ಖಾನಾಪುರ ತಾಲೂಕಿನ ರಸ್ತೆ ಸಮಸ್ಯ ಕುರಿತು ಅಧಿವೇಶನದಲ್ಲಿ ಚರ್ಚೆ…

ಖಾನಾಪುರ ತಾಲೂಕಿನ ರಸ್ತೆ ಸಮಸ್ಯ ಕುರಿತು ಅಧಿವೇಶನದಲ್ಲಿ ಚರ್ಚೆ…

ಸಮಸ್ಯೆಯ ಗಾಢತೆ ಬಿಚ್ಚಿಟ್ಟ ಎಂಎಲ್ಸಿ ತಳವಾರ ಸಾಬಣ್ಣ..

ಲೋಕೋಪಯೋಗಿ ಸಚಿವರ ಸಮರ್ಪಕ ಸ್ಪಂದನೆ…

ಸುವರ್ಣ ವಿಧಾನ ಸೌಧ ಬೆಳಗಾವಿ, : ಬೆಳಗಾವಿ ಜಿಲ್ಲೆಯ ಅತ್ಯಂತ ನಿರ್ಲಕ್ಷಿತ ಮತ್ತು ಅಭಿವೃದ್ಧಿ ವಂಚಿತ ತಾಲೂಕು ಎಂದೆ ಗುರುತಿಸಲ್ಪಡುವ ಖಾನಾಪುರ ತಾಲೂಕಿನ ಬಹುತೇಕ ರಸ್ತೆಗಳು ಹಾಳಾಗಿವೆ. ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳು ಗತಿಸಿದರು ತಾಲೂಕಿನ ಕಾಡಿನ ಅಂಚಿನಲ್ಲಿರುವ ಕೆಲ ಗ್ರಾಮಗಳಿಗೆ ಇಂದಿಗೂ ರಸ್ತೆ ಇಲ್ಲ.

ತಾಲೂಕಿನ ಮೂಲಕ ಹಾದು ಹೋಗುವ ರಾಜ್ಯ ಮತ್ತು ಬೆಳಗಾವಿ ಪಣಜಿ ರಾಷ್ಟ್ರೀಯ ಹೆದ್ದಾರಿಗಳು ಸುಸ್ಥಿತಿಯಲ್ಲಿಲ್ಲ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಗಮ ಸಂಚಾರ ಕೈಗೊಳ್ಳಲು ಅನುವು ಮಾಡಿಕೊಡಬೇಕಾಗಿದ್ದ ಈ ಹೆದ್ದಾರಿಗಳ ದುಸ್ಥಿತಿಯ ಕಾರಣದಿಂದ ಪ್ರಯಾಣಿಕರ ಪಾಲಿಗೆ ಮೃತ್ಯುಕೂಪವಾಗಿವೆ.

ರಸ್ತೆಗಳು ಹದಗೆಟ್ಟು ಗುಂಡಿಗಳ ನಿರ್ಮಾಣವಾಗಿದೆ, ಇದರಿಂದ ವಾಹನ ಸವಾರರು, ವೃದ್ಧರು, ಗರ್ಭಿಣಿ, ಬಾಣಂತಿಯರು ಪರದಾಡುವಂಥಾಗಿದೆ, ಕಾಡಂಚಿನ ಕೆಲ ಗ್ರಾಮಗಳಿಗೆ ಇಂದಿಗೂ ರಸ್ತೆ ಇಲ್ಲ, ಇದ್ದರೂ ಸಂಚಾರಕ್ಕೆ ಯೋಗ್ಯವಾಗಿಲ್ಲ. ಬೆಳಗಾವಿಯಿಂದ ಗೋವಾ ಹೋಗುವ ರಸ್ತೆ, ಖಾನಾಪುರದಿಂದ ನಂದಗಡ ಮೂಲಕ ಹೋಗುವ ಹಳಿಯಾಳ ರಸ್ತೆ ಸಂಪೂರ್ಣ ಹಾಳಾಗಿದೆ.

ಈ ಹಿನ್ನೆಲೆಯಲ್ಲಿ, ವಿಧಾನ ಪರಿಷತ್ತಿನ ಸದಸ್ಯರಾದ ಡಾ.ತಳವಾರ ಸಾಬಣ್ಣಾ ಅವರು ಅಧಿವೇಶನದ ಪ್ರಶ್ನೋತ್ತರ ಅವಧಿಯಲ್ಲಿ ಬೆಳಗಾವಿಯ ಖಾನಾಪುರ ತಾಲೂಕಿನ ಹದಗೆಟ್ಟ ರಸ್ತೆಗಳ ಕುರಿತ ಪ್ರಶ್ನೆಯನ್ನು ಲೋಕೋಪಯೋಗಿ ಸಚಿವರನ್ನು ಪ್ರಶ್ನಿಸಿದರು.

ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೋಳಿ ಅವರು ಉತ್ತರಿಸುತ್ತಾ ಬೆಳಗಾವಿಯಿಂದ ಗೋವಾ ಹೋಗುವ ರಸ್ತೆ ರಾಷ್ಟ್ರೀಯ ಹೆದ್ದಾರಿ 748AA ಅನ್ನು ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಒಪ್ಪಿಗೆ ದೊರೆಯದ ಕಾರಣ ಕಾಮಗಾರಿಯ ಗುತ್ತಿಗೆ ಮುಕ್ತಾಯಗೊಳಿಸಲಾಗಿದೆ.

ಈ ಹೆದ್ದಾರಿ ಸುಸ್ಥಿತಿಯಲ್ಲಿಡಲು ಲೋಕೋಪಯೋಗಿ ಇಲಾಖೆಯ ಮೂಲಕ ಕಾಮಗಾರಿಯ ಕೈಗೊಳ್ಳಲು ಅಂದಾಜು ಪಟ್ಟಿ ರೂ. 58.641 ಕೋಟಿಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೇಂದ್ರ ಕಚೇರಿಗೆ ಅನುಮೋದನೆ ಸಲುವಾಗಿ ಕಳುಹಿಸಲಾಗಿದೆ.

ಖಾನಾಪುರ ತಾಲೂಕಿನ ಹಳ್ಳಿಗಳ ರಸ್ತೆಗೆ
ರೂ.138.03 ಲಕ್ಷಗಳ ಅಂದಾಜು ವೆಚ್ಚದಲ್ಲಿ 153.40 ಕಿ.ಮೀ. ಹಾಗೂ ರೂ. 103.21 ಲಕ್ಷಗಳ ಅಂದಾಜು ಮೊತ್ತದಲ್ಲಿ 161.82 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳ ನಿರ್ವಹಣೆ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಖಾನಾಪುರದಿಂದ ನಂದಗಡ ಮೂಲಕ ಹಳಿಯಾಳ ಹೋಗುವ ರಸ್ತೆ 34.58 ಕಿ.ಮೀ. ಉದ್ದ ಇದ್ದು, 2023-24 ನೇ ಸಾಲಿನ ರಾಜ್ಯ ಹೆದ್ದಾರಿ ವಾರ್ಷಿಕ ನಿರ್ವಹಣೆ ಅಡಿಯಲ್ಲಿ ರೂ. 21.45 ಲಕ್ಷ ಬಿಡುಗಡೆಯಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಲಿಖಿತವಾಗಿ ತಿಳಿಸಿದರು.

ವರದಿ ಪ್ರಕಾಶ ಕುರಗುಂದ..