ಬೀದಿ ಬದಿ ವ್ಯಾಪಾರಿಗಳಿಗೆ ಭೂ ಬಾಡಿಗೆ ಸಂಗ್ರಹಕಾರರಿಂದ ಕಿರುಕುಳದ ಆರೋಪ.

ಬೀದಿ ಬದಿ ವ್ಯಾಪಾರಿಗಳಿಗೆ ಭೂ ಬಾಡಿಗೆ ಸಂಗ್ರಹಕಾರರಿಂದ ಕಿರುಕುಳದ ಆರೋಪ.

ಹೆಚ್ಚು ಹಣ ಪಡೆಯುತ್ತಿದ್ದಾರೆಂದು ಪಟ್ಟಣ ವ್ಯಾಪಾರಿ ಸಮಿತಿಯಿಂದ ಮಹಾಪೌರರಿಗೆ ಮನವಿ..

ನಿಯಮ ಮೀರಿ ನಡೆದುಕೊಂಡರೆ ಗುತ್ತಿಗೆ ರದ್ದು ಮಾಡುವಾದಾಗಿ ಮೇಯರ್ ಅವರಿಂದ ಭರವಸೆ..

ಬೆಳಗಾವಿ : 58 ವಾರ್ಡುಗಳಿರುವ ಬೆಳಗಾವಿಯ ದೊಡ್ಡ ಮಹಾನಗರ ವ್ಯಾಪ್ತಿಯಲ್ಲಿ ಪ್ರತಿದಿನ ಸಹಸ್ರಾರು ವ್ಯಾಪಾರಿಗಳು ಬೀದಿ ಬದಿಯಲಿ ಕುಳಿತು ವ್ಯಾಪಾರ ಮಾಡಿ ತಮ್ಮ ಉಪಜೀವನ ನಡೆಸುತ್ತಿದ್ದಾರೆ, ಅಂತಹ ಬಡ ವ್ಯಾಪಾರಿಗಳಿಂದ ನಿಯಮ ಬಾಹಿರವಾಗಿ ಭೂ ಬಾಡಿಗೆ ಸಂಗ್ರಹ ಮಾಡುತ್ತಿರುವ ಗುತ್ತಿಗೆದಾರ ಹಾಗೂ ಅವರ ಸಂಗಡಿಗರ ಮೇಲೆ ಕ್ರಮ ಆಗಬೇಕು ಎಂದು ಪಾಲಿಕೆಯ ಪಟ್ಟಣ ವ್ಯಾಪಾರಿ ಸಮಿತಿಯ ಸದಸ್ಯರು ಮಹಾಪೌರರಿಗೆ ಮನವಿ ನೀಡಿದ್ದಾರೆ..

ಸೋಮವಾರ ದಿನಾಂಕ 24/11/2025 ರಂದು ಬೆಳಗಾವಿ ಪಾಲಿಕೆಯಲ್ಲಿ ಮಹಾಪೌರ ಮಾಂಗೇಶ್ ಪವಾರ್ ಹಾಗೂ ಆಡಳಿತ ಪಕ್ಷದ ನಾಯಕರಾದ ಹನಮಂತ ಕೊಂಗಾಲಿ ಅವರನ್ನು ಭೇಟಿ ಮಾಡಿ ಮನವಿ ನೀಡಿದ ವ್ಯಾಪಾರ ಸಮಿತಿ ಸದಸ್ಯರು, ನೆಲದ ಮೇಲೆ ಕುಳಿತು ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಹತ್ತು ರೂಪಾಯಿ ಭೂಬಾಡಿಗೆ ತಗೆದುಕೊಳ್ಳಬೇಕು ಎಂಬ ನಿಯಮ ಇದ್ದರೂ ಇಪ್ಪತ್ತು ರೂಪಾಯಿ ತಗೆದುಕೊಳ್ಳುತ್ತಿದ್ದಾರೆ, ಪಾಸ್ಟ್ ಫುಡ್ ಹಾಗೂ ಎಳೆನೀರು ಅಂಗಡಿಗಳಿಗೆ 50ರೂಪಾಯಿ ಇರುವಲ್ಲಿ 100 ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವ್ಯಾಪಾರಿಗಳು ಇಷ್ಟೇಕೆ ಎಂದು ಕೇಳಿದಾಗ ಹಾಗೂ ಹೆಚ್ಚು ಹಣ ನೀಡಲು ವಿರೋಧ ಮಾಡಿದಾಗ ಅವರ ಮೇಲೆ ದಬ್ಬಾಳಿಕೆ ಮಾಡುವರು, ವ್ಯಾಪಾರದ ಉತ್ಪನ್ನಗಳು ಹಾಗೂ ವ್ಯಾಪಾರಿ ಸಾಮಗ್ರಿಗಳನ್ನು ತಗೆದುಕೊಂಡು ಹೋಗುವ ಬೆದರಿಕೆ ಹಾಕುವರು, ಇಂತಹ ದೌರ್ಜನ್ಯ ಮಾಡುವ ಅಧಿಕಾರ ಇವರಿಗೆ ಯಾರು ನೀಡಿದ್ದಾರೆ? ಪಾಲಿಕೆ ಅಧಿಕಾರಿ ಹಾಗೂ ಚುನಾಯಿತ ನಗರ ಸೇವಕರಿಗೆ ವ್ಯಾಪಾರಿಗಳ ಬಗ್ಗೆ ಕಾಳಜಿಯೇ ಇಲ್ಲವೇ? ಎಂಬ ಪ್ರಶ್ನೆ ಮಾಡಿದರು..

ನೂರಕ್ಕೆ ನೂರರಷ್ಟು ಹೆಚ್ಚು ಮಾಡಿ ಭೂ ಬಾಡಿಗೆ ವಸೂಲಿ ಮಾಡುವ ಈ ಪದ್ಧತಿ ರದ್ದಾಗಬೇಕು, ಅಷ್ಟಕ್ಕೂ ಈ ಗುತ್ತಿಗೆದಾರ ಹಾಗೂ ಭೂ ಬಾಡಿಗೆ ಸಂಗ್ರಹಕಾರರು ಗುತ್ತಿಗೆ ನಿಯಮಗಳನ್ನು ಸರಿಯಾಗಿ ಪಾಲಿಸುವರೇ? ಇವರು ಕನಿಷ್ಠ ನಿಯಮಗಳನ್ನು ಕೂಡಾ ಪಾಲಿಸುವದಿಲ್ಲ ಎಂದು ದೂರಿದ್ದಾರೆ, ಇದೇ ರೀತಿ ನಿಯಮ ಬಾಹಿರ ಭೂ ಬಾಡಿಗೆ ಸಂಗ್ರಹ ಮುಂದುವರೆದರೆ ಬರುವ ಚಳಿಗಾಲ ಅಧಿವೇಶನದಲ್ಲಿ ಬ್ರಹತ್ ಹೋರಾಟ ಮಾಡಿ, ಈ ವಿಷಯವನ್ನು ಮುಖ್ಯಮಂತ್ರಿ ಹಾಗೂ ಸಚಿವರ ಗಮನಕ್ಕೆ ತರುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ..

ಮನವಿಗೆ ಪ್ರತಿಕ್ರಿಯೆ ನೀಡಿದ ಮಹಾಪೌರರಾದ ಮಾಂಗೇಶ್ ಪವಾರ್ ಹಾಗೂ ಆಡಳಿತ ಪಕ್ಷದ ನಾಯಕರಾದ ಹನಮಂತ ಕೊಂಗಾಲಿ ಅವರು, ಭೂ ಬಾಡಿಗೆ ಗುತ್ತಿಗೆದಾರರು ಹಾಗೂ ಬಾಡಿಗೆ ಸಂಗ್ರಹಕಾರರಿಂದ ವ್ಯಾಪಾರಿಗಳಿಗೆ ತೊಂದರೆ ಆಗುತ್ತಿದ್ದರೆ ಅದನ್ನು ಸಹಿಸುವದಿಲ್ಲ, ಬಡ ವ್ಯಾಪಾರಿಗಳಿಗೆ ತೊಂದರೆ ನೀಡುವ ಕೆಲಸ ಆಗಬಾರದು, ನಾವು ಇದರ ಬಗ್ಗೆ ಅವರಿಗೆ ತಿಳಿಸಿ ಹೇಳುತ್ತೇವೆ, ತಿದ್ದಿಕೊಳ್ಳದೇ ಹೀಗೆ ಮುಂದುವರೆಸಿದರೆ ಮುಂದೆ ಗುತ್ತಿಗೆಯನ್ನೇ ರದ್ದು ಮಾಡುವ ವಿಚಾರ ಮಾಡುತ್ತೇವೆ ಎಂದಿದ್ದಾರೆ..

ಈ ವೇಳೆ ಪಟ್ಟಣ ವ್ಯಾಪಾರಿ ಸಮಿತಿ ಸದಸ್ಯರಾದ ಇಮಾಮಹುಸೇನ್ ನದಾಫ್, ಪ್ರಸಾದ್ ರಾಮಚಂದ್ರ ಕವಳೆಕರ, ಸಂಗೀತಾ ಕೊತ, ವಿಜಯ್ ಚೌಹಾನ್, ಚಂದ್ರಿಕಾ ದೇಸುರ್ಕರ, ಶ್ರೀಪಾದ್ ಹೊಳಕರ, ಶೋಭಾ ನಾಯಕ್, ಮಹಮ್ಮದ್ ಅಲಿ ಭಗವಾನ್ ಹಾಗೂ ಬೀದಿ ಬದಿ ವ್ಯಾಪಾರಿಗಳು ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ.