ಬೆಳಗೆದ್ದು ಊರೆಲ್ಲಾ ಸ್ವಚ್ಛ ಮಾಡುವ ಪೌರಕಾರ್ಮಿಕರಿಗೆ ಅಸ್ವಚ್ಛತೆಯ ಅಪಕಾರ..
ಕನಿಷ್ಠ ಸೌಲಭ್ಯವಿಲ್ಲದ ಪೌರಕಾರ್ಮಿಕರ ವಸತಿ ಗೃಹಗಳು..
ಈ ವಿಷಯ ಪಾಲಿಕೆ ಅಧಿಕಾರಿಗಳ ಅರಿವಿಗಿಲ್ಲವೆ?
ಬೆಳಗಾವಿ : ಪ್ರತಿನಿತ್ಯ ಬೆಳಿಗ್ಗೆ ನಾಲ್ಕು, ಐದು ಗಂಟೆಗೆ ಎದ್ದು, ತಮ್ಮ ತಮ್ಮ ವಾರ್ಡುಗಳಲ್ಲಿ ಸ್ವಚ್ಚತಾ ಕಾರ್ಯ ಕೈಗೊಂಡು, ಇಡೀ ನಗರವನ್ನೆಲ್ಲಾ ಶುಚಿಯಾಗಿ ಇಡುವ ಸಾವಿರಾರು ಪೌರಕಾರ್ಮಿಕರ ವೈಯಕ್ತಿಕ ಸ್ಥಿತಿ ಬಹಳ ಶೋಚನೀಯವಾಗಿದೆ..
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಪಾಲಿಕೆಯ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯ ಮಾಡುವ ಇವರು ಮನೆಯಲ್ಲಿ ಹಿಂದಿನ ದಿನ ಉಳಿದಿರುವ ಆಹಾರವನ್ನು ತಂದು, ಬೆಳಗಿನ ಕೆಲಸದ ಬಿಡುವಿನ ವೇಳೆಯಲ್ಲಿ ಆ ಆಹಾರವನ್ನೇ ಸೇವಿಸಿ, ಬೀದಿ ಕೊಳವೆ ಬಾವಿಗಳಲ್ಲಿಯ ನೀರು ಕುಡಿದು, ಮಳೆ, ಚಳಿ, ಬಿಸಿಲು ಎನ್ನದೇ ಕೆಲಸ ಮಾಡುವ ಈ ಶ್ರಮಿಕವರ್ಗ ಕೆಲ ಮೂಲಭೂತ ಸೌಕರ್ಯ ಹಾಗೂ ತಮ್ಮ ಹಕ್ಕುಗಳಿಂದ ವಂಚಿತರಾದಂತೆ ಕಾಣುತ್ತದೆ..

ನಗರದ ಶಹಾಪುರ ಭಾಗದಲ್ಲಿರುವ ಆನಂದವಾಡಿಯ ಪೌರಕಾರ್ಮಿಕರ ವಸತಿ ಗ್ರಹಗಳ ಸಾರ್ವಜನಿಕ ಶೌಚಾಲಯ ಅಸ್ವಚ್ಛತೆಯ ಆಗರವಾಗಿವೆ, ಹನ್ನೆರಡು ಶೌಚಾಲಯ ಇರುವ ಈ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿ ಕೇವಲ ಮೂರ್ನಾಲ್ಕು ತಿಂಗಳಷ್ಟೇ ಆಗಿದ್ದು, ಈಗ ಅವು ಉಪಯೋಗಕ್ಕೆ ಬಾರದ ಸ್ಥಿತಿ ತಲುಪಿದ್ದು, ಪಾಲಿಕೆಯ ಬೇಜವಾಬ್ದಾರಿ ಕೆಲಸಕ್ಕೆ ಸಾಕ್ಷಿಯಾಗಿದೆಯೇ? ಎಂಬ ಅನುಮಾನ ಮೂಡುವಂತಿದೆ..
ಯಾವುದೇ ಶೌಚಾಲಯದಲ್ಲಿ ನೀರಿನ ನಲ್ಲಿ ಇಲ್ಲಾ, ವ್ಯವಸ್ಥಿತ ನೀರಿನ ಪೂರೈಕೆ ಇಲ್ಲದಿರುವುದರಿಂದ ಸ್ವಚ್ಛತೆಯಂತೂ ಮಾಯವಾಗಿವೆ, ಸುಮಾರು ಐದಾರು ಶೌಚಾಲಯಗಳಿಗೆ ಬೀಗ ಹಾಕಲಾಗಿದ್ದು, ಉಪಯೋಗಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿವೆ..

ಸರ್ಕಾರದ ಹಣದಲ್ಲಿ ಇಂತಹ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿ, ಅವುಗಳ ಸರಿಯಾದ ನಿರ್ವಹಣೆ ಮಾಡದೇ, ಜನಗಳಿಗೆ ಅವುಗಳ ಉಪಯೋಗ ಆಗದಿದ್ದರೆ ಅದಕ್ಕೆ ಯಾರು ಹೊಣೆ?? ಇಡೀ ನಗರವನ್ನೇ ಸ್ವಚ್ಚವಿಡುವ ಪಾಲಿಕೆಯ ಪೌರ ಕಾರ್ಮಿಕರು ಉಪಯೋಗಿಸುವ ಶೌಚಾಲಯಗಳ ನಿರ್ವಹಣೆ ಈ ರೀತಿ ಅವ್ಯವಸ್ಥಿತವಾಗಿರುವುದು ಯಾವ ನ್ಯಾಯ??

ಅದೇ ರೀತಿ ಕುಡಿಯುವ, ಬಳಸುವ ನೀರು ಕೂಡಾ ಅತೀ ಕಲುಷಿತವಾಗಿದ್ದು, ಕೆಲವು ಸಲ ಹೇಳಲಾರದ ಸ್ಥಿತಿ ಎದುರಾಗಿದೆ ಎಂಬ ಮಾಹಿತಿಯಿದ್ದು,, ಪೌರಕಾರ್ಮಿಕರಿಗೆ ಕನಿಷ್ಠ ಮೂಲಭೂತ ಸೌಕರ್ಯ ಕೂಡಾ ನೀಡದಂತಹ ಪರಿಸ್ಥಿತಿ ಪಾಲಿಕೆಗೇಕೆ ಬಂತು? ಎಂಬ ಪ್ರಶ್ನೆ ಕಾಡುತ್ತಿದೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..