ಪೌರ ಕಾರ್ಮಿಕರ ಪೌಷ್ಟಿಕ ಆಹಾರದ ಪೂರೈಕೆಯಲ್ಲಿ ದಿವ್ಯ ನಿರ್ಲಕ್ಷ್ಯ..
ಪಾಲಿಕೆಯ ನಾಲ್ಕು ಆಯುಕ್ತರಿಗೆ ಶೋಕಾಶ್ ನೋಟಿಸ್ ಜಾರಿ..
ಬೆಳಗಾವಿ : 2022 ರಿಂದ ಬೆಳಗಾವಿ ಮಹಾನಗರ ಪಾಲಿಕೆಯಡಿ ಕೆಲಸ ನಿರ್ವಹಿಸುವ ಪೌರ ಕಾರ್ಮಿಕರಿಗೆ ಪೌಷ್ಠಿಕ ಆಹಾರ ಅಥವಾ ಅದಕ್ಕೆ ಸಂಬಂಧಿಸಿದ ಭತ್ಯೆಯನ್ನು ನೀಡದ ಹಿನ್ನೆಲೆ ಹಾಲಿ ಮಾಜಿ ಸೇರಿ ಒಟ್ಟು 4 ಆಯುಕ್ತರಿಗೆ ಸರ್ಕಾರ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ ಎಂದು ನ್ಯಾಯವಾದಿ ಸುರೇಂದ್ರ ಉಗಾರೆ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ವಕೀಲರಾದ ಸುರೇಂಧ್ರ ಉಗಾರೆ ಅವರು, ಬೆಳಗಾವಿಯಲ್ಲಿ ಸುಮಾರು 1300 ಕ್ಕೂ ಅಧಿಕ ಪೌರ ಕಾರ್ಮಿಕರಿದ್ದು, ಪೌಷ್ಠಿಕ ಬೆಳಗಿನ ಆಹಾರವನ್ನು ನೀಡಲಾಗುತ್ತಿದೆ. ಮೊದ ಮೊದಲೂ ಇದಕ್ಕಾಗಿ ಭತ್ಯೆ ನೀಡಲಾಗುತ್ತಿತ್ತು. ನಂತರದಲ್ಲಿ ಕಡ್ಡಾಯವಾಗಿ 2022 ರಿಂದ ಪೌಷ್ಠಿಕ ಆಹಾರವನ್ನು ನೀಡಬೇಕೆಂದು ಆದೇಶಿಸಲಾಯಿತು. ಆದರೇ ಬೆಳಗಾವಿ ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಇತ್ತ ಭತ್ಯೆಯನ್ನು ನೀಡದೇ, ಅತ್ತ ಪೌಷ್ಠಿಕ ಆಹಾರವನ್ನು ನೀಡಿಲ್ಲ. ಈ ಹಿನ್ನೆಲೆ ನಾಗರೀಕ ಹಕ್ಕು ನಿರ್ದೇಶನಾಲಯಕ್ಕೆ ಅರ್ಜಿಯನ್ನು ಸಲ್ಲಿಸಲಾಗಿದೆ. ಈ ಆಧಾರದ ಮೇಲೆ ನಡೆದ ತನಿಖೆಯಲ್ಲಿ ಪೌಷ್ಠಿಕ ಆಹಾರವಾಗಲಿ ಅಥವಾ ಅದಕ್ಕೆ ಬೇಕಾದ ಭತ್ಯೆಯನ್ನು ನೀಡಿಲ್ಲವೆಂದು ಸಂಬಂಧಿಸಿದ ಇಲಾಖೆಯೂ ವರದಿಯನ್ನು ನೀಡಿದೆ. ಬೆಳಗಾವಿ ಉತ್ತರ ವಲಯದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪಿ ಎಸ್ ಐ ಎಸ್ ಎಲ್ ದೇಶನೂರ ಅವರು ಸಿದ್ಧಪಡಿಸಿರುವ ವರದಿಯೂ ಇದಕ್ಕೆ ಹಿಂದಿನ ಆಯುಕ್ತರಾದ ರುದ್ರೇಶ ಘಾಳಿ, ಅಶೋಕ ದುಡಗುಂಟಿ, ಪಿ.ಎನ್.ಲೋಕೇಶ್ ಮತ್ತು ಹಾಲಿ ಆಯುಕ್ತರಾದ ಶುಭಾ ಬಿ. ಅವರನ್ನು ಜವಾಬ್ದಾರರನ್ನಾಗಿಸಿದೆ.
ಇದರ ವಿರುದ್ಧ ಕ್ರಮಕೈಗೊಳ್ಳಲು ಎಡಿಜಿಪಿ ಅವರಿಗೆ ಪತ್ರವನ್ನು ಬರೆಯಲಾಗಿದೆ. ಕೋಟ್ಯಾಂತರ ರೂಪಾಯಿ ಹಣವನ್ನು ಮಹಾನಗರ ಪಾಲಿಕೆ ನೀಡದೇ ಇಟ್ಟುಕೊಂಡು ಕುಳಿತಿದೆ. ಬಂಡವಾಳ ಇಲ್ಲ ಎಂಬುದನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಬೇಕಿತ್ತು. ಪೌರ ಕಾರ್ಮಿಕರ ಕುರಿತು ದಿವ್ಯ ನಿರ್ಲಕ್ಷ್ಯ ತೋರುತ್ತಿದೆ. ಸರ್ಕಾರ ಹಾಲಿ ಮತ್ತು ಮಾಜಿ ಸೇರಿ ಒಟ್ಟು 4 ಜನ ಆಯುಕ್ತರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದರು.