ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಮಿಂಚಿನ ಸಂಚಾರ…
ಮಹಿಳಾ ದೌರ್ಜನ್ಯ ಹಾಗೂ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದ ಅಧ್ಯಕ್ಷರು..
ಸ್ತ್ರೀ ಸೌಲಭ್ಯದಲ್ಲಿ ಕೊರತೆ ಕಂಡಲ್ಲಿ ಅಧಿಕಾರಿಗಳಿಗೆ ಖಡಕ್ ಸೂಚನೆ..
ಮಹಿಳೆಯರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಆತ್ಮಸ್ಥೈರ್ಯ ತುಂಬಿದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ..
ಬೆಳಗಾವಿ : ರಾಜ್ಯದ ದೊಡ್ಡ ಜಿಲ್ಲೆಗಳಲ್ಲಿ ಒಂದಾದ ಬೆಳಗಾವಿ ಜಿಲ್ಲೆ ತನ್ನದೇ ಆದ ವಿಶೇಷ ಗುಣಗಳೊಂದಿಗೆ ರಾಜ್ಯದಲ್ಲಿಯೇ ಪ್ರಭಾವಿ ಜಿಲ್ಲೆಯಾಗಿ ಹೊರಹೊಮ್ಮಿದ್ದು, ಇಲ್ಲಿ ಅಭಿವೃದ್ದಿ ಹಾಗೂ ಸುಧಾರಣೆಗಳ ಜೊತೆ ಸಮಸ್ಯೆಗಳೂ ಕೂಡಾ ಜೊತೆಯಾಗಿದ್ದು ಇಂತಹ ಸಮಸ್ಯೆಗಳ ಬಗ್ಗೆ ಅರಿತು ಅವುಗಳ ನಿವಾರಣೆಗಾಗಿ ಜಿಲ್ಲೆಗೆ ಭೇಟಿ ನೀಡಿ, ಆಡಳಿತದಲ್ಲಿ ಸಂಚಲನ ಮೂಡಿಸಿದ್ದು, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ, ನಾಗಲಕ್ಷ್ಮಿ ಚೌಧರಿ ಅವರು…

ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸುಮಾರು ನಾಲ್ಕೈದು ತಿಂಗಳಲ್ಲಿ ಬೆಳಗಾವಿಗೆ ಎರಡ್ಮೂರು ಸಾರಿ ಬೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು, ಈ ಸಲದ ಬೇಟಿಯಲ್ಲಿ ಜಿಲ್ಲೆಯ ಪ್ರಮುಖ ಸ್ಥಳಗಳಿಗೆ ಸಂಚರಿಸಿ, ಸಂಚಲನವನ್ನು ಸೃಷ್ಟಿಸಿದ್ದು, ಮಹಿಳೆಯರು ತಮ್ಮ ಕುಂದುಕೊರತೆಗಳನ್ನು ಮುಕ್ತವಾಗಿ ಅಧ್ಯಕ್ಷರ ಮುಂದೆ ಹೇಳಿಕೊಂಡಿದ್ದಾರೆ..

ಸೋಮವಾರ ದಿನಾಂಕ 19/08/2024ರಂದು ಜಿಲ್ಲೆಯ ಸವದತ್ತಿಯ ಗುರುಭವನದಲ್ಲಿ, ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರು, ಮಹಿಳಾ ಸದಸ್ಯರು, ಲೈಂಗಿಕ ಅಲ್ಪಸಂಖ್ಯಾತರು, ಮಾಜಿ ದೇವದಾಸಿಯರು, ಸ್ತ್ರೀ ಶಕ್ತಿ ಸಂಘಗಳ ಸದಸ್ಯರು, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಲುವಾಗಿ ಆಯೋಜಿಸಿದ “ಕಾನೂನು ಅರಿವು ಮತ್ತು ಮಹಿಳೆಯರ ಹಕ್ಕು” ಗಳ ಕುರಿತಾಗಿರುವ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು..

ಈ ವೇಳೆ ಹಲವಾರು ಮಹಿಳಾ ಸದಸ್ಯರ ಜೊತೆ ಸಮಾಲೋಚನೆ ನಡೆಸಿ, ಅನೇಕ ಸಮಸ್ಯೆಗಳನ್ನು ಆಲಿಸಿ, ಅವುಗಳ ಪರಿಹಾರೋಪಾಯಗಳ ಬಗ್ಗೆ ಸಂಭಂದಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ, ಸಮಸ್ಯೆ ನಿವಾರಣೆ ದೃಷ್ಟಿಯಲ್ಲಿ ಕಾರ್ಯಪ್ರವರ್ತರಾಗಲು ಸೂಚನೆ ನೀಡಿದ್ದಾರೆ, ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳ ಜವಾಬ್ದಾರಿಗಳನ್ನು ತಿಳಿಹೇಳಿ, ಕೆಲ ಸಮಸ್ಯೆಗಳು ತಮ್ಮ ಮಟ್ಟದಲ್ಲೇ ಪರಿಹಾರ ಆಗುವ ಅನೇಕ ಮಾರ್ಗಗಳಿವೆ ಎಂಬ ಸಲಹೆ ಸೂಚನೆ ನೀಡಿದರು..

ನಂತರ ಸವದತ್ತಿ ತಾಲೂಕು ಆಸ್ಪತ್ರೆಗೆ ಬೇಟಿ ನೀಡಿದ ಅಧ್ಯಕ್ಷರು, ಅಲ್ಲಿಯ ಅಸ್ವಚ್ಚತೆ, ಹಾಗೂ ಆಸ್ಪತ್ರೆಗೆ ಬಂದ ಸಾರ್ವಜನಿಕರಿಗೆ ಮೂಲಸೌಕರ್ಯಗಳ ಕೊರತೆಯ ಬಗ್ಗೆ ವೈದ್ಯಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿ, ಆದಷ್ಟು ಬೇಗ ಆರೋಗ್ಯ ಸೌಲಭ್ಯಗಳು ಜನರಿಗೆ ದೊರಕುವಂತೆ ನೀವು ನೋಡಿಕೊಳ್ಳಬೇಕು, ಮೇಲಿನವರು ನಿರಾಸಕ್ತಿ ತೋರಿದಲ್ಲಿ ನಮ್ಮ ಗಮನಕ್ಕೂ ತನ್ನಿ, ಆದರೆ ಕನಿಷ್ಠ ಮೂಲ ಸೌಕರ್ಯವಾದರೂ ಕಡ್ಡಾಯವಾಗಿ ಇರಲೇಬೇಕು ಎಂದರು..

ನಂತರ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿದ ಅಧ್ಯಕ್ಷರು, ಅಲ್ಲಿಯ ರೋಗಿಗಳೊಂದಿಗೆ ಮಾತನಾಡುತ್ತಾ, ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದುಕೊಂಡರು, ಈ ವೇಳೆ ಆಸ್ಪತ್ರೆಯ ಸಿಬ್ಬಂದಿಗಳು ಅಧ್ಯಕ್ಷರ ಬಳಿ ಮನವಿ ಮಾಡುತ್ತಾ, ಆಸ್ಪತ್ರೆಯಲ್ಲಿ ರೇಡಿಯಾಲಜಿ ಆಪರೇಟರ್ ಇರುವದಿಲ್ಲ, ಅದಕ್ಕಾಗಿ ಟೆಕ್ನಿಷಿಯನ್ ಸಿಬ್ಬಂದಿ ಭರ್ತಿ ಮಾಡಬೇಕು ಹಾಗೂ ಗ್ರೂಪ್ ಡಿ ವರ್ಗದ ಸಿಬ್ಬಂದಿಗಳಿಗೆ ಕಡಿಮೆ ವೇತನದ ಸಮಸ್ಯೆ ಇದೆ ಎಂಬ ವಿಷಯ ಹಂಚಿಕೊಂಡರು..

ಇದಾದ ನಂತರ ಸಂಜೆ 6, 30ಕ್ಕೆ ಬೆಳಗಾವಿಯ ಸದಾಶಿವ ನಗರದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಬೇಟಿ ನೀಡಿದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು, ಸುಮಾರು 300 ವಸತಿ ನಿಲಯಗಳ ವಿದ್ಯಾರ್ಥಿನಿಯರೊಂದಿಗೆ ಎರಡು ಗಂಟೆಗಳ ಕಾಲ ಸಮಾಲೋಚನೆ ನಡೆಸಿದರು..
ಈ ವೇಳೆ ವಿದ್ಯಾರ್ಥಿನಿಗಳಿಗೆ ಯಾವುದಾದರೂ ಕುಂದುಕೊರತೆಗಳಿದ್ದರೆ ಮುಕ್ತವಾಗಿ ಚರ್ಚಿಸಲು ಅವಕಾಶ ನೀಡಿದ್ದು, ಇಲಾಖಾ ಸಿಬ್ಬಂದಿಗಳನ್ನು ಹೊರಗೆ ಕಳುಹಿಸಿ, ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಆಲಿಸಿದರು, ಸಮಸ್ಯೆಗಳಿಗೆ ಪರಿಹಾರಗಳನ್ನು ಕೈಗೊಳ್ಳಲು ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿಗಳು, ಕೋಣೆಗಳ ಕೊರತೆ, ವೈದ್ಯಕೀಯ ಅಧ್ಯಯನದ ಪುಸ್ತಕಗಳು, ವೈಫೈ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿನಿಗಳು ಅಧ್ಯಕ್ಷರ ಬಳಿ ಹೇಳಿಕೊಂಡರು..

ಅದೇ ರೀತಿ ವಿದ್ಯಾರ್ಥಿನಿಯರು ಹೇಗೆ ಇರಬೇಕು? ಮೊಬೈಲ್ ಎಷ್ಟು ಒಳ್ಳೆಯದು ಹಾಗೂ ಎಷ್ಟು ಅಪಾಯಕಾರಿ, ಪ್ರೀತಿ, ಪ್ರೇಮ ಪ್ರಕರಣಗಳಿಂದ ಹೆಣ್ಣುಮಕ್ಕಳು ಯಾವ್ಯಾವ ಸಂಕಷ್ಟ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಎಂದು ಎಳೆ ಎಳೆಯಾಗಿ ತಿಳಿಸಿ ತಾಯಿ ಮಗುವಿಗೆ ಹೇಳಿದಂತೆ ಹೇಳಿದರು, ನಾನು ದಿನಾ ಎಷ್ಟೋ ಪ್ರಕರಣಗಳನ್ನು ಕೇಳುತ್ತೇನೆ, ಹುಡುಗರಿಂದ ಹುಡುಗಿಯರು ಎಷ್ಟು ಅನ್ಯಾಯಕ್ಕೆ ಒಳಗಾಗುತ್ತಾರೆ, ಮೊದಲೆಲ್ಲ ಚೆನ್ನಾಗಿಯೇ ಇರುತ್ತೆ, ನಂತರ ಹೆಣ್ಣು ಮಕ್ಕಳ ಬಾಳು ತುಂಬಾ ಕಷ್ಟಕರ ಆಗುತ್ತದೆ, ಅದಕ್ಕೆ ತಾವು ಅವಕಾಶ ಮಾಡಿ ಕೊಡದೇ, ತಾವು ಉತ್ತಮ ಶಿಕ್ಷಣ ಪಡೆದು, ಆರ್ಥಿಕವಾಗಿ ಸಬಲರಾಗಿ, ಸಮಾಜಕ್ಕೆ ನಿಮ್ಮ ಮನೆತನಕ್ಕೆ ಮಾದರಿಯಾಗಿ, ಸಮಯ ಬಂದಾಗ ಈ ಪ್ರೀತಿ, ಮದುವೆ ಎಲ್ಲಾ ಆಗುತ್ತೆ ಎಂದು ಕಿವಿ ಮಾತು ಹೇಳಿ, ವಿದ್ಯಾರ್ಥಿನಿಯರಲ್ಲಿ ಆತ್ಮಸ್ಥೈರ್ಯ ತುಂಬಿದರು..

ಮಹಿಳಾ ಆಯೋಗದ ಅಧ್ಯಕ್ಷರ ಮಾತಿಗೆ ತುಂಬಾ ಸಂತಸಗೊಂಡ ವಿದ್ಯಾರ್ಥಿನಿಯರು, ಪ್ರತಿಯೊಬ್ಬರೂ ಆತ್ಮೀಯತೆಯಿಂದ ಮಾತನಾಡಿ, ತಮ್ಮಿಂದ ಇಂದು ನಮಗೆ ಹೊಸ ದೈರ್ಯ ಬಂದಿದೆ ಎಂದು ಕೃತಜ್ಞತಾ ನುಡಿಗಳನ್ನು ಆಡಿ, ಅಧ್ಯಕ್ಷರ ಹಿತನುಡಿಗಳನ್ನು ಪಾಲಿಸುವದಾಗಿ ಭರವಸೆ ನೀಡಿದರು…
ವರದಿ ಪ್ರಕಾಶ್ ಬಸಪ್ಪ ಕುರಗುಂದ..