ಪಾಲಿಕೆಯ ಕಂದಾಯ ವಿಭಾಗದ ಸಭೆಯಲ್ಲಿ ಕುಸಿದು ಬಿದ್ದ ಕಂದಾಯ ನಿರೀಕ್ಷಕ…

ಪಾಲಿಕೆಯ ಕಂದಾಯ ವಿಭಾಗದ ಸಭೆಯಲ್ಲಿ ಕುಸಿದು ಬಿದ್ದ ಕಂದಾಯ ನಿರೀಕ್ಷಕ..

ಘಟನೆಗೆ ಮೇಲಾಧಿಕಾರಿಗಳು ನೀಡಿದ ಕೆಲಸದ ಒತ್ತಡ ಕಾರಣವಾಯಿತೇ ??

ಸಭೆಯಲ್ಲಿ ಕಂದಾಯ ಅಧಿಕಾರಿಗಳು, ಸಿಬ್ಬಂದಿ ಆಘಾತಗೊಳ್ಳುವ ಮಾತು ಆಡಿದರೆ ??

ಬೆಳಗಾವಿ : ಬುಧವಾರ ನಗರದ ಗೋವಾವೇಸ್ ಪಕ್ಕದಲ್ಲಿರುವ ಮಹಾನಗರ ಪಾಲಿಕೆಯ ದಕ್ಷಿಣ ವಲಯದ ಕಚೇರಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಕಚೇರಿಯ ಕಂದಾಯ ನಿರೀಕ್ಷಕ ಶ್ರೀಕಾಂತ ಯರಾಳೆ ಅವರು ಕಂದಾಯ ವಿಭಾಗದ ಸಭೆಯಲ್ಲಿಯೇ ಪ್ರಜ್ಞೆ ತಪ್ಪಿ, ಕುಸಿದು ಬಿದ್ದಿರುವ ಘಟನೆ ನಡೆದಿದೆ..

ಮುಂಜಾನೆ ಹನ್ನೊಂದು ಗಂಟೆಗೆ ಮಹಾನಗರ ಪಾಲಿಕೆಯ ಕಂದಾಯ ಆಯುಕ್ತರಾದ ರೇಷ್ಮಾ ತಾಳಿಕೋಟೆ ಹಾಗೂ ಉತ್ತರ ವಲಯ ಕಂದಾಯ ಅಧಿಕಾರಿಯಾದ ಸಂತೋಷ ಆನಿಶೆಟ್ಟಿ ಅವರು, ದಕ್ಷಿಣ ವಲಯದ ಕಚೇರಿಯ ಕಂದಾಯ ಸಿಬ್ಬಂದಿಗೆ ಸಭೆ ತಗೆದುಕೊಂಡಿದ್ದು, ಆ ಸಭೆಯಲ್ಲಿ ಬಿಲ್ಲ ಕಲೆಕ್ಟರ್, ಕಂದಾಯ ನಿರೀಕ್ಷಕರು, ಸಹ ಕಂದಾಯ ಅಧಿಕಾರಿಗಳು ಭಾಗಿಯಾಗಿದ್ದು, ವಾರ್ಡ ಸಂಖ್ಯೆ 1 ರಿಂದ 6ರ ವರೆಗಿನ, ಸುಮಾರು 8000 ಆಸ್ತಿಗಳಿರುವ ಪ್ರದೇಶದ ಕಂದಾಯ ನಿರೀಕ್ಷಕನಾದ ಶ್ರೀಕಾಂತ ಯರಾಳೆ ಕೂಡಾ ಉಪಸ್ಥಿತರಿದ್ದರು..

ಹೊಸದಾಗಿ ಅಧಿಕಾರ ವಹಿಸಿಕೊಂಡ ಕಂದಾಯ ಆಯುಕ್ತರಾದ ರೇಷ್ಮಾ ತಾಳಿಕೋಟೆ ಅವರು ಕೆಲ ಸೂಚನೆಗಳನ್ನು ಸಿಬ್ಬಂದಿಗಳಿಗೆ ನೀಡಿದ್ದು, ತದನಂತರ ಉತ್ತರ ವಲಯದ ಕಂದಾಯ ಅಧಿಕಾರಿ ಸಂತೋಷ ಆನಿ ಶೆಟ್ಟರ ಅವರು, ಸಮಯಕ್ಕೆ ಸರಿಯಾಗಿ ಕೆಲಸ ಆಗುತ್ತಿಲ್ಲ, ನಿಮಗೆ ನೀಡಿದ ಗುರಿ ನೀವು ಮುಟ್ಟುತ್ತಿಲ್ಲ, ಎಂಬ ಚರ್ಚೆಗಳು ನಡೆದಿರಬಹುದು ಎಂಬ ಮಾಹಿತಿ ಇದ್ದು, ಒಂದು ಕಡೆ ಕೆಲಸದ ಒತ್ತಡ, ಮತ್ತೊಂದು ಕಡೆ ಅಧಿಕಾರಿಗಳ ಮಾತುಗಳು ಕೇಳಿ, ಮಾನಸಿಕ ಆಘಾತಕ್ಕೆ ಒಳಪಟ್ಟರೆ ?? ಎಂಬ ಸಂಶಯ ಮೂಡುತ್ತಿದೆ..

ಪಾಲಿಕೆಯ ಕಂದಾಯ ವಿಭಾಗದಲ್ಲಿ, ಕೆಎಂಎಫ್ 24 ಎಂಬ ಆಸ್ತಿ ಕಣಜ ಪ್ರಕ್ರಿಯೆ ಪ್ರಾರಂಭವಾಗಿದ್ದು, ಇದರ ಮೊದಲ ಹಂತ ಮುಗಿದು, ಎರಡನೇ ಹಂತದಲ್ಲಿ, ಪ್ರತಿ ವಾರ್ಡಿನಲ್ಲಿಯ ಆಸ್ತಿಯ ಮಾಹಿತಿಯನ್ನು ಸ್ಕ್ಯಾನಿಂಗ್ ಮಾಡಿ, ದಾಖಲು ಮಾಡಲಾಗುತ್ತಿದ್ದು, ಅದಕ್ಕೆ ಬೇಕಾದ ತಾಂತ್ರಿಕ ಸಾಮಗ್ರಿ, ಸಿಬ್ಬಂದಿಗಳ ಕೊರತೆ ಇದ್ದು, ಕಂದಾಯ ವಿಭಾಗದ ಅಧಿಕಾರಿಗಳು ಅದರ ಬಗ್ಗೆ ಗಮನ ಹರಿಸದೇ, ಕೆಳಹಂತದ ಸಿಬ್ಬಂದಿಯ ಮೇಲೆ, ಬೇಗ ಕೆಲಸ ಆಗಬೇಕು ಎಂಬ ಒತ್ತಡ ಹಾಕಿ, ನೆಮ್ಮದಿ ಕೆಡಸಿದ್ದಾರೆ ಎಂಬ ಅಳಲು ಕೆಲ ಸಿಬ್ಬಂದಿಗಳಲ್ಲಿದೆ..

ಈ ಆಸ್ತಿ ಕಣಜದ ಕಾರ್ಯದೊಂದಿಗೆ, ದಿನನಿತ್ಯದ ಕಚೇರಿ ಕಾರ್ಯ, ಸರ್ಕಾರದ ವಿಶೇಷ ಯೋಜನೆಗಳ ಕಾರ್ಯಗಳು, ಪ್ರಭಾವಿಗಳ ಕಾರ್ಯ ಹೀಗೆ, ನಾಲ್ಕು ಜನರು ಮಾಡುವ ಕಾರ್ಯವನ್ನು ಒಬ್ಬ ಸಿಬ್ಬಂದಿ ಮಾಡುವುದಲ್ಲದೇ, ಇಂತಹ ಒತ್ತಡ ತಂತ್ರಗಳು ಎದುರಾದಾಗ ನೌಕರರು ಮತ್ತಷ್ಟು ಕುಗ್ಗುವರು, ಒಂದೇ ಇಲಾಖೆಯ ಕಚೇರಿಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಅಲ್ಲಿಯ ಸಿಬ್ಬಂದಿಗಳ ಇತಿಮಿತಿಗಳನ್ನು ಅರಿತು, ಹೊಂದಾಣಿಕೆಯಿಂದ, ಆತ್ಮೀಯವಾಗಿ ಸಲಹೆ ಸೂಚನೆ ನೀಡಿ, ಕಾರ್ಯ ಮಾಡಿಸಿಕೊಂಡರೆ, ಉತ್ತಮ ರೀತಿಯಲ್ಲಿ ಕೆಲಸಗಳಾಗಿ, ಇಲಾಖೆಗೂ ಒಳ್ಳೆಯ ಹೆಸರು ಬರುವದು, ತಮ್ಮ ಸಿಬ್ಬಂದಿಗಳ ಸಮಸ್ಯೆಗಳನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳದೇ ಬೇರೆ ಯಾರೂ ಅರ್ಥ ಮಾಡಿಕೊಳ್ಳಬೇಕು ಎಂಬುದು ಕೆಲ ನೌಕರರ ವೇದನೆ..

ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಂದಾಯ ನಿರೀಕ್ಷಕ ಬೇಗ ಗುಣಮುಖವಾಗಿ ತಮ್ಮ ಸೇವೆಗೆ ಹಾಜರಾಗಲಿ, ಅವರ ಅನಾರೋಗ್ಯಕ್ಕೆ ಯಾವುದೇ ಕಾರಣವಿರಬಹುದು, ಆದರೆ ಕಚೇರಿಯ ಸಭೆಯಲ್ಲಿ ಮೇಲಾಧಿಕಾರಿಗಳ ಸಮ್ಮುಖದಲ್ಲಿ ಈ ಘಟನೆ ನಡೆದದ್ದು, ಕೆಲ ಸಂಶಯಕ್ಕೆ ಕಾರಣವಾಗಿದ್ದು, ಮುಂದೆ ಈ ರೀತಿಯ ಕಹಿ ಘಟನೆಗಳು ನಡೆಯಬಾರದೆಂಬುದು ಸರ್ವರ ಆಶಯ..

ವರದಿ ಪ್ರಕಾಶ ಕುರಗುಂದ..