್ಯ ಅಧಿಕಾರಿಗಳು, ಪಾಲಿಕೆಯ ವಿವಿಧ ವಿಭಾಗಗಳ ಸಿಬ್ಬಂದಿಗಳು ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ.