ಪಾಲಿಕೆಯ ಒಬ್ಬರೇ ಅಧಿಕಾರಿಯ ವಿರುದ್ಧ ಹಠಕ್ಕೆ ಬಿದ್ದಿತಾ ಬಿಜೆಪಿಯ ಆಡಳಿತ ಪಕ್ಷ??

ಪಾಲಿಕೆಯ ಒಬ್ಬರೇ ಅಧಿಕಾರಿಯ ವಿರುದ್ಧ ಹಠಕ್ಕೆ ಬಿದ್ದಿತಾ ಬಿಜೆಪಿಯ ಆಡಳಿತ ಪಕ್ಷ??

ಇಡೀ ಕಂದಾಯ ವಿಭಾಗ ಮಾಡುವ ಕೆಲಸಕ್ಕೆ ಒಬ್ಬರೇ ಗುರಿಯಾದರೆ??

ಶೇ 55 ರಷ್ಟಿದ್ದ ಆಸ್ತಿ ತೆರಿಗೆಯನ್ನು ಶೇ 80ರ ಸಮೀಪ ತಲುಪಿಸಿದ ಅಧಿಕಾರಿ ಮೇಲೆಯೇ ಆರೋಪ..

ಉಪ ಆಯುಕ್ತರ ಮೇಲಿನ ಆರೋಪ ಅವರ ಮೇಲಿನ ಅಧಿಕಾರಿ ಮೇಲೆ ಯಾಕಿಲ್ಲ??

ಬೆಳಗಾವಿ : ನಗರದ ಅಭಿವೃದ್ಧಿಯ ದೃಷ್ಟಿಯಿಂದ ಬೆಳಗಾವಿಯ ನಗರವಾಸಿಗಳು ಬಿಜೆಪಿ ಪಕ್ಷಕ್ಕೆ ತಮ್ಮ ಮತಗಳನ್ನು ನೀಡಿ, ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ಹಿಡಿಯುವಂತೆ ಮಾಡಿದ್ದು, ಆಡಳಿತ ಪಕ್ಷ ಬಿಜೆಪಿಯೂ ಕೂಡಾ ನಗರದ ಅಭಿವೃದ್ಧಿ ದೃಷ್ಟಿಯಲ್ಲಿ ಅನೇಕ ಯೋಜನೆಗಳನ್ನು ರೂಪಿಸುತ್ತ, ಅಭಿವೃದ್ಧಿಪರ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಇತ್ತೀಚೆಗೆ ಒಬ್ಬ ಅಧಿಕಾರಿಯ ವರ್ಗಾವಣೆ ವಿಷಯದಲ್ಲಿ ಶಿಸ್ತಿನ ಪಕ್ಷವೆಂದೇ ಹೆಸರಾದ ಬಿಜೆಪಿ ಯಾಕೋ ಹಠಕ್ಕೆ ಬಿದ್ದಿದೆಯೇ ಎಂಬ ಅನುಮಾನ ಮೂಡುತ್ತಿದೆ.

ಕಳೆದ ಗುರುವಾರ ದಿನಾಂಕ 25/09/2025ರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪಾಲಿಕೆಯ ಕಂದಾಯ ಉಪ ಆಯುಕ್ತರಾದ ರೇಷ್ಮಾ ತಾಳಿಕೋಟೆ ಮೇಲೆ ಹಲವು ಆರೋಪ ಮಾಡಿ, ಆ ಆರೋಪದ ತನಿಖೆ ಮಾಡಲು ಸಮಿತಿ ರಚನೆಗೆ ನಿರ್ಣಯವನ್ನು ಹೊರಡಿಸಲಾಗಿತ್ತು, ಅದಾದ ನಂತರ ಮಂಗಳವಾರ ದಿನಾಂಕ 30/09/2025ರಂದು ಉಪ ಆಯುಕ್ತ ಕಂದಾಯ ಇವರನ್ನು ಕಂದಾಯ ವಿಭಾಗದಿಂದ ವರ್ಗಾವಣೆಗಾಗಿ ಪರಿಷತ್ ಸಭೆಯಲ್ಲಿ ಅಂಗೀಕರಿಸಲಾಗಿದ್ದು, ಅವರನ್ನು ಬೇರೆ ಕಡೆಗೆ ನಿಯುಕ್ತಿ ಮಾಡಲು ಪಾಲಿಕೆಯ ಮಹಾಪೌರರ ಕಡೆಯಿಂದ ಪಾಲಿಕೆ ಆಯುಕ್ತರಿಗೆ ಪತ್ರದ ಮೂಲಕ ಕೋರಿಕೊಳ್ಳಲಾಗಿದೆ.

ಆಡಳಿತ ಪಕ್ಷ ವರ್ಗಾವಣೆಗೆ ತಿಳಿಸಿರುವ ಕಾರಣಗಳೆಂದರೆ,,
1) ಇ ಆಸ್ತಿ ಹಾಗೂ ಪಿಐಡಿ ಮತ್ತು ಲೀಜ್ ಮುಗಿದ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿ ಹಾಗೂ ಖಾಲಿ ಮಾಡುವ ಪ್ರಕ್ರಿಯೆಯಲ್ಲಿ ಸರಿಯಾದ ಕ್ರಮ ಜರುಗಿಸದೇ ಇರುವದು,
2) ಸ್ಥಾಯಿ ಸಮಿತಿ ಸಭೆ ಹಾಗೂ ಪರಿಷತ್ ಸಭೆಗಳಿಗೆ ಸರಿಯಾದ ವಿಷಯಗಳ ಟಿಪ್ಪಣಿ ನೀಡದೇ ಕೆಳಗಿನ ಅಧಿಕಾರಿಯಿಂದ ಟಿಪ್ಪಣಿ ನೀಡುತ್ತಿರುವುದು,
3) ಅಧಿಕಾರದ ದುರುಪಯೋಗ,
4) ವೇಗಾ ಹೆಲ್ಮೆಟ್ ಪ್ರಕರಣದಲ್ಲಿ ಇವರ ಹಾಗೂ ಇವರ ಜೊತೆ ಐದು ಜನ ಸದಸ್ಯರ ಕಮಿಟಿ ಮೇಲೆ ಗುರುತರ ಆಪಾದನೆ ಇರುವದು ಹಾಗೂ ಸಾರ್ವಜನಿಕರ ದೂರುಗಳ ಕಾರಣಗಳನ್ನು ತಿಳಿಸಿ ವರ್ಗಾವಣೆ ಮಾಡಬೇಕೆಂದು ಆಯುಕ್ತರಿಗೆ ಕೋರಿಕೆ ಪತ್ರ ನೀಡಿದ್ದಾರೆ.

ಪಾಲಿಕೆಯ ಕಂದಾಯ ವಿಭಾಗದ ಕೆಲ ಸಿಬ್ಬಂದಿಗಳೇ ಹೇಳಿರುವಂತೆ, ಇ-ಆಸ್ತಿ, ಪಿಐಡಿ ವಿಷಯಗಳು ಕರ ವಸೂಲಿಗಾರ, ಕಂದಾಯ ನಿರೀಕ್ಷಕರ ಹಂತದಲ್ಲೇ ಕಡತಗಳು ಸಿದ್ಧವಾಗಿ ಪರಿಶೀಲನೆ ಆಗಿ, ಸಹಾಯಕ ಕಂದಾಯ ಅಧಿಕಾರಿ, ಕಂದಾಯ ಅಧಿಕಾರಿ ಪರೀಕ್ಷೆ ಮಾಡಿದ ನಂತರವೇ ಇವರ ಸಹಿಗಾಗಿ ಬರುವ ಪ್ರಕ್ರಿಯೆ ಇದ್ದು, 58 ವಾರ್ಡುಗಳ ಪ್ರತಿ ಆಸ್ತಿಗಳ ದಾಖಲೆಗಳನ್ನು ನೋಡಿಕೊಂಡು ಕುಳಿತು ಕೊಳ್ಳುವದು ಆಗದೇ ಇರುವ ಕಾರಣ, ಇದರ ಜವಾಬ್ದಾರಿ ಕೆಳಹಂತದ ಸಿಬ್ಬಂದಿಗಳ ಮೇಲಿರುತ್ತದೆ ಎಂದಿದ್ದಾರೆ.

ಇನ್ನು ಲೀಜ್ ಆಸ್ತಿಗಳ ಖಾಲಿ ಮಾಡಿಸುವಿಕೆ ಹಾಗೂ ಬಾಡಿಗೆ ವಸೂಲಿಯನ್ನು ಹಿಂದಿನಕ್ಕಿಂತಲೂ ಈಗ ಇರುವ ಈ ಕಂದಾಯ ಉಪ ಆಯುಕ್ತರು ಪರಿಣಾಮಕಾರಿಯಾಗಿ ಮಾಡುತ್ತಿದ್ದಾರೆ ಎಂಬ ಹೇಳಿಕೆಗಳು ಸಿಬ್ಬಂದಿಗಳಿಂದ ಕೇಳಿ ಬಂದಿವೆ.

ಸ್ಥಾಯಿ ಸಮಿತಿ ಸಭೆ ಹಾಗೂ ಪರಿಷತ್ ಸಭೆಗಳಲ್ಲಿ ಕಿರಿಯ ಹಂತದ ಅಧಿಕಾರಿಗಳು ಕಡತ ನಿರ್ವಹಣೆ ಮಾಡಿರುತ್ತಾರೆ ಎಂಬ ಕಾರಣಕ್ಕೆ ಅವರಿಂದ ಟಿಪ್ಪಣಿ ನೀಡಿಸಿರಬಹುದು ಎಂಬ ಅಭಿಪ್ರಾಯವಿದೆ, ಇನ್ನು ವೇಗಾ ಹೆಲ್ಮೆಟ್ ಪ್ರಕರಣ 2002 ರಿಂದಲೇ ಹಗರಣ ನಡೆದಿದ್ದು ಆಗ ಈ ಅಧಿಕಾರಿ ಇರಲೇ ಇಲ್ಲಾ ಎಂಬ ಮಾತಿದ್ದು, ಇವರ ಮೇಲೆ ಗುರುತರ ಆರೋಪ ಹೊರಸಿದ್ದೆ ಆದರೆ 2002ರಿಂದ ಅಲ್ಲಿ ತೆರಿಗೆ ನಷ್ಟ ಮಾಡಿರುವ ಕರ ವಸೂಲಿಗಾರ, ಕಂದಾಯ ನಿರೀಕ್ಷಕ, ಸಹಾಯಕ ಕಂದಾಯ ಅಧಿಕಾರಿ, ಕಂದಾಯ ಅಧಿಕಾರಿ, ಹಾಗೂ ಕಂದಾಯ ಉಪ ಆಯುಕ್ತರು ಎಲ್ಲರನ್ನೂ ಸೇರಿಸಿ ತನಿಖೆಗೆ ಆದೇಶ ನೀಡಬೇಕಿತ್ತು, ಮುಖ್ಯವಾಗಿ 2024ರಲ್ಲಿ ತೆರಿಗೆ ನಿರ್ಧರಣೆ ಮಾಡಿದ ಕರ ವಸೂಲಿಗಾರ ಹಾಗೂ ಕಂದಾಯ ನಿರೀಕ್ಷಕರ ಮೇಲೆ ಕ್ರಮಕ್ಕೆ ಬರೆಯಬಹುದಿತ್ತು, ಆದರೆ ಒಬ್ಬರೇ ಅಧಿಕಾರಿ ಮೇಲೆ ಏಕೆ ಎಂಬುದು ಕೆಲವರ ಅಭಿಪ್ರಾಯ.

ಇನ್ನು ಕಂದಾಯ ವಿಭಾಗದ ಕೆಲ ಸಿಬ್ಬಂದಿಗಳು ಹೇಳುವಂತೆ, ಈ ಉಪ ಆಯುಕ್ತರು ಬರುವ ಮುಂಚೆ ಶೇ 55 ರಷ್ಟು ಸಂಗ್ರಹವಾಗುತ್ತಿದ್ದ ಪಾಲಿಕೆಯ ಆಸ್ತಿ ತೆರಿಗೆ ಈಗ ಶೇ 78 ರಷ್ಟು ಸಂಗ್ರಹ ಆಗುತ್ತಿದ್ದು, ಆಸ್ತಿಗಳ ಗಣಕೀಕರಣ, ಸಿಬ್ಬಂದಿಗಳ ಬೆಳಗಿನ ಫೀಲ್ಡ್ ವರ್ಕ್, ಇ-ಆಸ್ತಿ ತಂತ್ರಾಂಶ ಜೋಡಣೆ, ದೀರ್ಘಕಾಲ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿಗಳಿಗೆ ಬೀಗ ಮುದ್ರೆ ಹಾಕಿರುವುದು, ದೊಡ್ಡ ಪ್ರಮಾಣದ ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಕಟ್ಟಡಗಳ ತೆರಿಗೆ ಸಂಗ್ರಹ, ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ಇಲಾಖೆಯ ನಿಯಮಾನುಸಾರ ಮಾಡುತ್ತಿರುವ ಇವರ ಕಾರ್ಯಗಳು ಜನಪರ ಹಾಗೂ ಇಲಾಖೆಯ ಪರವಾಗಿವೆ ಎಂಬ ಮಾತುಗಳಿವೆ.

ಒಟ್ಟಾರೆಯಾಗಿ ಸರ್ಕಾರದ ನಿಯಮಾನುಸಾರ, ಸಾರ್ವಜನಿಕರಿಗೆ ಅನುಕೂಲಕಾರಕ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಕಾರ್ಯನಿರ್ವಹಿಸುವ ಅಧಿಕಾರಿಗಳು ಎಲ್ಲಾ ಇಲಾಖೆಗೂ ಅವಶ್ಯಕವಾಗಿರುತ್ತಾರೆ, ಅದೇ ರೀತಿ ಬೇಜವಾಬ್ದಾರಿಯಿಂದ ಕರ್ತವ್ಯಲೋಪ ಮಾಡುವಂತಹ ಅಧಿಕಾರಿಗಳ ಮೇಲೂ ಶಿಸ್ತು ಕ್ರಮ ಆಗಬೇಕು ಎಂಬುದು ಸಾರ್ವಜನಿಕರ ಆಶಯ..

ಪಾಲಿಕೆಯಲ್ಲಿ ಬಹುಮತ ಪಡೆದು ಆಡಳಿತ ನಡೆಸುವ ಬಿಜೆಪಿ ಪಕ್ಷಕ್ಕೆ ಸಭೆಗಳಲ್ಲಿ ನಿರ್ಣಯ ಮಂಡಿಸುವ ಹಾಗೂ ಅದನ್ನು ಅಂಗೀಕರಿಸುವ ಸಂಪೂರ್ಣ ಅಧಿಕಾರವಿದ್ದು, ತಮ್ಮ ಹಕ್ಕಿನಂತೆ ಅವರು ಮಂಡಿಸಿದ ನಿರ್ಣಯಗಳ ಅಂಗೀಕಾರಕ್ಕೆ ಎಲ್ಲರ ಸಹಮತ ಇರುತ್ತದೆ. ಆದರೆ ಉನ್ನತ ಹಾಗೂ ಕೆಳಹಂತದ ಸಿಬ್ಬಂದಿಗಳನ್ನು ಬಿಟ್ಟು ಹಠಕ್ಕೆ ಬಿದ್ದಂತೆ ಕೇವಲ ಒಬ್ಬರನ್ನೇ ಟಾರ್ಗೆಟ್ ಮಾಡಿ ದೋಷಿಸುವದು ಎಲ್ಲೋ ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಬಹುದು ಎಂಬ ಅಭಿಪ್ರಾಯಗಳಿವೆ..

ಒಂದು ವೇಳೆ, ಪಾಲಿಕೆಯ ಆಡಳಿತ ಪಕ್ಷದ ಪ್ರಕಾರ, ಪಾಲಿಕೆಯ ಕಂದಾಯ ಉಪ ಆಯುಕ್ತರು ಕರ್ತವ್ಯಲೋಪ ಮಾಡಿದ್ದಾರೆಂದು ಪರಿಗಣಿಸಿದ್ದರೆ, ಪಾಲಿಕೆ ಆಡಳಿತದ ಉನ್ನತ ಹಾಗೂ ಜವಾಬ್ದಾರಿ ಸ್ಥಾನದಲ್ಲಿರುವ ಆಯುಕ್ತರು, ಕಂದಾಯ ಉಪ ಆಯುಕ್ತರ ಕರ್ತವ್ಯ ಲೋಪವನ್ನು ಗಮನಿಸದೇ ಇರುವದರಿಂದ ಆಯುಕ್ತರ ಮೇಲೂ ಆಡಳಿತ ಪಕ್ಷ ದೂರು ನೀಡಬಹುದಿತ್ತಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ವರದಿ ಪ್ರಕಾಶ ಬಸಪ್ಪ ಕುರಗುಂದ..