ಬೆಳಗಾವಿಯಲ್ಲಿ ಪರ್ಯಾಯ ಕನ್ನಡ ಚಲನಚಿತ್ರ ತೆರೆಗೆ…
ಕುರುಡ ವ್ಯಕ್ತಿ ಮಾಡಿದ ಚಹಾ ಕುಡಿಯದೇ, ಪ್ರೇಕ್ಷಕನಿಗೆ ಪರ್ಯಾಯ ಮಾರ್ಗವೇ ಇಲ್ಲಾ..
ಕಲಾವಿದರ ಲವಲವಿಕೆಯ ನಟನೆ ಇದ್ದರೂ, ಕಥೆಯಲ್ಲಿ ಹೊಸತನ, ಗಟ್ಟಿತನ ಹಾಗೂ ವೇಗದ ಕೊರತೆ..
ಬೆಳಗಾವಿ : ಗಡಿಭಾಗವಾದ ಬೆಳಗಾವಿಯಲ್ಲಿ ಕಲೆ ಮತ್ತು ಕಲಾವಿದರಿಗೆ ಕೊರತೆಯಿಲ್ಲ, ಅದಕ್ಕಾಗಿಯೇ ಆಗಾಗ ಇಲ್ಲಿಯ ಸೊಗಡಿನ, ಕಲಾವಿದರ ಕನ್ನಡ ಚಿತ್ರಗಳು ಮೂಡಿ ಬರುತ್ತಿವೆ, ಅದೇ ನಿಟ್ಟಿನಲ್ಲಿ ದಿನಾಂಕ 08/09/23 ರ ಶುಕ್ರವಾರ ಪರ್ಯಾಯ ಚಿತ್ರವೂ ತೆರೆ ಕಂಡಿದೆ..
ಬೆಳಗಾವಿ ಮೂಲದ ರಾಜಕುಮಾರ, ಮುರುಗೇಶ ಶಿವಪೂಜೆ, ಹಾಗೂ ಸ್ನೇಹಿತರು ಸೇರಿ ನಿರ್ಮಿಸಿದ ಈ ಪರ್ಯಾಯ ಚಿತ್ರಕ್ಕೆ ಬೆಂಗಳೂರಿನ ದಯಾನಂದ ಮಿತ್ರ ಎಂಬುವರ ನಿರ್ದೇಶನವಿದ್ದು, ಬಹುತೇಕ ಬೆಳಗಾವಿ ಸುತ್ತಮುತ್ತ ಚಿತ್ರೀಕರಣವಾಗಿ, ಬೆಳಗಾವಿಯ ಕಲಾವಿದರೇ ನಟಿಸಿದ್ದಾರೆ..

ಬಿಡುಗಡೆಯ ಮೊದಲು ಚಿತ್ರದ ಬಗ್ಗೆ ಎಲ್ಲರಿಗೂ ತುಂಬಾ ನಿರೀಕ್ಷೆ ಇದ್ದಿದ್ದು, ಚಿತ್ರ ಪ್ರಚಾರದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಹೇಳಿದ ಪ್ರಕಾರ, ಹೊಸ ಮಾದರಿಯ ಕಥಾಹಂದರ ಹೊಂದಿದ, ಜನಸಾಗರವನ್ನು ಸೆಳೆಯುವ, ಬೆಳಗಾವಿಗೆ ಹೆಸರು ತರುವಂತಹ ಚಿತ್ರ ಆಗುತ್ತದೆ ಎಂದು ನಂಬಲಾಗಿತ್ತು, ಆದರೆ ಇದೆಲ್ಲದಕ್ಕಾಗಿ ಇನ್ನೊಂದು ಚಿತ್ರಕ್ಕಾಗಿ ಬೆಳಗಾವಿ ಕನ್ನಡಿಗರು ಕಾಯಬೇಕಾಗಿದೆ..
ಚಿತ್ರದ ಧನಾತ್ಮಕ ಸಂಗತಿಗಳ ಬಗ್ಗೆ ಹೇಳಬೇಕೆಂದರೆ, ಹೊಸ ಕಲಾವಿದರು ಅತ್ಯಂತ ಉತ್ತಮವಾಗಿ ನಟಿಸಿದ್ದಾರೆ, ಪ್ರಮುಖ ಪಾತ್ರಗಳಾದ ಕುರುಡ, ಕಿಡುದ, ಮುಖನ ಪಾತ್ರಗಳಿಗೆ ಕಲಾವಿದರು ನ್ಯಾಯ ನೀಡಿದ್ದಾರೆ, ಸಹ ಕಲಾವಿದರ ನಟನೆ ಕೂಡಾ ಮೆಚ್ಚುವ ಹಾಗಿದೆ, ಚಿತ್ರದ ಹಿನ್ನೆಲೆ ಸಂಗೀತ, ಹಾಡುಗಳ ಸಂಗೀತ ಅತ್ಯುತ್ತಮ, ಹಾಡುಗಳ ಸಾಹಿತ್ಯ ಕೂಡಾ ಪ್ರೇಕ್ಷಕರಿಗೆ ಇಷ್ಟ ಆಗುತ್ತಿದ್ದು, ಚಿತ್ರದ ಸಂಕಲನ ಕಾರ್ಯ, ಛಾಯಾಗ್ರಹಣದಲ್ಲಿ ಆದ ತಪ್ಪನ್ನು ತಿದ್ದಿ, ಚೆನ್ನಾಗಿ ಕಾಣುವಂತೆ ಮಾಡಿದೆ..

ಇನ್ನು ಋಣಾತ್ಮಕ ಸಂಗತಿ ಎಂದರೆ, ಚಿತ್ರದ ನಾಯಕರಲ್ಲಿ ಪ್ರಮುಖವಾದ ಕುರುಡನ ಪಾತ್ರ , ಚಹಾದ ಅಂಗಡಿ ಇಟ್ಟು, ಬಂದ ಜನರಿಗೆ ಚಹಾ, ಉಪಹಾರ ನೀಡಿ, ಹಣವನ್ನು ಲೆಕ್ಕಕ್ಕೆ ಬರೆದುಕೊಳ್ಳುವದು ಹೇಗೆ ಸಾಧ್ಯ? ಅಂಗಡಿಯಲ್ಲಿ ಅವನ ಬಿಟ್ಟರೇ ಯಾರೂ ಇಲ್ಲಾ, ಕಣ್ಣು ಇದ್ದವರೇ ಬಜಿ ಮಾಡೋದು ಕಷ್ಟ, ಮತ್ತೆ ಇವರು?? ಚಿತ್ರ ಪೂರ್ತಿ ಕುರುಡು ಪಾತ್ರಧಾರಿಯ ಜೊತೆ ಹೋಗುವುದರಿಂದ ಇದನ್ನು ಸಹಿಸುವುದು ಪ್ರೇಕ್ಷಕನ ಕಷ್ಟವಾಗಬಹುದು ಎಂದು ನಿರ್ದೇಶಕರಿಗೆ ತಿಳಿಯಲಿಲ್ಲವೇನೋ,,
ಮುಖ್ಯ ಮೂರು ಪಾತ್ರದಾರಿಗಳ ಮನೆಯವರು, ಆರಂಭದಿಂದಲೂ ಆ ಮೂರು ಪಾತ್ರದಾರಿಗಳನ್ನು ತೆಗಳುತ್ತಿರುವದಕ್ಕೆ ಕಾರಣವೇ ಕಾಣಲಿಲ್ಲ, ಚಿತ್ರದ ಕೊನೆಗೆ ನಾಯಕನ ತಾಯಿ ತಿರಿದಾಗ, ಅವನ ಸ್ನೇಹಿತನ ಮನೆಯವರು ಅತ್ಯಂತ ಆಘಾತಕಾರಿ ದುಃಖವನ್ನು ತೋರಿಸುತ್ತಾರೆ, ಆದರೆ ಆ ತಾಯಿಗೂ, ಆ ಅಳುವ ಜನರಿಗೂ ಪರಿಚಯ ಇರುವ ಯಾವ ದೃಶ್ಯವೂ ಚಿತ್ರದಲ್ಲಿ ತೋರಿಸಿಲ್ಲ,

ಇನ್ನು ಕೆಲ ಪಾತ್ರಗಳು ಬರುತ್ತವೆ ಹೋಗುತ್ತವೆ, ಅವುಗಳಿಗೆ ಆದಿ ಅಂತ್ಯ ಏನೂ ಇಲ್ಲಾ, ಆ ದೃಶ್ಯಗಳಿಗೆ ಸ್ಪಷ್ಟೀಕರಣವೂ ಇಲ್ಲಾ, ಕಥಾವಿಷಯ ಹಾಗೂ ಅದನ್ನು ತೋರಿಸಿದ ರೀತಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವಲ್ಲಿ ವಿಫಲವೇನಿಸುವದು..
ಅದೇನೇ ಇದ್ದರೂ, ನಮ್ಮ ಬೆಳಗಾವಿಯ ಕನ್ನಡಿಗರು, ಉತ್ತರ ಕರ್ನಾಟಕಕ್ಕೆ ಹೆಸರು ತರಲು, ಒಳ್ಳೆಯ ಚಿತ್ರ ಮಾಡಬೇಕೆಂದು ಪರ್ಯಾಯ ಚಿತ್ರ ನಿರ್ಮಿಸಿದ್ದು, ಅವರ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸುತ್ತಾ, ಬರುವ ದಿನಗಳಲ್ಲಿ ಬೆಳಗಾವಿಗರ ಬಳಗದಿಂದ ಹಲವಾರು ಅದ್ಬುತ ಚಿತ್ರಗಳು ಬರಲೆಂದು ಆಶಿಸೋಣ..
ವರದಿ ಪ್ರಕಾಶ ಕುರಗುಂದ..