ಚಿಕ್ಕೋಡಿಯಲ್ಲಿ ಮತ್ತೊಮ್ಮೆ ಮಹಿಳಾ ಚರಿತ್ರೆ ನಿರ್ಮಿಸಲು ಮುಂದಾದ ಪ್ರಿಯಾಂಕ ಜಾರಕಿಹೊಳಿ..
ತಂದೆಯವರ ಜನಪರ ಕಾಳಜಿ, ಅಭಿವೃದ್ಧಿಯೇ, ಬಿಜೆಪಿಯ ಭದ್ರಕೋಟೆಯನ್ನು ಕೆಡವುತ್ತಾ??
ಚಿಕ್ಕೋಡಿ ಕಾಂಗ್ರೆಸ್ ಭದ್ರ ಕೋಟೆ ಛಿದ್ರ ಮಾಡಿದ್ದು ಒಂದು ಹೆಣ್ಣು ರತ್ನಮಾಲಾ ಸವಣೂರ..
ಈಗ ಬಿಜೆಪಿಯ ಭದ್ರ ಕೋಟೆ ಛಿದ್ರ ಮಾಡುವರೇ ಪ್ರಿಯಾಂಕಾ ಜಾರಕಿಹೊಳಿ?
ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲದೇ ಕೇಂದ್ರ ರಾಜಕಾರಣದಲ್ಲಿಯೂ ಚಿಕ್ಕೋಡಿ ಲೋಕಸಭಾ ಮತ ಕ್ಷೇತ್ರಕ್ಕೆ ತನ್ನದೇ ಆದ ಹೆಸರಿದೆ. ಒಬ್ಬನೇ ವ್ಯಕ್ತಿ ಈ ಕ್ಷೇತ್ರದಿಂದ ಸತತ 7 ಬಾರಿ ಗೆಲ್ಲುವ ಮೂಲಕ ಇತಿಹಾಸ ರೂಪಿಸಿದ್ದಾರೆ.
ಇಂದಿರಾ ಗಾಂಧಿ ಕಾಲದಿಂದ ಹಿಡಿದು ಪಿ.ವ್ಹಿ. ನರಸಿಂಹರಾವ್ ಕಾಲದವರೆಗೂ ಈ ಕ್ಷೇತ್ರವು ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು. ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್(ಐ)ನ ಬಿ. ಶಂಕರಾನಂದ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡರ ಮೇಲೂ ತಮ್ಮದೇ ಆದ ಹಿಡಿತ ಸಾಧಿಸಿದ್ದರು. ಇವರನ್ನು ಇಂದಿರಾ ಗಾಂಧಿ ಅವರ ಬಲಗೈ ಭಂಟ ಎಂದೇ ಕರೆಯಲಾಗುತ್ತಿತ್ತು.

ಈ ಕ್ಷೇತ್ರದಿಂದ 1962 ರಿಂದ 1991 ರವರೆಗೆ ಸತತ ಎಂಟು ಬಾರಿ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿ ಬೀಗಿಕೊಂಡಿದೆ. ಬಿ.ಶಂಕರಾನಂದ ಅವರು 1967ರ ಚುನಾವಣೆಯಲ್ಲಿ ಗೆದ್ದ ಬಳಿಕ ಅವರೆಂದೂ ಹಿಂದೆ ತಿರುಗಿ ನೋಡಿದ್ದೆ ಇಲ್ಲ. ಅದರ ನಂತರ ಬಂದ ಚುನಾವಣೆಯಲ್ಲಿ ಶಂಕರಾನಂದರು ಚುನಾವಣೆಗೆ ನಾಮ ಪತ್ರ ಸಲ್ಲಿಸಿದರೆ ಮುಗಿತು ಗೆದ್ದಂತೆ ಎಂದು ಕ್ಷೇತ್ರದ ಜನ ಭಾವಿಸಿಕೊಂಡಿದ್ದರು.
ಪಿ.ವ್ಹಿ. ನರಸಿಂಹರಾವ್ ಅವರು ಪ್ರಧಾನಿ ಆದ ಬಳಿಕ ದೇಶದಲ್ಲಿ ಬಹಳಷ್ಟು ಬದಲಾವಣೆಗಳಾದವು. 1992 ರಲ್ಲಿ ನಡೆದ ಗ್ಯಾಟ್ ಒಪ್ಪಂದದಿಂದ ದೇಶದ ಜನತೆ ರೊಚ್ಚಿಗೆದ್ದರು. ಜಾಗತೀಕರಣ ಉದಾರೀಕರಣ ಮತ್ತು ಖಾಸಗೀಕರಣದಿಂದ ದೇಶದ ಪ್ರಜ್ನಾವಂತ ನಾಗರಿಕರು ಕಾಂಗ್ರೆಸ್ ಪಕ್ಷದ ದುರಾಡಳಿತವನ್ನು ಪ್ರಶ್ನಿಸ ತೊಡಗಿದರು. 1996ರಲ್ಲಿ ರಾಜ್ಯದಲ್ಲಿ ಜನತಾ ದಳ ಇದರ ಲಾಭ ಪಡೆಯಲು ಎಲ್ಲೆಡೆ ಸಜ್ಜುಗೊಂಡಿತು. ಅದರ ಪರಿಣಾಮ 1996 ರಲ್ಲಿ ನಡೆದ ಲೋಕಸಭೆ ಚುನಾವಣೆ ಮೇಲೂ ಬಿತ್ತು.
1996ರ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಜನತಾದಳವು ರತ್ನಮಾಲಾ ಸವಣೂರು ಎಂಬ ಮಹಿಳೆಯನ್ನು ಮೊದಲ ಬಾರಿಗೆ ಚಿಕ್ಕೋಡಿ ಕ್ಷೇತ್ರದಿಂದ ಕಣಕ್ಕಿಳಿಸಿತು. ಇಲ್ಲಿಯವರೆಗೆ ಚುನಾವಣೆಯಲ್ಲಿ ಒಂದು ಬಾರಿಯೂ ಸೋಲು ಕಾಣದ ಕಾಂಗ್ರೆಸ್ ಪಕ್ಷದ ಬಿ. ಶಂಕರಾನಂದ ಅವರು ಜನತಾ ದಳದ ರತ್ನಮಾಲಾ ಸವಣೂರು ಅವರ ಮುಂದೆ ಸೋಲಬೇಕಾಯಿತು.
ನಂತರ ಚುನಾವಣೆಯಲ್ಲಿ ರತ್ನಮಾಲಾ ಸವಣೂರು ಅವರ ಬದಲಾಗಿ ಜನತಾ ದಳವು ಬೇರೊಬ್ಬ ಮಹಿಳೆಗೆ ಟಿಕೇಟ್ ನೀಡಿತಾದರು ಅವರು ಗೆಲ್ಲಲಿಲ್ಲ.
ಬದಲಾಗಿ ಮುಂದಿನ ಮೂರು ಚುನಾವಣೆಯಲ್ಲಿ 1998, 1999, ಮತ್ತು 2004ರಲ್ಲಿ ಲೋಕ ಶಕ್ತಿ, ಜನತಾದಳ, ಭಾರತೀಯ ಜನತಾ ಪಕ್ಷದಿಂದ ಸತತ ಮೂರು ಚುನಾವಣೆಯಲ್ಲಿ ರಮೇಶ ಜಿಗಜಿಣಗಿ ಅವರು ಗೆಲುವು ಸಾಧಿಸುವುದರ ಮೂಲಕ ಹ್ಯಾಟ್ರಿಕ್ ಬಾರಿಸಿದರು.
2009ರಲ್ಲಿ ಕ್ಷೇತ್ರ ಬದಲಾವಣೆಯ ಬಳಿಕ ಚಿಕ್ಕೋಡಿ ಲೋಕಸಭಾ ಕ್ಷೇತ್ರ ಮೀಸಲು ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು. ಆಗಲೂ ಕೂಡ ಈ ಕ್ಷೇತ್ರದಿಂದ ಬಿಜೆಪಿಯ ರಮೇಶ ಕತ್ತಿ ಭಾರಿ ಅಂತರದಿಂದ ಗೆಲುವು ಸಾಧಿಸಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಪ್ರಕಾಶ ಹುಕ್ಕೇರಿ ಅವರು ಕೇವಲ ಕೂದಲೆಳೆ ಅಂತರದಲ್ಲಿ ಗೆಲುವು ಕಂಡರು.
2019ರ ಚುನಾವಣೆಯಲ್ಲಿ ಮತ್ತೇ ಮೋದಿ ಅಲೆಯ ಮೇಲೆ ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಕಣಕ್ಕಿಳಿಸಿ ಭಾರೀ ಅಂತರದಿಂದ ಗೆಲ್ಲಿಸಿತು.
ಈ ಹಿಂದಿನ ಅಷ್ಟೂ ಚುನಾವಣೆ ಗಮನಿಸಿದರೆ ಪುರುಷರು ಮಾತ್ರ ಈ ಕ್ಷೇತ್ರದಿಂದ ಹೆಚ್ಚು ಬಾರಿ ಸ್ಪರ್ಧಿಸಿದ್ದಾರೆ. ರತ್ನಮಾಲಾ ಸವಣೂರು ಅವರನ್ನು ಬಿಟ್ಟರೆ ಯಾವ ಮಹಿಳೆಯರು ಕಣಕ್ಕೆ ಇಳಿದಿಲ್ಲ. ಮತ್ತು ಗೆದ್ದ ಉದಾಹರಣೆ ಇಲ್ಲ.

ಈ ಬಾರಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಲೋಕೋಪಯೋಗಿ ಸಚಿವ ಹಾಗೂ ರಾಜ್ಯದ ಪ್ರಭಾವಿ ರಾಜಕಾರಣಿ ಸತೀಶ ಜಾರಕಿಹೊಳಿ ಅವರ ಮಗಳು ಪ್ರಿಯಂಕಾ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಇವರ ಪ್ರತಿಸ್ಪರ್ಧಿಯಾಗಿ ಬಿಜೆಪಿಯ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಕಣಕ್ಕಿಳಿಯಲಿದ್ದಾರೆ.
ತಳಕು ಹಾಕಲಿದೆ ಜಾತಿ ಲೆಕ್ಕಾಚಾರ
2009 ಕ್ಕೂ ಮುನ್ನ ಚಿಕ್ಕೋಡಿ ಲೋಕಸಭಾ ಕ್ಷೇತ್ರ ಎಸ್ಸಿ ಮೀಸಲು ಕ್ಷೇತ್ರವಾಗಿತ್ತು. ಆಗ ಸಹಜವಾಗಿಯೆ ಮತದಾರರು ಅಭ್ಯರ್ಥಿಗಳನ್ನು ಗಮನಿಸದೆ ಪಕ್ಷ ನೋಡಿ ಮತ ಹಾಕುತ್ತಿದ್ದರು. ಆದರೀಗ ಎಲ್ಲವೂ ಬದಲಾಗಿದೆ. ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತದಾರರು ಗಣನೀಯ ಪ್ರಮಾಣದಲ್ಲಿ ಇದ್ದು, ಸದ್ಯ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ ಆ ಸಮುದಾಯದ ಎಲ್ಲಾ ಮತಗಳು ಒಂದೆಡೆ ಕ್ರೋಢಿಕರಣ ಗೊಳ್ಳಲಿವೆ. ಇನ್ನು ಪರಿಶಿಷ್ಟ ಜಾತಿ ಸಮುದಾಯವು ಕ್ಷೇತ್ರದಲ್ಲಿ ಬಿಎಸ್ಪಿ ಯನ್ನು ಬೆಂಬಲಿಸುತ್ತಾ ಬಂದಿದೆ. ಸದ್ಯದ ಚುನಾವಣೆಯಲ್ಲಿ ಬಿಎಸ್ಪಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಒಂದು ವೇಳೆ ಅದು ಹೀಗೆ ಮುಂದುವರೆದರೆ ಪ್ರತಿ ಚುನಾವಣೆಯಲ್ಲಿ ಬಿಎಸ್ಪಿಯ ಸುಮಾರು ಇಪ್ಪತ್ತರಿಂದ ಮೂವತ್ತು ಸಾವಿರಕ್ಕೂ ಅಧಿಕ ಮತದಾರರು ಇದ್ದು, ಆ ಎಲ್ಲ ಮತಗಳು ಸಹಜವಾಗಿಯೇ ಕಾಂಗ್ರೆಸ್ ಗೆ ತಿರುಗಲಿವೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಬಹಳಷ್ಟು ಬಾರಿ ಕೂದಲೆಳೆ ಅಂತರದಲ್ಲಿ ಸೋತಿದೆ. ಬಿಎಸ್ಪಿ ಕಣಕ್ಕೆ ಇಳಿಯದಿದ್ದರೆ ಅದರ ಲಾಭ ಕಾಂಗ್ರೆಸ್ ಗೆ ಸಿಗಲಿದೆ ಎಂಬುದು ರಾಜಕೀಯ ಪರಿಣಿತರ ಲೆಕ್ಕಾಚಾರ.
ಇನ್ನು ಜಾತಿ ಲೆಕ್ಕಾಚಾರದಲ್ಲಿ ಇಲ್ಲಿ ಲಿಂಗಾಯತ ಸಮುದಾಯವು ಬಹಳಷ್ಟು ಇದೆ. ಬಿಜೆಪಿಯ ಜೊಲ್ಲೆ ಅದೇ ಸಮುದಾಯಕ್ಕೆ ಸೇರಿರುವುದರಿಂದ ಸಹಜವಾಗಿಯೇ ಜೊಲ್ಲೆ ಅವರಿಗೆ ಸಮುದಾಯದ ಮತಗಳು ಹೋಗಲಿವೆ. ರಾಜ್ಯದಲ್ಲಿ ಲಿಂಗಾಯಿತರು ಹೆಚ್ಛಿನ ಸಂಖ್ಯೆಯಲ್ಲಿ ಬಿಜೆಪಿ ಯನ್ನೆ ಬೆಂಬಲಿಸಿದ್ದ ಉದಾಹರಣೆ ಇದೆ. ಜಾತಿ ಲೆಕ್ಕಾಚಾರದಲ್ಲಿ ನೋಡಿದರೆ ಇಲ್ಲಿ ಬಿಜೆಪಿ ಸುಲಭವಾಗಿ ಗೆಲ್ಲಬಹುದು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಎಂಟು ವಿಧಾನ ಸಭಾ ಕ್ಷೇತ್ರಗಳು ಬರುತ್ತಿದ್ದು, ಅದರಲ್ಲಿ ಮೂರು ಬಿಜೆಪಿ ಗೆದ್ದರೆ ಐದರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇದನ್ನು ಗಮನಿಸಿದರೆ ಬಿಜೆಪಿ ಗೆಲುವುದು ಕಬ್ಬಿಣದ ಕಡಲೆಯಂತಾಗುವುದು.
ಅಂದು ಕಾಂಗ್ರೆಸ್ ನ ದುರಾಡಳಿತದಿಂದ ಬೇಸತ್ತ ಚಿಕ್ಕೋಡಿ ಲೋಕಸಭೆ ಜನತೆ ಬದಲಾವಣೆ ಬಯಸಿ ಕಾಂಗ್ರೆಸ್ ನ್ನು ಮಣ್ಣು ಗೂಡಿಸಿದ್ದರು.
ಇಂದು ಬಿಜೆಪಿಗೂ ಕೂಡ ಅದೇ ಕಾಲ ಸಣ್ಣೀಹಿತವಾಗಿದೆ. ಮಿತಿ ಮೀರಿದ ಬೆಲೆ ಏರಿಕೆ, ಧರ್ಮದ ರಾಜಕಾರಣದಿಂದ ಕ್ಷೇತ್ರದ ಜನತೆ ಬೇಸತ್ತಿದ್ದಾರೆ. ಸಚಿವ ಸತೀಶ ಜರಕಿಹೊಳಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮುಂದೆ ಇಟ್ಟುಕೊಂಡು ಮಗಳು ಪ್ರಿಯಂಕಾ ಈಗಾಗಲೇ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಬಿಜೆಪಿಯು ಕೂಡ ಅದೇ ವೇಗದಲ್ಲಿ ಅಖಾಡಕ್ಕೆ ಇಳಿದಿದೆ. ಬಿಜೆಪಿಯ ಅಶ್ವಮೇಧ ಯಾಗದ ಕುದುರೆಯನ್ನು ಕಾಂಗ್ರೆಸ್ ನ ಪ್ರಿಯಂಕಾ ಜಾರಕಿಹೊಳಿ ಅವರು ಕಟ್ಟಿ ಹಾಕಿದ್ದೇ ಆದಲ್ಲಿ ಚಿಕ್ಕೋಡಿ ಎಂಬ ಬಿಜೆಪಿಯ ಭದ್ರ ಕೋಟೆ ಒಂದು ಹೆಣ್ಣಿನಿಂದಲೇ ಛಿದ್ರವಾದಂತೆ.
ಅದನ್ನು ಕ್ಷೇತ್ರದ ಜನತೆ ಯಾವ ರೀತಿ ಮಾಡುವರೆಂಬುದನ್ನು ಕಾದು ನೋಡಬೇಕು.
ವರದಿ ಸಂತೋಷ ಎಂ. ಮೇತ್ರಿ, ಅಗಸಗೆ ಜೊತೆ ಪ್ರಕಾಶ ಕುರಗುಂದ.