ಬೆಳಗಾವಿಯಲ್ಲಿ ಹಣಬರ ಸಮಾಜದ ಮಹತ್ವದ ಸಭೆ..
ಆಗಸ್ಟ್ 22ರಿಂದ ನಡೆಯುವ ಜಾತಿ ಸಮೀಕ್ಷೆಯಲ್ಲಿ ಧರ್ಮ ಹಿಂದೂ, ಜಾತಿ ಹಣಬರ ಎಂದು ನಮೂದಿಸಿ..
ಹಣಬರ ಸಮುದಾಯ ಮುಖಂಡರ ಮನವಿ..
ಬೆಳಗಾವಿ : ಇದೇ ಆಗಸ್ಟ್ 22ರಿಂದ ರಾಜ್ಯ ಸರ್ಕಾರದಿಂದ ನಡೆಯುವ ಹಿಂದುಳಿದ ವರ್ಗಗಳ, ಆರ್ಥಿಕ ಮತ್ತು ಸಾಮಾಜಿಕ ಜನಗಣತಿ ಪ್ರಕ್ರಿಯೆಯಲ್ಲಿ ಎಲ್ಲರೂ ತಪ್ಪದೆ ಪಾಲ್ಗೊಂಡು, ಧರ್ಮದ ಕಾಲಮ್ಮಿನಲ್ಲಿ ಹಿಂದೂ ಹಾಗೂ ಜಾತಿಯ ಕಾಲಮ್ಮಿನಲ್ಲಿ ಹಣಬರ ಎಂದು ನಮೂದಿಸಬೇಕು ಎಂದು ಹಣಬರ ಸಮುದಾಯದ ಪ್ರಮುಖರು ಕರೆ ಕೊಟ್ಟಿದ್ದಾರೆ.
ಗುರುವಾರ ದಿನಾಂಕ 18/09/2025 ರಂದು ನಗರದ ಖಾಸಗಿ ಸ್ಥಳದಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಮುದಾಯದ ಮುಖಂಡರಾದ ವಿಠ್ಠಲ ಖೋತ ಅವರು, ನಮ್ಮ ಹಣಬರ ಜಾತಿಯಲ್ಲಿ ಯಾವುದೇ ಉಪ ಜಾತಿಗಳಿಲ್ಲ, ಬೇರೆ ಕಡೆಗಳಿಂದ ಬರುವ ಊಹಾಪೋಹಗಳಿಗೆ ಕಿವಿಗೋಡಬೇಡಿ, ನಾವು ಹಣಬರ ಕುಲದಲ್ಲಿ ಜನಿಸಿದ್ದು, ಜನಗಣತಿಯಲ್ಲಿ ಹಣಬರ ಎಂದೇ ದಾಖಲಿಸಿ, ಯಾವುದೇ ಆಸೆ ಆಕಾಂಕ್ಷೆಗಳಿಗೆ ಮನಸೋತು ತಪ್ಪು ಮಾಡಬೇಡಿ ಎಂದು ಇಡೀ ಸಮುದಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯ ಸರ್ಕಾರದ ಅತೀ ಮಹತ್ವದ ಜಾತಿ ಸಮೀಕ್ಷೆ ಇದಾಗಿದ್ದು, ಇದರಿಂದ ನಮ್ಮ ಹಣಬರ ಸಮುದಾಯದಂತಹ ಚಿಕ್ಕ ಸಮಾಜವನ್ನು ಕೂಡಾ ಗುರುತಿಸುವಂತಹ ಪ್ರಕ್ರಿಯೆ ಶುರುವಾಗಿದ್ದು, ಇದರಿಂದ ನಮ್ಮ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಗ್ರ ಮಾಹಿತಿ ಸರ್ಕಾರಕ್ಕೆ ದೊರಕುವುದು, ರಾಜ್ಯದಲ್ಲಿ ನಮ್ಮದು ಒಂದು ಗುರುತಿಸುವಂತಹ ಸಮುದಾಯ ಎಂದು ಸರ್ಕಾರಕ್ಕೂ ಹಾಗೂ ನಮಗೂ ತಿಳಿದಂತಾಗುವದು ಎಂದರು.

ಇನ್ನು ಬರುವ ದಿನಗಳಲ್ಲಿ ಸರ್ಕಾರದ ಮುಂದೆ ಸಮುದಾಯದ ಹಲವಾರು ಬೇಡಿಕೆಗಳನ್ನು ಇಡುತ್ತಿದ್ದು, ಅದರಲ್ಲಿ ಮುಖ್ಯವಾಗಿ ನಮ್ಮ ಹಣಬರ್ ಸಮುದಾಯವನ್ನು ಅಲೆಮಾರಿ ಸಮುದಾಯಕ್ಕೆ ಸೇರಿಸುವದು, ಹಣಬರ ಅಭಿವೃದ್ಧಿ ನಿಗಮ ಮಂಡಳಿಯ ರಚನೆಯ ಜೊತೆ ಹಲವಾರು ಬೇಡಿಕೆಗಳಿದ್ದು ಈಗಾಗಲೇ ನಮ್ಮ ಸಮುದಾಯದ ಎಂಎಲ್ಸಿ ನಾಗರಾಜ ಯಾದವ ಅವರು ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ಸೇರಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ನಮ್ಮ ಬೇಡಿಕೆ ಬಗ್ಗೆ ಚರ್ಚಿಸಿದ್ದು, ಬರುವ ದಿನಗಳಲ್ಲಿ ಈಡೇರುವ ಭರವಸೆ ಇದೆ ಎಂದಿದ್ದಾರೆ.
ಆದಕಾರಣ ಈ ಜಾತಿ ಸಮೀಕ್ಷೆಯಲ್ಲಿ ಸಮುದಾಯದವರು ಎಲ್ಲರೂ ತಪ್ಪದೆ ಭಾಗಿಯಾಗಿ ಸರಿಯಾಗಿ ತಮ್ಮ ಜಾತಿಯನ್ನು ದಾಖಲಿಸಬೇಕು ಎಂಬ ಮನವಿ ಮಾಡಿಕೊಂಡಿದ್ದು, ಇದೇ ವೇಳೆ ಹಣಬರ ಸಮುದಾಯದ ಜಾಗೃತಿಗಾಗಿ ಹೊರಡಿಸಿದ ಮಾಹಿತಿ ಪತ್ರಿಕೆಯನ್ನು ಸಮುದಾಯದ ಪೂಜ್ಯರು ಬಿಡುಗಡೆ ಮಾಡಿದ್ದಾರೆ.
ಈ ಸುದ್ದಿಗೋಷ್ಠಿಯಲ್ಲಿ ಸಮುದಾಯದ ಗುರುಗಳಾದ ಕೃಷ್ಣಕುಮಾರ ಸ್ವಾಮೀಜಿ, ಪ್ರೊ ಬಸವರಾಜ ಹಮ್ಮಣ್ಣವರ, ಪ್ರಶಾಂತ ಕೌಲಗಿ, ತ್ಯಾತ್ಯಾಸಾಹೇಬ ಹಂಡೆ, ನಾಗರಾಜ ಹಣಬರ, ಸಂತೋಷ ಖೋತ, ಸತೀಶ್ ಗುಡಗೆನಟ್ಟಿ, ಅಡಿವೆಪ್ಪ ಪಾಟೀಲ ಹಾಗೂ ಸಮುದಾಯದ ಮತ್ತಿತರ ಪ್ರಮುಖರು ಭಾಗಿಯಾಗಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..