ಡಿಸಿಎಂ ಡಿಕೆ ಶಿವಕುಮಾರ್ ಬೆಳಗಾವಿ ಭೇಟಿವೇಳೆ ಕಾಣಿಸಿಕೊಳ್ಳದ ಜಿಲ್ಲಾ ಕಾಂಗ್ರೆಸ್ ತಂಡ…

ಡಿಸಿಎಂ ಡಿಕೆ ಶಿವಕುಮಾರ್ ಬೆಳಗಾವಿ ಭೇಟಿವೇಳೆ ಕಾಣಿಸಿಕೊಳ್ಳದ ಜಿಲ್ಲಾ ಕಾಂಗ್ರೆಸ್ ತಂಡ..

ಜಿಲ್ಲೆಯಲ್ಲಿ ಪಕ್ಷ ಕಟ್ಟಿ, ಸಂಘಟಿಸಿದ, ಲೋಕಲ್ ನಾಯಕನ ಹಿಂದೆ ನಿಂತರಾ ಜಿಲ್ಲಾ ಕಾಂಗ್ರೆಸ್ ಪಡೆ..??

ಜಿಲ್ಲಾ ಕಾಂಗ್ರೆಸ್ ವಿಷಯದಲ್ಲಿ ಹೊರಗಿನವರ ಹಸ್ತಕ್ಷೇಪ ಸಲ್ಲದು ಎಂಬ ಖಡಕ್ ಸಂದೇಶವೇ ??

ಬೆಳಗಾವಿ : ಬುಧವಾರ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರಾದ ಡಿಕೆ ಶಿವಕುಮಾರ್ ಅವರು ಬೆಳಗಾವಿಗೆ ವಿವಿಧ ಕಾರ್ಯಕ್ರಮಗಳ ನಿಮಿತ್ತ ಆಹ್ವಾನದ ಮೇರೆಗೆ ಆಗಮಿಸಿದ್ದು, ಸುಮಾರು ಹನ್ನೊಂದು ಘಂಟೆಗೆ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದ್ದರು..

ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಭಾವಿ ನಾಯಕರಾಗಿ, ಪ್ರಚಲಿತ ಸರ್ಕಾರದ ಉಪಮುಖ್ಯಮಂತ್ರಿ ಆಗಿ, ತನ್ನದೇ ಆದ ಪ್ರಾಬಲ್ಯ ಹೊಂದಿರುವ ಕಾಂಗ್ರೆಸ್ ನಾಯಕ, ಬೆಳಗಾವಿ ಜಿಲ್ಲೆಗೆ ಆಗಮನ ಆದಾಗ ಅವರ ಸ್ವಾಗತ ತುಂಬಾ ಸಪ್ಪೆಯಾಗಿ ಕಾಣುತ್ತಿತ್ತು..

ಬೆಳಗಾವಿ ಜಿಲ್ಲೆಯಲ್ಲಿ ಎರಡು ಸಚಿವರು ಒಳಗೊಂಡಂತೆ ಒಟ್ಟು ಹನ್ನೊಂದು ಜನ ಕಾಂಗ್ರೆಸ್ ಪಕ್ಷದ ಶಾಸಕರಿದ್ದು, ಕೆಪಿಸಿಸಿ ಅಧ್ಯಕ್ಷರಿಗೆ ಹೂಗುಚ್ಚ ನೀಡಿ ಸ್ವಾಗತ ಮಾಡಲಿಕ್ಕೆ ಒಬ್ಬರೂ ಇಲ್ಲದಿರುವುದು ಅಚ್ಚರಿ ಮೂಡುವಂತಿತ್ತು, ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಬೆಳಗಾವಿಯ ಪ್ರವಾಸಿ ಮಂದಿರಕ್ಕೆ ಬಂದಾಗ ಎಂಎಲ್ಸಿ ಪ್ರಕಾಶ್ ಹುಕ್ಕೇರಿ ಜೊತೆಗೂಡಿದರು ನಂತರ ನೀರಾವರಿ ಕಚೇರಿಯಲ್ಲಿ ಸಭೆ ನಡೆದಾಗ, ಕುಡಚಿ ಶಾಸಕ ಮಹೇಶ್ ತಮ್ಮಣ್ಣವರ ಅವರು ಅವಸರದಲ್ಲಿ ಓಡಿಬಂದು, ನಾನೊಬ್ಬ ಹಾಜರಿದ್ದೇನೆ ಎಂದು ತೋರಿಸಿಕೊಟ್ಟರು..

ಡಿಕೆ ಶಿವಕುಮಾರ್ ಅವರು ಒಂದು ರಾಜಕೀಯ ದಂತಕತೆ, ಕನಕಪುರ ಬಂಡೆ, ಅವರ ಬಗ್ಗೆ ವೈಯಕ್ತಿಕವಾಗಿ ಇಲ್ಲಿ ಯಾರಿಗೂ ಬೇಸರ, ವಿರೋಧವಿಲ್ಲ, ಆದರೆ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಅವರು ಹಸ್ತಕ್ಷೇಪ ಮಾಡಿ, ಯಾರದೋ ಓಲೈಕೆಗಾಗಿ, ರಾಜಕೀಯ ವ್ಯವಸ್ಥೆಯನ್ನು ಏರು ಪೇರು ಮಾಡುತ್ತಿರುವದು, ಇಲ್ಲಿಯ ಸ್ಥಳೀಯ ನಾಯಕರ ಕೋಪಕ್ಕೆ ಕಾರಣವಾಗಿದೆ ಎಂಬ ಮಾತಿದೆ..

ಒಟ್ಟಿನಲ್ಲಿ ನಿನ್ನೆಯ ಪರಿಸ್ಥಿತಿಯನ್ನು ಗಮನಿಸಿದರೆ, ಇಲ್ಲಿ ಹಲವು ವರ್ಷಗಳಿಂದ ಪಕ್ಷ ಕಟ್ಟಿ, ಜಿಲ್ಲೆಯ ನಾಯಕರಾಗಿ ಕೆಲಸ ಮಾಡುವ ಮುತ್ಸದ್ದಿಗೆ, ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರು ನಿಷ್ಠರಾಗಿದ್ದು, ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಕಾಂಗ್ರೆಸ್ ಪಡೆ ಇರುವುದೆಂಬ ಸಂದೇಶ ನೀಡಿದಂತೆ ಕಾಣುತ್ತಿದ್ದು, ಬೆಳಗಾವಿ ಕಾಂಗ್ರೆಸ್ ಭದ್ರಕೋಟೆಗೆ ಚಾಣಾಕ್ಷ ನಾಯಕರೇ ಸಾರ್ವಭೌಮ ಎನ್ನುವಂತಾಗಿದೆ..

ವರದಿ ಪ್ರಕಾಶ ಕುರಗುಂದ..