ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸಿಗೆ ಶಕ್ತಿ ನೀಡಿದ ಪರಿಶಿಷ್ಟ ಮತದಾರರು..
ಕಡೋಲಿ ಜಿಪಂನಲ್ಲಿ ಪ್ರಿಯಂಕಾ ಕೈಬಿಡದ ಎಸ್ಸಿ/ಎಸ್ಟಿ ಮತದಾರರು..
ಕಾಂಗ್ರೆಸ್ಸಿಗೆ ಕೈ ಕೊಟ್ಟ ಮೇಲ್ವರ್ಗದ ಮತದಾರರು..
ದಲಿತ ಮತದಾರರ ಮೇಲೆ ಸಂಶಯ ಪಟ್ಟ ಮುಖಂಡರಿಗೆ ಮುಖಭಂಗ..
ಬೆಳಗಾವಿ : ಇತ್ತೀಚೆಗಷ್ಟೇ ಹೊರಬಿದ್ದ ಚಿಕ್ಕೋಡಿ ಲೋಕಸಭಾ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ಭಾರೀ ಅಂತರದಿಂದ ಗೆದ್ದು ಬೀಗಿದ್ದಾರೆ. ಇವರ ಗೆಲುವಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳ ಕೊಡುಗೆ ಅನನ್ಯವಾಗಿದೆ.
ಚಿಕ್ಕೋಡಿ ಲೋಕಸಭೆಯಲ್ಲಿ ಬರುವ ಕಡೋಲಿ ಜಿಲ್ಲಾ ಪಂಚಾಯತಿಯ ವ್ಯಾಪ್ತಿಯಲ್ಲಿ ಸುಮಾರು 13 ಗ್ರಾಮಗಳಲ್ಲಿ 31 ಬೂತಗಳಿವೆ. ಅದರಲ್ಲಿ 9 ಬೂತ್ ಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮತದಾರರಿದ್ದಾರೆ. ಎಸ್ಸಿ ಎಸ್ಟಿ ಕಾಲೊನಿಗಳು ಇರುವ ಬೂತ್ ಗಳಲ್ಲೇ ಕಾಂಗ್ರೆಸ್ ಅಭ್ಯರ್ಥಿ ಮೇಲುಗೈ ಸಾಧಿಸಿದ್ದಾರೆ. ಎಸ್ಸಿ/ಎಸ್ಟಿ ಸಮುದಾಯ ಇಲ್ಲದ ಬೂತಗಳಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿ ಹಿನ್ನಡೆ ಅನುಭವಿಸಿದೆ.
ಕಡೋಲಿ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಕುರಿಹಾಳ, ಬೋಡಕೆನಟ್ಟಿ, ಮಾಳೇನಹಟ್ಟಿ ಹಂದಿಗನೂರ, ಅಗಸಗೆ, ಕಡೋಲಿ, ಕೇದನೂರ, ದೇವಗೇರಿ ಗ್ರಾಮದ ಎಸ್ಸಿ/ಎಸ್ಟಿ ಕಾಲೋನಿಗಳು ಇರುವ ಬೂತ್ ಗಳಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಲೀಡ್ ಇದೆ.
ಎಸ್ಸಿ/ಎಸ್ಟಿ ಮತದಾರರು ಇಲ್ಲದ ಬೇರೆ ಬೂತಗಳಲ್ಲಿ ಕಾಂಗ್ರೆಸ್ ಹಿಂದೆ ಇದ್ದು ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ಕುರಿಹಾಳ ಗ್ರಾಮದಲ್ಲಿ ಒಂದೇ ಬೂತ್ ಇರುವುದರಿಂದ ಇಲ್ಲಿ ಎಸ್ಸಿ/ಎಸ್ಟಿ ಮತಗಳು ಒಂದೆಡೆ ಇವೆ. ಹೀಗಾಗಿ ಇಲ್ಲಿನ ಬೂತ್ ಸಂಖ್ಯೆ 150 ರಲ್ಲಿ ಕಾಂಗ್ರೆಸ್ 586 ಮತಗಳನ್ನು ಪಡೆದರೆ ಬಿಜೆಪಿ ಕೇವಲ 226 ಮತಗಳನ್ನು ಪಡೆದಿದೆ.

ಬೋಡಕೇನಟ್ಟಿ ಗ್ರಾಮದಲ್ಲಿ ಕೂಡ ಒಂದೇ ಬೂತ್ ಇದೆ. ಇಲ್ಲಿನ ಬೂತ್ ಸಂಖ್ಯೆ 152ರಲ್ಲಿ ಕಾಂಗ್ರೆಸ್ 513 ಮತ ಪಡೆದರೆ, ಬಿಜೆಪಿ 245 ಮತಗಳನ್ನು ಪಡೆದು ಕೊಂಡಿದೆ.
ಹಂದಿಗನೂರ ಗ್ರಾಮದಲ್ಲಿ ಎರಡು ಬೂತ್ ಇದ್ದು ಎಸ್ಸಿ ಮತದಾರರು ಇರುವ ಬೂತ್ ಸಂಖ್ಯೆ 153ರಲ್ಲಿ ಬಿಜೆಪಿ ಕೇವಲ 264 ಮತಗಳನ್ನು ಪಡೆದರೆ ಕಾಂಗ್ರೆಸ್ 408 ಮತಗಳನ್ನು ಪಡೆದು ಮುನ್ನಡೆ ಕಾಯ್ದುಕೊಂಡಿದೆ. ಇದೇ ಗ್ರಾಮದ ಸಾಮಾನ್ಯ ಮತದಾರರು ಇರುವ ಬೂತ್ ಸಂಖ್ಯೆ 154ರಲ್ಲಿ ಬಿಜೆಪಿ 469 ಮತಗಳನ್ನು ಪಡೆದರೆ, ಕಾಂಗ್ರೆಸ್ ಕೇವಲ 212 ಮತಗಳನ್ನು ಮಾತ್ರ ಪಡೆದುಕೊಂಡಿದೆ.
ಮಾಳೇನಟ್ಟಿ ಗ್ರಾಮದಲ್ಲಿ ಎಸ್ಟಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಇಲ್ಲಿ ಕೂಡ ಒಂದೇ ಬೂತ್ ಇದೆ. ಇಲ್ಲಿನ ಬೂತ್ ಸಂಖ್ಯೆ 158ರಲ್ಲಿ ಕಾಂಗ್ರೆಸ್ 354 ಮತಗಳನ್ನು ಪಡೆದರೆ ಬಿಜೆಪಿ ಕೇವಲ 70 ಮತಗಳನ್ನು ಮಾತ್ರ ಪಡೆದಿದೆ.
ಕೇದನೂರ ಗ್ರಾಮದಲ್ಲಿ ಒಟ್ಟು ನಾಲ್ಕು ಬೂತಗಳಿವೆ. ಬೂತ್ ಸಂಖ್ಯೆ 159, 160, 161ರಲ್ಲಿ ಸಾಮಾನ್ಯ ಮತದಾರರು ಇದ್ದು ಈ ಮೂರು ಬೂತ್ ಗಳಲ್ಲಿ ಬಿಜೆಪಿ ಕ್ರಮವಾಗಿ 400, 356, 408 ಮತಗಳನ್ನು ಪಡೆದರೆ, ಕಾಂಗ್ರೆಸ್ ಕ್ರಮವಾಗಿ 283, 118, 218 ಮತಗಳಿಗೆ ಮಾತ್ರ ತೃಪ್ತಿ ಪಡಬೇಕಾಯಿತು.
ಇನ್ನು ಇದೇ ಗ್ರಾಮದ ಬೂತ್ ಸಂಖ್ಯೆ 162ರಲ್ಲಿ ಎಸ್ಸಿ ಮತದಾರರು ಹೆಚ್ಚಿಗೆ ಇರುವುದರಿಂದ ಇಲ್ಲಿ ಕಾಂಗ್ರೆಸ್ 345 ಮತಗಳನ್ನು ಪಡೆದರೆ ಬಿಜೆಪಿ ಕೇವಲ 235 ಮತಗಳನ್ನು ಪಡೆದಿದೆ.
ಕಡೋಲಿ ಗ್ರಾಮದಲ್ಲಿ ಒಟ್ಟು ಎಂಟು ಬೂತ್ ಗಳಿದ್ದು 169 ಮತ್ತು 176ರ ಬೂತಗಳಲ್ಲಿ ಎಸ್ಸಿ ಮತದಾರರು ಇದ್ದು ಇಲ್ಲಿ ಮಾತ್ರ ಕಾಂಗ್ರೆಸ್ ಲೀಡ್ ಕಾಯ್ದುಕೊಂಡಿದೆ. ಇನ್ನುಳಿದ ಆರು ಬೂತ್ ಗಳಲ್ಲಿ ಬೇರೆಬೇರೆ ಸಮುದಾಯದ ಮತದಾರರು ಇರುವುದರಿಂದ ಆ ಮತಗಳು ಸಹಜವಾಗಿಯೆ ಬಿಜೆಪಿಗೆ ತಿರುಗಿವೆ. ಹೀಗಾಗಿ ಕಾಂಗ್ರೆಸ್ 6 ಬೂತಗಳಲ್ಲಿ ಕಳಪೆ ಪ್ರದರ್ಶನ ನೀಡಿದೆ.
ದೇವಗಿರಿ ಗ್ರಾಮದಲ್ಲಿ ಎರಡು ಬೂತ್ ಇದ್ದು ಇಲ್ಲಿ ಎಸ್ಟಿ ಸಮುದಾಯ ಹೆಚ್ಚಿರುವ ಬೂತ್ ನಲ್ಲಿ ಕಾಂಗ್ರೆಸ್ ಮುಂದಿದ್ದರೆ ಬಿಜೆಪಿ ಒಂದರಲ್ಲಿ ಮುಂದಿದೆ.
ಅಗಸಗೆ ಗ್ರಾಮದಲ್ಲಿ ಒಟ್ಟು ಮೂರು ಬೂತ ಇವೆ. ಬೂತ್ ಸಂಖ್ಯೆ 179ರಲ್ಲಿ ಬಿಜೆಪಿ 606 ಮತಗಳನ್ನು ಪಡೆದರೆ ಕಾಂಗ್ರೆಸ್ ಕೇವಲ 303 ಮತಗಳನ್ನು ಪಡೆದಿದೆ. ಬೂತ್ ಸಂಖ್ಯೆ 181ರಲ್ಲಿ ಬಿಜೆಪಿ 365 ಮತಗಳನ್ನು ಪಡೆದರೆ ಕಾಂಗ್ರೆಸ್ ಕೇವಲ 227 ಮತಗಳನ್ನು ಪಡೆದಿದೆ.
ಇದೇ ಗ್ರಾಮದ ಬೂತ್ ಸಂಖ್ಯೆ 180ರಲ್ಲಿ ಎಸ್ಸಿ ಮತದಾರರು ಇದ್ದು ಇಲ್ಲಿ ಕಾಂಗ್ರೆಸ್ 327 ಮತಗಳನ್ನು ಪಡೆದರೆ ಬಿಜೆಪಿ ಕೇವಲ 275 ಮತಗಳನ್ನು ಪಡೆದುಕೊಂಡಿತು.
ಮೇಲಿನ ಎಲ್ಲ ಎಸ್ಸಿ ಎಸ್ಟಿ ಬೂತ್ ಗಳಲ್ಲಿ ಕಾಂಗ್ರೆಸ್ ಮುನ್ನಡೆ ಇರುವುದನ್ನು ನೋಡಿದರೆ ಎರಡೂ ಸಮುದಾಯಗಳು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರ ಕೈ ಬಲ ಪಡಿಸುವದರೊಂದಿಗೆ ಗೆಲುವಿನತ್ತ ಕೊಂಡೊಯ್ದರು.
ದಲಿತರ ಮೇಲೆ ಸಂಶಯ ಪಟ್ಟ
ಮುಖಂಡರಿಗೆ ಮುಖಭಂಗ..
2024ರ ಲೋಕಸಭಾ ಚುನಾವಣೆಯಲ್ಲಿ ದಲಿತರ ಮತಗಳು ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳ್ಕರ ಅವರಿಗೆ ಹೋಗುತ್ತವೆ ಎಂದು ಸ್ಥಳೀಯ ಮೇಲ್ವರ್ಗದ ಮುಖಂಡರು ಹುಯಿಲೆಬ್ಬಿಸಿದ್ದರು. ಆದರೆ ಕಳೆದ ಹಲವಾರು ಚುನಾವಣೆಗಳಲ್ಲಿ ಕಡೋಲಿ ಜಿಲ್ಲಾ ಪಂಚಾಯತಿಯ ದಲಿತರು ಕಾಂಗ್ರೆಸ್ ಬಿಟ್ಟು ಬೇರಾವುದೆ ಪಕ್ಷಕ್ಕೆ ಮತ ನೀಡಿರಲಿಲ್ಲ. ಸದ್ಯದ ಚುನಾವಣೆಯಲ್ಲಿ ಕೂಡ ದಲಿತರು ತಮ್ಮ ತನು ಮನ ಧನ ಎಲ್ಲವನ್ನೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಅರ್ಪಿಸಿದ್ದರು. ಆದರೂ ದಲಿತರ ಮೇಲೆ ಸಂಶಯ ಪಡಲಾಗಿತ್ತು.
ಚುನಾವಣೆ ಬಳಿಕ ಬೂತ್ ಮಟ್ಟದ ಲೆಕ್ಕಾಚಾರ ತೆಗೆದು ನೋಡಿದಾಗ ಅಂತಹ ಮುಖಂಡರಿಗೆ ಈಗ ಕಪಾಳ ಮೋಕ್ಷ ವಾದಂತಾಗಿದೆ. ಮೇಲ್ವರ್ಗದ ಮತದಾರರು ಹೆಚ್ಚಿರುವ ಬೂತಗಳಲ್ಲೆ ಕಾಂಗ್ರೆಸ್ ಸೋತಿದೆ.
ಒಟ್ಟಿನಲ್ಲಿ ದಲಿತರ ಮತಗಳ ಮೇಲೆ ರಾಜಕೀಯ ಮಾಡುವ ಸ್ಥಳೀಯ ನಾಯಕರಿಗೆ ಇದು ಒಂದು ಎಚ್ಚರಿಕೆಯ ಗಂಟೆಯಾಗಿದೆ. ಪ್ರಾಮಾಣಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ದಲಿತರು ಮತ ನೀಡಿದರೂ ಅವರನ್ನು ಸಂಶಯದ ರೀತಿಯಲ್ಲಿ ನೋಡಲಾಗುತ್ತಿದೆ. ಮುಂದೆ ಇದೇ ರೀತಿ ಸಂಶಯ ಪಟ್ಟರೆ ದಲಿತರ ಮತಗಳು ಬೇರೆ ಪಕ್ಷಕ್ಕೆ ಹೋದರೆ ಅಚ್ಚರಿ ಪಡಬೇಕಾಗಿಲ್ಲ. ಚಿಕ್ಕೋಡಿಯ ನೂತನ ಸಂಸದರು ಇದೆಲ್ಲವನ್ನು ಯಾವ ರೀತಿ ಸರಿ ಮಾಡುವರು ಎಂಬುದನ್ನು ಕಾದು ನೋಡಬೇಕು.
ವರದಿ, ಸಂತೋಷ ಮೇತ್ರಿ, ಅಗಸಗೆ.