ದಿವಂಗತ ಡಿ ದೇವರಾಜ ಅರಸು ರವರ 110 ಜನ್ಮ ದಿನಾಚರಣೆಯ ಸಂಭ್ರಮ..
ಸಾಮಾಜಿಕ ಕ್ರಾಂತಿಯ ಹರಿಕಾರ, ನೊಂದವರ ನಂದಾದೀಪ, ಸಾಧನೆಗಳ ಸರದಾರರೆಂದೇ ಹೆಸರಾದ ಅರಸುರವರು..
ಬಲಿಷ್ಠರ ವಿರೋಧದ ನಡುವೆಯೂ ಉಳುವವನೇ ಭೂಮಿಯ ಒಡೆಯ ಕಾಯ್ದೆ ಜಾರಿಗೆ ತಂದವರು.
ನಾಗೇಶ ಜೆ ನಾಯಕ, ಶಿಕ್ಷಕರು ಊಡಿಕೇರಿ ಪ್ರೌಢಶಾಲೆ..
ಬೆಳಗಾವಿ : ರಾಜ್ಯದ ಬಲಿಷ್ಠ ಸಮುದಾಯಗಳ ವಿರೋಧ ಹಾಗೂ ಒತ್ತಡದ ನಡುವೆಯೂ ಯಾವುದೇ ಲಾಭಿಗೂ ಮಣಿಯದೇ ರೈತರ ಪರವಾದ “ಉಳುವವನೇ ಭೂಮಿಯ ಒಡೆಯ” ಕಾಯ್ದೆ ಹಾಗೂ ಜೀತದಾಳು ಪದ್ಧತಿಯ ಪದ್ಧತಿಯನ್ನು ಜಾರಿಗೆ ತಂದವರು ದಿವಂಗತ ಡಿ ದೇವರಾಜ ಅರಸುರವರ ಎಂದು ಶಿಕ್ಷಕರಾದ ನಾಗೇಶ ಜೆ ನಾಯಕ ಹೇಳಿದ್ದಾರೆ.
ಬುಧವಾರ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಭಾಗಿತ್ವದಲ್ಲಿ ಜರುಗಿದ ದಿವಂಗತ ಡಿ ದೇವರಾಜ ಅರಸುರವರ 110ನೆಯ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಈ ಮೇಲಿನಂತೆ ಮಾತನಾಡಿದ್ದಾರೆ.

ಅರಸು ಅವರು, ತಬ್ಬಲಿ ಜಾತಿಗಳ ತಂದೆ, ದಿನ ದಲಿತರ ದೇವರು, ತುಳಿತಕ್ಕೆ ಒಳಗಾದವರನ್ನು ಎದೆಗೊತ್ತಿಕೊಂಡು ಸಂತೈಸಿದ ಅಂತಃಕರಣದ ಜೀವ, ಸ್ವಾಭಿಮಾನಿ ಆತ್ಮಾಭಿಮಾನಿ, ಮಹಾ ಮಾನವತಾವಾದಿಯಾಗಿ, ಸಮಾಜದ ಎಲ್ಲಾ ಕ್ಷೇತ್ರಗಳ ಜನರಿಗೂ ಯೋಗ್ಯವಾದ ಅವರ ಏಳಿಗೆಗಾಗಿ ಹೊಸ ಯೋಜನೆಗಳನ್ನು ತಂದವರು ಅರಸುರವರು, ಅವರ ಗುಣ ವರ್ಣನೆ ಮಾಡಲು ಶಬ್ದಗಳೇ ಸಾಲುವುದಿಲ್ಲ ಅಂತಹ ಸಾಧನೆ ಮಾಡಿದ ವ್ಯಕ್ತಿತ್ವ ಅರಸುರವರದ್ದು ಎಂದು ಹೇಳಿದ್ದಾರೆ.
ರಾಜಕೀಯ ಧೀಮಂತ, ಆರ್ಥಿಕ ತಜ್ಞ, ಸಮಾಜದ ಸುಧಾರಕ, ಕಲೆ ಶಿಕ್ಷಣ, ಸಾಂಸ್ಕೃತಿಕ ರಂಗಗಳಲ್ಲಿ ಅನೇಕ ಸಾಧನೆಗೈದ ಅರಸುರವರು ಕರ್ನಾಟಕದಲ್ಲಿ ಅತೀ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಜನಪರ ಆಡಳಿತ ನಡೆಸಿರುವ ಖ್ಯಾತಿ ಪಡೆದಿದ್ದಾರೆ ಎಂದರು.

1974ರಲ್ಲಿ ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆಯನ್ನು ಜಾರಿಗೆ ತಂದರು, ರಾಜ್ಯದಲ್ಲಿ ಇದು ರಕ್ತರಹಿತೆ ಕ್ರಾಂತಿಯಾಗಿ ಇದರಿಂದ ಸುಮಾರು
ಎಂಟು ಲಕ್ಷ ರೈತರಿಗೆ ಭೂಮಿಯ ಒಡೆತನ ದೊರಕಿದಂತಾಯಿತು, ಆಗ ರಾಜ್ಯದಲ್ಲಿ ಇದಕ್ಕೆ ಬಹಳ ವಿರೋಧ ಹಾಗೂ ಒತ್ತಡ ಬರುತ್ತವೆ ಅರಸುರವರು ಯಾವ ಲಾಭಿಗೂ ಮಣಿಯದೆ ಬಡವರ ಪರವಾಗಿ ಬಂದು, ದಿನ ದಲಿತ ಹಿಂದುಳಿದ ವರ್ಗದವರಿಗೆ ಆಸರೆಯಾಗಿ ನಿಂತರು.
ಹಿಂದುಳಿದ ವರ್ಗಗಳ ಸುಧಾರಣೆಗಾಗಿ ಹಾವನೂರ ಆಯೋಗವನ್ನು 1977ರಲ್ಲಿ ಜಾರಿಗೆ ತರುತ್ತಾರೆ, ಈ ಮೂಲಕ ಅನೇಕ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ, ಆರ್ಥಿಕ, ಸಾಮಾಜಿಕ, ರಾಜಕೀಯ ಬೆಳವಣಿಗೆಗೆ ಕಾರಣರಾದರು.

1973ರಲ್ಲಿ ವಿಶಾಲ ಮೈಸೂರು ರಾಜ್ಯವನ್ನು ಅಖಂಡ ಕರ್ನಾಟಕ ರಾಜ್ಯವನ್ನಾಗಿ ಮರುನಾಮಕರಣ ಮಾಡಿದ್ದು ಅರಸುರವರ. ಆವಾಗಲೇ ಕನ್ನಡವನ್ನು ಆಡಳಿತ ಭಾಷೆಯಾಗಿ ಮಾಡಿದ್ದು ಇವರ ಸಾಧನೆ. ವಸತಿ ಶಾಲೆ, ವಿದ್ಯಾರ್ಥಿವೇತನ, ಹೀಗೆ ಅವರ ಎಲ್ಲಾ ಯೋಜನೆಗಳು ಇಂದಿಗೂ ಮುಂದುವರೆದಿವೆ.
ಇಂದು ಹಿಂದುಳಿದ ವರ್ಗಗಳ ವಿಧ್ಯಾರ್ಥಿಗಳಿಗೆ ವಸತಿ ಶಾಲೆಗಳಲ್ಲಿ ಇಷ್ಟೊಂದು ಸೌಲಭ್ಯಗಳು ಸಿಗುತ್ತಿವೆ ಎಂದರೆ ಅದು ಅರಸು ಅವರು ಆಗ ಜಾರಿಗೆ ತಂದ ಯೋಜನೆಗಳ ಫಲ ಹಾಗೂ ಕನಸು ಎಂದಿದ್ದಾರೆ.
ರಕ್ತ ರಹಿತವಾದ ಸಾಮಾಜಿಕ ಕ್ರಾಂತಿ ಎಂದರೆ ಅದು ಅರಸುರವರ ಮಾಡಿದ ಸಾಮಾಜಿಕ ಸುಧಾರಣೆಯಾಗಿವೆ, ಜೀತ ಪದ್ಧತಿಗಳ ನಿರ್ಮೂಲನೆಯಿಂದ ಸಾವಿರಾರು ಜೀತದಾಳುಗಳ ಮುಕ್ತಿ, ಹೆಣ್ಣು ಮಕ್ಕಳ ಶಿಕ್ಷಣ, ಅಸ್ಪೃಶ್ಯತೆಯ ನಿವಾರಣೆಗಾಗಿ ಕೈಗೊಂಡ ಯೋಜನೆಗಳು ಪ್ರಸಕ್ತ ಸಮಾಜದ ಮೈಲಿಗಲ್ಲಾಗಿವೆ ಎಂದಿದ್ದಾರೆ.
ನನ್ನ ರಾಜಕೀಯ ಬದುಕಿಗೆ ಅರಸು ಅವರ ಜೀವನವೇ ಪ್ರಥಮ ಸ್ಥಾನದಲ್ಲಿ ನಿಲ್ಲುವ ಸ್ಪೂರ್ತಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿದ್ದು ಅರಸುರವರ ಸುದೀರ್ಘ ರಾಜಕೀಯ ಸಾಧನೆಗೆ ನಿದರ್ಶನವಾಗಿದೆ.

ಇಂದು ಸಮಕಾಲೀನ ಸಮಾಜದ ಯುವಪೀಳಿಗೆ ಅರಸುರವರ ಬಹಳ ವಿಚಾರಗಳನ್ನು ಮೈಗೂಡಿಸಿಕೊಂಡು ಹೊಗುವದು ತುಂಬಾ ಅವಶ್ಯಕತೆ ಇದೆ, ಅವರು ನಡೆದ ಮಾರ್ಗದಲ್ಲಿ ನಾವು ಹೋಗೋಣ, ಸಮಾಜದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ, ದಿವಂಗತ ದೇವರಾಜ ಅರಸು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ ಎಂಬ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಹೊನಕೇರಿ, ಡಿಎಸ್ಪಿ ಸದಾಶಿವ ಕಟ್ಟಿಮನಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಾಮನಗೌಡ ಕಣ್ಣೊಳ್ಳಿ, ಪಾಲಿಕೆ ಆಯುಕ್ತರಾದ ಬಿ ಶುಭ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಿ ಪಂ ಉಪ ಕಾರ್ಯದರ್ಶಿ ಬಂಗಾರಪ್ಪನವರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಹರ್ಷಾ ಎಸ್, ಇಲಾಖೆಯ ತಾಲೂಕು ಅಧಿಕಾರಿಗಳು, ವಿಸ್ತರಣಾಧಿಕಾರಿಗಳು, ನಿಲಯ ಪಾಲಕರು, ಸಿಬ್ಬಂದಿಗಳು ಭಾಗಿಯಾಗಿದ್ದು, ಗಣ್ಯರನ್ನು ಬೆಳಗಾವಿ ತಾಲೂಕು ಅಧಿಕಾರಿಗಳಾದ ಮರಿಗೌಡರ ಅವರು ಸ್ವಾಗತ ಮಾಡಿದರೆ, ಶ್ರೀಕಾಂತ ದೇವಲತ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..