ಬಿರುಗಾಳಿಯಂತೆ ಶುರುವಾಗಿ ತಂಗಾಳಿಯಂತೆ ಕೊನೆಗೊಂಡ ಪಾಲಿಕೆ ಸಾಮಾನ್ಯ ಸಭೆ..
ಪಾಲಿಕೆ ಸಭೆಯನ್ನು ನಗೆಗಡಲಿಗೆ ನೂಕಿದ ನಾಯಿ ಹಾವಳಿ ಹಾಗೂ ನೈಂಟಿ ವಿಚಾರ..
ಬೆಳಗಾವಿ : ಗುರುವಾರ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಆರಂಭವಾಗಿ, ಮಹಾಪೌರರು ಸಭೆಯ ನಡಾವಳಿಯನ್ನು ಓದಲು ಶುರುಮಾಡುವಷ್ಟರಲ್ಲಿಯೇ ಪಾಲಿಕೆಯ ಎಂಇಎಸ್ ನಗರ ಸೇವಕ ರವಿ ಸಾಳುಂಕೆ ಹಾಗೂ ಇನ್ನಿಬ್ಬರು ನಗರ ಸೇವಕರು ತಮಗೆ ಮರಾಠಿ ಭಾಷೆಯಲ್ಲಿ ಸಭೆಯ ಕಾರ್ಯಸೂಚಿ ಹಾಗೂ ನೋಟೀಸು ಪ್ರತಿಗಳು ಲಭಿಸಿಲ್ಲ ಎಂದು ಗದ್ದಲ ಮಾಡುತ್ತಾ, ಸಭೆಯ ಪ್ರಾರಂಭದಲ್ಲೇ ಸಭೆಯ ಬಹಿಷ್ಕಾರ ಮಾಡಿ ವಿರೋಧ ಪಕ್ಷದವರೊಂದಿಗೆ ಸಭೆಯಿಂದ ಹೊರನಡೆದಿದ್ದು ಒಂದು ರೀತಿಯಲ್ಲಿ ಪ್ರಾರಂಭದಲ್ಲೇ ಬಿರುಗಾಳಿಯ ವಾತಾವರಣ ಸೃಷ್ಟಿ ಮಾಡಿದಂತಿತ್ತು.

ಸಭೆಯು ಕೆಲ ಸಮಯದ ನಂತರ ಮತ್ತೆ ಪ್ರಾರಂಭವಾಗಿ ಕಾರ್ಯಸೂಚಿಯಲ್ಲಿಯ ಹಲವು ವಿಚಾರಗಳು ಪ್ರಸ್ತಾಪವಾಗಿ, ಚರ್ಚೆಗಳಾಗಿ, ಅನುಮೋದನೆ ಕೂಡಾ ಆಗಿದ್ದು, ಊಟದ ವಿರಾಮದ ನಂತರ ಸಭೆಯಲ್ಲಿ ಅಭಿವೃದ್ಧಿಪರ ಹಾಗೂ ಆರೋಗ್ಯಕರವಾದ ಚರ್ಚೆಯೊಂದಿಗೆ ಸಭೆಯನ್ನು ನಗೆಗಡಲಿನಲ್ಲಿ ತೇಲಿಸುವ ಕೆಲ ಪ್ರಸಂಗಗಳೂ ಜರುಗಿದವು.
ಆಡಳಿತ ಪಕ್ಷದ ನಾಯಕರಾದ ಹನಮಂತ ಕೋoಗಾಲಿ ಅವರು ನಗರ ಯೋಜನಾ ಅಧಿಕಾರಿಯವನರನ್ನು ಕಟ್ಟಡ ಪರವಾನಿಗೆ ಮುಕ್ತಾಯದ ಹಾಗೂ ಇತರ ಪ್ರಮಾಣಪತ್ರಗಳನ್ನು ಹೇಗೆ ನೀಡುವಿರಿ, ಪಡೆಯದೇ ಇದ್ದವರ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಾ ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಮಾತು ಮುಂದುವರೆಸಿದ ಶಾಸಕ ಅಭಯ ಪಾಟೀಲ ಅವರು, ತಮ್ಮ ನಿಯಮಗಳನ್ನು ದೊಡ್ಡ ದೊಡ್ಡ ಅಪಾರ್ಟ್ಮೆಂಟ್, ಬಿಲ್ಡಿಂಗ್ ಕಟ್ಟುವವರ ಕಡೆಗೆ ಪಾಲಿಸಿ, ಪಾಪ ಬಡವರು ಕಟ್ಟುವ ಸಣ್ಣ ಪುಟ್ಟ ಮನೆಗಳ ಮೇಲೆ ರೂಲ್ಸ್ ಅಂತಾ ಹೊರೆ ಹಾಕಬೇಡಿ ಎಂದರು.

ಇದಕ್ಕೆ ಧ್ವನಿಗೂಡಿಸಿದ ನಾಮನಿರ್ದೇಶಿತ ಪಾಲಿಕೆ ಸದಸ್ಯ ರಮೇಶ ಸೊಂಟಕ್ಕೆ ಅವರು, ತಮ್ಮ ನಗರ ಯೋಜನೆಯ ನಿಯಮಗಳಿಂದ ಇನ್ನು ಮುಂದೆ ನಗರದಲ್ಲಿ ಯಾರು ಮನೆ ಕಟ್ಟದಂತೆ ಆಗಿದೆ, ನೀವು ಕೇಳುವ ದಾಖಲೆ, ಹಾಗೂ ಪ್ರಮಾಣ ಪತ್ರಗಳಿಗೆ ಹೆದರಿ ಬಡವರು ಮನೆ ಕಟ್ಟಿಸದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದ ಮಾತಿಗೆ ಉತ್ತರಿಸಿದ ಮಹಾಪೌರರು, ದೊಡ್ಡ ದೊಡ್ಡ ಅಪಾರ್ಟಮೆಂಟಿಗೆ ಮಾತ್ರ ಎಲ್ಲಾ ದಾಖಲೆ ಪಡೆಯುತ್ತಾರೆ, 20/30, 40/60 ಇಂತ ಸಣ್ಣ ಮನೆಗಳಿಗೆ ಅಲ್ಲಾ ಎಂದು ತಿಳಿಸಿ ಹೇಳುತ್ತಿರುವಾಗ ಮಧ್ಯ ಪ್ರವೇಶಿಸಿದ ಶಾಸಕ ಅಭಯ ಪಾಟೀಲ್ ಅವರು,
ಮಹಾಪೌರರೇ ತಾವು ರಮೇಶ್ ಅವರಿಗೆ ಏನು ಹೇಳಬೇಡಿ, ಅವರಿಗೆ ಎಲ್ಲಾ ತಿಳಿದಿದೆ, ಅವರು 90 (ನೈಂಟಿ) ಯಿಂದ ಇಲ್ಲಿ ಇದ್ದರೆ, 60 ಯಿಂದ ಅಲ್ಲಾ 90 ಯಿಂದ ಎಂದು ಕೈ ಮಾಡಿ ತೋರಿಸಿದಾಗ ಇಡೀ ಸಭೆಯೇ ನಗೆಗಡಲಿನಲ್ಲಿ ಮುಳುಗಿದಂತಿತ್ತು.

ಇನ್ನು ನಗರ ಸೇವಕ ನೀತಿನ ಜಾಧವ ಅವರು ನಗರದಲ್ಲಿ ನಾಯಿ ಹಾವಳಿಯನ್ನು ನಿಯಂತ್ರಿಸಲು ಶಾಶ್ವತ ಪರಿಹಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಪಶುಸಂಗೋಪನೆ ಇಲಾಖೆಯ ಅಧಿಕಾರಿ ನೀಡಿದ ಮಾಹಿತಿಯ ನಂತರವೂ ಕೆಲ ನಗರ ಸೇವಕರು ಆರೋಗ್ಯ ಅಧಿಕಾರಿಗಳಿಂದ ಉತ್ತರ ಬಯಸಿದಾಗ, ಪಾಲಿಕೆ ಆರೋಗ್ಯ ಅಧಿಕಾರಿ ನೀಡುವ ಮಾಹಿತಿಯ ವೈಖರಿ ಹಾಗೂ ನಗರ ಸೇವಕರು ಕೇಳುವ ಪ್ರಶ್ನೆಗಳು ಮತ್ತೆ ಸಭೆಯಲ್ಲಿ ನಗೆಯನ್ನು ಚೆಲ್ಲಿದಂತಿತ್ತು.
ನಾಯಿ ಕೇಂದ್ರ ನಿರ್ಮಾಣಕ್ಕೆ ಪ್ರತಿ ನಗರ ಸೇವಕರು ತಮ್ಮ ಅನುದಾನದಲ್ಲಿ ಎರಡು ಲಕ್ಷ ನೀಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಂಗೊಳ್ಳಿ ಅವರು ಹೇಳಿ ಎಲ್ಲರೂ ಒಪ್ಪಿಗೆ ಸೂಚಿಸಿದಾಗ, ಮಹಾಪೌರರು ನಾಮನಿರ್ದೇಶಿತ ಸದಸ್ಯರು ಕೂಡಾ ನೀಡಬೇಕು ಎಂದು ಹಾಸ್ಯವಾಗಿ ಹೇಳಿದಾಗ ನಮ್ಮ ಹಣವನ್ನು ಪಾಲಿಕೆಯ ಆಯುಕ್ತರೇ ನೀಡುತ್ತಾರೆ ಎಂದು ಸದಸ್ಯ ಗಿರೀಶ್ ನಾಶಿಪುಡಿ ಎಂದಾಗ ಮತ್ತೆ ಮಂದಹಾಸ.

ಇನ್ನು ನಗರ ಸೇವಕ ರವಿ ದೋತ್ರೆ ಅವರು ಕೆಇಬಿಯ ಶಿಂಧೆ ಅವರ ಮೇಲೆ ಮಾಡಿದ ಗಂಭೀರವಾಗಿ ಆರೋಪಕ್ಕೆ ಶಿಂಧೆ ಅವರು ಭಾವನಾತ್ಮಕವಾಗಿ ನೀಡಿದ ಉತ್ತರವು ಸಭೆಯ ನಗೆಗೆ ಕಾರಣವಾಗಿದ್ದು, ನಗರ ಸೇವಕ ಶಾಹಿದ್ ಪಠಾಣ್ ಅವರ ಅತೀ ಗಂಭೀರವಾದ ಅನ್ಯಾಯದ ವಿಷಯ ನಡಾವಳಿಯಲ್ಲಿ ಇದ್ದು ಕೂಡಾ ಅವರು ಯಾಕೆ ಪ್ರಸ್ತಾಪ ಮಾಡುತ್ತಿಲ್ಲ ಎಂದು ಅವರನ್ನು ಕಾಡಿದ್ದು ಕೂಡಾ ಹಾಸ್ಯದ ದಾಟಿಯಲ್ಲೇ ಇತ್ತು.
ಒಟ್ಟಿನಲ್ಲಿ ಇಂದಿನ ಪರಿಷತ್ ಸಭೆಯಲ್ಲಿ ಬೀದಿನಾಯಿಗಳಿಗೆ ಶೆಡ್ ನಿರ್ಮಾಣ, ತುರಮರಿಯಲ್ಲಿ ಬಯೋ ಗ್ಯಾಸ ನಿರ್ಮಾಣ ಘಟಕ ಹಾಗೂ ಇನ್ನಿತರ ಅಭಿವೃದ್ಧಿಪರ ವಿಷಯಗಳಿಗೆ ಅನುಮೋದನೆ ನೀಡುವ ಮೂಲಕ ಬಿರುಗಾಳಿಯಂತೆ ಶುರುವಾದದ್ದು, ಮಧ್ಯಾಹ್ನದ ನಂತರ ನಗುವಿನ ಅಲೆಯಲ್ಲಿ ತಂಗಾಳಿಯಂತೆ ಕೊನೆಗೊಂಡಿದೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ..