ಡಾ ಗುರುಪ್ರಸಾದ್ (ಐಪಿಎಸ್) ಅವರ ನೂರನೇ ಕೃತಿ “ಸಿಲ್ಕ್ ರೂಟ್” ಬಿಡುಗಡೆ..

ಡಾ ಗುರುಪ್ರಸಾದ್ (ಐಪಿಎಸ್) ಅವರ ನೂರನೇ ಕೃತಿ “ಸಿಲ್ಕ್ ರೂಟ್” ಬಿಡುಗಡೆ..

ಮೂರು ಸಾವಿರ ವರ್ಷಗಳ ಹಿಂದಿನ ವಾಣಿಜ್ಯ ಮಾರ್ಗದ ಚರಿತ್ರೆಯೇ ಸಿಲ್ಕ್ ರೂಟ್..

ಚರಿತ್ರೆ, ಕುತೂಹಲ, ಭಾರತ ಹೇಗೆ ವಿಶ್ವಗುರು ಆಗಿತ್ತು ಎಂಬ ಸ್ವಾರಸ್ಯಕರ ವಿಷಯ ಕೃತಿಯಲ್ಲಿವೆ.

ಡಾ ಡಿ ವಿ ಗುರುಪ್ರಸಾದ, ನಿವೃತ್ತ ಡಿಜಿಪಿ..

ಬೆಳಗಾವಿ : ಸಿಲ್ಕ್ ರೂಟ್ ಇದು ನನ್ನ ನೂರನೇ ಕೃತಿಯಾಗಿದ್ದು, ಇದೊಂದು ಪ್ರವಾಸ, ಚರಿತ್ರೆಯ ಕಥಾನವಾಗಿದ್ದು, ಮೂರು ಸಾವಿರ ವರ್ಷಗಳ ಹಿಂದೆ ಇದ್ದ ಒಂದು ವಾಣಿಜ್ಯ ಹಾದಿ (ಟ್ರೆಂಡ್ ರೂಟ್) ಹೇಗೆ ಬೇರೆಬೇರೆ ನಾಗರಿಕತೆಗಳನ್ನು ಒಂದುಗೂಡಿಸಿತು, ಆ ರಸ್ತೆಯ ಮೂಲಕ ಹೇಗೆ ವಿವಿಧ ದೇಶಗಳ ಧರ್ಮ ಹಾಗೂ ಸಂಸ್ಕೃತಿಗಳು ವಿನಿಮಯವಾದವು ಎಂಬ ವಿಷಯವನ್ನು ಸುಮಾರು ಹತ್ತು ವರ್ಷಗಳ ಕಾಲ ಗಹನವಾದ ಸಂಶೋಧನೆ ಮಾಡಿ ಬರೆದ ಕೃತಿಯೇ ಈ “ಸಿಲ್ಕ್ ರೂಟ್” ಎಂದು ಖ್ಯಾತ ಅಂಕಣಕಾರ ಹಾಗೂ ನಿವೃತ್ತ ಡಿಜಿಪಿ ಡಾ ಡಿ ವಿ ಗುರುಪ್ರಸಾದ (ಐಪಿಎಸ್) ಅವರು ಹೇಳಿದ್ದಾರೆ.

ಮಂಗಳವಾರ ಸಂಜೆ ಮುಂಗಾರು ಮಳೆ ಹನಿಯ ತಂಪಿನ ನಡುವೆ ಬೆಳಗಾವಿ ಕ್ಲಬ್ಬಿನಲ್ಲಿ, ಬೆಳಗಾವಿ ಗೆಳೆಯರ ಬಳಗದ ವತಿಯಿಂದ ಆಯೋಜನೆಗೊಂಡ ಡಾ ಡಿ ವಿ ಗುರುಪ್ರಸಾದ ಅವರ ನೂರನೇ ಕೃತಿ “ಸಿಲ್ಕ್ ರೂಟ್” (ರೇಷ್ಮೆ ಸಾಗಿದ ರೋಮಾಂಚಕ ನಗರಗಳು) ಕೃತಿಯ ಬಿಡುಗಡೆ ಸಮಾರಂಭದ ನಂತರ ಮಾತನಾಡಿದ ಕೃತಿಯ ಲೇಖಕರು ತಮ್ಮ ನೂರನೇ ಕೃತಿಯ ವಿಶೇಷತೆಗಳ ಬಗ್ಗೆ ಹೇಳಿಕೊಂಡಿದ್ದು, ಸಿಲ್ಕ್ ರೂಟಿಗೆ ಸಂಬಂದಿಸಿದ ಹತ್ತು ದೇಶಗಳ ಜನಜೀವನ ಹೇಗಿದೆ, ಅವರ ಬದುಕಿನ ಬಹುತೇಕ ವಿಷಯಗಳನ್ನು ಅಧ್ಯಯನ ಮಾಡಿ ಸವಿಸ್ತಾರವಾಗಿ ಬರೆದಿದ್ದೇನೆ ಎಂದಿದ್ದಾರೆ.

ಸಿಲ್ಕ್ ರೂಟ್ ಹಿಂದೆ ಹೇಗಿತ್ತು, ಈಗ ಹೇಗಿದೆ, ಆಗಿನ ಪಳೆಯುಳಿಕೆ, ಅವಶೇಷಗಳು ಈಗ ಹೇಗಿವೆ? ಆಗಿನ ಜನಜೀವನ ಹೇಗಿತ್ತು ಈಗ ಹೇಗೆ ಬದಲಾವಣೆ ಆಗಿದೆ ಎಂಬುದನ್ನು ಅಲ್ಲಿ ಹೋಗಿ ಅಧ್ಯಯನ ಮಾಡಿ ಬರೆದಿದ್ದು, ಚರಿತ್ರೆ ಅರ್ಥಮಾಡಿಕೊಳ್ಳದವನು ವರ್ತಮಾನ ಹಾಗೂ ಭವಿಷ್ಯವನ್ನು ಅರ್ಥಮಾಡಿಕೊಳ್ಳಲು ಆಗುವದಿಲ್ಲ, ಚರಿತ್ರೆ ಪುನರಾವರ್ತನೆ ಆಗುತ್ತೆ, ನಾವು ಚರಿತ್ರೆ ತಿಳಿದುಕೊಂಡರೆ ಮುಂದಿನ ಅನಾಹುತಗಳನ್ನು ತಪ್ಪಿಸಬಹುದು, ದೃಷ್ಟಿಯಿಂದ ಈಗಿನ ಸಮಾಜಕ್ಕೆ ಈ ಕೃತಿ ತುಂಬಾ ಉಪಯೋಗವಿದೆ ಎಂದಿದ್ದಾರೆ.

ಸೈನಿಕ ದಳಕ್ಕೂ ಸಂಬಂಧಪಡುವ ಈ ಕೃತಿಯಲ್ಲಿ ಇದ್ದು, ಯಾವುದೇ ದೇಶದ ಸೈನಿಕ ಯುದ್ಧ ನಡೆಯಬೇಕಾದರೆ ರಸ್ತೆಗಳು ಬಹಳ ಮುಖ್ಯ, ಚೀನಾದ ಸಿಲ್ಕ್ ರೂಟ್ ಪ್ರಾರಂಭವಾದದ್ದು ಚೀನಾ ವಿದೇಶಿ ಆಕ್ರಮಣಕಾರರಿಂದ ತನ್ನನ್ನು ರಕ್ಷಿಸಿಕೊಳ್ಳಲು ಹಾಗೂ ತಮ್ಮ ದೇಶದ ಸೈನಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕುದುರೆಗಳ ಖರೀದಿಗಾಗಿ ಮೊದಲು ಕುದುರೆ ವ್ಯಾಪಾರಕ್ಕೆ ಈ ರಸ್ತೆ ಉಪಯೋಗ ಆಗಿದ್ದು ಒಂದು ವಿಶೇಷವಾಗಿದೆ.

ತದನಂತರ ಚೀನಾದಿಂದ ಉತ್ತಮ ಗುಣಮಟ್ಟದ ರೇಷ್ಮೆ ರೋಮನ್ ಸಾಮ್ರಾಜ್ಯಕ್ಕೆ ಹೋಗುತ್ತಿತ್ತು, ಅಲ್ಲಿ ರೇಷ್ಮೆ ಬೆಲೆ ಚಿನ್ನಕ್ಕಿಂತ ಜಾಸ್ತಿ ಇತ್ತು, ಸ್ವಲ್ಪ ರೇಷ್ಮೆಗೆ ಬುಟ್ಟಿಯಷ್ಟು ಚಿನ್ನ ಸಿಗುತ್ತಿತ್ತು, ರೋಮನಲ್ಲಿ ಚಿನ್ನ ಇತ್ತು, ಚೀನಾದಲ್ಲಿ ರೇಷ್ಮೆ ಇತ್ತು, ಸಿಲ್ಕ್ ರೂಟ್ ಇದು ಭೂಮಿ ಹಾಗೂ ಸಮುದ್ರಗಳ ಮೂಲಕ ಬೇರೆ ದೇಶಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿತ್ತು.

ಭಾರತಕ್ಕೂ ಸಿಲ್ಕ್ ರೂಟಿಗೂ ಹೇಗೆ ಸಂಬಂಧವಿದೆ ಎಂದು ಭಾರತಕ್ಕೆ ಸಂಬಂಧಿಸಿದಂತ ಅನೇಕ ಕುತೂಹಲಕಾರಿ ವಿಷಯ ಈ ಪುಸ್ತಕದಲ್ಲಿದೆ, ಬೇರೆಬೇರೆ ದೇಶಗಳಿಗೆ ಭಾರತ ಹೇಗೆ ವಿಶ್ವಗುರು ಆಗಿತ್ತು ಎಂಬುದನ್ನು ಈ ಪುಸ್ತಕ ಹದಿನೆಂಟನೆಯ ಅಧ್ಯಾಯದಲ್ಲಿ ವಿಶೇಷವಾಗಿ ಬರೆದಿದ್ದೇನೆ, ಭಾರತದ ಪ್ರಾಮುಖ್ಯತೆ ಏನು? ಗೌರವ ಏನು? ಎಂದುದನ್ನು ಉಲ್ಲೇಖಿಸಿದ್ದು, ನಮ್ಮ ದೇಶದ ಬಗ್ಗೆ ಅಭಿಮಾನ ಇರುವ ಎಲ್ಲರೂ ಈ ಪುಸ್ತಕವನ್ನು ಓದಬೇಕು ಎಂದು ಹೇಳಿಕೊಂಡಿದ್ದಾರೆ..

ಇನ್ನು ಬೆಳಗಾವಿ ಗೆಳೆಯರ ಬಳಗ ಏರ್ಪಡಿಸಿದ ಈ ಕಾರ್ಯಕ್ರಮದಲ್ಲಿ ಪುಸ್ತಕವನ್ನು ಲೋಕಾರ್ಪಣೆ ಮಾಡಿದವರು, ಬ್ರಿಗೇಡಿಯರ್ ಜಾಯದೀಪ ಮುಖರ್ಜಿ (ಬೆಳಗಾವಿ ಮರಾಠಾ ಎಲ್ ಐ ಆರ್ ಸಿ), ಕೃತಿಯನ್ನು ಪರಿಚಯ ಮಾಡಿದವರು, ಭೀಮಾಶಂಕರ ಗುಳೇದ ಐಪಿಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬೆಳಗಾವಿ, ಸಮಾರಂಭದ ಘನ ಅಧ್ಯಕ್ಷತೆ ವಹಿಸಿದ್ದವರು ಫ್ರೊ ಸಿ ಎಂ ತ್ಯಾಗರಾಜ, ಉಪ ಕುಲಪತಿಗಳು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಡಿದವರು ಹಿರಿಯ ಪತ್ರಕರ್ತರಾದ ಹೃಷಿಕೇಶ್ ಅವರು, ಅಬಕಾರಿ ಇಲಾಖೆಯ ಅಧಿಕಾರಿಗಳಾದ ವಿಜಯ ಹಿರೇಮಠ, ಸಾಹಿತಿ ಸರಜೂ ಕಾಟ್ಕರ್ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಆಪ್ತರು ಭಾಗಿಯಾಗಿದ್ದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ..