ಪಾಲಿಕೆಯಲ್ಲಿ ಆಂತರಿಕ ವರ್ಗಾವಣೆಯ ಗ್ರಹಣ ಹಿಡಿದಿದೆಯಾ??
ವರ್ಗಾವಣೆಗೆ ಪೇಮಸ್ ಆಗುತ್ತಿರುವ ಬೆಳಗಾವಿ ಪಾಲಿಕೆ..
ಆಡಳಿತ ಸುಧಾರಣೆಯೋ, ಸಿಬ್ಬಂದಿಗೆ ಕಿರುಕುಳವೋ??
ಬೆಳಗಾವಿ : ಬೆಳಗಾವಿ ಪಾಲಿಕೆ ಇತ್ತೀಚೆಗೆ ತನ್ನ ಕೆಲ ಆಡಳಿತ ನಿಲುವುಗಳಿಂದ ಪದೇ ಪದೇ ಪೇಚಿಗೆ ಸಿಲುಕಿ, ಆಡಿಕೊಳ್ಳುವವರ ಬಾಯಿಗೆ ಆಹಾರವಾಗಿದೆ, ಇದರಿಂದ ಹಿಂದೆ ಪಾಲಿಕೆಯ ಇದ್ದ ಗೌರವವೂ ಕೂಡಾ ಹಾಳಾಗುತ್ತಿದೆ ಎಂಬ ಭಾವನೆ ಮೂಡುತ್ತಿದೆ..
ಇತ್ತೀಚೆಗೆ ಪದೇ ಪದೇ ಆಂತರಿಕ ವರ್ಗಾವಣೆ ಆಗುತ್ತಿದ್ದು, ಕೆಲ ದಿನಗಳ ಹಿಂದೆ ಇದರ ಬಗ್ಗೆ ಸುದ್ದಿ ಮಾಡಿ, ಹೀಗಾದರೆ ಸಿಬ್ಬಂದಿಗಳು ನೆಮ್ಮದಿಯಿಂದ ಕಾರ್ಯ ಮಾಡುವ ವಾತಾವರಣ ಕಳೆದುಹೋಗುತ್ತದೆ, ಜವಾಬ್ದಾರಿ ಸ್ಥಾನಗಳಿಗೆ ಹೊಸಬರನ್ನು ಹಾಗೂ ಅರ್ಹತೆ ಇರುವವರನ್ನು ಕೆಲಸವಿಲ್ಲದ ಬೇರೆ ಕಡೆಗೆ ಆಂತರಿಕ ವರ್ಗಾವಣೆ ಮಾಡುವುದರಿಂದ ಆಡಳಿತ ಯಂತ್ರ ಹಳಿತಪ್ಪುತ್ತದೆ, ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಕ್ಕೆ ತೊಂದರೆ ಆಗುತ್ತದೆ, ಜೊತೆಗೆ ಪಾಲಿಕೆಯಲ್ಲಿ ಪ್ರಗತಿ ಕೂಡಾ ಕುಂಠಿತ ಆಗುತ್ತದೆ ಎಂಬುದಾಗಿ ಸುದ್ದಿ ಮಾಡಲಾಗಿತ್ತು..
ಆದರೆ ಇದರ ಮಧ್ಯೆಯೇ ಪಾಲಿಕೆಯ ಅಧಿಕಾರಿಗಳು ಮತ್ತೆ ಸೋಮವಾರ 14/10/2024ರಂದು ಕಂದಾಯ ವಿಭಾಗದ 12 ಸಿಬ್ಬಂದಿಯನ್ನು ಆಂತರಿಕ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಯಾವ ಉದೇಶ ಇಟ್ಟುಕೊಂಡು ಪದೇ ಪದೇ ಈ ಆಂತರಿಕ ವರ್ಗಾವಣೆ ಮಾಡುತ್ತಿದ್ದರೋ ಆ ದೇವರೇ ಬಲ್ಲ, ಒಬ್ಬ ಆಯುಕ್ತರಾಗಲಿ ಅಥವಾ ಉಪ ಆಯುಕ್ತರಾಗಲಿ ಪಾಲಿಕೆಯ ಹಿತದೃಷ್ಟಿಯಿಂದ, ಅಭಿವೃದ್ಧಿ ದೃಷ್ಟಿಕೋನ ಇಟ್ಟುಕೊಂಡು ಬದಲಾವಣೆಗೆ ಮುಂದಾದರೆ ಸಮಸ್ಯೆಯಿಲ್ಲ, ಆದರೆ ಈಗಾಗಲೇ ಹಲವು ಕಳಪೆ ಕಾರ್ಯ ಮಾಡಿರುವ ಆರೋಪ ಇರುವವರಿಗೆ ಹೆಚ್ಚಿನ ಜವಾಬ್ದಾರಿ ನೀಡುವದು, ನಿಯೋಜನೆ ಆಗಿ ಮೂರ್ನಾಲ್ಕು ತಿಂಗಳಲ್ಲಿ ಮತ್ತೆ ಎತ್ತಂಗಡಿ, ಅರ್ಹ ಕಂದಾಯ ಸಿಬ್ಬಂದಿಗಳನ್ನು ಬೇರೆ ಕಡೆಗೆ ನಿಯೋಜಿಸಿ ಅವರ ಕಾರ್ಯಕ್ಷಮತೆ ಕಡಿಮೆ ಮಾಡುವುದರಿಂದ ಪಾಲಿಕೆಯ ಆಡಳಿತ ಹೇಗೆ ಸುಧಾರಿಸುತ್ತದೆ ಎಂಬುದು ಸಾರ್ವಜನಿಕರ ಸಂಕಟವಾಗಿದೆ..
ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಕಡೆ ಗಮನ ಹರಿಸಿ ಪಾಲಿಕೆಯ ಪರಿಸ್ಥಿತಿಯನ್ನು ಸುಧಾರಿಸಬೇಕಾಗಿದೆ, ಇಲ್ಲವಾದರೆ ಪಾಲಿಕೆಯ ಆಡಳಿತ ಮತ್ತಷ್ಟು ಕ್ಲಿಷ್ಟಕರವಾಗುತ್ತದೆ, ಕೇಳಬೇಕಾದ ಜನಪ್ರತಿನಿಧಿಗಳು ಕೂಡಾ ಸುಮ್ಮನೆ ಇರುವದರಿಂದ ಅಧಿಕಾರಿಗಳ ನಿಲುವಿಗೆ ಅಂಕೆ ಇಲ್ಲದಂತಾಗಿದೆ, ತಮ್ಮಿಷ್ಟದಂತೆಯೋ ಅಥವಾ ಬೇರೆಯವರ ಒತ್ತಡಕ್ಕೂ ಈ ರೀತಿಯ ಆಂತರಿಕ ವರ್ಗಾವಣೆಗಳು ನಡೆಯುತ್ತಿದ್ದು, ಇದರ ನೇರ ಪರಿಣಾಮ ಪಾಲಿಕೆಯ ಸಿಬ್ಬಂದಿಗಳ ಮೇಲೆ ಆಗುತ್ತಿದೆ ಎಂಬ ಮಾತಿದೆ, ಹೀಗೆ ಮುಂದುವರೆದರೆ ಮುಂದೆ ಪಾಲಿಕೆಯ ಕೆಲಸ ಕಾರ್ಯ ಹೇಗೆ ಸಾಗುತ್ತವೆಯೋ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..