ಬೆಳಗಾವಿಯಲ್ಲಿ ಶೃದ್ಧಾ ಭಕ್ತಿಯಿಂದ ನಾಗರ ಪಂಚಮಿ ಆಚರಣೆ..
ಬೆಳಗಾವಿ : ಅಣ್ಣ-ತಂಗಿಯರ ಪ್ರೀತಿಗೆ ಸಾಕ್ಷಿಯಾದ ಹಬ್ಬ, ಆಧ್ಯಾತ್ಮಿಕ, ಸಾಮಾಜಿಕ ಪ್ರಜ್ಞೆಯ ಜತೆ ಪರಿಸರ ಜಾಗೃತಿ, ಸಂರಕ್ಷಣೆಯ ಮಹತ್ವ ಸಾರುವ ನಾಗರ ಪಂಚಮಿಯನ್ನು ನಗರದ ಹಲವಾರು ಕಡೆಗಳಲ್ಲಿ ಮಂಗಳವಾರ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿದರು.
ಭಾರತೀಯ ಹಬ್ಬಗಳು ಆಧ್ಯಾತ್ಮಿಕ, ಸಾಂಸ್ಕೃತಿಕ, ಧಾರ್ಮಿಕ, ಆರೋಗ್ಯ ಹಾಗೂ ಸಾಮಾಜಿಕ ಸೌಖ್ಯ ಮತ್ತು ಭದ್ರತೆ ಎಂಬ 5 ಅಂಶಗಳ ಆಶಯವನ್ನು ಹೊಂದಿವೆ ಎಂಬುದು ಹಿರಿಯರ ಸರ್ವಸಮ್ಮತ ಅಭಿಪ್ರಾಯವಿದೆ.
ನಮ್ಮ ಆರಾಧನಾ ಸಂಸ್ಕೃತಿಯಲ್ಲಿ ನಾಗಪೂಜೆಗೆ ವಿಶಿಷ್ಟವಾದ ಸ್ಥಾನವಿದೆ. ಸಂಪತ್ತಿನ ಕಾವಲುಗಾರರಾದ ಸರ್ಪಗಳು ನೆಲದ ಸಮೃದ್ಧಿಯ ಸಂರಕ್ಷಣೆಯಲ್ಲೂ ಪ್ರಮುಖ ಪಾತ್ರ ವಹಿಸಿವೆ.

ಅತೀ ಪ್ರಾಚೀನವೆನಿಸಿದ ಸೈಂಧವ ಸಂಸ್ಕೃತಿಯಲ್ಲಿ ವೃಕ್ಷ ಪೂಜೆ ಮತ್ತು ನಾಗ ಪೂಜೆಗಳು ನಡೆಯುತ್ತಿತ್ತೆಂದು ಪುರಾತತ್ತ್ವ ಶೋಧಕರ ಅಭಿಪ್ರಾಯ. ಇವೆರಡು ಬನದಲ್ಲಿ ನಡೆಯುವ ನಾಗಪೂಜೆಯಿಂದ ಸಾಕಾರಗೊಳ್ಳುತ್ತವೆ. ಶಿವನು ನಾಗಭೂಷಣ, ವಿಷ್ಣು ಅನಂತಶಯನ, ಭೂಮಿಯನ್ನು ಹೊತ್ತು ನಿಂತವ ಆದಿಶೇಷ. ಗಣಪತಿಯ ಉಡಿದಾರ ನಾಗ, ಸುಬ್ರಹ್ಮಣ್ಯ ನಾಗರೂಪಿಯೂ ಆಗಿದ್ದಾನೆ, ತುಳುವರ ಆರಾಧ್ಯ ದೈವ ನಾಗಬ್ರಹ್ಮ, ಹೀಗೆ ಪ್ರಸಿದ್ದ ದೇವರ ಪೂಜೆಗಳಲ್ಲಿ ನಾಗನಿಗೂ ಪಾಲು ಸಲ್ಲುತ್ತದೆ.
ಬೆಳಗಾವಿಯ ಬಹುತೇಕ ಎಲ್ಲೆಡೆ ಇಂದು ವಿಶೇಷವಾಗಿ ನಾಗರ ಪಂಚಮಿ ಹಬ್ಬವನ್ನು ಭಕ್ತಿ, ಶ್ರದ್ಧೆಯಿಂದ ಆಚರಣೆ ಮಾಡಲಾಗಿದೆ..