ಕುರಿಹಾಳ ಎಸ್ಸಿ/ಎಸ್ಟಿ ಕಾಲೋನಿಗಳಲ್ಲಿ ಸಮಸ್ಯೆಗಳ ಸುರಿಮಳೆ..

ಕುರಿಹಾಳ ಎಸ್ಸಿ/ಎಸ್ಟಿ ಕಾಲೋನಿಗಳಲ್ಲಿ ಸಮಸ್ಯೆಗಳ ಸುರಿಮಳೆ..

ವರ್ಷ ಕಳೆದರೂ ಹೊತ್ತದ ಬೀದಿ ದೀಪ..

ಕ್ರಿಯಾ ಯೋಜನೆ ರೂಪಿಸುವಲ್ಲಿ ಪಿಡಿಒ ಹರೀಶ ಬಡಿಗೇರ ಯಡವಟ್ಟು..

ಚರಂಡಿಗಳ ಅಸ್ವಚ್ಛತೆಯಿಂದ ಸಾಂಕ್ರಾಮಿಕ ರೋಗಗಳ ಭೀತಿ..

ಹಂದಿಗನೂರ ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ಧ ಅಳಲು ತೋಡಿಕೊಂಡ ಕುರಿಹಾಳ ಜನತೆ..

ಎಸ್ಸಿಪಿ ಅನುದಾನ ಆಟಕುಂಟು ಲೆಕ್ಕಕ್ಕಿಲ್ಲ..

ಸಮಾಜ‌ ಕಲ್ಯಾಣ ಇಲಾಖೆ ಅಧಿಕಾರಿ ಮಹಾಂತೇಶ ಚಿವಟಗುಂಡಿ ‌ಗ್ರಾಮಕ್ಕೆ ಭೇಟಿ..

ಬೆಳಗಾವಿ : ಹಂದಿಗನೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕುರಿಹಾಳ ಅಂಬೇಡ್ಕರ ಹಾಗೂ ವಾಲ್ಮಿಕಿ ಕಾಲೋನಿಯಲ್ಲಿ ಸಮಸ್ಯೆಗಳ ಸುರಿಮಳೆಯೇ ಕೇಳಿ ಬಂದವು.

ಬೆಳಗಾವಿ ತಾಲೂಕಿನಲ್ಲಿ ಬರುವ ಕುರಿಹಾಳ ಕೆಎಚ್ ಹಾಗೂ ಕುರಿಹಾಳ ಬಿಕೆ ಗ್ರಾಮವು ಹಂದಿಗನೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಮಕನಮರಡಿ ವಿಧಾನಸಭೆ ಮತಕ್ಷೇತ್ರದಲ್ಲಿ ಬರುತ್ತದೆ. ಇಲ್ಲಿನ ಅಂಬೇಡ್ಕರ ಕಾಲೋನಿಯಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಎಸ್ಸಿಪಿ ಟಿಎಸ್ಪಿ ಅನುದಾನದ ದುರ್ಬಳಕೆ ಬಗ್ಗೆ ಉದಯಕಾಲ ದಿನಪತ್ರಿಕೆಯಲ್ಲಿ ಸುದ್ದಿ ಬಿತ್ತರಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹಾಂತೇಶ ಚಿವಟಗುಂಡಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ದೂರು ಆಲಿಸಿದರು.

ಅಂಬೇಡ್ಕರ ಕಾಲೋನಿ ಪಕ್ಕದ ಲಕ್ಷ್ಮೀ ದೇವಸ್ತಾನದ ಹತ್ತಿರ ನೀರಿನ ಟ್ಯಾಂಕ್ ಇದ್ದು ಇಲ್ಲಿ ಸತತವಾಗಿ ನೀರು ಹರಿಯುತ್ತದೆ. ಚರಂಡಿ ಇಲ್ಲದ ಕಾರಣ ಕೊಳಚೆ ನೀರು ರಸ್ತೆ ಮೇಲೆ‌ ಹರಿದು ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿರುವುದನ್ನು ಸಮಾಜ ಕಲ್ಯಾಣ ಅಧಿಕಾರಿಗಳು ಕಣ್ಣಾರೆ ಕಂಡರು. ಅಲ್ಲದೇ ಪಕ್ಕದಲ್ಲೇ ಇರುವ ಚರಂಡಿಯನ್ನು ಸ್ವಚ್ಚ ಮಾಡಿಸದ ಪಿಡಿಒ ಹರೀಶ ಬಡಿಗೇರ ವಿರುದ್ದ ಹರಿಹಾಯ್ದರು.

👉ಎಸ್ಸಿಪಿ/ಟಿಎಸ್ಪಿ ಅನುದಾನ ಆಟಕುಂಟು ಲೆಕ್ಕಕ್ಕಿಲ್ಲ..

ಹಂದಿಗನೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರಿಹಾಳ ಗ್ರಾಮದಲ್ಲಿ ಎಸ್ಸಿಪಿ-ಟಿಎಸ್ಪಿ ಅನುದಾನ ಆಟಕ್ಕುಂಟು ಲೆಕ್ಕಕ್ಕಿಲ್ಲವಾಗಿದೆ. ಶೇಕಡಾ 40ರ ಅನಿರ್ಭಂದಿತ ಅನುದಾನದಲ್ಲಿ ಸುಮಾರು 105008 ರೂಪಾಯಿ ವೆಚ್ಚದಲ್ಲಿ ಬೋರ್ ವೆಲ್ ಕೊರೆಸಿ ಮೋಟಾರು ಅಳವಡಿಸುವ ಬಗ್ಗೆ ಕ್ರಿಯಾ ಯೋಜನೆಯಲ್ಲಿ ಹಾಕಲಾಗಿದೆ. ಅದನ್ನು ಖರ್ಚು ಮಾಡಲಾಗಿದೆ. ಆದರೆ ಅದನ್ನು ಎಸ್ಸಿಪಿ ಅಥವಾ ಟಿಎಸ್ಪಿ ಯಾವ ಅನುದಾನದಲ್ಲಿ ಹಾಕಲಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಉಲ್ಲೇಖ ಇಲ್ಲ.

ಅಲ್ಲದೇ 2023-24ನೇ ಸಾಲಿನ ನಿರ್ಭಂಧಿತ ಅನುದಾನದಲ್ಲಿ ಕುರಿಹಾಳ ಕೆಎಚ್ ಕನ್ನಡ ಶಾಲೆಯಿಂದ ಮೇನ್ ರೋಡ್ ಕಲ್ಲಪ್ಪ ಪಾಟೀಲ ಮನೆಯವರೆಗೆ 170404 ರೂಪಾಯಿಗಳ ವೆಚ್ಚದಲ್ಲಿ ಸಿಸಿ ಗಟಾರು ಮಾಡಲು ಒಂದು ವರ್ಷದ ಹಿಂದೆ ಕ್ರಿಯಾ ಯೋಜನೆ ಮಾಡಲಾಗಿದೆ. ಈವರೆಗೂ ಅಲ್ಲಿನ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ವರ್ಷ ಕಳೆದರೂ ಕಾಮಗಾರಿ ಯಾಕೆ ಆರಂಭಿಸಿಲ್ಲ ? ಇಲ್ಲಿ ಕೂಡ ಎಸ್ಸಿ/ಎಸ್ಟಿ ಕಾಮಗಾರಿ ಎಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಕ್ರಿಯಾ ಯೋಜನೆ ಮಾಡಲಾಗಿದ್ದು ಇದರ ಹಿಂದಿನ ಮರ್ಮವೇನು ಎಂದು ಗ್ರಾಮಸ್ಥರು ಪ್ರಶ್ನಿಸಿದರು.

👉ಕಾಗದದಲ್ಲಿ ಮಾತ್ರ ಎಸ್ಸಿಪಿ-ಟಿಎಸ್ಪಿ ಅನುದಾನ ಬಳಕೆ..

ಕುರಿಹಾಳ ಕೆಎಚ್ ಹಾಗೂ ಕುರಿಹಾಳ ಬಿಕೆ ಗ್ರಾಮದಲ್ಲಿ ಎಸ್ಸಿಪಿ ಟಿಎಸ್ಪಿ ಅನುದಾನ ಬಳಕೆ ಮಾಡಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ ಸಮಾಜ ಕಲ್ಯಾಣ‌ ಅಧಿಕಾರಿ ಮಹಾಂತೇಶ ಚಿವಟಗುಂಡಿ ‌ಅವರಿಗೆ ಎಸ್ಸಿ ಕಾಲೋನಿಯಲ್ಲಿ ಯಾವೊಂದು ಕಾಮಗಾರಿಯೂ ಕಂಡು ಬರಲಿಲ್ಲ. ಎಸ್ಸಿ‌ ಕಾಲೋನಿಯಲ್ಲಿ ಯಾವ ಕಾಮಗಾರಿ ಮಾಡಿದ್ದಿರಿ‌. ಈ ಬಗ್ಗೆ ಮಾಹಿತಿ ನೀಡಿ ಎಂದು ಪಿಡಿಒ ಹರೀಶ ಬಡಿಗೇರ ಅವರನ್ನು ಚಿವಟಗುಂಡಿ ಅವರು ಪ್ರಸ್ನಿಸಿದರು. ಇದಕ್ಕೆ ತಬ್ಬಿಬ್ಬಾದ ಪಿಡಿಒ ಹರೀಶ ಬಡಿಗೇರ ಅವರು ಮಾಹಿತಿ ನೀಡಲು ತಡವರಿಸಿದರು.

ಆಗ ಮಧ್ಯ ಪ್ರವೇಶಿಸಿದ ದಲಿತ ಪ್ರಗತಿಪರ ಸೇನೆ ಜಿಲ್ಲಾ ಅಧ್ಯಕ್ಷ ಶಿವಪುತ್ರ ಮೇತ್ರಿ ಹಾಗೂ ಸೇಫ್ ವಾರ್ಡ್ ಸಂಸ್ಥೆ ಅಧ್ಯಕ್ಷ ಸಂತೋಷ ಮೇತ್ರಿ ” ಕ್ರಿಯಾ ಯೋಜನೆಯಲ್ಲಿ ಮಾತ್ರ ಪರಿಶಿಷ್ಟ ಜಾತಿ ಎಂದು ನಮೂದು ಮಾಡಿದ್ದಿರಿ. ನಿಮ್ಮ ಕ್ರಿಯಾ ಯೋಜನೆ ಪ್ರಕಾರ ಕುರಿಹಾಳ ಗ್ರಾಮದಲ್ಲಿ ಎಸ್ಸಿ ಸಮುದಾಯ ಎಲ್ಲಿದೆ? ಮತ್ತು ನೀವು ಕಾಮಗಾರಿ ಎಲ್ಲಿ ಮಾಡಿದ್ದಿರಿ? ಕ್ರಿಯಾ ಯೋಜನೆ ರೂಪಿಸುವಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಂದು ಬೇರೆಬೇರೆ ಉಲ್ಲೇಖಿಸಬೇಕು. ನೀವು ರೂಪಿಸಿರುವ ಕ್ರಿಯಾ ಯೋಜನೆಯಲ್ಲಿ ಎಸ್ಸಿ‌/ಎಸ್ಟಿ ಜನರು ಒಂದೇ ಕಾಲೋನಿಯಲ್ಲಿ ಇರುವಂತೆ ತೋರಿಸಿರುವುದರ ಹಿಂದಿನ ಗುಟ್ಟೇನು? ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರನ್ನು ಮುರ್ಖರನ್ನಾಗಿ ಮಾಡುತ್ತಿದ್ದಿರಿ. ನಿಮ್ಮ ವಿರುದ್ದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡುತ್ತೇವೆ” ಎಂದು ಪಿಡಿಒ ಹರೀಶ ಬಡಿಗೇರ ಅವರನ್ನು ತರಾಟೆಗೆ ತೆಗೆದುಕೊಂಡರು.

👉ವರ್ಷ ಕಳೆದರೂ ಹೊತ್ತದ ಬೀದಿ ದೀಪ-ಸ್ವಚ್ಚಗೊಳ್ಳದ ಚರಂಡಿ..

ನಮ್ಮ ಕಾಲೋನಿಯಲ್ಲಿ ಕಳೆದ ಒಂದು ವರ್ಷದಿಂದ ಬೀದಿ ದೀಪ ಇಲ್ಲ. ತೋರಿಕೆಗಾಗಿ ಮಾತ್ರ ಕಂಬದ ಮೇಲೆ ಬಲ್ಬ ಹಾಕಲಾಗಿದೆ. ಅವು ಕೆಟ್ಟು ಹೋಗಿ ಒಂದು ವರ್ಷ ಕಳೆದಿದೆ. ಇಂದಿಗೂ ಅವುಗಳನ್ನು ಸರಿಪಡಿಸಿಲ್ಲ. ರಾತ್ರಿ ಹೊತ್ತು ಇಲ್ಲಿನ ನಿವಾಸಿಗಳು ಹೊರಗೆ ಬೀಳದಂತಾಗಿದೆ. ಕುರಿಹಾಳ ಕೆಎಚ್ ಗ್ರಾಮದಲ್ಲಿ ಪರಿಶಿಷ್ಟ ಪಂಗಡ (ಎಸ್ಟಿ) ಮಾತ್ರ ಇದೆ. ಉದ್ದೇಶ ಪೂರ್ವಕವಾಗಿ ನಮಗೆ ಮೂಲಭೂತ ಸೌಕರ್ಯಗಳನ್ನು ನೀಡುತ್ತಿಲ್ಲ ಎಂದು ಸುಪ್ರಿಯಾ ನಾಯಿಕ ಆರೋಪಿಸಿರು.

ಅಲ್ಲದೇ ಚರಂಡಿಗಳನ್ನು ಸ್ವಚ್ಚ ಮಾಡುತ್ತಿಲ್ಲ. ಮೊದಲೇ ಮಳೆಗಾಲದ ಇರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗಿದೆ. ಅಂಗನವಾಡಿ, ಶಾಲೆ ಹಾಗೂ ಕುರಿಹಾಳ ಕೆಎಚ್ ಗ್ರಾಮದ ಎಲ್ಲಾ ಚರಂಡಿಗಳನ್ನು ಸ್ವಚ್ಚ ಮಾಡಿಸಿ ಕೊಡುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹಾಂತೇಶ ಚಿವಟಗುಂಡಿ ಅವರನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ದಯಾನಂದ ಬಸರ್ಗಿ, ಗ್ರಾಮಸ್ಥರಾದ ಗಜಾನಂದ ಕಾಂಬಳೆ, ಈಶ್ವರ ಕಾಂಬಳೆ, ಈರಪ್ಪ ನಾಯಿಕ, ಮಾರುತಿ ನಾಯಿಕ, ಕಲ್ಲಪ್ಪ ನಾಯಿಕ, ದಲಿತ ಯೂತ್‌ ಆರ್ಗನೈಸೇಷನ್ ಬೆಳಗಾವಿ ನಗರ ಅಧ್ಯಕ್ಷ ಸುಧೀರ‌ ಚೌಗುಲೆ ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಸಂತೋಷ ಮೇತ್ರಿ,..