ಪಾಲಿಕೆ ನೌಕರರ ಮೇಲಿನ ಒತ್ತಡ ಹಾಗೂ ದಬ್ಬಾಳಿಕೆ ವಿರುದ್ಧ ಸಿಬ್ಬಂದಿಗಳಿಂದ ಕೈಗೆ ಕಪ್ಪುಬಟ್ಟೆ ಕಟ್ಟಿ ಪ್ರತಿಭಟನೆ..

ಪಾಲಿಕೆ ನೌಕರರ ಮೇಲಿನ ಒತ್ತಡ ಹಾಗೂ ದಬ್ಬಾಳಿಕೆ ವಿರುದ್ಧ ಕೈಗೆ ಕಪ್ಪುಬಟ್ಟೆ ಕಟ್ಟಿ ಪ್ರತಿಭಟನೆ..

ಚುನಾಯಿತ ಪ್ರತಿನಿಧಿಗಳು ಆಸ್ತಿ ಹಕ್ಕು ಬದಲಾವಣೆಯಲ್ಲಿ ಹಸ್ತಕ್ಷೇಪ ಮಾಡಬಾರದೆಂಬ ಸುತ್ತೋಲೆ ಇದೆ.

ಪಾಲಿಕೆ ಸಿಬ್ಬಂದಿಗಳ ಮೇಲೆ ಇನ್ಮುಂದೆ ಯಾವುದೇ ಒತ್ತಡ ಆಗದಂತೆ ನೋಡಿಕೊಳ್ಳುತ್ತೇವೆ..

ಪಾಲಿಕೆಯ ಆಡಳಿತ ಪಕ್ಷದ ನಾಯಕರ ಸ್ಪಷ್ಟನೆ.

ಬೆಳಗಾವಿ : ಗುರುವಾರ ದಿನಾಂಕ 13/03/2025ರಂದು ಮಹಾನಗರ ಪಾಲಿಕೆಯ ಎದುರಿಗೆ ಪಾಲಿಕೆಯ ಸಿಬ್ಬಂದಿಗಳೆಲ್ಲ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ತಮ್ಮ ಮೇಲೆ ಆಗುತ್ತಿರುವ ಒತ್ತಡ ಹಾಗೂ ದಬ್ಬಾಳಿಕೆ ಕೊನೆಯಾಗಬೇಕು ಎಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಪಾಲಿಕೆ ಸಿಬ್ಬಂದಿಗಳ ಇವತ್ತಿನ ಈ ಪ್ರತಿಭಟನೆಗೆ ಕಾರಣವೆಂದರೆ, ನಿನ್ನೆ ಬುಧವಾರ ಕಂದಾಯ ವಿಭಾಗದ ಒಬ್ಬ ಅಧಿಕಾರಿಯ ಜೊತೆ ಕೆಲಸದ ವಿಷಯವಾಗಿ ಪಾಲಿಕೆಯ ನಗರ ಸೇವಕರೊಬ್ಬರು ವಾಗ್ವಾದ ಮಾಡಿದ್ದು, ಅದು ತೀವ್ರ ಮಾತಿನ ಚಕಮಕಿಯಿಂದ ಬೆದರಿಕೆ ಹಾಕುವ ಹಂತದವರೆಗೆ ತಲುಪಿರುವ ಕಾರಣ ಇಂದು ಪಾಲಿಕೆ ಸಿಬ್ಬಂದಿಗಳು ಸಾರ್ವಜನಿಕರ ಸೇವೆ ಮಾಡುವ ನಮಗೆ ಸೂಕ್ತ ರಕ್ಷಣೆ ಬೇಕು, ಈ ದಬ್ಬಾಳಿಕೆ ಮತ್ತು ದೌರ್ಜನ್ಯಗಳು ನಿಲ್ಲಬೇಕು ಎಂದು ಪಾಲಿಕೆಯ ಕಚೇರಿ ಎದುರಿಗೆ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ಮಾಡಿದ್ದಾರೆ.

ಆಸ್ತಿ ಹಕ್ಕು ಬದಲಾವಣೆ ವಿಷಯದಲ್ಲಿ ಹಸ್ತಕ್ಷೇಪ ಸಲ್ಲದು..

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಹಾಪೌರರಿಗೆ, ಉಪ ಮಹಾಪೌರರಿಗೆ, ಆಡಳಿತ ಪಕ್ಷದ ನಾಯಕರಿಗೆ ಹಾಗೂ ಕೆಲ ನಗರ ಸೇವಕರಿಗೆ ಮನವಿ ಮಾಡಿಕೊಂಡ ಸಿಬ್ಬಂದಿಗಳು, ಸರ್ಕಾರದ ಸುತ್ತೋಲೆಯ ಪ್ರಕಾರ ಆಸ್ತಿ ಹಕ್ಕು ಬದಲಾವಣೆಯ ವಿಷಯಗಳಲ್ಲಿ ಚುನಾಯಿತ ಪ್ರತಿನಿಧಿಗಳಾಗಲಿ, ಸಾರ್ವಜನಿಕರಿಗಾಗಿ ಯಾರು ಹಸ್ತಕ್ಷೇಪ ಮಾಡುವಂತಿಲ್ಲ, ಅಧಿಕಾರಿ ಹಾಗೂ ಸಿಬ್ಬಂದಿಗಳ ಸುಗಮ ಆಡಳಿತಕ್ಕೆ ಅಡ್ಡಿ ಪಡಿಸಬಾರದು ಎಂಬ ನಿಯಮವಿದೆ, ಹೀಗಿದ್ದರೂ ಕೂಡಾ ನಮ್ಮ ಮೇಲೆ ಒತ್ತಡ, ಬೆದರಿಕೆಗಳು ಇದ್ದರೆ ನಾವು ಹೇಗೆ ಕೆಲಸ ಮಾಡಬೇಕು ಎಂದು ತಮ್ಮ ಸಮಸ್ಯೆಯನ್ನು ಮಹಾಪೌರರ ಬಳಿ ಹೇಳಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪಾಲಿಕೆಯ ಆಡಳಿತ ಪಕ್ಷದ ನಾಯಕರು, ಪಾಲಿಕೆ ಸಿಬ್ಬಂದಿಗಳ ಜೊತೆಗೆ ಇಂತಹ ದುರ್ವರ್ತನೆ ಆಗಬಾರದು, ನಾವು ಸಭೆ ನಡೆಸಿ ಚರ್ಚಿಸುತ್ತೇವೆ, ಸಾರ್ವಜನಿಕರ ಸೇವೆ ಮಾಡುತ್ತಾ ಬಂದಿರುವ ಸಿಬ್ಬಂದಿಗಳ ಮೇಲೆ ಮುಂದೆ ಇಂತಹ ದಬ್ಬಾಳಿಕೆಯ ಸಂಗತಿಗಳು ನಡೆಯದಂತೆ ನೋಡಿಕೊಳ್ಳುತ್ತೇವೆ, ನಾವು ನೀವು ಎಲ್ಲರೂ ಉತ್ತಮ ಭಾವನೆಯಿಂದ ಕಾರ್ಯ ಮಾಡಿದಾಗ ಸಾರ್ವಜನಿಕರ ಕಾರ್ಯಗಳ ಜೊತೆಗೆ ನಗರದ ಅಭಿವೃದ್ಧಿ ಕೂಡಾ ಆಗುತ್ತದೆ ಎಂಬ ಭರವಸೆಯ ಮಾತುಗಳನ್ನು ಆಡಿದ್ದಾರೆ.

ಮಹಾಪೌರರು, ಉಪ ಮಹಾಪೌರರು ಹಾಗೂ ಆಡಳಿತ ಪಕ್ಷದ ನಾಯಕರು ನೀಡಿದ ಸಾಂತ್ವನ ಹಾಗೂ ಭರವಸೆಯ ಮಾತುಗಳಿಗೆ ಸ್ಪಂದಿಸಿದ ಪಾಲಿಕೆ ಸಿಬ್ಬಂದಿಗಳು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ತಗೆದುಕೊಂಡಿದ್ದು ಎಂದಿನಂತೆ ಮತ್ತೆ ತಮ್ಮ ಕಾರ್ಯದಲ್ಲಿ ನಿರತರಾಗಿದ್ದಾರೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ..