ಡಾ ಬಾಬಾಸಾಹೇಬ ಅಂಬೇಡ್ಕರ್ 133ನೇ ಜನ್ಮ ದಿನಾಚರಣೆ…

ಡಾ ಬಾಬಾಸಾಹೇಬ ಅಂಬೇಡ್ಕರ್ 133ನೇ ಜನ್ಮ ದಿನಾಚರಣೆ…

ಬೆಳಗಾವಿ, ಏ.14: ಡಾ. ಬಾಬಾಸಾಹೇಬ್ ಅಂಬೇಡ್ಕರ ಅವರು ಭಾರತದ ಕಾನೂನು ಸುವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಿಗೆ ತಮ್ಮದೇಯಾದ ಕೊಡುಗೆಯನ್ನು ನೀಡುವುದರ ಮೂಲಕ ದೇಶ ಕಂಡ ಮಹಾನ್ ನಾಯಕರಾಗಿ ವಿಶ್ವ ಮಾನವ ಸಂದೇಶ ಸಾರಿದ ಮೊದಲ ವ್ಯಕ್ತಿಯಾಗಿದ್ದಾರೆ ಎಂದು ಕಡೋಲಿ ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕಿ ಡಾ. ಪ್ರವೀಣಾ ಕೆ.ಎಸ್ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ಉದ್ಯಾನದಲ್ಲಿ ರವಿವಾರ (ಏ.14) ನಡೆದ ಡಾ. ಬಾಬಾಸಾಹೇಬ ಅಂಬೇಡ್ಕರ ಜಯಂತಿ ಕಾರ್ಯಕ್ರಮದಲ್ಲಿ
ಅವರು ಮಾತನಾಡಿದರು.

ಭಾರತೀಯ ಸಂವಿಧಾನದ ಪಿತಾಮಹ ಎಂದು ಪ್ರಸಿದ್ಧರಾದ ಡಾ. ಬಿ.ಆರ್ ಅಂಬೇಡ್ಕರ್ ಅವರು ಭಾರತೀಯ ಇತಿಹಾಸದಲ್ಲಿ ಒಂದು ಸ್ಮಾರಕ ವ್ಯಕ್ತಿ. ಅವರು ಭಾರತದ ಸಂವಿಧಾನವನ್ನು ರೂಪಿಸಿ ಕೆಳ ಸಮುದಾಯಗಳ ಪ್ರಗತಿಗೆ ಶ್ರಮಿಸಿದ್ದಾರೆ. ಭಾರತದಲ್ಲಿನ ದೀನದಲಿತ ಜಾತಿಗಳಿಗೆ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವಿತಾವಧಿಯನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು.

ಅಸಮಾನತೆಯನ್ನು ಹೋಗಲಾಡಿಸಲು ಸಂವಿಧಾನ ಗ್ರಂಥ ರಚಿಸಿ ತಮ್ಮ ಛಾಪು ಜಗತ್ತಿಗೆ ಪರಿಚಯಸಿದ್ದಾರೆ. ದೇಶದಲ್ಲಿ ಕಾನೂನು ಬರೆದು, ಪುಸ್ತಕ ಹಿಡಿದು ಪಾರ್ಲಿಮೆಂತಿಗೆ ಹೆಜ್ಜೆ ಇಟ್ಟ ಕೆಳ ಸಮುದಾಯಗಳ ಮೊದಲ ಸಾಧಕರು ಡಾ.ಬಾಬಾ ಸಾಹೇಬ ಅಂಬೇಡ್ಕರ್. ಶೋಷಿತ ಜನಾಂಗದ ಸಂಕೇತವಾಗಿ ಮಾತ್ರ ಅವರನ್ನು ಬಿಂಬಿಸಲಾಗುತ್ತಿದೆ ಅವರು ಸರ್ವರಿಗೂ ಸಮಾನ ಹಕ್ಕು ನೀಡಿದ್ದಾರೆ.

ಮಹಿಳಾ ಸಬಲೀಕರಣ, ಸಾಮಾಜಿಕ ಸುಧಾರಣೆ ಜೀವನ ಜೀವನ ಮುಡಿಪಾಗಿಟ್ಟಿದ್ದರು. ಕಲ್ಲಿದ್ದಲು ಗಣಿಗಳಲ್ಲಿ ದುಡಿಯುವ ಕಾರ್ಮಿಕರ ಆರೋಗ್ಯ, ಚಿಕಿತ್ಸೆ, ವೇತನ ಎಲ್ಲವನ್ನೂ ಆಳವಾಗಿ ಅಧ್ಯಯನ ಮಾಡಿ, ಕಾರ್ಮಿಕರಿಗೆ ಕನಿಷ್ಠ ವೇತನ, ಜೀವನ ವಿಮೆ ಜಾರಿಗೆ ತಂದರು.

ಕಾನೂನು ಚೌಕಟ್ಟಿನಲ್ಲಿ ಮಹಿಳಾ ಹಕ್ಕುಗಳನ್ನು ಕಾಯ್ದಿರಿಸಿ ಮಹಿಳೆಯರಿಗೆ ಸಮಾನತೆ ಕಲ್ಪಿಸಿದರು. ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಮೀಸಲಾತಿ ತಂದರು. ಅದರಂತೆ
ಕೃಷಿ, ಕೈಗಾರಿಕೆಯಿಂದ ಜನರು ಆರ್ಥಿಕ ಅಭಿವೃದ್ಧಿ ಹೊಂದಲು ದೇಶದ ಹಿತ ದೃಷ್ಟಿಯಿಂದ ಉತ್ತರ ಭಾರತದಲ್ಲಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡಿ ಕೊಟ್ಟಿದ್ದಾರೆ ಎಂದು ಹೇಳಿದರು.

“ಒಬ್ಬ ವಿದ್ಯಾವಂತ ಪಡೆದ ಶಿಕ್ಷಣವು ಬಡವರ ಕಲ್ಯಾಣಕ್ಕೆ ಹಾನಿಕಾರಕವಾಗಿದ್ದರೆ, ಆ ವಿದ್ಯಾವಂತ ಮನುಷ್ಯ ಸಮಾಜಕ್ಕೆ ಶಾಪವಿದ್ದಂತೆ”

“ನಿಮ್ಮ ಮಕ್ಕಳಿಗೆ ಧಾರ್ಮಿಕತೆಯನ್ನು ಬೋಧಿಸಬೇಡಿ. ಅವರು ಮೂಢನಂಬಿಕೆಯ ಗುಲಾಮರಾಗುತ್ತಾರೆ. ಅವರಿಗೆ ಶಿಕ್ಷಣ ಕೊಡಿ, ಗುಲಾಮಗಿರಿಯನ್ನು ಮೆಟ್ಟಿ ನಿಲ್ಲುತ್ತಾರೆ” ಎಂಬ ಅವರು ಗಟ್ಟಿ ಮಾತುಗಳಿಂದ ತಳ ಸಮುದಾಯ ಶಿಕ್ಷಣ ಕ್ಷೇತ್ರಗಳಲ್ಲಿ ಸಾಕಷ್ಟು ಮುಂದುವರೆಯಲು ಸಹಾಯವಾಯಿತು.ಪುಸ್ತಕ, ಜ್ಞಾನದ ಮಾರ್ಗದಲ್ಲಿ ಯುವ ಪೀಳಿಗೆ ನಡೆಯಬೇಕು ಎಂದು ಉಪನ್ಯಾಸಕಿ ಡಾ. ಪ್ರವೀಣಾ ಕೆ.ಎಸ್ ಅವರು ಉಪನ್ಯಾಸದಲ್ಲಿ ತಿಳಿಸಿದರು.

ಡಾ.ಬಿ.ಆರ್ ಅಂಬೇಡ್ಕರ ಅವರ ಜನ್ಮ ದಿನಾಚರಣೆ ದೇಶಕ್ಕೆ ಹಬ್ಬವಿದ್ದಂತೆ, ಭಾರತ ಇಷ್ಟು ಪ್ರಗತಿಪರ ರಾಷ್ಟ್ರಗಳು ಮೂಲ ಕಾರಣ ಡಾ. ಬಿ.ಆರ್. ಅಂಬೇಡ್ಕರ್ ಅವರು. ಬ್ರಿಟಿಷ್ ರಿಂದ ಸ್ವಾತಂತ್ರ್ಯ ಸಿಕ್ಕ ಬಳಿಕ, ಸಾಮಾಜಿಕ ,ಆರ್ಥಿಕ, ರಾಜಕೀಯವಾಗಿ ನ್ಯಾಯ ದೊರಕಲು ಸಂವಿಧಾನ ಗ್ರಂಥ ರಚನೆಯ ಮೂಲಕ ಮೂಲ ಭೂತ ಹಕ್ಕು ಒದಗಿಸಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಮಹಿಳೆಯರಿಗೆ ಮತದಾನ, ಯಾವುದೇ ವೃತ್ತಿ ಆಯ್ಕೆ, ಚುನಾವಣಾ ಪ್ರಕ್ರಿಯೆ ಸೇರಿದಂತೆ ಎಲ್ಲರಿಗೂ ಸಮಾನ ಅವಕಾಶ ಕಪಿಸುವ ನಿಟ್ಟಿನಲ್ಲಿ ಸಂವಿಧಾನ ರಚನೆ ಮಾಡಿದ್ದಾರೆ. ವಿಶ್ವದ ನೂರಾರು ದೇಶಗಳು ಭಾರತ ದೇಶದ ಸಂವಿಧಾನವನ್ನು ತಮ್ಮ ದೇಶಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ.

ಪ್ರತಿಯೊಬ್ಬ ವ್ಯಕ್ತಿಗೆ ಮತದಾನ ಹಕ್ಕು, ಪ್ರತಿ ಪ್ರಜೆಯು ತಮ್ಮ ನಾಯಕನನ್ನು ಆಯ್ಕೆ ಮಾಡಲು ಅವಕಾಶ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಭಾರತ ದೇಶ ಇನ್ನೂ ಪ್ರಗತಿಪರ ರಾಷ್ಟ್ರವಾಗಲಿದೆ ಅದಕ್ಕೆ ಅಡಿಪಾಯ ಅಂಬೇಡ್ಕರ್ ಅವರು ಹಾಕಿ ಕಟ್ಟಿದ್ದಾರೆ, ಅವರ ಆಸ್ತಿ ಜ್ಞಾನ ಹಾಗೂ ಪುಸ್ತಕ ಭಂಡಾರ ಅದರಂತೆ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಮೂಲಕ ದೇಶಕ್ಕೆ ಆಸ್ತಿಯನ್ನಾಗಿ ಮಾಡಿರಿ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯತಿ ಸಿಇಓ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಹಾನಗರ ಪಾಲಿಕೆ ಆಯುಕ್ತರಾದ ಪಿ.ಎನ್.ಲೋಕೇಶ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ‌ ನಿರ್ದೇಶಕ ನವೀನ್ ಶಿಂತ್ರೆ, ಸಮಾಜದ ಮುಖಂಡರಾದ ಮಲ್ಲೇಶ ಚೌಗಲಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಪ್ರಕಾಶ್ ಕುರಗುಂದ..