ಬೆಳಗಾವಿಯಲ್ಲಿ ಕನ್ನಡ ಕಾಳಜಿಯ ಕೆಎಎಸ್ ಅಧಿಕಾರಿ.
ಮನಕನ್ನಡ, ಮನೆಕನ್ನಡ, ಕಚೇರಿಯಂತೂ ಕನ್ನಡಚರಿತ್ರೆ..
ಮನೆಯ ತುಳಸಿ ಕಟ್ಟೆಯಲ್ಲೂ ಕನ್ನಡ ಡಿಂಡಿಮ..
ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡದ ಕಾಳಜಿಯ ಕೊರತೆಯ ನಡುವೆ, ಯುವಸಮೂಹಕ್ಕೆ ಮಾದರಿಯಾಗಿ, ಗಡಿಯಲ್ಲಿ ಕನ್ನಡ ಡಿಂಡಿಮ ಮೊಳಗಿಸಲು ಸ್ಫೂರ್ತಿಯ ಶಿಖರವಾಗಿ, ಸರ್ಕಾರಿ ವೃತ್ತಿಯೊಂದಿಗೆ ಕನ್ನಡ ಕಾಳಜಿ ಮೆರೆಯುವ ಚಟುವಟಿಕೆಗಳನ್ನು ಕೈಗೊಂಡು ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವ ಬೆಳಗಾವಿಯ ಸಹೃದಯಿ ಅಧಿಕಾರಿಯೆಂದರೆ ಪರಶುರಾಮ ದುಡಗುಂಟಿಯವರು..
ಬೆಳಗಾವಿಯ ಜಿಲ್ಲಾ ಪಂಚಾಯಿತಿ ಕಾರ್ಯಲಯದ ಮುಖ್ಯ ಲೆಕ್ಕಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಪರಶುರಾಮ ದುಡುಗುಂಟಿ ಅವರು ಕನ್ನಡ ಭಾಷಾ ಪ್ರೇಮ ಮೆರೆದಿದ್ದಾರೆ, ದುಡುಗುಂಟಿ ಅವರು ವಾಸವಿರುವ ಲೋಕೋಪಯೋಗಿ ಇಲಾಖೆಯ ಸರ್ಕಾರಿ ವಸತಿಗೃಹದ ವರ್ಣಲಂಕಾರ ನೋಡುಗರ ಮನಸ್ಸನ್ನು ಮೃದಗೊಳಿಸುತ್ತದೆ.

ಮನೆಯ ಸುತ್ತಲಿನ ಗೋಡೆಗಳು, ಆವರದಲ್ಲಿರುವ ಗಿಡಗಳು, ಕುಳಿತುಕೊಳ್ಳುವ ಆಸನಗಳು, ಮನೆಯ ಇಡೀ ಹೊರಗಿನ ಭಾಗಗಳು, ಮುಖ್ಯವಾಗಿ ತುಳಸಿ ಕಟ್ಟೆಯೂ ಕೂಡಾ ಹಳದಿ ಕೆಂಪು ಬಣ್ಣದಿಂದ ಕೂಡಿದ್ದು ಕನ್ನಡ ಪ್ರೀತಿಯ ಮನಸ್ಸುಗಳಿಗೆ ಸ್ವರ್ಗವಾಗಿದೆ ಎನ್ನಬಹುದು..
ಇನ್ನು ತಾವು ಕಾರ್ಯ ನಿರ್ವಹಿಸುವ ಜಿಲ್ಲಾ ಪಂಚಾಯತಿ ಕಚೇರಿಯ ತಮ್ಮ ಕೊಠಡಿಯೂ ಕೂಡಾ, ಬಂದು ನೋಡಿದವರನ್ನು ಹುಬ್ಬೆರಿಸಿವಂತೆ ಮಾಡುವದರಲ್ಲಿ ಸಂಶಯವೇ ಇಲ್ಲಾ,
ತಮ್ಮ ಕಚೇರಿಯ ಹೆಸರನ್ನು ಕೆಂಪು ಹಳದಿ ವರ್ಣದಲ್ಲಿ ಬರೆಸಿದ್ದು, ಕೊಠಡಿಯ ಮೇಲ್ಗಡೆಯ ಸುತ್ತಲೂ ಕನ್ನಡನಾಡಿನ ಮಹಾನ ದಾರ್ಶನಿಕರ, ಸಮಾಜ ಸುಧಾರಕರ, ರಾಜಮಹಾರಾಜರ, ಕವಿ ಸಾಹಿತಿಗಳ, ಹೋರಾಟಗಾರರ, ಸಮುದಾಯಗಳ ಮೂಲ ಪುರುಷರ, ಕಲಾವಿದರ, ಜ್ಞಾನಿ ವಿಜ್ಞಾನಿಗಳ, ಚಿಂತಕರ, ಸಂಶೋಧಕರ, ಧಾರ್ಮಿಕ ಪುರುಷರ, ಸಾಮಾಜಿಕ ಹೋರಾಟಗಾರರ ಮುಂತಾದ ಮಹಾನ ಚೇತನಗಳ ಭಾವಚಿತ್ರಗಳನ್ನು ಹಾಕಿದ್ದು, ಯಾರೇ ಬಂದರು ನೋಡುತ ಮುಖ ವಿಸ್ಮಿತರಾಗಿ ತಮ್ಮ ಶಾಲಾ ದಿನಗಳ ನೆನಪಿನಂಗಳಕೆ ಸಾಗುವದು ನಿಶ್ಚಿತವಾಗಿದೆ..

ತಾವು ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಕಚೇರಿ, ವಾಸ್ತವ್ಯದ ವಸತಿ ಗೃಹವನ್ನು ಕನ್ನಡಮಗೊಳಿಸಿದ್ದಾರೆ. ಇದರೊಂದಿಗೆ ಅವರಲ್ಲಿರುವ ಕನ್ನಡ ಸಾಹಿತ್ಯ, ಭಾಷಾಭಿಮಾನ, ಪುಸ್ತಕ ಪ್ರೀತಿ ಮತ್ತು ಕಾಳಜಿ ಮಾದರಿ ಎನಿಸಿದೆ. ಇದು ಸಾಹಿತ್ಯಾಸಕ್ತರನ್ನು ಆಕರ್ಷಿಸುತ್ತಿದ್ದು ಅವರನ್ನು ಭೇಟಿಯಾಗುವ ಜನರಿಗೆ ಕಚೇರಿ ಮತ್ತು ಮನೆ ಕರ್ನಾಟಕ ದರ್ಶನದ ಅನುಭವ ನೀಡುತ್ತಿವೆ. ಈಗ ಕನ್ನಡದ ಕಲರವ ಕೇಳಿ ಬರುತ್ತಿರುವ ದುಡುಗುಂಟಿ ಕಚೇರಿಯಲ್ಲಿ ಕನ್ನಡದ ನುಡಿಗಳಿಗೆ ಸಿಹಿ ಧಾರೆ ಎರೆಯುತ್ತಿರುವಂತೆ ಭಾಸವಾಗುತ್ತಿದೆ.
ಮೂಲತ ಕನ್ನಡ ಸಾಹಿತ್ಯದಲ್ಲಿ ಕೆಎಎಸ್ ಮಾಡಿರುವ ದುಡಗುಂಟಿ ಅವರು ಕನ್ನಡದಲ್ಲಿಯೇ ಎಂಎ, ನೆಟ್-ಸೆಟ್ ಕೂಡ ಪೂರ್ಣಗೊಳಿಸಿದ್ದು, ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವವಿದ್ದು ಅದನ್ನು ಉಳಿಸಿ ಬೆಳಸಿ ಮುಂದಿನ ಪೀಳಿಗೆಗೆ ದಾರೆ ಎರೆಯುತ್ತಿದ್ದಾರೆ ಎನ್ನಬಹುದು.

ಕನ್ನಡದ ಕಂಪು ಹರಡಲು ಈ ಅಧಿಕಾರಿ ತಮ್ಮ ಕಚೇರಿಯಲ್ಲಿ ಸ್ವಂತ ಖರ್ಚಿನಲ್ಲಿ ಲಕ್ಷಾಂತರ ರೂ ವೆಚ್ಚದ ಅನೇಕ ಭಾವಚಿತ್ರಗಳನ್ನು ಹಾಕಿಸಿದ್ದು. ಕನ್ನಡ ನಾಡು, ನುಡಿಯ ಹಿರಿಮೆ-ಗರಿಮೆಯನ್ನು ಕಚೇರಿಯಲ್ಲಿ ಕಂಪೀಸುತ್ತಿದ್ದು, ಈ ಮೂಲಕ ಭಾಷೆಯ ಬಗ್ಗೆ ಅಭಿಮಾನ ಹೆಚ್ಚುವಂತೆ ಸಂದೇಶ ನೀಡಿದ್ದಾರೆ. ಇದು ಸಮಾಜ ಮೆಚ್ಚುವಂತ ಕೆಲಸವಾಗಿದ್ದು ಅವರಲ್ಲಿನ ಭಾಷಾಭಿಮಾನಕ್ಕೆ ಕನ್ನಡ ಸಾರಸತ್ವ ಲೋಕದಲ್ಲಿ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ.
ಕಚೇರಿಯಲ್ಲಿ ಕನ್ನಡ ಸಾಹಿತ್ಯ ಕೋಶವೇ ಸಂಗ್ರಹಿಸಿದಂತಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜರ ಭಾವಚಿತ್ರಗಳನ್ನು ಗೋಡೆಯ ಮೇಲೆ ಅಂಟಿಸಿದ್ದಾರೆ. ರಾಷ್ಟ್ರಕವಿಗಳ ಭಾವಚಿತ್ರದೊಂದಿಗೆ ಯಾವ ಕೃತಿಗೆ ಪ್ರಶಸ್ತಿ ಬಂದಿವೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ. ಕಚೇರಿಗೆ ಬರುವವರು ಕವಿಗಳ ಸೂಕ್ತಿಗಳನ್ನು ಓದುತ್ತಾ ತಲ್ಲೀನರಾಗುವ ವಾತಾವರಣವಿದೆ.
ಕನ್ನಡ ನಾಡಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, 12ನೇ ಶತಮಾನದ ಶಿವಶರಣರು, ಸ್ವಾತಂತ್ರ್ಯ ಹೋರಾಟಗಾರರು, ಜಗಜ್ಯೋತಿ ಬಸವೇಶ್ವರ, ವಿಶ್ವೇಶ್ವರಯ್ಯ, ಕಿತ್ತೂರು ಚನ್ನಮ್ಮ, ವರನಟ ಡಾ.ರಾಜಕುಮಾರ ಮತ್ತಿತರರ ಚಿತ್ರಪಟಗಳು ಕಂಗೊಳಿಸುತ್ತಿವೆ.
ಜೊತೆಗೆ ಗೌತಮ ಬುದ್ಧ, ಡಾ.ಬಾಬಾಸಾಹೇಬ ಅಂಬೇಡ್ಕರ, ವಿವೇಕಾನಂದರು, ಶಿವಾಜಿ ಮಹಾರಾಜ, ಮಹಾವೀರರ ಭಾವಚಿತ್ರಗಳು ಗಮನ ಸೆಳೆಯುತ್ತಿವೆ. ಇದರೊಂದಿಗೆ ಭಾರತದ ಸಂವಿಧಾನ ಪೀಠಿಕೆ, ಗೀತಾಸಾರ, ಭಾರತ-ಕರ್ನಾಟಕ-ಬೆಳಗಾವಿ ಜಿಲ್ಲೆಯ ನಕ್ಷೆ, ಭೂಪಟಗಳನ್ನೂ ಪ್ರದರ್ಶಿಸಲಾಗಿದೆ. ಬಂದವರಿಗೆ ಜ್ಞಾನ ಹೆಚ್ಚಿಸಿಕೊಳ್ಳುವ ತಾಣವಾಗಿ ಕಚೇರಿ ಮಾರ್ಪಟ್ಟಿದೆ.
ಇನ್ನು ಇವರು ವಾಸಿಸುವ ಸರ್ಕಾರಿ ಮನೆಯಲ್ಲೂ ಕನ್ನಡದ ರಸಪಾಕ ಮೇಳೈಸುತ್ತಿದೆ. ವಸತಿ ಗೃಹ, ಕಂಪೌಂಡ್ ಮತ್ತು ಈ ಪ್ರದೇಶವನ್ನು ಕನ್ನಡ ಧ್ವಜದಂತೆ ಹಳದಿ-ಕೆಂಪು ಬಣ್ಣ ಬಳಿಯಲಾಗಿದೆ. ಮನೆಯಲ್ಲಿ ಸರ್ವಧರ್ಮ ಸಮನ್ವಯದ ಸಂಕೇತದಂತೆ ಗೋಡೆಯ ಮೇಲೆ ಮಹಾಪುರುಷರ ವಾಕ್ಯಗಳನ್ನು ಉಲ್ಲೇಖಿಸಲಾಗಿದೆ.
ಆಡಲು ಮಾತು ನೀಡಿ, ಬಾಳಿನದ್ದಕ್ಕೂ ಬದುಕಲು ಕೇಳಿಕೊಟ್ಟ ಕನ್ನಡ ಭಾಷೆಗೆ ಇಷ್ಟು ನಿಷ್ಠೆ ಇಲ್ಲವೆಂದರೆ ಹೇಗೆ? ನಾಡಿನ ಪ್ರತಿ ಕನ್ನಡಿಗನಿಗೂ ಈ ಅಧಿಕಾರಿ ಸ್ಫೂರ್ತಿಯಾಗಿ ನಿಲ್ಲಲಿ, ಆ ಮೂಲಕ ವಿಶ್ವದೇಲ್ಲೆಡೆ ಚಲುವ ಕನ್ನಡದ ಭಾವುಟ ರಾರಾಜಿಸಲಿ..
ವರದಿ ಪ್ರಕಾಶ ಬಸಪ್ಪ ಕುರಗುಂದ.