ದಲಿತ ವಿದ್ಯಾರ್ಥಿ ಪರಿಷತ್ತಿಗೆ ಅಂಬೇಡ್ಕರ್ ಮಾರ್ಗವೇ ಅಂತಿಮ ಮಾರ್ಗ : ಶ್ರೀನಾಥ ಪೂಜಾರಿ
ಬೆಳಗಾವಿ: ಜೂನ್ 21 : ಸುಮಾರು ಎರಡು ದಶಕಗಳಿಂದ ನಾಡಿನ ವಿದ್ಯಾರ್ಥಿ ಯುವಜನರ ಹಕ್ಕುಗಳ ರಕ್ಷಣೆ ಜೊತೆಗೆ ಶೈಕ್ಷಣಿಕ ಅಭಿವೃದ್ಧಿಗೆ ಹೋರಾಡುತ್ತಿರುವ ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮಾರ್ಗವೇ ಅಂತಿಮ ಮಾರ್ಗವಾಗಿದೆ ಎಂದು ಪರಿಷತ್ ನ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಅವರು ಹೇಳಿದರು.
ನಗರದ ಸರ್ಕಿಟ್ ಹೌಸ್ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಮಿತಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಶ್ರೀನಾಥ ಪೂಜಾರಿ ಮಾತನಾಡಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳ ಪ್ರಚಾರ ಮತ್ತು ಪ್ರಸಾರ ಮಾಡುವ ಜೊತೆಗೆ ಅವರು ತೋರಿದ ಮಾರ್ಗದಲ್ಲಿ ನಡೆದರೆ ಮಾತ್ರ ಶೋಷಿತ ಸಮುದಾಯದ ವಿಮೋಚನೆಯನ್ನು ಹೊಂದಬಹುದು. ಇಂದು ಶೋಷಿತ ಸಮುದಾಯದ ತಕ್ಕಮಟ್ಟಿಗೆ ಅಭಿವೃದ್ಧಿ ಕಾಣುತ್ತಿದೆ ಎಂದರೆ ಅದಕ್ಕೆ ನಮ್ಮ ಮೂಲ ಮಹಾಪುರುಷರಾದ ಬುದ್ಧ, ಬಸವ, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಶಾಹು ಮಹಾರಾಜ, ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಒಳಗೊಂಡ ಹೋರಾಡಿದ ಅನೇಕ ಸಮತಾವಾದಿ ಮಹಾಪುರುಷರ ತ್ಯಾಗ ಮತ್ತು ಬಲಿದಾನದ ಇದರ ಹಿಂದಿದೆ. ನಾವು ಇಂದು ಪಡೆಯುತ್ತಿರುವ ಶಿಕ್ಷಣ ನಮ್ಮ ಮಹಾಪುರುಷರ ಹೋರಾಟದ ಫಲವಾಗಿ ಕೊಡುಗೆಯಾಗಿ ಸಿಕ್ಕಿದ್ದು, ಈ ಕಾರಣಕ್ಕೆ ನಾವು ಇಂದು ಪಡೆಯುವ ಶಿಕ್ಷಣದಿಂದ ನಮ್ಮನ್ನು ಒಳಗೊಂಡ ಇಡೀ ಶೋಷಿತ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸಬೇಕಿದೆ ಹಾಗೂ ಹೋರಾಡಬೇಕಿದೆ ಎಂದು ಶ್ರೀನಾಥ ಪೂಜಾರಿ ಹೇಳಿದರು.
ಈ ವೇಳೆ ಬೆಳಗಾವಿ ಜಿಲ್ಲಾ ಸಂಚಾಲಕ ಆರ್ದಶ ಗಸ್ತಿ ಮಾತನಾಡುತ್ತ, ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯಾದ್ಯಂತ ಇವತ್ತು ಎಲ್ಲ ವರ್ಗದ ವಿದ್ಯಾರ್ಥಿ ಯುವಜನರ ಶೈಕ್ಷಣಿಕ ಹಕ್ಕುಗಳ ಕಾಪಾಡಲು ಮತ್ತು ಪಡೆಯಲು ಹೋರಾಡುತ್ತಿದೆ. ಇಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿ ಯುವಜನರ ನಾಯಕತ್ವ ಕಾಣಬಹುದು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿಯೂ ವಿದ್ಯಾರ್ಥಿ ಯುವಜನರ ಹಕ್ಕುಗಳಿಗಾಗಿ ಹೋರಾಡಬೇಕಿದೆ. ಈಗಾಗಲೇ ಅನೇಕ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಅನುಭವಿಸುತ್ತಿದ್ದಾರೆ, ಅವರಿಗೆ ಅವರ ಶೈಕ್ಷಣಿಕ ಹಕ್ಕುಗಳನ್ನು ದೊರಕಿಸಿಕೊಂಡಲು ಒಂದಾಗಿ ಹೋರಾಡೋಣ ಎಂದರು.
ಈ ವೇಳೆ ಸಭೆಯಲ್ಲಿ ನೂತನವಾಗಿ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಜಿಲ್ಲಾ ಉಪಾಧ್ಯಕ್ಷರಾಗಿ ಸುದೀಪ್ ಐಹೊಳೆ, ಮಹಾಂತೇಶ್ ಸನದಿ, ಶಾಮ್ ಗಾಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಧರ್ ಮಾಂಗ ಮತ್ತು ಅಥಣಿ ತಾಲ್ಲೂಕು ಅಧ್ಯಕ್ಷರಾಗಿ ಅಕ್ಷಯ್ ಮ್ಯಾಗೇರಿ, ಉಪಾಧ್ಯಕ್ಷರಾಗಿ ರಾಹುಲ್ ಕಾಂಬಳೆ, ಬೆಳಗಾವಿ ತಾಲ್ಲೂಕು ಅಧ್ಯಕ್ಷರಾಗಿ ಶಿವು ಕಾಂಬಳೆ, ಉಪಾಧ್ಯಕ್ಷರಾಗಿ ಅರುಣ್ ಹರಿಜನ, ಚಿಕ್ಕೊಡಿ ತಾಲ್ಲೂಕ ಅಧ್ಯಕ್ಷರಾಗಿ ಅಕ್ಷಯ್ ಕಾಂಬಳೆ, ಉಪಾಧ್ಯಕ್ಷರಾಗಿ ರಂಜಿತ್ ಕಾಂಬಳೆ, ಕಾಗವಾಡ ತಾಲ್ಲೂಕು ಅಧ್ಯಕ್ಷರಾಗಿ ವಿನೋದ್ ಕಾಂಬಳೆ, ಉಪಾಧ್ಯಕ್ಷರಾಗಿ ಪವನ ಬಡಿಗೇರ್, ಹುಕ್ಕೇರಿ ತಾಲ್ಲೂಕು ಅಧ್ಯಕ್ಷರಾಗಿ ಅಮಿತ ಪೂಜಾರಿ, ಉಪಾಧ್ಯಕ್ಷರಾಗಿ ತುಷಾರ ಪೂಜಾರಿ, ನಿಪ್ಪಾಣಿ ತಾಲ್ಲೂಕು ಅಧ್ಯಕ್ಷರಾಗಿ ರಾಹುಲ್ ಜೈಕರ್, ಉಪಾಧ್ಯಕ್ಷರಾಗಿ ಶಿವಮ್ ಕಾಂಬಳೆ, ರಾಯಬಾಗ ತಾಲ್ಲೂಕು ಅಧ್ಯಕ್ಷರಾಗಿ ಓಂಕಾರ್ ವಡೆಯರ, ಉಪಾಧ್ಯಕ್ಷರಾಗಿ ಪ್ರವೀಣ ಗೆಣ್ಣೆನವರ. ಮೂಡಲಗಿ ತಾಲ್ಲೂಕ ಅಧ್ಯಕ್ಷರಾಗಿ ಪರಶುರಾಮ್ ಭಜಂತ್ರಿ ಉಪಾಧ್ಯಕ್ಷರಾಗಿ ಲಖನ ಕಿಚಡಿ. ಬೈಲಹೊಂಗಲ ತಾಲ್ಲೂಕ ಅಧ್ಯಕ್ಷರಾಗಿ ಸುರೇಶ ಲೆಂಕನಟ್ಟಿ ಉಪಾಧ್ಯಕ್ಷರಾಗಿ ವಿಜಯ ಕೊಟ್ಟೆಗೇರ ಅವರನ್ನು ಆಯ್ಕೆ ಮಾಡಲಾಯಿತು. ಕೊನೆಯಲ್ಲಿ ಆಯ್ಕೆಗೊಂಡ ಎಲ್ಲ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು..