ಬೆಳಗಾವಿ ನಗರದಲ್ಲಿ ವರ್ಣರಂಜಿತವಾಗಿ ಚಾಲನೆಗೊಂಡ ಗೃಹಲಕ್ಷ್ಮಿ ಯೋಜನೆ..
ರಾಜ್ಯದ ಮಹಿಳೆಯರಿಗೆ ತವರು ಮನೆಯಿಂದ ರಕ್ಷಾಬಂಧನದ ಉಡುಗೊರೆಯಾಗಿ ಸಿದ್ದರಾಮಯ್ಯನವರು ಈ ಯೋಜನೆ ನೀಡಿದ್ದಾರೆ..
ಬೆಳಗಾವಿ ಮಹಿಳೆಯರ ಭಾವುಕ ನುಡಿಗಳು..
ಬೆಳಗಾವಿ : ಬುಧವಾರ ನಗರದ ವಿವಿಧೆಡೆಗೆ ರಾಜ್ಯ ಸರ್ಕಾರದ ಮಹತ್ತರ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅದ್ದೂರಿ ಹಾಗೂ ಅರ್ಥಪೂರ್ಣವಾದ ಚಾಲನೆ ನೀಡಲಾಗಿದೆ..

ನಗರದ ಸುಮಾರು ಐವತ್ತು ಕೇಂದ್ರಗಳಲ್ಲಿ ಯೋಜನೆಯ ಚಾಲನಾ ಕಾರ್ಯಕ್ರಮ ಹಮ್ಮಿಕೊಂಡು, ಬೆಳಿಗ್ಗೆ ಒಂಬತ್ತರಿಂದಲೇ ಎಲ್ಲೆಡೆ ತಳಿರು ತೋರಣ ಕಟ್ಟಿ, ರಂಗೋಲಿ ಬಿಡಿಸಿ, ಹೂವಿನ ಅಲಂಕಾರದಿಂದ ಹಬ್ಬದ ವಾತಾವರಣ ನಿರ್ಮಾಣ ಮಾಡಿದ ಹೆಗ್ಗಳಿಕೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮಹಾನಗರ ಸಿಬ್ಬಂದಿಗೆ ಸಲ್ಲುವಂತಿತ್ತು..

ಪ್ರತಿ ಕೇಂದ್ರದಲ್ಲಿಯೂ ನೂರಾರು ಸಂಖ್ಯೆಯಲ್ಲಿ ಪಾಲಾನುಭವಿಗಳು ಭಾಗಿಯಾಗಿದ್ದು, ಅತ್ಯಂತ ಸಂತಸದಿಂದ, ಭಾವುಕರಾಗಿ ಸರ್ಕಾರದ ಈ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೃತಜ್ಞತೆ ಸಲ್ಲಿಸಿದರು..

ಈ ಸಂಧರ್ಭದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಜನಪ್ರತಿನಿಧಿಗಳು, ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು, ಹಾಗೂ ಯೋಜನೆಯ ಫಲಾನುಭವಿಗಳು, ಇದೊಂದು ಉತ್ತಮ ಯೋಜನೆಯಾಗಿದ್ದು, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿ ಆಗಿದೆ, ರಾಜ್ಯದ ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೊಂಡು, ಉತ್ತಮ ರೀತಿಯಲ್ಲಿ ಈ ಹಣದ ಬಳಕೆ ಮಾಡಬೇಕು ಎಂಬ ಕಿವಿಮಾತು ಹೇಳಿದರು..

ಈ ಸಂದರ್ಭದಲ್ಲಿ ಪಾಲಿಕೆಯ ನಗರ ಸೇವಕರು, ಪಾಲಿಕೆಯ ಅಧಿಕಾರಿಗಳು ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರು, ಸಾವಿರಾರು ಫಲಾನುಭವಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು..

ವರದಿ ಪ್ರಕಾಶ ಕುರಗುಂದ…