ಬೆಳಗಾವಿಯ ಪಶುಸಂಗೋಪನಾ ಇಲಾಖೆಯ ಉತ್ತಮ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ..
ಜಾನುವಾರಗಳ ಕಾಲುಬಾಯಿ ರೋಗದ ಲಸಿಕಾಕರಣಕ್ಕೆ ರಾಜ್ಯಕ್ಕೆ ಪ್ರಥಮ..
ಕೆಡಿಪಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಜಿಲ್ಲೆಗೆ ಕೀರ್ತಿ ತಂದ ಇಲಾಖೆ..
ಬೆಳಗಾವಿ : ಜಿಲ್ಲೆಯ ಪಶು ಸಂಗೋಪನಾ ಇಲಾಖೆಯು ತನ್ನ ಉತ್ತಮ ಕಾರ್ಯವೈಖರಿಗೆ ರಾಜ್ಯವ್ಯಾಪಿ ಮೆಚ್ಚುಗೆ ಪಡೆದಿದ್ದು, ಇಲಾಖೆಯ ಲಸಿಕಾಕರಣ ಹಾಗೂ ಕೆಡಿಪಿಯ ವಿವಿಧ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದು, ಬೆಳಗಾವಿ ಜಿಲ್ಲೆಯ ಹೆಸರನ್ನು ಮತ್ತಷ್ಟು ಬೆಳಗಿಸಿದಂತಾಗಿದೆ.
ರಾಜ್ಯದಲ್ಲಿ ಇಡೀ ಇಲಾಖೆಗೆ ಅತಿದೊಡ್ಡ ಸಮಸ್ಯೆ ಆಗಿದ್ದ ಜಾನುವಾರುಗಳ ಕಾಲುಬಾಯಿ ರೋಗಕ್ಕೆ ಸಮರ್ಥ ರೀತಿಯಲ್ಲಿ ಲಸಿಕಾಕರಣ ಕಾರ್ಯ ನಿರ್ವಹಿಸಿದ್ದಲ್ಲದೇ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಬರುವ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನಗಳಿಸುವಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಸಾಧನೆಗೈದಿದೆ.

ಪ್ರಸ್ತುತ ಸಾಲಿನ ಆರನೆಯ ಸುತ್ತಿನ ಕಾಲುಬಾಯಿ ರೋಗಕ್ಕೆ (ಶೇಕಡಾ) 96% ರಷ್ಟು ಲಸಿಕಾಕರಣ ಪೂರ್ಣಗೊಳಿಸಿದ್ದು, ವರ್ಷಕ್ಕೆ ಎರಡು ಬಾರಿ ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಹಾಕಲಾಗುತ್ತದೆ, ಆಸ್ಪತ್ರೆಗೆ ಬರುವ ಜಾನುವಾರುಗಳಿಗೆ ಹಾಗೂ ವೈದ್ಯರು ಮನೆಮನೆಗೆ ಹೋಗಿಯೂ ಲಸಿಕಾಕರನ ಮಾಡುತ್ತಾರೆ, ರೋಗ ಹಾಗೂ ಚಿಕಿತ್ಸೆಯ ಕುರಿತಾಗಿ ಜಾಗೃತಿ ಮೂಡಿಸುತ್ತಾರೆ.
ಜಿಲ್ಲಾ ಪಶುಸಂಗೋಪನಾ ಇಲಾಖೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿಯ ಕೊರತೆಯಿದ್ದರೂ, ಜಾನುವಾರುಗಳಿಗೆ ಮಾರಕವಾದ ಕಾಲುಬಾಯಿ ರೋಗದ ಬಗ್ಗೆ ಮುಂಜಾಗ್ರತೆ, ಚಿಕಿತ್ಸೆ, ಅದರಿಂದ ಜಾನುವಾರುಗಳ ಮೇಲೆ ಆಗುವ ದುಷ್ಪರಿಣಾಮ ಹಾಗೂ ನಿಯಂತ್ರಣಕ್ಕಾಗಿ ಜಾಗೃತಿಯನ್ನು ಮೂಡಿಸುವ ಮೂಲಕ ರೈತರಿಗೆ ಉತ್ತಮ ಸಲಹೆ ಸೂಚನೆ ನೀಡಿ, ದನಕರ, ಪಶುಗಳ ಆರೋಗ್ಯವನ್ನು ಕಾಪಾಡಿಕೊಂಡು ಹೋಗುತ್ತಿರುವ ಇಲಾಖೆಯ ಕಾರ್ಯಕ್ಕೆ ರಾಜ್ಯಮಟ್ಟದ ಗೌರವ ದೊರೆತಿದ್ದು, ಬೆಳಗಾವಿ ಜಿಲ್ಲೆಗೂ ಇದು ಹೆಮ್ಮೆಯ ವಿಷಯವಾಗಿದೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ..