ತೆರಿಗೆ ಬಾಕಿ ಉಳಿಸಿಕೊಂಡಿರುವ ಗೊಡಾವನಗಳಿಗೆ ಬೀಗ ಜಡಿದ ಕಂದಾಯ ಶಾಖೆ..

ತೆರಿಗೆ ಬಾಕಿ ಉಳಿಸಿಕೊಂಡಿರುವ ಗೊಡಾವನಗಳಿಗೆ ಬೀಗ ಜಡಿದ ಕಂದಾಯ ಶಾಖೆ..

ಬೀಗ ಜಡಿದ ಮೂರೇ ದಿನಗಳಲ್ಲಿ ವಸೂಲಿಯಾದ 25 ಲಕ್ಷ ತೆರಿಗೆ ಹಣ.

ಕೈಗಾರಿಕಾ ಪ್ರದೇಶದ ಕರ ವಸೂಲಿಯಲ್ಲಿ ಕಮಾಲ್ ಮಾಡಿದ ಕಂದಾಯ ಉಪ ಆಯುಕ್ತೆ ರೇಷ್ಮಾ ತಾಳಿಕೋಟೆ..

ಬೆಳಗಾವಿ : ಮಹಾನಗರ ಪಾಲಿಕೆಯ ಕಂದಾಯ ವಿಭಾಗ ಕ್ರಿಯಾಶೀಲವಾಗಿ ಕಾರ್ಯ ಮಾಡುತ್ತಿದ್ದು, ಕಂದಾಯ ಉಪ ಆಯುಕ್ತರಾದ ರೇಷ್ಮಾ ತಾಳಿಕೋಟೆ ಅವರ ಮಾರ್ಗದರ್ಶನದಲ್ಲಿ ಕಂದಾಯ ಸಿಬ್ಬಂದಿಗಳು ತೆರಿಗೆ ಸಂಗ್ರಹ ಕಾರ್ಯದಲ್ಲಿ ಮಹತ್ತರ ಪ್ರಗತಿಯನ್ನು ಸಾಧಿಸುತ್ತಿದ್ದು, ಜನರೂ ಕೂಡ ಸಿಬ್ಬಂದಿಗಳ ಪ್ರಯತ್ನಕ್ಕೆ ಸಕಾರಾತ್ಮಕವಾದ ಸ್ಪಂದನೆ ನೀಡುತ್ತಿದ್ದಾರೆ..

ಪಾಲಿಕೆಗೆ ಪ್ರಮುಖ ಆದಾಯದ ಮೂಲ ಆಗಿರುವ ಆಸ್ತಿ ತೆರಿಗೆಯಲ್ಲಿ ಬಹುಪಾಲು ಕೈಗಾರಿಕಾ ಪ್ರದೇಶದಿಂದ ಸಂಗ್ರಹವಾಗುತ್ತಿದ್ದು, ಈ ಹಿಂದೆ ಏನಾಗಿತ್ತೋ ಗೊತ್ತಿಲ್ಲ, ಖಾನಾಪುರ ರಸ್ತೆಯ ಉದ್ಯಮಭಾಗ ಕೈಗಾರಿಕಾ ಪ್ರದೇಶದಲ್ಲಿ ಸರಿಯಾದ ಆಸ್ತಿ ತೆರಿಗೆ ಭರಣ ಆಗುತ್ತಿರಲಿಲ್ಲ ಎಂಬ ಮಾತುಗಳಿದ್ದು, ಇತ್ತೀಚೆಗೆ ಕಂದಾಯ ಸಿಬ್ಬಂದಿಯ ಚುರುಕುತನ ಕಾರ್ಯದಿಂದ ಉತ್ತಮ ಪ್ರಮಾಣದ ತೆರಿಗೆ ಸಂಗ್ರಹ ಆಗುತ್ತಿದೆ ಎಂಬ ಮಾತಿದೆ.

ಮುಂದುವರೆದ ಭಾಗವಾಗಿ ಉದ್ಯಮಬಾಗ ಕೈಗಾರಿಕಾ ಪ್ರದೇಶದ ಕೆಲ ಉದ್ದಿಮೆ ಆಸ್ತಿಗಳ ತೆರಿಗೆ ಬಾಕಿ ಹಾಗೆ ಉಳಿದಿದ್ದು, ನೋಟಿಸ್ ನೀಡಿದರೂ ಕೂಡಾ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ, ಕಂದಾಯ ಉಪ ಆಯುಕ್ತರಾದ ರೇಷ್ಮಾ ತಾಳಿಕೋಟೆ ಅವರ ನೇತೃತ್ವದ ಕಂದಾಯ ತಂಡ ದಿನಾಂಕ 22/11/2024ರಂದು ಬೇಟಿ ನೀಡಿ, ತೆರಿಗೆ ಬಾಕಿ ಉಳಿಸಿಕೊಂಡಿರುವ ಎರಡು ಗೊಡಾವನಗಳನ್ನು ಸೀಲ್ ಮಾಡಿದ್ದರು.

ಪರಿಣಾಮವಾಗಿ ಕೇವಲ ಮೂರೇ ದಿನಗಳಲ್ಲಿ ಅಂದರೆ ದಿನಾಂಕ 26/11/2024ರಂದು ಸದರಿ ಆಸ್ತಿ ಮಾಲೀಕರು ತಾವು ಬಾಕಿ ಉಳಿಸಿಕೊಂಡಿರುವ 25 ಲಕ್ಷ ರೂ ಆಸ್ತಿ ತೆರಿಗೆಯನ್ನು 12ಲಕ್ಷ ರೂ ಚಲನ ಮೂಲಕ ಹಾಗೂ 13 ಲಕ್ಷ ರೂ ಚೆಕ್ ಮುಖಾಂತರ ಪಾಲಿಕೆಗೆ ಪಾವತಿ ಮಾಡಿದ್ದಾರೆ, ಕಂದಾಯ ಉಪ ಆಯುಕ್ತರಾದ ರೇಷ್ಮಾ ತಾಳಿಕೋಟೆ, ಕಂದಾಯ ಅಧಿಕಾರಿ, ಸಹಾಯಕ ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕರ ಶಿಸ್ತಿನ ಪ್ರಯತ್ನದಿಂದ ಬಾಕಿ ಉಳಿದ ದೊಡ್ಡ ಮೊತ್ತದ ತೆರಿಗೆ ಸಂಗ್ರಹ ಆಗಿದ್ದು, ಉಳಿದ ಆಸ್ತಿ ಮಾಲೀಕರೂ ಕೂಡಾ ಬಾಕಿಯಿರುವ ಹಾಗೂ ಸರಿಯಾದ ಪ್ರಮಾಣದ ಆಸ್ತಿ ತೆರಿಗೆ ಭರಣ ಮಾಡಲು ದಾರಿಯಾಗಿದೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..