ದೊಡ್ಮನೆ ಬಗ್ಗೆ ನಟ ದರ್ಶನಗೆ ಯಾವಾಗಲೂ ಗೌರವವಿದೆ

ದೊಡ್ಮನೆ ಬಗ್ಗೆ ನಟ ದರ್ಶನಗೆ ಯಾವಾಗಲೂ ಗೌರವವಿದೆ..

ಅಪ್ಪು ಹಾಗೂ ದರ್ಶನ ನಡುವೆ ಸರಳತೆಯ ಆತ್ಮೀಯ ಸ್ನೇಹವಿತ್ತು..

ಬೆಳಗಾವಿ : ಕನ್ನಡ ಚಿತ್ರರಂಗದ ದೊಡ್ಮನೆ ಎಂದೇ ಕರೆಯಲ್ಪಡುವ ಡಾ ರಾಜ್ ಮನೆತನದ ಜೊತೆ ಕಳೆದ ಕೆಲ ದಶಕಗಳಿಂದ ತೂಗುದೀಪ ಕುಟುಂಬದ ಅತ್ಯಂತ ಆತ್ಮೀಯತೆಯ ಭಾಂದವ್ಯವಿತ್ತು, ಅದು ಪುನೀತ್ ದರ್ಶನ ಅವರ ಕಾಲಕ್ಕೂ ಮುಂದುವರೆದುಕೊಂಡು ಬಂದಿತ್ತು ಎಂದು ಬೆಳಗಾವಿಯ ರಾಜ್ ಕುಟುಂಬದ ಅಭಿಮಾನಿ ರವಿ ಕಂಬಾರ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇಂದು ಹಾಗೆ ಬೇಟಿಯಾದಾಗ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುತ್ತಾ, ತಾವು ಕಂಡುಕೊಂಡ ಹಿಂದಿನ ಕೆಲ ವಿಷಯಗಳನ್ನು ಹಂಚಿಕೊಂಡ ರವಿ ಕಂಬಾರ ಅವರು, ಪುನೀತ್ ಹಾಗೂ ದರ್ಶನ ಅವರು ಕನ್ನಡ ಚಿತ್ರರಂಗದ ಜನಪ್ರಿಯ ಸ್ಟಾರ್ ಗಳಾಗಿ ಕೋಟಿಗಟ್ಟಲೇ ಅಭಿಮಾನಿಗಳನ್ನು ಪಡೆದಿದ್ದು, ಅಭಿಮಾನಿಗಳ ಹೃದಯ ಸಾಮ್ರಾಜ್ಯದಲ್ಲಿ ಶಾಶ್ವತವಾದ ಸ್ಥಾನ ಪಡೆದಿದ್ದಾರೆ, ಕೆಲವು ಸಂದರ್ಭಗಳಲ್ಲಿ ಅವರ ಸ್ನೇಹದ ಬಗ್ಗೆ ಯಾರೇ ಅಪಪ್ರಚಾರ ಆಗುವಂತ ಸನ್ನಿವೇಶ ಸೃಷ್ಟಿಸಿದರೂ ಅವೆಲ್ಲಾ ಕೃತಕವಾಗಿವೆ, ಅದೇ ರೀತಿ ಕೆಲ ಸಿನಿಮಾ ಸಂಭಾಷಣೆಗಳು ಕೂಡ ಆ ಚಿತ್ರದ ನಿರ್ದೇಶಕ ಕಥೆಗೆ ಹೊಂದುವಂತೆ ಬರೆದಿರಬಹುದು, ಆದರೆ ಈ ನಟರ ಸ್ನೇಹ ಗೌರವ ಹಾಗೂ ಸರಳತೆಯಿಂದ ಕೂಡಿದ ಸ್ನೇಹವಾಗಿತ್ತು ಎಂದಿದ್ದಾರೆ.

ದರ್ಶನ ಹಾಗೂ ಪುನೀತ್ ಅವರ ತಂದೆಯವರು ಕನ್ನಡ ಚಿತ್ರರಂಗದ ಅಣ್ಣ ತಮ್ಮಂದಿರಂತೆ ಬಾಳಿದ್ದರು, ಡಾ ರಾಜ್ ಅಭಿನಯಿಸಿದ ಹಾಗೂ ಪಾರ್ವತಮ್ಮ ನಿರ್ಮಾಣದ ಪ್ರತಿ ಚಿತ್ರದಲ್ಲಿಯೂ ತೂಗುದೀಪ ಶ್ರೀನಿವಾಸ ಅವರಿಗೆ ಮಹತ್ವದ ಪಾತ್ರ ಇದ್ದೇ ಇರುತ್ತಿತ್ತು, ತೂಗುದೀಪ ಶ್ರೀನಿವಾಸ ಅವರು ಕೂಡ ಡಾ ರಾಜ್ ಕುಟುಂಬದ ಒಬ್ಬ ಸದಸ್ಯರಂತೆ ಇದ್ದರು ಎಂದಿದ್ದಾರೆ.

ಇನ್ನು ಪುನೀತ್ ಹಾಗೂ ದರ್ಶನ ನಾಯಕ ನಟರಾದ ನಂತರ ಅವರವರ ತಂದೆಗಳಂತೆ ಇವರ ಸ್ನೇಹವು ಮುಂದುವರೆದಿದ್ದಕ್ಕೆ ಅನೇಕ ನಿದರ್ಶನಗಳಿವೆ, ಕನ್ನಡ ಚಿತ್ರರಂಗದ ಅಮೃತ ಮಹೋತ್ಸವದಲ್ಲಿ ಪುನೀತ್ ಹಾಗೂ ದರ್ಶನ ಅವರು ಅರ್ಜುನ ಹಾಗೂ ಬಬ್ರುವಾಹನರಾಗಿ ನೀಡಿದ (ಯಾರು ತಿಳಿಯರು ನಿನ್ನ ಬುಜಭಲದ ಪರಾಕ್ರಮ ಹಾಡಿನ) ಅಭಿನಯ ಎಲ್ಲರ ಮನಸೆಳೆದಿತ್ತು, ಅದೇ ರೀತಿ ಪುನೀತ ಅವರ ಸ್ನೇಹಕ್ಕಾಗಿ “ಅರಸು” ಎಂಬ ಅವರ ಚಿತ್ರದಲ್ಲಿ ದರ್ಶನ, ಅಪ್ಪು ಅವರ ಸ್ನೇಹಿತರಾಗಿ ಅದ್ಬುತ ಅಭಿನಯ ನೀಡಿದ್ದನ್ನು ಯಾರು ಮರೆಯುವಂತಿಲ್ಲ.

ಡಾ ರಾಜಕುಮಾರ ಅವರು ಮಾಡಿದ ಪಾತ್ರಗಳ ಬಗ್ಗೆ, ಶಿವಣ್ಣರ ಹಾಗೂ ಅಪ್ಪು ಅವರ ಬಗ್ಗೆ ಮಾದ್ಯಮಗಳ ಮುಂದೆ ಹಾಗೂ ಸಂದರ್ಶನಗಳಲ್ಲಿ ದರ್ಶನ ಅವರು ಸಾಕಷ್ಟು ಸಲ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ, ನಮ್ಮ ತಂದೆ ಹಾಗೂ ನಾವೆಲ್ಲಾ ದೊಡ್ಮನೆಯಿಂದಲೇ ಬಂದವರು, ಕೆಲವೊಂದು ಸಲ ಮಾಧ್ಯಮದವರು ಪ್ರಶ್ನೆಗೆ ಉತ್ತರಿಸುತ್ತಾ, “ಎಷ್ಟೇ ವರ್ಷವಾದರೂ ದೊಡ್ಮನೆ ಯಾವತ್ತಿದ್ದರೂ ದೊಡ್ಮನೆನೇ” ನಾವು ಅದರ ಹುಲ್ಲ ಕಡ್ಡಿಯೂ ಅಲ್ಲಾ, ಎಂದು ಅಭಿಮಾನದ ಅರ್ಥದಲ್ಲಿ ಮಾತಾಡಿದ್ದರು ಎಂದಿದ್ದಾರೆ.

ಇನ್ನು ದರ್ಶನ ಅವರ ಸ್ನೇಹಿತ ವಿನೋದ್ ಪ್ರಭಾಕರ ಒಂದು ಸಂದರ್ಶನದಲ್ಲಿ ಮಾತನಾಡುತ್ತಾ, ದರ್ಶನ ಸರ್ ಅವರಿಗೆ ಪುನೀತ್ ಸರ್ ಕಂಡರೆ ಅಪಾರವಾದ ಗೌರವ, ಅಭಿಮಾನ ಹಾಗೂ ಪ್ರೀತಿ ಇತ್ತು, ನಾವು ದರ್ಶನ ಸರ್ ಸೇರಿದಾಗ ಪುನೀತ ಅವರ ಬಗ್ಗೆ ಬಹಳ ಮೆಚ್ಚುಗೆಯಿಂದ ಮಾತನಾಡುತ್ತಿದ್ದರು, ಪುನೀತ್ ಸರ್ ನಿಧನರಾದ ನಂತರ ಅವರಿಬ್ಬರ ಒಡನಾಟವನ್ನು ನೆನೆದು ದರ್ಶನ ಅವರು ತುಂಬಾ ಅತ್ತಿದ್ದರು ಎಂದು ಹೇಳಿದ್ದುಂಟು ಎಂದಿದ್ದಾರೆ.

ಇನ್ನು ದೊಡ್ಮನೆ ಕುಟುಂಬದ ನಿರ್ದೇಶಕ ಹಾಗೂ ನಿರ್ಮಾಪಕ ಮಿಲನ ಪ್ರಕಾಶ್ ಅವರಿಗೆ ಎರಡೆರಡು ಸಲ ದರ್ಶನ ಅವರು ತಮ್ಮ ಕಾಲ್ ಸೀಟ್ ಕೊಟ್ಟು ಆ ಮನೆತನದ ಮೇಲಿನ ತಮ್ಮ ಕಾಳಜಿಯನ್ನು ಮೆರೆದಿದ್ದಾರೆ, ರಾಜಕುಮಾರ ಸಂಬಂಧಿ ಮಿಲನ ಪ್ರಕಾಶ್ ಖುಷಿ, ರಿಷಿ, ಶ್ರೀ, ಮಿಲನ, ವಂಶಿ ಸಿನೆಮಾ ಮಾಡಿದ್ದು, ದರ್ಶನ ಅವರ ತಾರಕ್ ಕೂಡಾ ನಿರ್ದೇಶಿಸಿ ನಿರ್ಮಿಸಿದ್ದರು, ಈಗ ಮುಂಬರುವ ದರ್ಶನ ಅವರ ಬಹುನಿರೀಕ್ಷಿತ “ಡೆವಿಲ್” ಚಿತ್ರವೂ ಕೂಡಾ ರಾಜಕುಮಾರ ಕುಟುಂಬದ ನಿರ್ಮಾಪಕ ನಿರ್ದೇಶಕರಾದ ಮಿಲನ ಪ್ರಕಾಶ್ ಅವರದ್ದೇ ಆಗಿದೆ ಎಂಬ ಮಾಹಿತಿ ನೀಡಿದ್ದಾರೆ.

ತೆರೆಯ ಮೇಲೆ ಅವರ ಒಡನಾಟ ಅಷ್ಟೊಂದು ಕಾಣದಿದ್ದರೂ ದರ್ಶನ ಹಾಗೂ ಪುನೀತರ ಸ್ನೇಹದ ಬಾಂಧವ್ಯ ಅತೀ ಆತ್ಮೀಯತೆಯಿಂದ ಕೂಡಿತ್ತು, ಆದರೆ ಕೆಲವರು ಉದ್ದೇಶಪೂರ್ವಕವಾಗಿ ಕೆಲ ಊಹಾಪೋಹಗಳನ್ನು ನಟರ ಮಧ್ಯ ತರುತ್ತಾರೆ, ಅದನ್ನೇ ನಿಜವೆಂದು ಕೆಲವರು ನಂಬುವದುಂಟು, ಅದೆಲ್ಲವನ್ನೂ ಮೀರಿದ್ದು ದರ್ಶನ ಹಾಗೂ ಅಪ್ಪು ಅವರ ನಡುವಿನ ಆತ್ಮೀಯತೆಯ ಸ್ನೇಹವಾಗಿತ್ತು ಎಂಬ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ.