ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ 2023..
ಅಧಿಕಾರಿಗಳು, ಜನರ ನಂಬಿಕೆ, ಗೌರವ ಗಳಿಸುವ ಕಾರ್ಯ ಮಾಡಬೇಕು..
ಸರ್ಕಾರಿ ಅಧಿಕಾರಿಗಳಿಗೆ ಆತ್ಮಸಂತೃಪ್ತಿ ಇರಬೇಕು..
ಉತ್ತಮ ಗುಣಮಟ್ಟದ ಜೀವನ ಸಾಧನೆಗಾಗಿ ಸೇವೆ ಮಾಡಿ,,
ಮುರಳಿ ಮೋಹನ್ ರೆಡ್ಡಿ…
ಬೆಳಗಾವಿ : ಶುಕ್ರವಾರ ನಗರದ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಜಿಲ್ಲಾ ಮಟ್ಟದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ 2023, ಜಿಲ್ಲಾ ಮಟ್ಟದ ಪ್ರಮುಖ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ನಡೆದಿದೆ..
ಈ ಕಾರ್ಯಕ್ರಮದಲ್ಲಿ ಬೆಳಗಾವಿಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮುರಳಿ ಮೋಹನ್ ರೆಡ್ಡಿ ಅವರು ಮಾತನಾಡಿ, ನಮ್ಮ ದೇಶ ಹಿಂದುಳಿಯಲು ಈ ಭ್ರಷ್ಟಾಚಾರವೂ ಒಂದು ಕಾರಣ, ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗ ಈ ಮೂರು ಅಂಗಗಳು ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡಬೇಕು, ಎಲ್ಲರೂ ಹಣ ಮಾಡುವಾಗ ನಾನು ಏಕೆ ಮಾಡಬಾರದು ಎಂಬುದು ದೊಡ್ಡ ಮೂರ್ಖತನ ಎಂದರು..

ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುವವರಿಗೆ ಸರಿಯಾದ ಭದ್ರತೆ ಇರಬೇಕು, ಸರ್ಕಾರಿ ಇಲಾಖೆಯಲ್ಲಿ ಮಾತ್ರ ಭ್ರಷ್ಟಾಚಾರ ಇಲ್ಲಾ, ಜನಸಾಮಾನ್ಯರಲ್ಲಿಯೂ ಇದೆ, ಆ ಮನೋಭಾವನೆ ಬದಲಾಗಬೇಕು ಎಂದರು.
ಭ್ರಷ್ಟಾಚಾರದ ಪರಿಣಾಮ ಸಮಾಜದ ಮೇಲೆ ಹೇಗಿದೆ ಎಂದರೆ, ಖಾಸಗಿ ರಂಗದಲ್ಲಿ ಕಾರ್ಯದ ಗುಣಮಟ್ಟ ಹೇಗಿರುತ್ತೆ, ಸರ್ಕಾರಿ ರಂಗದ ಕಾರ್ಯದ ಗುಣಮಟ್ಟ ಹೇಗಿದೆ ನೀವೇ ಕಾಣಬಹುದು ಎಂದ ಅವರು, ಇತಿಹಾಸದ ಯಾವ ಕಾಲಘಟ್ಟದಲ್ಲಿಯೂ ನೂರರಷ್ಟು ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಇರಲಿಲ್ಲ, ಆದರೆ ಅದರ ಪ್ರಮಾಣ ಯಾವ ರೀತಿ ಇದೆ, ಅದರ ನಿಯಂತ್ರಣ ಎಷ್ಟರ ಮಟ್ಟಿಗೆ ಇತ್ತು ಎಂಬುದರ ಮೇಲೆ ನಮ್ಮ ಸಾಮಾಜಿಕ ಸುಧಾರಣೆ ಹಾಗೂ ಅನಭಿವೃದ್ದಿ ಎಲ್ಲವೂ ಅಡಗಿದೆ ಎಂದು ಮಾರ್ಮಿಕವಾಗಿ ನುಡಿದರು..
ಆತ್ಮಸಾಕ್ಷಿಯಾಗಿ ತಾವು ಹೇಳಿ, ಸರ್ಕಾರಿ ಅಧಿಕಾರಿಗಳೆಂದರೆ ಯಾರು ಗೌರವ ನೀಡುತ್ತಾರಾ?? ನಮ್ಮ ಕೆಲಸದಲ್ಲಿಯೂ ನಮಗೆ ಗೌರವ ಬರಬೇಕು, ಜನರಲ್ಲಿ ನಮ್ಮ ಬಗ್ಗೆ ನಂಬಿಕೆ, ಗೌರವ ಬರಬೇಕಾದರೆ ನಾವು ಭ್ರಷ್ಟಾಚಾರ ಮುಕ್ತ ನಡೆ ಪಾಲಿಸಬೇಕು, ಇತ್ತೀಚಿನ ಯುವಕರು, ನಿಜವಾದ ಪ್ರತಿಭಾವಂತರು ಸರ್ಕಾರಿ ಸೇವೆಗೆ ಬರಲಿಕ್ಕೆ ಮನಸ್ಸು ಮಾಡುವದಿಲ್ಲ.

ಸರ್ಕಾರ ಭ್ರಷ್ಟಾಚಾರದ ನಿಯಂತ್ರಣಕ್ಕಾಗಿ ಅನೇಕ ಕಾರ್ಯಕ್ರಮ, ಯೋಜನೆ ಹಾಕಿಕೊಂಡಿದೆ,, ಆದರೂ ಆಗ್ತಾ ಇಲ್ಲ, ಇದಕ್ಕೆ ಮೂಲ ಕಾರಣ ಏನು ಎಂದರೆ, ಮನುಷ್ಯನಿಗೆ ಆತ್ಮ ಸಂತೃಪ್ತಿ ಎಂಬುದು ಇಲ್ಲಾ, ಅದೇ ಕಾರಣಕ್ಕೆ ಈ ರೀತಿಯ ಭ್ರಷ್ಟಾಚಾರದ ಭೂತ ಬೆಳೆಯುತ್ತಲೇ ಇದೆ, ಈಗ ಬರುವ ಅಧಿಕಾರಿಗಳು ಅತೀ ಬೇಗ ಎಲ್ಲಾ ಪಡೆಯುವ ಆಕಾಂಕ್ಷೆ ಹೊಂದಿಕೊಂಡು ಬಂದು, ಅದರ ಸಾಧನೆಗಾಗಿ ಇಂತಹ ಅಪಾಯಕಾರಿ ವ್ಯವಸ್ಥೆಯನ್ನು ನಿರ್ಮಾಣ ಮಾಡಿಕೊಂಡು ಹೋಗುತ್ತಿರುವದು ಅಪಾಯಕಾರಿ ಎಂದರು..
ಈಗ ಉತ್ತಮ ಸಂಬಳದ ವ್ಯವಸ್ಥೆ ಇದೆ, ಸುಖಿ ಜೀವನ ನಡೆಸಲು ಬೇಕಾದಷ್ಟು ಸೌಲಭ್ಯ ಇರುತ್ತದೆ, ಆದ್ದರಿಂದ ಜನರ ಒಳಿತಿಗಾಗಿ, ಸರ್ಕಾರದ ಉತ್ತಮ ವ್ಯವಸ್ಥೆಗಾಗಿ ನಾವು ಬದಲಾಗಬೇಕಿದೆ, ನಮ್ಮ ನ್ಯಾಯಾಂಗ ವ್ಯವಸ್ಥೆಯು ಕೂಡಾ, ಜನರ ನಂಬಿಕೆ ಮತ್ತು ಪರಿಶುದ್ಧತೆಯ ಮೇಲೆ ಇದೆ, ಪರಿಶುದ್ಧತೆ ಮತ್ತು ಪ್ರಾಮಾಣಿಕತೆಗೆ ಇಂದು ಜನರು ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದರು..
ಇನ್ನು ಲೋಕಾಯುಕ್ತ ಎಸ್ಪಿ ಹಣಮಂತರಾವ ಅವರು ಮಾತನಾಡಿ, 30/10/2023 ರಿಂದ 05/11/2023 ವರೆಗೆ “ಭ್ರಷ್ಟಾಚಾರ ವಿರೋಧಿಸಿ, ರಾಷ್ಟ್ರಕ್ಕೆ ಸಮರ್ಪಿಸಿ” ಎಂಬ ಸಪ್ತಾಹವನ್ನು ಇಡೀ ರಾಷ್ಟ್ರಾದ್ಯಂತ ನಡೆಸಲಾಗುತ್ತಿದ್ದು, ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸರ್ಕಾರ ಅನೇಕ ನಿಯಮಗಳನ್ನು ಹೊರಡಿಸಿದ್ದು, ಅಧಿಕಾರಿಗಳು ತಾವು ಅದಕ್ಕೆ ಸಹಕರಿಸಿ, ಪಾಲಿಸಿ, ಇಡೀ ವ್ಯವಸ್ಥೆಯನ್ನು ಶುದ್ಧ ಮಾಡಿಕೊಂಡು ಹೋಗಬೇಕು ಎಂದರು..
ಜನರು ಅಧಿಕಾರಿಗಳ ವಿರುದ್ಧ ದೂರು ತಗೆದುಕೊಂಡು ನಮ್ಮ ಕಚೇರಿಗೆ ಬರದಂತೆ ಅಧಿಕಾರಿಗಳು ಕೆಲಸ ಮಾಡಬೇಕು, ಜನರ ಕಾರ್ಯಗಳನ್ನು ನಿಗದಿತ ಅವಧಿಯಲ್ಲಿ ಮಾಡಬೇಕು, ಸಾರ್ವಜನಿಕರನ್ನು ಕಾಡಿಸಿ, ಬೇಡಿಕೆ ಇಟ್ಟಾಗ ಅವರು ಸಹಜವಾಗಿ ನಮ್ಮ ಹತ್ತಿರ ಬಂದು ತಮ್ಮ ಬಗ್ಗೆ ದೂರು ನೀಡುವರು, ಅದಕ್ಕೆ ಅವಕಾಶ ನೀಡದಂತೆ ಕೆಲಸ ಮಾಡಬೇಕು ಎಂದರು..
ನಮಗೆಲ್ಲ ಸರ್ಕಾರಿ ಸೇವೆ ಮಾಡಲು ಒಂದು ಉತ್ತಮ ಅವಕಾಶ ದೊರಕಿದೆ, ಗುಣಮಟ್ಟದ ಸೇವೆ ಮಾಡಿ, ಜನರ ಪ್ರೀತಿ ವಿಶ್ವಾಸ ಗಳಿಸಿ, ಸರ್ಕಾರದ ವ್ಯವಸ್ಥೆಗೆ ಉತ್ತಮ ಹೆಸರು ತಂದು, ಆ ಮೂಲಕ ನಮ್ಮ ಬದುಕನ್ನು ಉತ್ತಮ ಗುಣಮಟ್ಟದ ಜೀವನವನ್ನಾಗಿ ಮಾಡಿಕೊಳ್ಳೋಣ ಎಂಬ ಸಂದೇಶ ನೀಡಿದರು..

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೊಂದಿಗೆ, ಲೋಕಾಯುಕ್ತ ಎಸ್ಪಿಯವರು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು, ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ..