ಬೆಳಗಾವಿ ಪಾಲಿಕೆಯ ಆಂತರಿಕ ಆಡಳಿತಕ್ಕೆ ಭರ್ಜರಿ ಸರ್ಜರಿ..
ಅಧಿಕಾರಿಗಳ ಸಮೇತ ಸುಮಾರು 45 ಸಿಬ್ಬಂದಿಗಳ ಆಂತರಿಕ ನಿಯೋಜನೆ..
ಸಿಬ್ಬಂದಿಗಳು ಮತ್ತಷ್ಟು ಕ್ರಿಯಾಶೀಲರಾಗಲು ಹೆಚ್ಚಿನ ಜವಾಬ್ದಾರಿ ನೀಡಿದ ಆಯುಕ್ತರು.
ಆಯುಕ್ತರ ಆಡಳಿತ ಸುಧಾರಣಾ ಈ ಹೊಸ ಹೆಜ್ಜೆಗೆ ಸಾರ್ವಜನಿಕರ ಮೆಚ್ಚುಗೆ..
ಬೆಳಗಾವಿ : ಮಹಾನಗರ ಪಾಲಿಕೆ ಬೆಳಗಾವಿ ಇತ್ತೀಚಿನ ದಿನಗಳಲ್ಲಿ ಹಲವಾರು ಸಂಗತಿಗಳ ಸಲುವಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದ್ದು, ತದನಂತರ ಪಾಲಿಕೆಗೆ ಹೊಸದಾಗಿ ಆಯುಕ್ತರಾಗಿ ಆಗಮಿಸಿದ ಸುಭ ಬಿ ಅವರು, ಪಾಲಿಕೆಯ ಆಡಳಿತ ಸುಧಾರಣೆಗಾಗಿ ಕಾರ್ಯಪ್ರವರ್ತರಾಗಿದ್ದು, ಅದರ ಮೊದಲ ಹೆಜ್ಜೆಯಾಗಿ ಪಾಲಿಕೆಯ ಸಿಬ್ಬಂದಿಗಳ ಆಂತರಿಕ ನಿಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ.
ಪಾಲಿಕೆಯಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಂದ ಹಿಡಿದು ಡಿ ದರ್ಜೆಯ ಸಿಬ್ಬಂದಿಗಳವರೆಗೂ ಸುಮಾರು 45 ಸಿಬ್ಬಂದಿಗಳ ಆಂತರಿಕ ನಿಯೋಜನೆ ಮಾಡಿದ್ದು, ಇದು ಪಾಲಿಕೆಯ ಆಡಳಿತ ಸುಧಾರಣೆಗೆ ಆಯುಕ್ತರು ತಗೆದುಕೊಂಡ ದಿಟ್ಟ ಹೆಜ್ಜೆ ಎಂಬ ಭಾವನೆ ಸಾರ್ವಜನಿಕರಲ್ಲಿದೆ..
ಆರೋಗ್ಯ ವಿಭಾಗದಲ್ಲಿ ಇರುವವರು ಕಂದಾಯದಲ್ಲಿ, ಅಭಿವೃದ್ಧಿ ವಿಭಾಗದವರು ಆಡಳಿತದಲ್ಲಿ, ಆಡಳಿತದಲ್ಲಿದ್ದವರು ಲೆಕ್ಕ ಶಾಖೆಯಲ್ಲಿ ಹೀಗೆ ಕೆಲ ಸಿಬ್ಬಂದಿಗಳು ತಾವು ನೇಮಕವಾದ ಮೂಲ ವಿಭಾಗಗಳಿಂದ ಬೇರೆ ಕಡೆಗೆ ನಿಯೋಜನೆ ಆಗಿ, ಬಹುದಿನಗಳಿಂದ ಅಲ್ಲಿಯೇ ಕೆಲಸ ಮಾಡುತ್ತಿದ್ದರು, ಅದರಂತೆ ಕೆಲ ಸಿಬ್ಬಂದಿಗಳು ಒಂದೇ ವಿಷಯದ ಕೆಲಸವನ್ನು ಮಾಡುತ್ತಾ ನಿರಾಯಾಸವಾಗಿದ್ದರು..
ಆದರೆ, ಅದಕ್ಕೆಲ್ಲ ಬ್ರೇಕ್ ಹಾಕಿದ ಪಾಲಿಕೆ ಆಯುಕ್ತರು, ಆಡಳಿತವನ್ನು ಚುರುಕುಗೊಳಿಸಲು ಸಿಬ್ಬಂದಿಗಳಿಗೆ ಮತ್ತಷ್ಟು ಹೆಚ್ಚಿನ ಜವಾಬ್ದಾರಿಯನ್ನು ನೀಡಿದ್ದಾರೆ, ಜೊತೆಗೆ ವಿಭಾಗಗಳನ್ನು ಬದಲಾಯಿಸಿ ಆಂತರಿಕ ನಿಯೋಜನೆ ಮಾಡಿದ್ದು ಆಡಳಿತದ ಶಿಸ್ತಿಗೆ, ಪಾರದರ್ಶಕತೆಗೆ ಹಾಗೂ ಅಭಿವೃದ್ಧಿಗೆ ಅನುಕೂಲ ಆಗಬಹುದೆಂಬ ನಿರೀಕ್ಷೆ ಕೂಡಾ ಸಾರ್ವಜನಿಕರಲ್ಲಿ ಮೂಡಿದೆ.
ವಾಹನ ಚಾಲಕರು, ದಪೆದಾರರು, ಆಶ್ರಯ, ಕಂದಾಯ ಹೀಗೆ ಹಲವು ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವದು, ಹೆಚ್ಚಿನ ಸಿಬ್ಬಂದಿಗಳು ಸಿಬ್ಬಂದಿ ಸಂಕಲನದಲ್ಲಿರುವದು ಹಾಗೂ ಆಡಳಿತದಲ್ಲಿದ್ದ ಇನ್ನು ಅನೇಕ ವಿಷಯಗಳು ಬದಲಾಗಬೇಕು ಎಂಬ ದೃಷ್ಟಿಯಿಂದ, ಪಾಲಿಕೆಯ ಆಯುಕ್ತರ ಈ ನಡೆ ಸ್ವಾಗತಾರ್ಹವಾಗಿದೆ ಎಂಬ ಮಾತಿದೆ.
ಒಟ್ಟಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಆಡಳಿತದಲ್ಲಿ ಬಹುಮುಖ್ಯ ಬದಲಾವಣೆ ಆಗಿದ್ದು, ಈ ಆಂತರಿಕ ನಿಯೋಜನೆಯಿಂದ ಸಿಬ್ಬಂದಿಗಳು ಉತ್ತಮ ಕಾರ್ಯ ಮಾಡಿ, ಪಾಲಿಕೆಯು ಗುಣಾತ್ಮಕ ಆಡಳಿತದೊಂದಿಗೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಾ, ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂಬುದು ಬೆಳಗಾವಿ ನಗರವಾಸಿಗಳ ಆಶಯ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..