ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕೇಂದ್ರ ಬಿಜೆಪಿ ಸರ್ಕಾರವೇ ಕಾರಣ..
ಪಾಕಿಸ್ತಾನದ ವಿರುದ್ಧ ಯುದ್ಧ ಬೇಡವೆಂದು ಹೇಳಿಲ್ಲ..
ಸತ್ಯ ಜೀರ್ಣಿಸಿಕೊಳ್ಳದ ಬಿಜೆಪಿಯವರಿಂದ ನಮ್ಮ ಸಮಾವೇಶದಲ್ಲಿ ಗಲಾಟೆ..
ಸಿ ಎಂ ಸಿದ್ದರಾಮಯ್ಯ..
ಬೆಳಗಾವಿ : ದೇಶದ ಜನತೆ ಇಂದು ಬೆಲೆಯೇರಿಕೆಯಿಂದ ಕಷ್ಟ ಪಡುತ್ತಿದ್ದಾರೆ ಎಂದರೆ ಅದಕ್ಕೆ ಪ್ರಮುಖ ಕಾರಣ ಕೇಂದ್ರ ಬಿಜೆಪಿ ಸರ್ಕಾರ, ಮೋದಿ ಹಾಗೂ ಅಮಿತ್ ಶಾ. ಶ್ರೀಮಂತರಿಗೆ, ಕಾರ್ಪೊರೇಟರ್ ಉದ್ದಿಮೆದಾರರಿಗೆ ಅನುಕೂಲ ಮಾಡಿ, ಜನಸಾಮಾನ್ಯರ ಮೇಲೆ ವಿವಿಧ ರೀತಿಯ ತೆರಿಗೆ, ಬೆಲೆಯೇರಿಕೆಯಂತಹ ಬಾರವನ್ನು ಹೇರಿದ್ದು ಬಿಜೆಪಿಯವರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಸೋಮವಾರ ನಗರದ ಸಿಪಿಎಡ್ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯೋಜನೆಗೊಂಡಿರುವ “ಸಂವಿಧಾನ ರಕ್ಷಿಸಿ ದೇಶ ಉಳಿಸಿ” ಹಾಗೂ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ನಡೆದ ಬ್ರಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ಇಂದು ಬೆಳಗಾವಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ, ಬಿಜೆಪಿಯವರು ತಮ್ಮ ತಪ್ಪು ಮುಚ್ಚಿಕೊಳ್ಳಲು ರಾಜ್ಯದಲ್ಲಿ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 11 ವರ್ಷಗಳಾಗಿವೆ, ಅದಕ್ಕಿಂತ ಮೊದಲು ಅಗತ್ಯ ವಸ್ತುಗಳ ಬೆಲೆ ಎಷ್ಟಿತ್ತು, ಇಗೆಷ್ಟು ಆಗಿದೆ ಎಂಬುದನ್ನು ತಮಗೆ ಅರ್ಥಮಾಡಿಸಲೆಂದೇ ಇಂತಹ ಸಮಾವೇಶ ಮಾಡುತ್ತಿದ್ದೇವೆ ಎಂದಿದ್ದಾರೆ.

ಬಿಜೆಪಿಯವರು ನಾಡಿನ ಜನತೆಗೆ ಟೋಪಿ ಹಾಕಿ ಮೋಸ ಮಾಡುವ ಕಾರ್ಯ ಮಾಡುತ್ತಿದ್ದಾರೆ ಇದನ್ನು ನಾಡಿನ ಜನತೆ ತಿಳಿಯಬೇಕಾಗಿದೆ, ಸಮಾಜದಲ್ಲಿ ಒಡಕನ್ನು ತರುತ್ತಿರುವ, ಶ್ರೀಮಂತರ, ಉದ್ದಿಮೆದಾರರ, ಕಾರ್ಪೊರೇಟರ ವ್ಯಾಪಾರಿಗಳ ಪರವಾಗಿ ಇರುವ ಕೇಂದ್ರ ಸರ್ಕಾರದ ನಿಜ ಬಣ್ಣ ಜನರಿಗೆ ತಿಳಿಯಬೇಕಾಗಿದೆ.
ಬಿಜೆಪಿಯವರ ಸುಳ್ಳಿಗೆ ಎದಿರೇಟು ನೀಡಲು, ಜನರಿಗೆ ಸತ್ಯ ತಿಳಿಸಲು ಈ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದಿದ್ದಾರೆ.
ಬಿಜೆಪಿಯವರೆ ನಿಮಗೆ ಮಾನ ಮರ್ಯಾದೆ ಇದ್ದಿದ್ದರೆ, ನೀವು ರಾಜ್ಯದಲ್ಲಿ ಜನಾಕ್ರೋಶ ಕಾರ್ಯಕ್ರಮ ಮಾಡುತ್ತಿರಲಿಲ್ಲ, ಬೆಲೆಯೇರಿಕೆಗೆ ಯಾರು ಕಾರಣ? ಇಂದು ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದ್ದು ನರೇಂದ್ರ ಮೋದಿ, ಬಿಜೆಪಿ ಹಾಗೂ ಅಮಿತ್ ಶಾ ಅವರಿಂದ ಅಂತ ಎಲ್ಲರಿಗೂ ಗೊತ್ತು, ನೀವಿಲ್ಲಿ ಜನಾಕ್ರೋಶ ಯಾತ್ರೆ ಮಾಡುತ್ತಿದ್ದೀರಾ? ಕಳೆದ ಬಾರಿ ನಿಮ್ಮ ದುರಾಡಳಿತಕ್ಕೆ ಬೇಸತ್ತು ನಾಡಿನ ಜನತೆ ನಮಗೆ 2023ರಲ್ಲಿ ಅಧಿಕಾರ ನೀಡಿದ್ದಾರೆ, ಮತ್ತೆ 2028 ರಲ್ಲಿಯೂ ಜನರ ಸಂಪೂರ್ಣ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರುತ್ತೇವೆ, ನೀವು ರಾಜ್ಯದಲ್ಲಿ ಯಾವಾಗಲೂ ಅಡ್ಡದಾರಿಯಲ್ಲಿ ಅಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದವರು ಎಂದು ವಾಗ್ದಾಳಿ ನಡೆಸಿದ್ದಾರೆ.
ನಿಮ್ಮದು ಸಮಾಜವನ್ನು ಒಂದುಗೂಡಿಸುವ ಪಕ್ಷ ಅಲ್ಲ, ಸಮಾಜ ಒಡೆಯುವ ಪಕ್ಷ, ಅಲ್ಪಸಂಖ್ಯಾತರ, ದಲಿತರ ಹಿಂದುಳಿದವರನ್ನು ಹತ್ತಿಕ್ಕುವ ಪಕ್ಷ, ಇಂದು ನಿಮಗೆ ಸತ್ಯವನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ, ಅದಕ್ಕಾಗಿ ಇಂದು ಇಲ್ಲಿ
ಸಭೆಯನ್ನು ಹಾಳು ಮಾಡುವ ಪ್ರಯತ್ನ ಮಾಡುತ್ತಿರುವ ನಿಮಗೆ ನಾಚಿಕೆ ಆಗುವುದಿಲ್ಲವೇ? ನಾವು ಇದಕ್ಕೆಲ್ಲ ಬಗ್ಗೋದಿಲ್ಲ, ಇನ್ನು ಇಂತಹ ಹತ್ತು ಕಾರ್ಯಕ್ರಮ ಮಾಡುತ್ತೇವೆ ಎಂದಿದ್ದಾರೆ.

ನೀವು ಯಾವತ್ತಾದರೂ ಸ್ವತಂತ್ರ ಹೋರಾಟದಲ್ಲಿ ಭಾಗಿಯಾಗಿದ್ದೀರಾ, ಜೈಲಿಗೆ ಹೋಗಿದ್ದೀರಾ, ಒಂದಾದರೂ ನಿದರ್ಶನ ಹೇಳಿ, ಈಗೆಲ್ಲಾ ದೇಶಪ್ರೇಮದ ಮಾತು ಹೇಗೆ ಆಡುತ್ತಿರಾ? ಎಂದು ಪ್ರಶ್ನೆ ಮಾಡಿದರು, ಇಂದು ಸಂವಿಧಾನಕ್ಕೆ ದಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೀರಾ ಅದಕ್ಕೆ ನಾವು ಯಾವತ್ತೂ ಅವಕಾಶ ಕೊಡುವುದಿಲ್ಲ ಎಂದಿದ್ದಾರೆ.
ಕಾಶ್ಮೀರದಲ್ಲಿ ಮೊನ್ನೆ ಉಗ್ರರ ದಾಳಿಯಾದಾಗ ಎಷ್ಟೋ ಜೀವಹಾನಿಯಾದವು, ಇದು ನಿಮ್ಮ ಭದ್ರತಾ ವೈಫಲ್ಯವಲ್ಲವೇ, ಸರ್ಕಾರದ ವೈಪಲ್ಯವಲ್ಲವೇ, ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ ಎಂದು ನಾನು ಹೇಳಿಲ್ಲ, ಮಾಧ್ಯಮದವರು ಕೇಳಿದ ಪ್ರಶ್ನೆಗೆ ಯುದ್ಧ ಅನಿವಾರ್ಯ ಇಲ್ಲ ಎಂದಿದ್ದೇನೆ, ಅಂತಹ ಪರಿಸ್ಥಿತಿ, ಅವಶ್ಯಕತೆ ಇದ್ದಾಗ ಯುದ್ದಕ್ಕೆ ನಾವು ಯಾವಾಗಲೂ ಸಿದ್ದ, ತಮ್ಮ ವೈಫಲ್ಯ, ಭದ್ರತಾ ದೋಷ ಮುಚ್ಚಿಡಲು ಇವತ್ತು ನನ್ನ ಮೇಲೆ ಗೂಬೆ ಕುರಿಸುವ ಕೆಲಸ ನಡೆಯುತ್ತಿದೆ.
ದೇಶದ ಭದ್ರತೆಗೆ, ಸ್ವಾತಂತ್ರ್ಯಕ್ಕೆ, ಏಕತೆಗೆ ದಕ್ಕೆ ಆದಾಗ ನಾವೆಲ್ಲಾ ಸೇರಿ ಯುದ್ದಮಾಡೋಣ, ದೇಶಕ್ಕಾಗಿ ನಾವು ಎಂತಹ ಹೋರಾಟಕ್ಕೂ ಸಿದ್ದ, ಹೋರಾಟ ಮಾಡಿಯೇ ಕಾಂಗ್ರೆಸ್ಸಿಗರು ದೇಶಕ್ಕೆ ಸ್ವಾತಂತ್ರ ತಂದಿರುವೆವು, ನಮಗೆ ದೇಶ ಮೊದಲು, ದೇಶಕ್ಕೆ ಕುತ್ತು ಬಂದಾಗ ಯುದ್ಧ ಮಾಡೇ ಮಾಡುತ್ತೇವೆ, ಯುದ್ಧ ಬೇಡ ಎಂದು ನಾನು ಹೇಳಿಲ್ಲ, ನನ್ನ ಮಾತಿನ ದಾಟಿ ಬೇರೆ ಮಾಡಿ ತೋರಿಸಿದ್ದು ಬೇಸರ ಎಂದಿದ್ದಾರೆ.

ಪ್ರಕಾಶ್ ಬಸಪ್ಪ ಕುರಗುಂದ.