ಜಾತಿ ಸಮೀಕ್ಷೆಯ ವೇಳೆ ಹಿಂದೂ ಬ್ರಾಹ್ಮಣ ಎಂದೇ ದಾಖಲಿಸಿ..
ಬೆಳಗಾವಿ : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಹಿಂದೂ ಬ್ರಾಹ್ಮಣ ಎಂಬದನ್ನೇ ಬರೆಯಬೇಕು ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಜಿಲ್ಲಾ ಅಧ್ಯಕ್ಷರಾದ ಜಯತೀರ್ಥ ಸವದತ್ತಿ ಇವರು ಸಮಸ್ತ ಬ್ರಾಹ್ಮಣ ಸಮುದಾಯದವರೆಗೆ ವಿನಂತಿ ಮಾಡಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿದ ಅವರು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ರಾಜ್ಯಾದ್ಯಂತ ನಡೆಸಲಿರುವ ಸಮೀಕ್ಷೆಯ ವೇಳೆ ಧರ್ಮದ ಕಾಲಂ ಸಂ-1 ರಲ್ಲಿ ಹಿಂದೂ, ಜಾತಿಯ ಕಾಲಂ ಸಂ- 218ರಲ್ಲಿ ಕೇವಲ ಬ್ರಾಹ್ಮಣ ಎಂದೇ ಬರೆಸಬೇಕು.
ಯಾವುದೇ ಕಾರಣಕ್ಕೂ ಜಾತಿ ಕಾಲಂನಲ್ಲಿ ಉಪಜಾತಿ ಅಥವಾ ಬೇರೆ ಹೆಸರನ್ನು ಬರೆಯಬಾರದು ಎಂದು ವಿನಂತಿಸಿಕೊಂಡಿದ್ದಾರೆ. ಸಮೀಕ್ಷೆಯಲ್ಲಿ ಒಂದೇ ರೀತಿಯ ವಿವರ ನೀಡಿದಾಗ ಮಾತ್ರ ಸಮಸ್ತ ಬ್ರಾಹ್ಮಣ ಸಮುದಾಯವು ಒಗ್ಗಟ್ಟಿನಿಂದ ಹಾಗೂ ಬಲಿಷ್ಠವಾಗಿ ದಾಖಲಾಗುತ್ತದೆ. ಸರ್ಕಾರದ ಮುಂದೆ ನಮ್ಮ ಸಮುದಾಯದ ಒಗ್ಗಟ್ಟು ಮತ್ತು ಏಕತೆ ಸ್ಪಷ್ಟವಾಗಿ ತೋರಬೇಕು.
ಇದರಿಂದ ಶಿಕ್ಷಣ, ಉದ್ಯೋಗ, ಆರ್ಥಿಕ ಸಹಾಯ, ಸಂಸ್ಕೃತಿಕ ಪ್ರೋತ್ಸಾಹ ಮತ್ತು ಸರ್ಕಾರಿ ಯೋಜನೆಗಳಲ್ಲಿ ಸಹಾಯ ಪಡೆಯಲು ಅನುಕೂಲವಾಗುತ್ತದೆ ಎಂದಿರುವ ಜಯತೀರ್ಥ ಸವದತ್ತಿ ಅವರು ಈ ಸಮೀಕ್ಷೆ ಕೇವಲ ಅಂಕಿ ಅಂಶಗಳ ಸಂಗ್ರಹವಲ್ಲ ಬದಲಾಗಿ ಭವಿಷ್ಯದಲ್ಲಿ ನಮ್ಮ ಸಮುದಾಯದ ಹಕ್ಕು, ಹಿತಾಸಕ್ತಿ ಮತ್ತು ಸಾಮರ್ಥ್ಯವನ್ನು ನಿರ್ಧರಿಸುವ ಮಹತ್ವದ ಅಂಗವಾಗಿದೆ.
ಈ ಹಿನ್ನೆಲೆಯಲ್ಲಿ ಸಮೀಕ್ಷಾ ಅಧಿಕಾರಿಗಳು ಮನೆಗೆ ಬಂದಾಗ ಸರಿಯಾದ ಮಾಹಿತಿಯನ್ನು ನೀಡಿ ಸಹಕರಿಸಬೇಕೆಂದು ಕರೆ ನೀಡಿದ್ದಾರೆ.