ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಸಂಚಲನ ಮೂಡಿಸಿದ ಅಧಿಕಾರಿಯ ಬೇಟಿ..

ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಸಂಚಲನ ಮೂಡಿಸಿದ ಅಧಿಕಾರಿಯ ಬೇಟಿ..

ಗ್ರಾಪಂ ಕಾರ್ಯಪ್ರಗತಿಯನ್ನು ಪರಿಶೀಲಿಸಿದ ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ..

ಸಂಭವನೀಯ ನೆರೆ ಹಾವಳಿ ಪ್ರದೇಶಗಳಿಗೂ ಬೇಟಿ..

ಸಮಸ್ಯೆ ಇರುವ ಕಡೆಯಲ್ಲಿ ಖಡಕ್ ಸೂಚನೆ ನೀಡಿದ ಅಧಿಕಾರಿ ಪರಶುರಾಮ ದುಡಗುಂಟಿ..

ಬೆಳಗಾವಿ : ಶನಿವಾರ ದಿನಾಂಕ 03/08/2024ರಂದು ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಯಾದ ಪರಶುರಾಮ ದುಡಗುಂಟಿ ಅವರ ಅನಿರೀಕ್ಷಿತ ಬೇಟಿಯಿಂದಾಗಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳ ಸಿಬ್ಬಂದಿಗಳ ಕಾರ್ಯಕ್ಷಮತೆಯಲ್ಲಿ ಸಂಚಲನ ಉಂಟಾದಂತ ಸನ್ನಿವೇಶ ಸೃಷ್ಟಿಯಾಗಿತ್ತು..

ಬೆಳಗಾವಿ ಹಾಗೂ ಬೈಲಹೊಂಗಳ ತಾಲೂಕಿನ ಕೆಲ ಗ್ರಾಮ ಪಂಚಾಯತಿಗಳಿಗೆ ತಮ್ಮ ಕಚೇರಿ ಸಹಾಯಕರೊಂದಿಗೆ ಬೇಟಿ ನೀಡಿದ ಅಧಿಕಾರಿಗಳು, ಕಚೇರಿಯ ಕಾರ್ಯ ಪರಿಶೀಲನೆ ಮಾಡಿ, ಸಿಬ್ಬಂದಿಗಳಿಗೆ ಕೆಲ ಸೂಚನೆ ನೀಡಿದ್ದಾರೆ, ಬೆಂಡಿಗೇರಿ ಗ್ರಾಮ ಪಂಚಾಯತಿಯ ಕಟ್ಟಡದ ಸ್ಥಿತಿಗತಿ ನೋಡಿ, ಸಂಬಂಧಿಸಿದ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ..

ನಂತರ ಹಲಗಾ ಬಸ್ತವಾಡ, ಮುತನಾಳ, ಗಜಪತಿ ಗ್ರಾಮ ಪಂಚಾಯತಿಗಳಿಗೆ ಬೇಟಿ ನೀಡಿದ ಅಧಿಕಾರಿಗಳು ಇಲಾಖೆಯಿಂದ ಗ್ರಾಮಗಳಲ್ಲಿ ನಡೆಯುವ ಕೆಲಸಗಳ ಬಗ್ಗೆ ಮಾಹಿತಿ ಪಡೆದಿದ್ದು, ಮೂಲಭೂತ ಸೌಲಭ್ಯಗಳ ಪುರೈಕೆಗಳ ಬಗ್ಗೆ ಪಂಚಾಯತಿಗಳ ಪಿಡಿಒ ಹಾಗೂ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಇದೇ ವೇಳೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಹಾಗೂ ಜಲ ಜೀವನ ಮಶೀನ್ ಯೋಜನೆಯ ಕಾರ್ಯವೈಖರಿಯ ಬಗ್ಗೆ ವಿಚಾರಿಸಿ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ..

ಇನ್ನು ಹೊಳಿಹೊಸೂರ ಗ್ರಾಮ ಪಂಚಾಯತಿಗೆ ಬೇಟಿ ನೀಡಿದ ಅಧಿಕಾರಿಗಳು, ಕಚೇರಿಯ ವಾತಾವರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕಾಮಗಾರಿ ಹಾಗೂ ಕಚೇರಿಯ ಕೆಲಸಗಳಿಗೆ ಸಂಬಂದಿಸಿದ ಇತರೆ ಕಡತಗಳನ್ನು ಪರಿಶೀಲನೆ ಮಾಡಿದರು..

ಹಣದ ಪಾವತಿಗಳನ್ನು ನಗದು ಹಾಗೂ ಚೆಕ್ಕುಗಳಿಂದ ಮಾಡದೇ ಕೇವಲ ಆರ್ಟಿಜಿಎಸ್ ಮೂಲಕವೇ ಮಾಡಬೇಕೆಂದು, ಕಚೇರಿಯ ಖಾತೆಯಲ್ಲಿರುವ ಬ್ಯಾಂಕುಗಳನ್ನು ಬದಲಿಸಿ ಲೆಕ್ಕಪತ್ರಗಳನ್ನು ಪಾರದರ್ಶಕವಾಗಿ ಇಡಲು ಪಂಚಾಯತಿ ಸಿಬ್ಬಂದಿಗಳಿಗೆ ಸೂಚನೆ ನೀಡಿದರು..

ಗ್ರಂಥಾಲಯದ ಬಗ್ಗೆ ವಿಚಾರಿಸಿದ ಅಧಿಕಾರಿಗಳು ಇನ್ನು ಸುಧಾರಿಸಿದ ವ್ಯವಸ್ಥೆ ಆಗಬೇಕು, ಡಿಜಿಟಲ್ ಗ್ರಂಥಾಲಯ ಆಗಬೇಕು ಎಂದ ಅವರು, ಬಿಸಿಯೂಟದ ಪೂರೈಕೆ, ಶಾಲಾ ಕಟ್ಟಡಗಳು, ಮಕ್ಕಳ ವಿದ್ಯಾಭ್ಯಾಸ, ಸರ್ಕಾರಿ ಶಾಲೆಯ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದು, ಸುಧಾರಣೆಯ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು..

ಪಂಚಾಯತಿಯಲ್ಲಿಯ ಒಂದು ಮಹತ್ತರ ಸಮಸ್ಯೆಗಳ ಬಗ್ಗೆ ಪಿಡಿಒ ಅವರು ಅಧಿಕಾರಿಗಳ ಮುಂದೆ ಪ್ರಸ್ತಾಪಿಸಿದಾಗ, ಇದಕ್ಕೆಲ್ಲ ತಮ್ಮ ಬೇಜವಾಬ್ದಾರಿಯೇ ಕಾರಣ ಎಂದ ಅಧಿಕಾರಿ, ತಕ್ಷಣ ಈ ಸಮಸ್ಯೆ ಪರಿಹರಿಸಬೇಕು, ಅದಕ್ಕಾಗಿ ಸೋಮವಾರವೇ ತಾವು ಜಿಲ್ಲಾ ಕಚೇರಿಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಆಗಮಿಸಬೇಕೆಂದು ಸೂಚಿಸಿದರು…

ನಂತರ ಸುತ್ತಲಿನ ಗ್ರಾಮಗಳಿಗೆ ಸಂಭವನೀಯ ನೆರೆ ಹಾವಳಿಯ ಪ್ರದೇಶ ವೀಕ್ಷಣೆಗೆ ಅಧಿಕಾರಿಗಳ ಜೊತೆ ಸಂಚರಿಸಿದ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಅವರು, ಮಲಪ್ರಭಾ ನದಿಯ ಒಳಹರಿವಿನಿಂದ ಪಕ್ಕದಲ್ಲೇ ಇರುವ ಹಳೆ ಕುರಗುಂದ ಹಾಗೂ ತುರಮರಿ ಗ್ರಾಮಗಳಿಗೆ ಯಾವ ರೀತಿಯಲ್ಲಿ ಪರಿಣಾಮ ಆಗುತ್ತಿದೆ, ಜನವಸತಿಗೆ ಆತಂಕ ಇದೆಯೇ ಅಥವಾ ಸುರಕ್ಷಿತ ಸ್ಥಿತಿಯಲ್ಲಿ ಇದೆಯೇ ಎಂದು ಸ್ವತಃ ಸ್ಥಳಕ್ಕೆ ಬೇಟಿ ನೀಡಿ ಅಧಿಕಾರಿಗಳೊಂದಿಗೆ ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡಿದ್ದಾರೆ..

ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಗಳ ಈ ವಿಶೇಷ ಬೇಟಿ ಕೆಲ ಗ್ರಾಮ ಪಂಚಾಯತಿಗಳಲ್ಲಿ ಸಂಚಲನ ಮೂಡಿಸಿದ್ದು, ಈ ಮೂಲಕ ಪಂಚಾಯತಿ ಸಿಬ್ಬಂದಿಗಳ ಆಡಳಿತ ಸುಧಾರಣೆ ಆಗಿ, ಸಾಮಾನ್ಯ ಜನಪರ ಕಾರ್ಯಗಳು ನಡೆದು, ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಆಗಬೇಕು, ಆ ಮೂಲಕ ಇಲಾಖೆಗೆ ಉತ್ತಮ ಹೆಸರು ಬರಬೇಕೆನ್ನುವದು ಸ್ಥಳೀಯರ ಅಭಿಪ್ರಾಯವಾಗಿತ್ತು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..