ಕುಡಿಯುವ ನೀರು; ಮೇವು ಸಮರ್ಪಕ ಪೂರೈಕೆಗೆ ಉಸ್ತುವಾರಿ ಸಚಿವರ ಸೂಚನೆ..

ತ್ರೈಮಾಸಿಕ‌ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ…

ಕುಡಿಯುವ ನೀರು; ಮೇವು ಸಮರ್ಪಕ ಪೂರೈಕೆಗೆ ಉಸ್ತುವಾರಿ ಸಚಿವರ ಸೂಚನೆ

ಕ್ರೀಡಾಶಾಲೆ‌ ನಿರ್ಮಾಣ; ಪ್ರಸ್ತಾವನೆ ಸಲ್ಲಿಸಲು ಸೂಚನೆ..

ಬೆಳಗಾವಿ, : ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ರೀತಿಯ ಕೊರತೆಯಾಗದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಸೂಚನೆ ನೀಡಿದರು.

ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ(ಮಾ.1) ನಡೆದ 2023-24 ಸಾಲಿನ ಮೂರನೇ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ಒಮ್ಮೆಲೆ ವಿತರಿಸಲು ಕ್ರಮ ಕೈಗೊಳ್ಳುವುದು ಸೂಕ್ತ. ಆದ್ದರಿಂದ ಬೆಳಗಾವಿ ಸೇರಿದಂತೆ ಪ್ರತಿವರ್ಷ ಕನಿಷ್ಠ ಎರಡು ಜಿಲ್ಲೆಗಳ ವಿಕಲಚೇತನರಿಗೆ ಆದ್ಯತೆ ಮೇರೆಗೆ ಒಂದೆರಡು ವರ್ಷಗಳಲ್ಲಿ ವಾಹನ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಒಮ್ಮೆ ಮಂಜೂರಾಗಿರುವ ಪಾಲಿಹೌಸ್ ಗಳನ್ನೇ ಹೊಸದಾಗಿ ಮಂಜೂರಾದ ಫಲಾನುಭವಿಗಳಿಗೆ ಅಕ್ರಮವಾಗಿ ಹಸ್ತಾಂತರಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.

ತಾಯಿಮಕ್ಕಳ ಆಸ್ಪತ್ರೆ ಕಾರ್ಯಾರಂಭಿಸಲು ಸೂಚನೆ:

ಈಗಾಗಲೇ ಕಟ್ಟಡ ಪೂರ್ಣಗೊಂಡಿರುವ ತಾಯಿಮಕ್ಕಳ ಆಸ್ಪತ್ರೆಗಳು ಐದಾರು ವರ್ಷವಾದರೂ ಕಾರ್ಯಾರಂಭಿಸದಿರುವುದಿಲ್ಲ. ಮುಂದಿನ ಕೆಡಿಪಿ ಸಭೆಗಿಂತ ಮುಂಚೆ ಇಂತಹ ಆಸ್ಪತ್ರೆಗಳು ಕಾರ್ಯಾರಂಭಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೂಚನೆ ನೀಡಿದರು.

ಪ್ರತಿವರ್ಷ ಕನಿಷ್ಠ ಎರಡು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಹೊಂದುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಯತ್ನಿಸಬೇಕು. ಹೀಗೆ ಮಾಡಿದಲ್ಲಿ ನಾಲ್ಕೈದು ವರ್ಷಗಳಲ್ಲಿ ಜಿಲ್ಲೆಯಾದ್ಯಂತ ಎಲ್ಲೆಡೆ ಸ್ವಂತ ಅಂಗನವಾಡಿ ಕಟ್ಟಡಗಳನ್ನು ಹೊಂದಿದಂತಾಗುತ್ತದೆ ಎಂದು ಹೇಳಿದರು.

ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಸ್ವಂತ ಟ್ಯಾಂಕರ್ ಖರೀದಿಸುವಂತೆ ಈಗಾಗಲೇ ಸೂಚನೆ ನೀಡಲಾಗಿತ್ತು. ಇದುವರೆಗೆ 280 ಗ್ರಾಮ ಪಂಚಾಯಿತಿಗಳಲ್ಲಿ ಸ್ವಂತ ಟ್ಯಾಂಕರ್ ಖರೀದಿಸಲಾಗಿದ್ದು, ಉಳಿದ ಪಂಚಾಯಿತಿಗಳಲ್ಲಿ ಆದಷ್ಟು ಬೇಗನೇ ಟ್ಯಾಂಕರ್ ಖರೀದಿಸಬೇಕು ಎಂದು ಸಚುವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸ್ವಂತ ಟ್ಯಾಂಕರ್ ಹೊಂದಿದ್ದರೆ ಬೇಸಿಗೆಯಲ್ಲಿ ತುರ್ತಾಗಿ ಕುಡಿಯುವ ನೀರು ಪೂರೈಕೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಹೊಸ ಕೊಳವೆಬಾವಿಗಿಂತ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ಸಮರ್ಪಕವಾಗಿ ನೀರು ಪೂರೈಸಬಹುದು ಎಂದು ಹೇಳಿದರು.

ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ವಸತಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ವಸತಿ ಯೋಜನೆಗಳಿಗೆ ಸಲ್ಲಿಸುವ ಎಲ್ಲರಿಗೂ ಸೌಲಭ್ಯ ಕಲ್ಪಿಸಬೇಕು ಎಂದು ಸಚಿವರು ತಿಳಿಸಿದರು.

ವಸತಿ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ ಎಂದು ಶಾಸಕ ರಾಜು ಸೇಠ್‌ ಹಾಗೂ ಮಹಾಂತೇಶ ಕೌಜಲಗಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಂಸದೆ ಮಂಗಲ ಅಂಗಡಿ, ರಾಯಬಾಗ ಶಾಸಕರಾದ ದುರ್ಯೋಧನ ಐಹೊಳೆ, ಬೆಳಗಾವಿ(ಉತ್ತರ) ಶಾಸಕ ಆಸಿಫ್(ರಾಜು) ಸೇಠ್, ಖಾನಾಪುರ ಶಾಸಕ ವಿಠ್ಠಲ ಹಲಗೇಕರ್, ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಅನುಕಂಪ ಆಧಾರಿತವಾಗಿ ನೇಮಕಗೊಂಡ ನೌಕರರಿಗೆ ಜಿಲ್ಲಾ ಉಸ್ತುವಾರಿ ಸಚಿವರು ನೇಮಕಾತಿ ಆದೇಶಪತ್ರವನ್ನು ವಿತರಿಸಿದರು.

ವರದಿ ಪ್ರಕಾಶ ಕುರಗುಂದ..