ಬೆಳಗಾವಿ ಪಾಲಿಕೆಗೆ ಲೋಕಾಯುಕ್ತರ ಬೇಟಿ ಹಾಗೂ ಪರಿಶೀಲನೆ..

ಬೆಳಗಾವಿ ಪಾಲಿಕೆಗೆ ಲೋಕಾಯುಕ್ತರ ಬೇಟಿ ಹಾಗೂ ಪರಿಶೀಲನೆ..

ಕಂದಾಯ, ನಗರ ಯೋಜನೆ ಹಾಗೂ ಲೆಕ್ಕಪತ್ರ ವಿಭಾಗಕ್ಕೆ ಬೇಟಿ..

ಬೆಳಗಾವಿ : ನಿನ್ನೆಯಿಂದ ಬೆಳಗಾವಿ ನಗರದಲ್ಲಿ ಬೀಡು ಬಿಟ್ಟಿರುವ ಲೋಕಾಯುಕ್ತ ಸಂಸ್ಥೆಯ ಸಿಬ್ಬಂದಿಗಳು ಎರಡನೆಯ ದಿನವಾದ ಇಂದೂ ಕೂಡ ಜಿಲ್ಲೆಯ ವಿವಿದೆಡೆ ಹಾಗೂ ನಗರದ ವಿವಿಧ ಇಲಾಖೆಗಳ ಕಚೇರಿಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಪಾಲಿಕೆಯಲ್ಲಿ ಮೂರು ವಿಶೇಷ ತಂಡಗಳಾಗಿ ಪರಿಶೀಲನೆ ನಡೆಸಿದ ಲೋಕಾಯುಕ್ತ ಸಿಬ್ಬಂದಿಗಳು, ಕಂದಾಯ, ನಗರ ಯೋಜನೆ ಹಾಗೂ ಲೆಕ್ಕಪತ್ರ ವಿಭಾಗದಲ್ಲಿ ಕನಿಷ್ಠ ಮೂರ್ನಾಲ್ಕು ಸಿಬ್ಬಂದಿಗಳಂತೆ ಸಾಗಿ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.

ಇತ್ತೀಚಿನ ಕೆಲ ತಿಂಗಳಿನಿಂದ ಸುದ್ದಿಯಲ್ಲಿರುವ ಹಾಗೂ ಸಾರ್ವಜನಿಕರಿಂದ ದೂರು ನೀಡಲ್ಪಟ್ಟಿರುವ, ಭ್ರಷ್ಟಾಚಾರದ ಅನುಮಾನಗಳು ಕಂಡುಬಂದಿರುವ ಹಾಗೂ ಆಡಳಿತದಲ್ಲಿ ಗೊಂದಲಕ್ಕೆ ಒಳಪಟ್ಟಿರುವ ಕೆಲ ವಿಭಾಗಗಳಿಗೆ ಬೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿಗಳಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಕಂದಾಯ ವಿಭಾಗದಲ್ಲಿ ಪಾಲಿಕೆಯ ಉಪ ಆಯುಕ್ತೆ ಕಂದಾಯ ಇವರಿಂದ ಅನೇಕ ಮಹತ್ವದ ಮಾಹಿತಿಯನ್ನು ಪಡೆದುಕೊಂಡಿದ್ದು, ಇ ಖಾತಾಗಳ ಪ್ರಕ್ರಿಯೆಯ ಬಗ್ಗೆ, ಕಟಬಾಕಿಯಾಗಿ ಪಾಲಿಕೆಗೆ ಬಾರದೆ ಉಳಿದಿರುವ ದೊಡ್ಡ ಮೊತ್ತದ ತೆರಿಗೆಗಳ ಬಗ್ಗೆ, ಪಾಲಿಕೆಯ ಆಸ್ತಿಗಳ ಹಕ್ಕು ಬದಲಾವಣೆಯ ಬಗ್ಗೆ, ಕಂದಾಯ ಸಿಬ್ಬಂದಿಗಳ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಶಂಕೆಯಿದೆ.

ಇನ್ನು ನಗರ ಯೋಜನಾ ವಿಭಾಗದಲ್ಲಿ ನಗರ ಯೋಜನಾ ಅಧಿಕಾರಿಯವರನ್ನು ಅನೇಕ ಪ್ರಶ್ನೆ ಮಾಡಿ, ಅಲ್ಲಿಯ ಸಿಬ್ಬಂದುಗಳಿಂದ ಅವರು ಮಾಡುವ ಕಾರ್ಯದ ಕುರಿತಾಗಿ ಮಾಹಿತಿ ಪಡೆದುಕೊಂಡಿರುವ ಹಾಗೂ ಲೆಕ್ಕಪತ್ರ ಶಾಲೆಯಲ್ಲಿಯೂ ಕೂಡಾ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿಗಳಿಂದ ಅವರ ವಿಭಾಗಕ್ಕೆ ಸಂಭಂದಿಸಿದ ಕೆಲ ಪ್ರಶ್ನೆಗಳನ್ನು ಕೇಳಿ, ಅವರಿಂದ ಮಾಹಿತಿ ಪಡೆದುಕೊಂಡಿರುವಂತಿದೆ.

ಮಧ್ಯಾಹ್ನ ಊಟದ ವಿರಾಮದ ವರೆಗೆ ಪಾಲಿಕೆಯ ಕಂದಾಯ, ನಗರ ಯೋಜನೆ ಹಾಗೂ ಲೆಕ್ಕಪತ್ರ ವಿಭಾಗದಲ್ಲಿ ಪರಿಶೀಲನೆ ನಡೆಸಿದ್ದು, ಮಧ್ಯಾಹ್ನ ವಿರಾಮದ ನಂತರ ಮತ್ತೆ ಉಳಿದ ವಿಭಾಗಗಳ ಪರಿಶೀಲನೆ ಮಾಡುವ ಕಾರ್ಯದಲ್ಲಿ ಲೋಕಾಯುಕ್ತ ಸಿಬ್ಬಂದಿಗಳು ನಿರತರಾಗಬಹುದೆಂಬ ಸುಳಿವು ನೀಡಿದಂತಿತ್ತು.

ವರದಿ ಪ್ರಕಾಶ್ ಬಸಪ್ಪ ಕುರಗುಂದ..