ಫೆಬ್ರುವರಿಯಲ್ಲೇ ನಗರದಲ್ಲಿ ಟ್ಯಾಂಕ್ ಮೂಲಕ ಕುಡಿಯುವ ನೀರು ಪೂರೈಕೆ..
ಅತ್ಯಧಿಕ ಮಳೆ ಆಗಿರುವ ಬೆಳಗಾವಿ ನಗರಕ್ಕೆ ಇಷ್ಟು ಬೇಗ ನೀರಿನ ಅಭಾವವೇ?
ಪಾಲಿಕೆ ಅಧಿಕಾರಿಗಳೇ, ನಗರ ಸೇವಕರೇ, ಶಾಸಕರೇ ಏನಿದು ತಮ್ಮ ಆಡಳಿತ?
ಬೆಳಗಾವಿ : ಕಳೆದ ಕೆಲವು ವರ್ಷಗಳ ಹಿಂದೆ ಬೆಳಗಾವಿ ನಗರದ ಜನತೆಗೆ ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಕುಡಿಯುವ ನೀರಿನ ವ್ಯವಸ್ಥೆ ಇತ್ತು, ಆದರೆ ಈಗ ಸ್ಮಾರ್ಟ್ ಸಿಟಿ, ಅಭಿವೃದ್ಧಿ, ಹಾಳು, ಮೂಳು, ಮಣ್ಣು ಮಸಿ ಎಂದು ನಗರದ ಜನತೆಗೆ ಎಂಟು ದಿನಗಳಿಗೊಮ್ಮೆ ಕುಡಿಯುವ ನೀರಿನ ಭಾಗ್ಯ ನೀಡಿದ ನಗರದ ರಾಜಕಾರಣಿಗಳು ಹಾಗೂ ಪಾಲಿಕೆಯ ಅಧಿಕಾರಿಗಳು ಇಂದು ಟ್ಯಾಂಕ್ ಮೂಲಕ ನೀರು ಪೂರೈಕೆ ಮಾಡುವದನ್ನು ನೋಡಿದರೆ ಅಭಿವೃದ್ಧಿಯಲ್ಲಿ ನಮ್ಮ ಬೆಳಗಾವಿ ಬಹಳ ಹಿಂದೆ ಉಳಿದಿದೆಯಾ ಎಂಬ ಸಂಶಯ ಕಾಡುತ್ತಿದೆ.

2024ರ ವರ್ಷದಲ್ಲಿ ನಗರಕ್ಕೆ ತುಂಬಾ ಚೆನ್ನಾಗಿ ಮಳೆ ಆಗಿದ್ದು, ನಗರಕ್ಕೆ ಕುಡಿಯುವ ನೀರು ಪೂರೈಕೆಯ ಜಲಾಶಯಗಳು ಭರ್ತಿ ಆಗಿದ್ದವು, ಆದರೆ ಈಗಿನ್ನೂ ಫೆಬ್ರುವರಿ ತಿಂಗಳಲ್ಲೇ ನಗರಕ್ಕೆ ಎಂಟು ದಿನಗಳಿಗೆ ಒಮ್ಮೆ ನೀರು ನೀಡುತ್ತಿರುವುದು ಸಾಮಾನ್ಯವಾಗಿದ್ದು, ಇಂದು ಟ್ಯಾಂಕ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿರುವುದನ್ನು ನೋಡಿದರೆ ಇವರ ಆಡಳಿತಕ್ಕೆ………
ಆಡಳಿತ ಸರ್ಕಾರದ ಶಾಸಕರು, ಪಾಲಿಕೆಯಲ್ಲಿ ಬಹುಮತ ಇರುವ ಬಲಿಷ್ಠ ಬಿಜೆಪಿ ಪಕ್ಷದ ನಗರಸೇವಕರು, ಬಹುವರ್ಷಗಳಿಂದ ಪಾಲಿಕೆಯಲ್ಲೇ ನೆಲೆನಿಂತ ಪಾಲಿಕೆಯ ಘಟಾನುಘಟಿ ಅಧಿಕಾರಿಗಳು ಇವರೆಲ್ಲರಿಗೆ, ಮತ ನೀಡಿದ, ತೆರಿಗೆ ಕಟ್ಟಿದ ಜನರ ಬಗ್ಗೆ ಕಾಳಜಿ ಇಲ್ಲವೇ? ಮೂಲಭೂತ ಅವಶ್ಯಕತೆಯಾದ ಜಿವಜಲವನ್ನು ವ್ಯವಸ್ಥಿತವಾಗಿ ಪೂರೈಕೆ ಮಾಡದ ಇವರ ಆಡಳಿತ ಎಂತಹದು? ಜನರಿಗೆ ಕನಿಷ್ಠ ಸೌಲಭ್ಯ ನೀಡಲು ವಿಫಲ ಆಗುತ್ತಿರುವ ಇವರು ಮತ್ತಾವ ಮಹತ್ತರ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ ಎಂಬ ಸಂಶಯ ಸಾರ್ವಜನಿಕರಲ್ಲಿದೆ.

ಮಲೆನಾಡೆ ಎಂದು ಹೆಸರಾಗಿರುವ ಬೆಳಗಾವಿ ನಗರಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿ ಪಾಪ ಜನರು ತಮ್ಮ ಕೆಲಸಗಳನ್ನು ಬದಿಗೊತ್ತಿ, ಟ್ಯಾಂಕರ್ ಬರುವದನ್ನು ಕಾಯ್ದು, ಬಿಂದಿಗೆಯಲ್ಲಿ ನೀರು ತುಂಬಿಸಿಕೊಳ್ಳುವ ದೃಶ್ಯ ಬರಪೀಡಿತ ಪ್ರದೇಶವನ್ನು ನೆನಪಿಸುವಂತಿತ್ತು, ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಬಂದರೇನು?ಇಂತವರನ್ನು ಮತ ನೀಡಿ ಆರಿಸಿ ತಂದರೇನು? ಜನಪ್ರತಿನಿಧಿಗಳು, ಅಧಿಕಾರಿಗಳು ತಮ್ಮ ತಮ್ಮ ಸ್ವಂತ ಕೆಲಸದಲ್ಲಿಯೇ ತಲ್ಲಿನರಾದರೆ? ಅವರು ಹೇಳುವ, ಮಾಡುವ ಅಭಿವೃದ್ಧಿ ಕೆಲಸವೆಲ್ಲ ಅವರವರ ಸ್ವಂತ ಹಿತಾಸಕ್ತಿಗಾಗಿ ಇರಬಹುದೇ ಎಂಬ ಸಂಶಯ ನಗರವಾಸಿಗಳಲ್ಲಿ ಮುಡುತ್ತಿದೆ.
ಪರಿಸ್ಥಿತಿ ಹೀಗಿರುವಾಗ, ಹುಬ್ಬಳ್ಳಿ ಧಾರವಾಡ ಅವಳಿ ನಗರಕ್ಕೆ ಬೆಳಗಾವಿ ಜಲಾಶಯಗಳಿಂದ ಕೈಗಾರಿಕಾ ಉದ್ದೇಶಕ್ಕಾಗಿ ನೀರು ಬಿಡುವ ಕಾರ್ಯವು ಪ್ರಗತಿಯಲ್ಲಿದ್ದು, ಬೆಳಗಾವಿ ಜನತೆಯ ಕಷ್ಟವನ್ನು ಕೇಳುವವರಾರು?
ಏನೇ ಆದರೂ ಪ್ರತಿದಿನ ಕುಡಿಯುವ ನೀರಿಗಾಗಿ ಪರದಾಡುವ ಬೆಳಗಾವಿ ನಗರದ ಜನಸಾಮಾನ್ಯರ ಹಿಡಿಶಾಪ ಯಾರಿಗೆ ತಟ್ಟಬಹುದು??
ವರದಿ ಪ್ರಕಾಶ್ ಬಸಪ್ಪ ಕುರಗುಂದ.