ಪಾಲಿಕೆ ಅರೋಗ್ಯ ವಿಭಾಗಕ್ಕೆ ಚಿಮಾರಿ ಹಾಕಿದ ಪ್ರಧಾನ ಲೆಕ್ಕಪತ್ರಾಧಿಕಾರಿ..

ಪಾಲಿಕೆ ಅರೋಗ್ಯ ವಿಭಾಗಕ್ಕೆ ಚಿಮಾರಿ ಹಾಕಿದ ಪ್ರಧಾನ ಲೆಕ್ಕಪತ್ರಾಧಿಕಾರಿ..

ಬೆಳಗಾವಿ ಜನರ 1ಕೋಟಿ 4ಲಕ್ಷ ಹಣ ಖಾಸಗಿಯವರ ಪಾಲು..

ಕೆಎಂಸಿ ನಿಯಮ ಉಲ್ಲಂಘಸಿ, ಜನರ ದುಡ್ಡು ದೋಚಿದವರ ಮೇಲೆ ಕ್ರಮ ಆಗುತ್ತಾ??

17 ವರ್ಷ ಆರೋಗ್ಯ ವಿಭಾಗದಲ್ಲೇ ಕೆಲಸ ಮಾಡುವ ಮ್ಯಾನೇಜರ್ ಅಭಿಷೇಕರಿಂದಲೂ ಹಾರಿಕೆ ಉತ್ತರ..

ಬೆಳಗಾವಿ : ನಗರವಾಸಿಗಳ ಕಲ್ಯಾಣ ಹಾಗೂ ಅಭಿವೃದ್ಧಿ ಕಾರ್ಯಗಳಿಗಾಗಿ ಕಾಯ್ದಿರಿಸಿದ ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿಯ ಅನುದಾನದಲ್ಲಿ, ಸುಮಾರು 1ಕೋಟಿ, ನಾಲ್ಕು ಲಕ್ಷ ಹಣವನ್ನು ಖಾಸಗಿ ಕೆಲಸಕ್ಕಾಗಿ ಬಳಸಿಕೊಂಡ ಪಾಲಿಕೆಯ ಆರೋಗ್ಯ ವಿಭಾಗವು, ರಾಜ್ಯ ಆಡಿಟ್ ಜನರಲ್ (ಪ್ರಧಾನ ಲೆಕ್ಕ ಪತ್ರಾಧಿಕಾರಿ) ಅವರಿಂದ ಚಿಮಾರಿ ಹಾಕಿಸಿಕೊಂಡಿದೆ.

ಪ್ರಧಾನ ಲೆಕ್ಕ ಪತ್ರಾಧಿಕಾರಿ (ಆಡಿಟ್ 1) ಅಡಿಟ್ ಭವನ ಬೆಂಗಳೂರು, ಇವರಿಂದ 04/11/2025 ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗಕ್ಕೆ ನೋಟಿಸ್ ಬಂದಿದ್ದು, ಉದ್ಯೋಗಿಗಳು ಅಲ್ಲದವರಿಗೆ ಗುಂಪು ಅರೋಗ್ಯ ವಿಮೆಗಾಗಿ, ಸಾಮಾನ್ಯ ನಿಧಿಯಿಂದ ರೂಪಾಯಿ 1ಕೋಟಿ, 4 ಲಕ್ಷ ವೆಚ್ಚ ಮಾಡಿದ್ದು, ಅದು ಸ್ವೀಕಾರಕ್ಕೆ ಅರ್ಹವಲ್ಲ, ಇದಕ್ಕೆ ಸರಿಯಾದ ಲೆಕ್ಕ ನೀಡಿ ಎಂದು ಅರೋಗ್ಯ ವಿಭಾಗಕ್ಕೆ ಚಾಟಿ ಬಿಸಿದೆ.

ಕೆಎಂಸಿ ಕಾಯ್ದೆ 1976ರ ಅಡಿಯಲ್ಲಿ ನಿಗಮದ ಸಾಮಾನ್ಯ ನಿಧಿಯ ಬಳಕೆಯನ್ನು ಸ್ಪಷ್ಟ ಶಾಸನಬದ್ದ ನಿಬಂಧನೆಗಳು ಮತ್ತು ಆರ್ಥಿಕ ವಿವೇಕಗಳ ಮಾನದಂಡಗಳಿಂದ ನಿಯಂತ್ರಿಸಬೇಕಾಗುತ್ತದೆ, ಕೆಎಂಸಿ ಕಾಯ್ದೆ ಸೆಕ್ಷನ್ 149ರ ಪ್ರಕಾರ ಸಾರ್ವಜನಿಕರ ಮೂಲಭೂತ ಸೌಲಭ್ಯ ಹಾಗೂ ಉದ್ಯೋಗಿ ಸಂಬಂಧಿತ ಪ್ರಯೋಜನೆಗಳಿಗೆ ಮಾತ್ರ ಬಳಸುವ ಅನುಮತಿ ಇದೆ ಎಂದು ಸ್ಪಷ್ಟ ಪಡಿಸುತ್ತದೆ, ನಗರ ನಿವಾಸಿಗಳಿಗೆ ಪ್ರಯೋಜನೆ ನೀಡುವ ಯೋಜನೆಗಳಿಗೆ ಮಾತ್ರ ಸಾಮಾನ್ಯ ನಿಧಿಯ ಅನುದಾನ ಬಳಸಬಹುದು ಎಂಬ ನಿಯಮ ಇರುವಾಗ ಅದನ್ನು ಉಲ್ಲಂಘಸಿ, ಖಾಸಗಿ ವ್ಯಕ್ತಿಗಳ ಸೀಮಿತ ಗುಂಪಿಗೆ ವಿಸ್ತರಿಸಲಾದ ಪ್ರಯೋಜನೆಗಳ ಬಗ್ಗೆ, ಆಡಿಟ್ ಇಲಾಖೆ ಪಾಲಿಕೆಯಿಂದ ಉತ್ತರ ಕೇಳಿದೆ..

ಬೆಳಗಾವಿ ಪಾಲಿಕೆ ನವೆಂಬರ್ 25, 2021ರಂದು ಅಂದಿನ ಆಡಳಿತಾಧಿಕಾರಿ ನಿರ್ಣಯದ ಮೇಲೆ, 56 ಪತ್ರಕರ್ತರಿಗೆ ಹಾಗೂ ಅವರ ಕುಟುಂಬ ಸದಸ್ಯರನ್ನು (168) ಒಳಗೊಂಡಂತೆ ಗುಂಪು ಆರೋಗ್ಯ ವಿಮೆಯನ್ನು ಜಾರಿಗೆ ತಂದಿತ್ತು, ಆದರೆ ಆ ಪಟ್ಟಿ ಪ್ರತಿ ವರ್ಷ ಹನುಮಂತನ ಬಾಲದಂತೆ ಬೆಳೆಯುತ್ತ ಇಂದು 127ರ ವರೆಗೆ ಹಾಗೂ ಅವರ ಕುಟುಂಬ ಸದಸ್ಯರ ವರೆಗೆ ಬಂದು ನಿಂತಿದೆ, ಈ ಪಲಾನುಭವಿಗಳು ನಿಗಮದ (ಪಾಲಿಕೆಯ) ನೌಕರರು ಅಲ್ಲಾ, ಮತ್ತು ಪಾಲಿಕೆಯೊಂದಿಗೆ ಯಾವುದೇ ಅಧಿಕೃತ ಒಪ್ಪಂದ ಅಥವಾ ಸೇವಾ ಸಂಬಂಧ ಇಲ್ಲಾ, ಹೀಗಿರುವಾಗ ನಾಲ್ಕು ವರ್ಷಗಳಲ್ಲಿ 1ಕೋಟಿ, 4ಲಕ್ಷ ರೂಪಾಯಿ ಜನರ ತೆರಿಗೆ ಹಣವನ್ನು ಹೇಗೆ ಖರ್ಚು ಮಾಡಿದ್ದೀರಿ? ಎಂದು ಆಡಿಟ್ ಜನರಲ್ ನೋಟಿಸ್ ನೀಡಿದ್ದಾರೆ.

ಸರ್ಕಾರದ, ನಗರಭಿವೃದ್ಧಿ ಇಲಾಖೆಯ ಯಾವುದೇ ಆದೇಶ, ಸುತ್ತೋಲೆ ಇಲ್ಲದೆ, ರಾಜ್ಯ ಸರ್ಕಾರದ ಯಾವುದೇ ಕಾನೂನು ಅಥವಾ ನೀತಿ ಬೆಂಬಲ ಇಲ್ಲದೇ, ಕೇವಲ ಆಡಳಿತಾಧಿಕಾರಿ ನಿರ್ಣಯದ ಮೇಲೆಯೇ ಸಂಪೂರ್ಣ ವೆಚ್ಚ ಮಾಡಲಾಗಿದೆ, ಇದು ಶಾಸನಬದ್ದ ನಿಯಮಗಳ ಉಲ್ಲಂಘನೆ ಆಗಿದೆ, ಈ ವೆಚ್ಚವು ಕೆಎಂಸಿ ಕಾಯ್ದೆಯ ಸೆಕ್ಷನ್ 103, 58 ಮತ್ತು 59ರ ಅಡಿಯಲ್ಲಿ ನಿಗಮಕ್ಕೆ ನೀಡಿದ ಅಧಿಕಾರವನ್ನು ಮೀರಿದೆ ಜೊತೆಗೆ ಲೆಕ್ಕಪತ್ರ ಮಾನದಂಡಗಳ ಉಲ್ಲಂಘನೆಯೂ ಆಗಿದೆ ಎಂದು ನೋಟಿಸಿನಲ್ಲಿ ಉಲ್ಲೇಖ ಮಾಡಲಾಗಿದೆ,

ಈ ವಿಷಯ ಆರ್ಥಿಕ ಅವಿವೇಕ ಮತ್ತು ಆಡಳಿತಾತ್ಮಕ ಅತಿಕ್ರಮಣವನ್ನು ತೋರಿಸುತ್ತದೆ, ನಾಗರಿಕರ ಮೂಲಸೌಕರ್ಯ ಮತ್ತು ಅಗತ್ಯ ಸೇವೆಗಳಿಗಾಗಿ ಸಂಗ್ರಹಿಸಲಾದ ಸಾರ್ವಜನಿಕ ಹಣವನ್ನು ನಿರ್ದಿಷ್ಟ ಗುಂಪಿನ ನೌಕರರಲ್ಲದವರ ಖಾಸಗಿ ಲಾಭಕ್ಕಾಗಿ ತಿರುಗಿಸಲಾಗಿದ್ದು, 1ಕೋಟಿ 4ಲಕ್ಷ ಈ ವೆಚ್ಚ ಸ್ವೀಕಾರ ಅರ್ಹವಲ್ಲ ಮತ್ತು ಇದು ಸಾಮಾನ್ಯ ನಿಧಿಗೆ ನಷ್ಟ ಎಂದು, ಪಾಲಿಕೆಯ ಆರೋಗ್ಯ ವಿಭಾಗದ ಅವಿವೇಕಕ್ಕೆ ಚಾಟಿ ಏಟು ನೀಡಿದೆ..

ಈ ಯೋಜನೆಗೆ ಕಾರಣಿಕರ್ತರದ ಪಾಲಿಕೆಯ ಹಳೆಯ ಆಯುಕ್ತರು, ಆರೋಗ್ಯ ಅಧಿಕಾರಿಗಳು, ವಿಷಯ ನಿರ್ವಾಹಕರು ಬೇರೆ ಕಡೆಗೆ ವರ್ಗಾವಣೆ ಆಗಿರುವ ಕಾರಣ, ಕೊನೆಗೂ ನಮ್ಮ ಅದೃಷ್ಟಕ್ಕೆ ಆರೋಗ್ಯ ವಿಭಾಗದಲ್ಲಿ ಒಬ್ಬ ಸಿಬ್ಬಂದಿ ಸಿಕ್ಕರು, ಅವರೇ ಆರೋಗ್ಯ ವಿಭಾಗದ ವ್ಯವಸ್ಥಾಪಕರು (ಮ್ಯಾನೇಜರ್) ಅಭಿಷೇಕ ಕಂಗ್ರಾಳಿಕರ, ಈ ಯೋಜನೆ ಆರಂಭ ಆದಾಗಿಂದಲೂ ಇಲ್ಲಿವರೆಗೆ ಇರುವ ಸಿಬ್ಬಂದಿ, ಅದಕ್ಕೂ ಮೀರಿ ಸುಮಾರು 17 ವರ್ಷ ಸುದೀರ್ಘ ಅವಧಿಯಿಂದ ಪಾಲಿಕೆಯ ಆರೋಗ್ಯ ವಿಭಾಗದ ಕುರ್ಚಿಗೆ ಪೆವಿಕೋಲ್ ಅಂಟು ಹಚ್ಚಿಕೊಂಡು ಕುಳಿತ ನೌಕರ, ಖುರ್ಚಿ ಇವರನ್ನು ಬಿಡುತ್ತಿಲ್ಲೋ ಅಥವಾ ಇವರು ಖುರ್ಚಿಯನ್ನು ಬಿಡುತ್ತಿಲ್ಲೋ ಗೊತ್ತಿಲ್ಲ, 17 ವರ್ಷದಲ್ಲಿ ಕೇವಲ ಒಂದೇ ಸಲ ಪಾಲಿಕೆಯ ಅಭಿವೃದ್ಧಿ ವಿಭಾಗಕ್ಕೆ ವರ್ಗ ಆಗಿ, ಅದು ಕೇವಲ ಒಂದೆರಡು ತಿಂಗಳು ಮಾತ್ರ, ಮತ್ತೆ ತಮ್ಮ ಮೂಲ ಖುರ್ಚಿಗೆ ಓಡಿ ಬಂದಿದ್ದು, ನಾಗರೀಕ ಸೇವಾ ನಿಯಮಾವಳಿಗಳನ್ನು ಉಲ್ಲಂಘಸಿ ಆರೋಗ್ಯ ವಿಭಾಗದಲ್ಲಿ ಸುದೀರ್ಘ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಇವರು..

ಅವರ ಹತ್ತಿರ ಆಡಿಟ್ ನೀಡಿದ ನೋಟಿಸ್ ಬಗ್ಗೆ ಮಾಹಿತಿ ಕೇಳಿದಾಗ, ಅದೆಲ್ಲ ನಮಗೇನು ಗೊತ್ತಿಲ್ಲ, ದೊಡ್ಡವರು ಹೇಳುತ್ತಾರೆ ನಾವು ಮಾಡುತ್ತೇವೆ, ಆಡಳಿತ ಪಕ್ಷ ನಿರ್ಣಯ ಹೊರಡಿಸುತ್ತಾರೆ, ಅದನ್ನು ನಾವು ಪಾಲಿಸಬೇಕು, ಇದರಲ್ಲಿ ವಿಷಯ ನಿರ್ವಾಹಕ, ಆರೋಗ್ಯ ಅಧಿಕಾರಿ, ಆಯುಕ್ತರು, ಆಡಳಿತ ಪಕ್ಷ ಎಲ್ಲರೂ ಬರುತ್ತಾರೆ, ಎಂದು ಹಾರಿಕೆ ಉತ್ತರ ನೀಡಿದ ಅವರು, ನಾವು ಕೇಳಿದ ಪ್ರಶ್ನೆಗಳಿಗೆ ಅಂದರೆ, ಮ್ಯಾನೇಜರ್ ಆಗಿ ತಮ್ಮ ಜವಾಬ್ದಾರಿ ಏನು ಇಲ್ಲವಾ? ಸರ್ಕಾರದ ಸುತ್ತೋಲೆ ಏನಾದರು ಇದೆಯಾ? ಸಾಮಾನ್ಯ ನಿಧಿಯಿಂದ ದುಡ್ಡು ಖರ್ಚು ಮಾಡಬೇಕೆಂದು ಆದೇಶ ಇದೆಯಾ? ಈಗ ಜನರ ಪ್ರಯೋಜನೆಗೆ ಸೇರಬೇಕಾದ 1ಕೋಟಿ 4ಲಕ್ಷ ಯಾರು ಕೊಡುತ್ತಾರೆ? ಕೆಎಂಸಿ ನಿಯಮ ಉಲ್ಲಂಘಹಿಸಿದವರ ಮೇಲೆ ಏನು ಕ್ರಮ? ಎಂಬ ಪ್ರಶ್ನೆಗಳಿಗೆ ಉತ್ತರವೇ ಇಲ್ಲ..

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *