ಪಾಲಿಕೆಯ ವರ್ಗಾವಣೆಯ ಸುತ್ತ ಅನುಮಾನದ ಚಿತ್ತ..

ಪಾಲಿಕೆಯ ವರ್ಗಾವಣೆಯ ಸುತ್ತ ಅನುಮಾನದ ಚಿತ್ತ..

ಕಂದಾಯ ಸ್ಥಾಯಿ ಸಮಿತಿ ನಿರ್ಧಾರಕ್ಕೆ ತದ್ವಿರುದ್ದ ವರ್ಗಾವಣೆಯೇ??

ಲೋಪದೋಷ ಹೊತ್ತಿರುವ ಸಿಬ್ಬಂದಿಯ ವರ್ಗಾವಣೆಯ ಮರ್ಮವೇನು??

ಎಂಟು, ಹತ್ತು ವರ್ಷದಿಂದ ಒಂದೇ ಖುರ್ಚಿಯಲ್ಲಿರುವವರು ಕಾಣಲಿಲ್ಲವೇಕೆ ??

ಬೆಳಗಾವಿ : ಯಾಕೋ ಏನೋ ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತ ಯಂತ್ರಕ್ಕೆ ಗ್ರಹಣ ಹಿಡಿದಂತೆ ಕಾಣುತ್ತಿದೆ, ಒಂದಾದ ನಂತರ ಒಂದು ಸಮಸ್ಯೆಗೆ ಸಿಲುಕಿಕೊಂಡು, ಆಡಿಕೊಳ್ಳುವವರ ಬಾಯಿಗೆ ಆಹಾರ ಆಗುತ್ತಿದೆಯೇ? ಎಂಬ ಸಂಶಯ ಮೂಡುತ್ತಿದ್ದು, ಪಾಲಿಕೆಯ ಬಗ್ಗೆ ನಮಗೂ ಹೆಮ್ಮೆ ಹಾಗೂ ಗೌರವ ಇದ್ದು, ನಾವು ಎಷ್ಟೋ ಸಾರಿ ಪಾಲಿಕೆಯ ಆಡಳಿತವನ್ನು ಬಣ್ಣಿಸಬೇಕು ಎಂಬ ಬಯಕೆಯಿದ್ದರೂ ಅಂತಹ ಅವಕಾಶಗಳು ವಿರಳವಾಗಿವೆ..

ಪಾಲಿಕೆಯ ಆಡಳಿತ ಶಿಸ್ತಿನಿಂದ ಪಾರದರ್ಶಕವಾಗಿ ಕೂಡಿರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಪಾಲಿಕೆ ಆಡಳಿತದಲ್ಲಿ ಅನೇಕ ಬದಲಾವಣೆ ಮಾಡಿದ್ದರು, ಆದರೆ ದಿನಕಳೆದಂತೆ ಯಾಕೋ ಪಾಲಿಕೆಯಲ್ಲಿ ಸಮಸ್ಯೆಗಳೇ ಅಧಿಕವಾಗುತ್ತಿದ್ದು, ಪಾಲಿಕೆ ಅಧಿಕಾರಿಗಳ ಕೆಲ ನಿರ್ಣಯಗಳು ಕೂಡಾ ಅದಕ್ಕೆ ಕಾರಣವಾಗಿವೆಯೇ ಎಂಬ ಸಂಶಯ ಕಾಡುತ್ತಿದೆ.

ಈಗಿರುವ ಹಲವು ಸಮಸ್ಯೆಗಳ ನಡುವೆ, ನಿನ್ನೆ ಕಂದಾಯ ವಿಭಾಗದಲ್ಲಿ ಮಾಡಿದ ವರ್ಗಾವಣೆಯ ಬಗ್ಗೆಯೂ ಕೆಲ ಅಸಮಾಧಾನಗಳು ಕೇಳಿ ಬರುತ್ತಿದ್ದು, ಉತ್ತರ ವಲಯದಿಂದ ದಕ್ಷಿಣ ವಲಯಕ್ಕೆ ಹಾಗೂ ರಿಷಲ್ದಾರ್ ಗಲ್ಲಿಯ ವರ್ಗಾವಣೆ ಸೇರಿ ಸುಮಾರು ನಾಲ್ಕು ಕಂದಾಯ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿದ್ದು, ಅವು ಸಹಜ ಹಾಗೂ ವೈಜ್ಞಾನಿಕ ವರ್ಗಾವಣೆಗಳಾಗದೆ, ಯಾವುದೋ ಒತ್ತಡ ಅಥವಾ ಪ್ರಭಾವಕ್ಕೆ ಆದಂತಹ ವರ್ಗಾವಣೆ ಎಂಬ ಅನುಮಾನದ ಮಾತುಗಳು ಕೇಳಿಬರುತ್ತಿವೆ..

ತಮ್ಮ ಕೆಲಸದಲ್ಲಿ ದೋಷದ ಆರೋಪಗಳನ್ನು ಹೊತ್ತಿರುವ ಸಿಬ್ಬಂದಿಯ ವರ್ಗಾವಣೆಯ ಅವಶ್ಯಕತೆ ಇತ್ತೇ? ಈ ರೀತಿ ವರ್ಗಾವಣೆ ಮಾಡಿ ಆ ಸಿಬ್ಬಂದಿಯನ್ನು ನಿರಾತಂಕ ಮಾಡಿದಂತೆ ಆಗಲಿಲ್ಲವೆ? ಯಾವುದೇ ಕಪ್ಪುಚುಕ್ಕೆ ಇಲ್ಲದೇ, ಎರಡು ವರ್ಷ ಉತ್ತಮ ಕಾರ್ಯ ಮಾಡಿರುವ, ಸಿಬ್ಬಂದಿಯ ವರ್ಗಾವಣೆ ಸಮಂಜಸವೇ?

ಅದೇ ರೀತಿ 8, 10, ವರ್ಷಗಳ ಕಾಲ ಒಂದೇ ಖರ್ಚಿಗೆ ಅಂಟಿಕೊಂಡು ಕುಳಿತಿರುವ ಕರ ವಸೂಲಿಗಾರರು ಪಾಲಿಕೆ ಅಧಿಕಾರಿಗಳ ಕಣ್ಣಿಗೆ ಕಾಣುವುದಿಲ್ಲವೇ? ಅಂತವರ ವರ್ಗಾವಣೆ ಯಾಕೆ ಆಗುವದಿಲ್ಲ, ವರ್ಗಾವಣೆ ಎನ್ನುವದು ತಪ್ಪು ಮಾಡಿದವರಿಗೆ ನೀಡುವ ಶಿಕ್ಷೆ ಆಗಿರಬೇಕು ಹೊರತು ಸುರಕ್ಷಾ ಕವಚ ಆಗುವದು ಸರಿಯೇ? ಕಂದಾಯ ವಿಭಾಗದ ಎಲ್ಲಾ ಸಿಬ್ಬಂದಿಗಳ ಸಾಮೂಹಿಕ ವರ್ಗಾವಣೆ ಆಗಿದ್ದರೆ ಪ್ರಶ್ನೆ ಹುಟ್ಟುತ್ತಿರಲಿಲ್ಲ, ಕೆಲವೇ ಜನರ ವರ್ಗಾವಣೆ ಆಗಿದ್ದು ಯಾಕೆ? ಇಂತಹ ಪ್ರಶ್ನೆಗಳು ಕೇಳಿಬರುತ್ತಿವೆ..

ಅದೇ ರೀತಿ ಕಳೆದ ಬಾರಿ ನಡೆದ ಮಹಾನಗರ ಪಾಲಿಕೆಯ ಕಂದಾಯ ಸ್ಥಾಯಿ ಸಮಿತಿ ಸಭೆಯಲ್ಲಿ, ಕಂದಾಯ ಸ್ಥಾಯಿ ಸಮಿತಿ ಸದಸ್ಯರಾದ ಹಣಮಂತ ಕೊಂಗಾಲಿ ಹಾಗೂ ಮತ್ತೊಬ್ಬ ಸಮಿತಿ ಸದಸ್ಯರಾದ ನಿತಿನ್ ಜಾಧವ ಅವರೂ ಕೂಡ ವರ್ಗಾವಣೆಯ ವಿಷಯ ಪ್ರಸ್ತಾಪಿಸಿ, ಕಂದಾಯ ವಿಭಾಗದಲ್ಲಿ ಈಗ ವರ್ಗಾವಣೆ ಬೇಡ, ಅದರಿಂದ ಆಸ್ತಿ ತೆರಿಗೆ ಸಂಗ್ರಹದ ಕೆಲಸಕ್ಕೆ ಅಡಚಣೆ ಆಗುತ್ತದೆ ಎಂದು ಸಲಹೆ ನೀಡಿ, ಸ್ಥಾಯಿ ಸಮಿತಿಯ ಅಧ್ಯಕ್ಷರ ಮುಂದೆ ವಿಷಯ ಮಂಡನೆಯನ್ನು ಮಾಡಿದ್ದರು, ಕಂದಾಯ ಸ್ಥಾಯಿ ಸಮಿತಿ ಸದಸ್ಯರ ಮಂಡನೆಯನ್ನೂ ಇಲ್ಲಿ ಗಾಳಿಗೆ ತೂರಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..