ಬೆಳಗಾವಿಯಲ್ಲಿ ಹಾಡು ಕುಣಿತದೊಂದಿಗೆ ಕಾಮಣ್ಣನಿಗೆ ಸ್ವಾಗತ.
ಪ್ರತಿ ಗಲ್ಲಿಯಲ್ಲಿಯೂ ರಂಗೆರಿಸುತ್ತಿರುವ ಹೊಳಿ ಹಬ್ಬ..
ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲಿ ಪ್ರತಿ ಧಾರ್ಮಿಕ ಹಬ್ಬಗಳನ್ನು ಆಚರಣೆ ಮಾಡುವ ಸಡಗರವೇ ವಿಭಿನ್ನವಾಗಿರುತ್ತದೆ, ಸಾಂಪ್ರದಾಯಿಕತೆಯ ಜೊತೆಗೆ ಅದ್ದೂರಿತನ, ಆಡಂಬರಗಳಿಗೇನು ಕಮ್ಮಿ ಇಲ್ಲದಂತೆ ಹಬ್ಬಗಳನ್ನು ಆಚರಣೆ ಮಾಡುವದು ಬೆಳಗಾವಿಗರ ಶೈಲಿ..

ಇಂದು ರವಿವಾರ ಸಂಜೆಯಿಂದಲೇ ನಗರದ ಪ್ರತಿ ಗಲ್ಲಿಯಲ್ಲಿಯೂ, ಹೊಳಿ ಹಬ್ಬದ ಆಚರಣೆಗಾಗಿ ಕಾಮಣ್ಣನ ಕರೆತರುವ ಕಾರ್ಯದಲ್ಲಿ ಪ್ರತಿ ಏರಿಯಾದ ಯುವಸಮೂಹ ಸಂಭ್ರಮದಿಂದ ಭಾಗಿಯಾಗಿದ್ದು, ಉದ್ದನೆಯ ಬಿದಿರಿನ ಗಿಡವನ್ನು ತಂದು ತಮ್ಮ ಗಲ್ಲಿಗಲ್ಲಿ ಇರುವ ಚಿಕ್ಕ ಕಾಮಣ್ಣನ ಗುಡಿಯ ಮುಂದೆ ಸಿಂಗರಿಸಿ ನಿಲ್ಲಿಸಿ, ಪೂಜೆ ನೈವೇದ್ಯ ನೆರವೇರಿಸುವರು..

ಏರಿಯಾದ ಪ್ರತಿ ಮನೆಯವರು, ಯುವಕರು ತರುವ ಬಿದಿರಿನ ಕೊಂಬೆಗೆ ಪೂಜೆ ಸಲ್ಲಿಸುವರು, ಪ್ರತಿಷ್ಠಾಪನೆಯ ನಂತರ ಕಾಮಣ್ಣನ ಗುಡಿಯಲ್ಲಿ ಪ್ರಾರ್ಥನೆ,ಪೂಜೆ, ನೈವೇದ್ಯ ಏರ್ಪಟ್ಟು ರಾತ್ರಿ ಹೊತ್ತಿಗೆ ಕಾಮನ ದಹನ ನಡೆಯುವ ಪದ್ಧತಿಯಿದೆ.

ಇನ್ನು ನೂರಾರು ಯುವಕರು ಹೊಳಿ ಕಾಮಣ್ಣನನ್ನು ತರುವಾಗ ದೊಡ್ಡ ದೊಡ್ಡ ಸೌಂಡ್ ಸಿಸ್ಟಮ್, ಡಿಸ್ಕೋ ಲೈಟಿಂಗ್ ಸಿಸ್ಟಮ್, ಹಾಡು, ಕುಣಿತದೊಂದಿಗೆ ಅದ್ದೂರಿಯಾಗಿ, ಸಂಭ್ರಮ, ಸಂತೋಷದಿಂದ ಕಾಮಣ್ಣನನ್ನು ಸ್ವಾಗತ ಮಾಡಿಕೊಳ್ಳುವ ದೃಶ್ಯ ಕಣ್ಮನ ಸೆಳೆಯುತ್ತದೆ..
ಇನ್ನು ಬೆಳಿಗ್ಗೆ ಎದ್ದು, ಎಲ್ಲರೂ ಯಾವ ವಯಸ್ಸಿನ ಅನಂತರವಿಲ್ಲದೇ, ಮಹಿಳೆಯರು ಪುರುಷರು ಎಲ್ಲರೂ ಸೇರಿ ಪರಸ್ಪರ ಬಣ್ಣವನ್ನು ಎರಚುವ ಮೂಲಕ ಹೊಳಿ ಆಚರಣೆ ಮಾಡುವರು, ಬೆಳಗಾವಿ ತುಂಬೆಲ್ಲಾ ಬಣ್ಣಗಳ ಕಲರವ, ಯುವಸಮೂಹದ ನೃತ್ಯ, ಹಾಡು, ನೀರಿನ ಕಾರಂಜಿಗಳ ಕೆಳಗೆ ಬಣ್ಣದೋಕುಳಿ ಆಡುವ ಜನರ ಸಂಭ್ರಮವೇ ಸಂಭ್ರಮ..

ಒಟ್ಟಿನಲ್ಲಿ ಕಾಮಣ್ಣನ ಬಣ್ಣದ ಹಬ್ಬದಲ್ಲಿ ನಗರದ ಪ್ರತಿ ಗಲ್ಲಿ, ಮೈದಾನದಲ್ಲಿ ಸಂಭ್ರಮಾಚರಣೆ ಮಾಡಿ, ಖುಷಿಪಡುವ ಜನಸಮೂಹದ ಮೇಲೆ ಕಾಮಣ್ಣನ ಕರುಣೆಯಿರಲಿ..
ವರದಿ ಪ್ರಕಾಶ್ ಕುರಗುಂದ..