ಬೆಳಗಾವಿ ಪಾಲಿಕೆಯ ಸಹವಾಸ ಸಾಕಪ್ಪಾ ಸಾಕು ಎನ್ನುತ್ತಿದ್ದಾರೆಯೇ ಪಾಲಿಕೆ ಸಿಬ್ಬಂದಿಗಳು?

ಬೆಳಗಾವಿ ಪಾಲಿಕೆಯ ಸಹವಾಸ ಸಾಕಪ್ಪಾ ಸಾಕು ಎನ್ನುತ್ತಿದ್ದಾರೆಯೇ ಪಾಲಿಕೆ ಸಿಬ್ಬಂದಿಗಳು?

ಪಾಲಿಕೆ ಸಿಬ್ಬಂದಿಗಳ ಮೇಲೆ ಇರುವ ಒತ್ತಡವಾದರು ಯಾವದು?

ಉಸಿರುಗಟ್ಟಿದ ವಾತಾವರಣವೇ ವರ್ಗಾವಣೆಯ ಪರ್ವಕ್ಕೆ ಕಾರಣವೇ?

ಉಸ್ತುವಾರಿ ಸಚಿವರು ಪಾಲಿಕೆ ಸಿಬ್ಬಂದಿ ಸಭೆ ಕರೆದು, ಸ್ಪಂದಿಸುವ ಅವಶ್ಯಕತೆಯಿದೆ..

ಬೆಳಗಾವಿ : ಕರ್ನಾಟಕ ರಾಜ್ಯದಲ್ಲಿಯೇ ನಮ್ಮ ಬೆಳಗಾವಿ ಮಹಾನಗರ ಪಾಲಿಕೆಗೆ ತನ್ನದೇ ಆದ ವಿಶೇಷ ಸ್ಥಾನಮಾನ ಹಾಗೂ ಆಕರ್ಷಣೀಯ ಅಂಶಗಳಿವೆ, ಆದರೆ ಕಳೆದ ಆರು ತಿಂಗಳಿನಿಂದ ಮಹಾನಗರ ಪಾಲಿಕೆಯ ಆಡಳಿತ ಯಂತ್ರವು ವೇಗ ನಿಯಂತ್ರಕಗಳ ಕಾಟದಿಂದ ಕುಂಟುತ್ತಾ ಸಾಗುತ್ತಿದೆಯೇ ಎಂಬ ಅನುಮಾನ ಉಂಟಾಗುತ್ತಿದೆ..

ವಿಷಯ ಇಷ್ಟೇ, ಕಳೆದ ಮೂರ್ನಾಲ್ಕು ತಿಂಗಳಿನಲ್ಲಿ ಪಾಲಿಕೆಯ ಹಲವಾರು ಉತ್ತಮ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ಸ್ವ ಇಚ್ಛೆಯಿಂದ, ಪಾಲಿಕೆ ಕೆಲಸ ಬೇಡವೆ ಬೇಡ ಎಂದು, ಬೇರೆ ಕಡೆಗೆ ವರ್ಗಾವಣೆ ತಗೆದುಕೊಂಡು ಹೋಗುತ್ತಿದ್ದಾರೆ, ಬೆಳಗಾವಿ ಪಾಲಿಕೆ ಎಂದರೆ ಇಲ್ಲಿಗೆ, ನಾ ಮುಂದು, ತಾ ಮುಂದು ಎಂದು ಮುಂದೆ ಬಂದು ಸೇವೆ ಮಾಡುವ ಸಿಬ್ಬಂದಿಗಳು ಈಗ ಬೆಳಗಾವಿ ಪಾಲಿಕೆಯ ಸಹವಾಸವೇ ಬೇಡ ಎಂದು ಬೇರೆ ಇಲಾಖೆಗೆ, ಊರಿಗೆ ವರ್ಗಾವಣೆ ತಗೆದುಕೊಂಡು ಹೋಗುತ್ತಿದ್ದಾರೆ..

ಮೊದಲೇ ಪಾಲಿಕೆಯಲ್ಲಿ ಸಿಬ್ಬಂದಿಗಳ ಸಂಖ್ಯೆ ಅಷ್ಟಕ್ಕಷ್ಟೇ, ಕೆಲಸವೂ ವಿಪರೀತವಾಗಿದ್ದು, ಇನ್ನು ಸಮರ್ಥ ಸಿಬ್ಬಂದಿಗಳು ಈ ರೀತಿ ವರ್ಗಾವಣೆಯಾಗಿ ಹೋದರೆ, ಬೆಳಗಾವಿ ನಗರವಾಸಿಗಳ ಕೆಲಸ-ಕಾರ್ಯ ಹೇಗೆ ಆಗಬೇಕು? ಈಗಾಗಲೇ ಪಾಲಿಕೆಯಿಂದ ಕೆಲ ವಿಷಯಗಳಲ್ಲಿ ಬೆಳಗಾವಿ ನಗರವಾಸಿಗಳ ಕೆಲಸಗಳಲ್ಲಿ ವಿಳಂಬ ಹಾಗೂ ಸಮಸ್ಯೆಗಳು ಆಗುತ್ತಿದ್ದು, ಇನ್ನು ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕ ಕೆಲಸಕ್ಕೆ ಮತ್ತಷ್ಟು ಸಂಕಟ ಎದುರಾಗುವ ಆತಂಕವಿದೆ..

ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉತ್ತಮ ಕೆಲಸಗಳನ್ನೇ ಮಾಡುತ್ತಾ ಬಂದಿರುವರು, ಆದರೆ ಅವರಿಗೆ ಮುಕ್ತವಾಗಿ ಕೆಲಸ ಮಾಡುವ ವಾತಾವರಣ ಇಲ್ಲವೇ? ಎಂಬ ಸಂಶಯ ಮೇಲ್ನೋಟಕ್ಕೆ ಕಾಣುತ್ತಿದ್ದು, ಇತ್ತೀಚೆಗೆ ಶುರುವಾದ ಈ ವರ್ಗಾವಣೆ ಪರ್ವಕ್ಕೆ ಕಾರಣವಾದರೂ ಏನು? ಸಿಬ್ಬಂದಿಗಳ ಮೇಲೆ ಯಾರದ್ದಾದರೂ ಒತ್ತಡವಿದೆಯಾ? ಅಧಿಕ ಕೆಲಸದ ಒತ್ತಡವೇ? ವೈಯಕ್ತಿಕ ಕಾರಣಗಳಿಂದ ವರ್ಗಾವಣೆಯೇ? ತಮ್ಮ ಕೆಲಸದಲ್ಲಿ ಮೂರನೇಯವರ ಅತಿಯಾದ ಹಸ್ತಕ್ಷೇಪಕ್ಕೆ ಬೇಸತ್ತು ವರ್ಗಾವಣೆಯೇ? ಎಂಬ ಹಲವು ಅನುಮಾನಗಳು ಸಾರ್ವಜನಿಕರನ್ನು ಕಾಡುತ್ತಿದೆ..

ಕಳೆದ ಮೂರ್ನಾಲ್ಕು ತಿಂಗಳಿನಲ್ಲಿ ಪಾಲಿಕೆಯ ಜೆಐಡಿ, ಕೌನ್ಸಿಲ್, ನಗರ ಯೋಜನೆ, ಅಭಿವೃದ್ಧಿ, ಕಂದಾಯ, ಹೀಗೆ ಪಾಲಿಕೆಯ ಬಹುತೇಕ ಆಡಳಿತ ವಿಭಾಗಗಳ, ಗೆಜೆಟೆಡ್ (ಕೆಎಎಸ್) ಅಧಿಕಾರಿಗಳನ್ನು ಒಳಗೊಂಡಂತೆ ಹತ್ತಾರು ಸಿಬ್ಬಂದಿಗಳು ವರ್ಗಾವಣೆ ಪಡೆದು ಬೇರೆಕಡೆಗೆ ಹೋಗುತ್ತಾರೆ ಎಂದರೆ ಹೇಗೆ? ಇನ್ನು ಅಭಿವೃದ್ಧಿ ಹಾಗೂ ಕಂದಾಯ ವಿಭಾಗದ ಸುಮಾರು ಹತ್ತು ಸಿಬ್ಬಂದಿಗಳ ವರ್ಗಾವಣೆಗಳು ಮುಖ್ಯಮಂತ್ರಿಗಳ ಆದೇಶದ ಹಂತದಲ್ಲಿವೆ, ಪಾಲಿಕೆಯಲ್ಲಿ ಹಿಂದೆಂದೂ ಆಗದ ಈ ವರ್ಗಾವಣೆಯ ವಲಸೆ ಈಗೇಕೆ ಆಗುತ್ತಿದೆ? ಸಿಬ್ಬಂದಿ ಸ್ನೇಹಿತವಾದ ಬೆಳಗಾವಿ ಪಾಲಿಕೆಗೆ, ಸಿಬ್ಬಂದಿಗಳೇ ಗುಡ್ ಬೈ ಹೇಳುತ್ತಿರುವುದು ವಿಚಿತ್ರವಾಗಿದೆ..

ಪಾಲಿಕೆಯ ಆಡಳಿತ ಸುಗಮವಾಗಿ ಸಾಗುವ, ಸಾರ್ವಜನಿಕರಿಗೆ ಉತ್ತಮ ಸೇವೆ ಸಿಗುವ, ಪಾಲಿಕೆಯಿಂದ ನಗರವಾಸಿಗಳ ಕಾರ್ಯಗಳು ಸಕಾಲದಲ್ಲಿ ಆಗುವ, ಪಾಲಿಕೆಗೆ ಉತ್ತಮ ಹೆಸರು ತಂದುಕೊಡುವ ನಿಟ್ಟಿನಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನ ಹರಿಸಿ, ಪಾಲಿಕೆಯ ಸಿಬ್ಬಂದಿಗಳ ಸಭೆ ಕರೆದು, ಸಮಾಲೋಚನೆ ನಡೆಸಿ, ಅಧಿಕಾರಿ ಹಾಗೂ ಸಿಬ್ಬಂದಿಗಳ ಸಮಸ್ಯೆಗಳನ್ನು ಆಲಿಸಿ, ಅವರಿಗೆ ಕಾರ್ಯನಿರ್ವಹಿಸಲು ಉತ್ತಮ ವಾತಾವರಣ ಕಲ್ಪಿಸಿ, ವಿಶ್ವಾಸದಿಂದ, ದೈರ್ಯದಿಂದ ಸಾರ್ವಜನಿಕ ಸೇವೆ ಮಾಡುವಂತೆ ಆತ್ಮಸ್ಥೈರ್ಯ ನೀಡಬೇಕಾಗಿದೆ, ಆಗಲಾದರೂ ಸಿಬ್ಬಂದಿಗಳು ವರ್ಗಾವಣೆ ಪಡೆಯದೇ, ಇಲ್ಲೇ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂಬ ಭರವಸೆ ಬೆಳಗಾವಿಯ ಜನರಲ್ಲಿದೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..