ಬೆಳಗಾವಿಯ ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿಗೆ ಹಿರಿಯ ನಟಿ ಉಮಾಶ್ರೀ ಭೇಟಿ..
“ಯಶಸ್ಸನ್ನು ಮಾತ್ರ ನೋಡಿ ಚಿತ್ರರಂಗದಲ್ಲಿ ಕಾಲಿಡಬೇಡಿ”; ನಟಿ ಉಮಾಶ್ರೀ..
ಬೆಳಗಾವಿ : ಕನ್ನಡದ ಪ್ರಸಿದ್ದ ನಟಿ ಹಾಗೂ ಮಾಜಿ ಸಚಿವರಾದ ಶ್ರೀಮತಿ ಉಮಾಶ್ರೀ ಅವರು ಮಹಾಂತೇಶ ನಗರದ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಹಾಗೂ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಹೃದಯದಿಂದ ಮೆಚ್ಚಿ, ನಮ್ಮೂರ ಬಾನುಲಿ ರೇಡಿಯೋದಲ್ಲಿ ವಿಶೇಷ ಸಂದರ್ಶನವೊಂದನ್ನು ನೀಡಿದರು.
ಸಂದರ್ಶನದಲ್ಲಿ ಉಮಾಶ್ರೀ ತಮ್ಮ ಜೀವನದ ಪ್ರೇರಣಾದಾಯಕ ಘಟನೆಗಳನ್ನು ಹಂಚಿಕೊಂಡರು. ರಂಗಭೂಮಿಯ ಮೂಲಕ ಜೀವನಕ್ಕೆ ದಿಕ್ಕು ಸಿಕ್ಕಿದ್ದು, ಶ್ರದ್ಧೆ ಹಾಗೂ ಶ್ರಮದಿಂದ ನಾಟಕಗಳಲ್ಲಿ ಪಾಲ್ಗೊಂಡು, ಬಳಿಕ ಚಿತ್ರರಂಗದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾಗಿ ವಿವರಿಸಿದರು. ನಿರೂಪಕ ಆರ್.ಜೆ ಚೇತನ ಅವರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, “ಯಾವುದೇ ಪಾತ್ರವನ್ನು ಜೀವಂತವಾಗಿ ತಲುಪಿಸಲು ರಂಗಭೂಮಿ ನೀಡಿದ ತರಬೇತಿಯು ಬಹುಮುಖ್ಯ. ನಟನೆ ಮಾತ್ರವಲ್ಲ, ಜಗತ್ತಿನ ಅವಲೋಕನೆಯೂ ಕಲಾವಿದನಿಗೆ ಅಗತ್ಯ” ಎಂದು ಹೇಳಿದರು.

ಹೊಸ ತಲೆಮಾರಿನ ಕಲಾವಿದರಿಗೆ ಸಂದೇಶ ನೀಡುತ್ತಾ, “ಯಶಸ್ಸನ್ನು ಮಾತ್ರ ನೋಡಿ ಚಿತ್ರರಂಗದಲ್ಲಿ ಕಾಲಿಡಬೇಡಿ. ಪೂರ್ಣ ತಯಾರಿ, ಪರಿಶ್ರಮ ಮತ್ತು ಕಷ್ಟ ಸಹಿಸುವ ಮನೋಭಾವ ಅಗತ್ಯ. ಆಗ ಮಾತ್ರ ನಿಜವಾದ ಸಾಧನೆ ಸಾಧ್ಯ” ಎಂದು ಸಲಹೆ ನೀಡಿದರು.
ಈ ಸಂದರ್ಭ ಮಹಿಳಾ ಕಲ್ಯಾಣ ಸಂಸ್ಥೆಯ ಸಂಸ್ಥಾಪಕ ಹಾಗೂ ಸಂಯೋಜಕರಾದ ಎಂ.ಎಸ್. ಚೌಗಲಾ, ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ನಗರ ಘಟಕದ ಕಾರ್ಯದರ್ಶಿ ಸಿ.ಎಮ್. ಬೂದಿಹಾಳ, ಸಮುದಾಯ ರೇಡಿಯೋ ಕೇಂದ್ರದ ಆರ್.ಜೆ ಚೇತನ, ಆರ್.ಜೆ ಮೀರಾ, ಶಿವಂ ಚೌಗಲಾ ಹಾಗೂ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..