ಕಾಕತಿ‌ ಪೊಲೀಸ್ ಠಾಣೆಯಲ್ಲಿನ ಏಜೆಂಟರ ಹಾವಳಿಗೆ ಕಡಿವಾಣ ಹಾಕಿ..

ಕಾಕತಿ‌ ಪೊಲೀಸ್ ಠಾಣೆಯಲ್ಲಿನ ಏಜೆಂಟರ ಹಾವಳಿಗೆ ಕಡಿವಾಣ ಹಾಕಿ..

ಕುಂದುಕೊರತೆ ಸಭೆಯಲ್ಲಿ ಸಿಪಿಐ ಉಮೇಶ.ಎಂ ಗೆ ಎಸ್ಸಿ ಮುಖಂಡರ ಒತ್ತಾಯ..

ಬೆಳಗಾವಿ : ಕಾಕತಿ ಪೊಲೀಸ್ ಠಾಣೆಯಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದ್ದು, ಇದರಿಂದ ಬಡವರು, ಅನಕ್ಷರಸ್ಥ ಜನತೆ ತೀವ್ರ ತೊಂದರೆ ಅನುಭವಿಸುತ್ತಿದಾರೆ, ಠಾಣೆಯ ಮುಖ್ಯಸ್ಥರಾದ ತಾವು ಏಜೆಂಟರ ಹಾವಳಿಗೆ ಕಡಿವಾಣ ಹಾಕಬೇಕೆಂದು ದಲಿತ ಪ್ರಗತಿಪರ ‌ಸೇನೆ‌ ಜಿಲ್ಲಾಧ್ಯಕ್ಷ ಶಿವಪುತ್ರ ಮೇತ್ರಿ ಅವರು ಸಿಪಿಐ ಉಮೇಶ.ಎಂ ಅವರನ್ನು ಒತ್ತಾಯಿಸಿದರು.

ಬುಧವಾರ ಸಂಜೆ ಕಾಕತಿ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಠಾಣಾ ವ್ಯಾಪ್ತಿಯ ಎಸ್ಸಿ ಮುಖಂಡರ ಕುಂದುಕೊರತೆ ಸಭೆಯಲ್ಲಿ ಶಿವಪುತ್ರ ಮೇತ್ರಿ ಅವರು ಸಿಪಿಐ ಅವರನ್ನು ಒತ್ತಾಯಿಸಿದರು.

ಏಜೆಂಟರ ಹಾವಳಿಯಿಂದ ಕಾಕತಿ ಪೊಲೀಸ್ ಠಾಣೆಗೆ ಬರುವ ದೂರುದಾರರ ಪ್ರಕರಣಗಳು ಮುಗಿಯುತ್ತಿಲ್ಲ. ಇದರಿಂದ ನ್ಯಾಯವು ಹಣವಂತರ ಪಾಲಾಗುತ್ತಿದೆ. ಬಡವರು, ದುರ್ಬಲರು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಸರಿಯಾಗಿ ನ್ಯಾಯ ಸಿಗುತ್ತಿಲ್ಲ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಬಗ್ಗೆ ನಿಗಾ ವಹಿಸುವಂತೆ ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಪಿಐ ಉಮೇಶ.ಎಂ ಅವರು ನಾನು ಠಾಣೆಗೆ ಬಂದಾಗಿನಿಂದ ಅಂತಹ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ನಿಮ್ಮ ಗಮನಕ್ಕೆ ಅಂತವರು ಯಾರಾದರು ಕಂಡು ಬಂದರೆ ನನಗೆ ಮಾಹಿತಿ ನೀಡಿ. ಈ ಬಗ್ಗೆ ನಮ್ಮ ಸಿಬ್ಬಂದಿಗಳ ಮೇಲೆ ಹಾಗೂ ಏಜೆಂಟರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಸೇಫ್ ವಾರ್ಡ್ ಸಂಸ್ಥೆ ಅಧ್ಯಕ್ಷ ಸಂತೋಷ ಮೇತ್ರಿ ಮಾತನಾಡಿ, ಠಾಣೆಗೆ ದೂರು ನೀಡಲು ಬಂದಾಗ ಸಂಬಂಧ ಪಟ್ಟ ಕೇಸ್ ವರ್ಕರ್ ದೂರು ಸ್ವೀಕರಿಸದೇ ತಪ್ಪು ಮಾಡಿದವರ ಪರವಾಗಿಯೇ ವಾದಿಸುತ್ತಾರೆ. ದೂರು ಸ್ವೀಕರಿಸದೇ ವಿನಾಕಾರಣ ಕಾಲಹರಣ ಮಾಡಿ ಕೇಸು ತೆಗೆದುಕೊಳ್ಳುತ್ತಿಲ್ಲ. ಅನ್ಯಾಯಕ್ಕೊಳಗಾದವರು ಬಂದ ದಾರಿಗೆ ಸುಂಕವಿಲ್ಲ ಎಂದು ನೊಂದು ಬರಿಗೈಯಲ್ಲಿ ಮನೆಗೆ ಮರುಳುತ್ತಿದ್ದಾರೆ. ಯಾರೇ ದೂರು ಕೊಡಲು ಬಂದರೆ ಮೊದಲು ದೂರು ಸ್ವೀಕರಿಸಿ. ನಂತರ ಸತ್ಯಾಸತ್ಯತೆ ಪರಿಶೀಲಿಸುವಂತೆ ನಿಮ್ಮ ಕೇಸ್ ವರ್ಕರ್ ಗೆ ತಿಳಿ ಹೇಳಿ, ಇಲ್ಲವಾದರೆ ಪೊಲೀಸರ ಮೇಲಿನ ನಂಬಿಕೆಯನ್ನು‌ ಬಡವರು, ದೀನ ದಲಿತರು ಕಳೆದುಕೊಳ್ಳುತ್ತಾರೆ. ಅದಕ್ಕೆ ಅವಕಾಶ ಮಾಡಿ‌ ಕೊಡಬೇಡಿ ಎಂದು ಮನವಿ ಮಾಡಿದರು.

ಕಾಕತಿ ಗ್ರಾಮದ ರವಿ ಮೇತ್ರಿ ಮಾತನಾಡಿ ಸಿಪಿಐ ಉಮೇಶ ಎಂ. ಅವರು ಕಾಕತಿ ಠಾಣೆಗೆ ಬಂದಾಗಿನಿಂದ ಇಂತಹ ಕುಂದುಕೊರತೆ ಸಭೆಗಳು ನಡೆಯುತ್ತಿವೆ. ಈ ಹಿಂದಿನ ಯಾವ ಸಿಪಿಐಗಳು ಕೂಡ ಇಂತಹ ಸಭೆಗಳನ್ನು ನಡೆಸಿರಲಿಲ್ಲ. ನಿಮ್ಮಿಂದಾಗಿ ಈಗ ಪರಿಶಿಷ್ಟರಿಗೆ ಧೈರ್ಯ ಬಂದಿದೆ. ಮುಚ್ಚು ಮರೆಯಿಲ್ಲದೆ ದಲಿತರು ಎಲ್ಲವನ್ನು ಹೇಳಿಕೊಳ್ಳುತ್ತಿದ್ದಾರೆ ಎಂದು ಸಿಪಿಐ ಅವರ ಕಾರ್ಯವನ್ನು ಗುಣಗಾನ ಮಾಡಿದರಲ್ಲದೇ ಠಾಣಾ ವ್ಯಾಪ್ತಿಯ ದಲಿತ‌‌ ಮುಖಂಡರನ್ನು ಎಲ್ಲಾ ಧಾರ್ಮಿಕ ಶಾಂತಿ‌ಸಭೆಗಳಿಗೆ ಆಹ್ವಾನಿಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಎಎಸ್ಐ ಮಂಜುನಾಥ ಹುನಕುಂದ, ಮೃತ್ಯುಂಜಯ ಮಠದ, ಸಿಬ್ಬಂದಿ ಪ್ರಕಾಶ ಬಲ್ಲಾಳ, ಕೇದನೂರು ಗ್ರಾಮದ ಮುಖಂಡ ದಯಾನಂದ ಬಲೋಗಿ, ಕಡೋಲಿಯ ಸಂಜಯ ಕಾಂಬಳೆ, ಕಾಕತಿಯ ಅನಿಲ ಕಾಂಬಳೆ, ಬಿ.ಕೆ ಕಂಗ್ರಾಳಿಯ ದುರ್ಗಪ್ಪ ಕಾಂಬಳೆ, ರಾಹುಲ ಕಾಂಬಳೆ, ಅಗಸಗೆಯ ಪೀರಾಜಿ ಕೋಲಕಾರ ಇತರ ಗ್ರಾಮದ ಮುಖಂಡರು ಬೀಟ್‌ ಪೊಲೀಸರು ಇದ್ದರು.

ಸಂತೋಷ ಮೇತ್ರಿ, ಅಗಸಗೆ